ಯೋಗವನ್ನು ಗರ್ಭಿಣಿಯರೂ ಮಾಡಬಹುದೇ ಎನ್ನುವುದು ಬಹುತೇಕರಿಗೆ ಇಂದಿಗೂ ಸಂಶಯ. ಖಂಡಿತವಾಗಿಯೂ ಗರ್ಭಿಣಿಯರೂ ಯೋಗಗಳನ್ನು ಮಾಡಬಹುದು. ಇದರಿಂದ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ. ಮಗುವಿನ ಜನನದ ಸಂದರ್ಭ ಒತ್ತಡ ನಿವಾರಣೆಗೆ ಯೋಗಾಸನ ತುಂಬಾ ಪರಿಣಾಮಕಾರಿಯಾಗಿದೆ.

ಇದನ್ನೂ ಓದಿ:ಜನರೇ ನಿಬಂಧನೆ ಹಾಕಿಕೊಂಡರೆ ಲಾಕ್ ಡೌನ್ ಅವಶ್ಯಕತೆಯಿಲ್ಲ: ಸಚಿವ ಸುಧಾಕರ್

ಇತ್ತೀಚೆಗಂತೂ ಸಿನೆ ತಾರೆಯರು ಅದರಲ್ಲೂ ಅನುಷ್ಕಾ ಶರ್ಮಾ ಗರ್ಭಾವಸ್ಥೆಯಲ್ಲಿ ಮಾಡಿರುವ ಯೋಗ ಭಂಗಿಗಳು ಎಲ್ಲರ ಮೆಚ್ಚುಗೆಗೂ ಪಾತ್ರವಾಗಿತ್ತು. ಇರಲಿ ನಿತ್ಯ ಯೋಗ ಗರ್ಭಿಣಿ ಮಹಿಳೆಯೂ ಪ್ರತಿನಿತ್ಯ ಸರಳ ಯೋಗಾಸನವನ್ನು ಮಾಡುವುದ ರಿಂದ ಸ್ನಾಯು ಸೆಳೆತದ ಸಮಸ್ಯೆ ಕಾಡಲಾರದು. ಬೆನ್ನುಹುರಿಯನ್ನು
ಗಟ್ಟಿಗೊಳಿಸುವ ಕೆಲವು ಯೋಗಾಸನಗಳು ಸಿಸರಿನ್‌ ಭಯವಿಲ್ಲದೆ ಸಾಮಾನ್ಯ ಹೆರಿಗೆಗೆ ದೇಹವನ್ನು ಸಿದ್ಧಗೊಳಿಸುತ್ತದೆ. ಅಲ್ಲದೆ ಮಗುವಿನ ಬೆಳವಣಿಗೆಗೆ ಪೂರಕ
ವಾತಾವರಣವನ್ನೂ ಕಲ್ಪಿಸುತ್ತದೆ.

ಪ್ರಾಣಾಯಾಮ
ಗರ್ಭಿಣಿಯರು ಪ್ರಾಣಾಯಾಮ ಮಾಡುವಂತೆ ಬಹುತೇಕ ತಜ್ಞರು ತಿಳಿಸುತ್ತಾರೆ. ಇದರಿಂದಾಗಿ ಆತಂಕಗಳು, ಉದ್ವೇಗತೆಗಳು ಕಡಿಮೆಯಾಗಿ ಮನಸ್ಸು ಶಾಂತಚಿತ್ತತೆ ಹೊಂದುತ್ತದೆ. ಪ್ರಾಣಯಾಮದ ಮೂಲಕ ಸುಲಭವಾಗಿ ಧ್ಯಾನವನ್ನು ಮಾಡಲು ಸಾಧ್ಯವಿದ್ದು ಆತಂಕ ಮತ್ತು ಭಯ ನಿವಾರಣೆ ಸಾಧ್ಯ.

ಯೋಗನಿದ್ರೆ
ನಿದ್ರೆಯೂ ಗರ್ಭಿಣಿಯರ ದೇಹಕ್ಕೆ ಅತ್ಯಗತ್ಯ. ಈ ಯೋಗಾಸನವನ್ನು ಗರ್ಭಿಣಿಯರು ಮಾಡುವುದರಿಂದ ಸೂಕ್ತ ರೀತಿಯಲ್ಲಿ ನಿದ್ರೆ ಅವರಿಗೆ ಪ್ರಾಪ್ತಿಯಾಗುತ್ತದೆ. ಒತ್ತಡವನ್ನು ಕಡಿಮೆ ಮಾಡಿ ಮನಸ್ಸು ಸಂತೋಷದಿಂದಿರಲು ಇದು ಪೂರಕ .

ತ್ರಿಕೋನಾಸನ
ಗರ್ಭಿಣಿಯರಿಗೆ ಸೊಂಟ ಮತ್ತು ಬೆನ್ನು ನೋವು ಸಾಮಾನ್ಯವಾಗಿ ಕಾಡುತ್ತವೆ. ತ್ರಿಕೋನಾಸನವು ಸೊಂಟನೋವು, ಬೆನ್ನು ನೋವನ್ನು ಕಡಿಮೆ ಮಾಡಲು
ಸಹಕಾರಿಯಾಗುವ ಜತೆಗೆ ಕಾಲುಗಳ ವಕ್ರತೆಯನ್ನು ಸಹ ಸರಿಪಡಿಸುತ್ತದೆ.

ವಜ್ರಾಸನ
ಈ ಆಸನ ಮಾಡುವುದರಿಂದ ಕೀಲು ನೋವು ಮತ್ತು ಕಾಲು ನೋವು ಕಡಿಮೆಯಾಗುತ್ತದೆ. ಜೀರ್ಣಕ್ರಿಯೆ ಹೆಚ್ಚಿಸಲು ಸಹ ಇದು ಸಹಕಾರಿ.

ವೀರ ಭದ್ರಾಸನ
ಕಿಬ್ಬೊಟ್ಟೆ ಭಾಗದ ಬಲವರ್ಧನೆಗೆ ಈ ಯೋಗಾಸನ ಉಪಯುಕ್ತ. ಬೆನ್ನು, ಭುಜ ಮತ್ತು ಕೈಗಳಿಗೆ ಮೃದುವಾದ ವ್ಯಾಯಾಮ ದೊರೆತಂತಾಗುತ್ತದೆ. ಜೀರ್ಣಕ್ರಿಯೆ ಹೆಚ್ಚಿಸುವ ಜತೆಗೆ ಮಾನಸಿಕ ಮತ್ತು ದೈಹಿಕ ಸದೃಢತೆಗೆ ಇದು ಸಹಕಾರಿ.

ಗರ್ಭಿಣಿಯರು ಯೋಗಾಸನದ ಎಲ್ಲ ಆಸನವನ್ನು ಪ್ರಯೋಗ ಮಾಡುವುದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಹೀಗಾಗಿ ಗುರುಗಳ (ತಜ್ಞರ) ಮಾರ್ಗದರ್ಶನದಲ್ಲಿ ಯೋಗ ಕಲಿತು ಮಾಡಬೇಕೇ ವಿನಃ ತಾವೇ ಪ್ರಯೋಗಕ್ಕೆ ಮುಂದಾಗಬಾರದು.

ಮಂಡೂಕಾಸನ
ಮಾನಸಿಕ ಒತ್ತಡ ನಿವಾರಣೆ, ತಲೆನೋವು, ಥೈರಾಯ್ಡ ಸಮಸ್ಯೆಗೂ ರಾಮಬಾಣದಂತೆ ಮಂಡೂಕಾಸನ ಕೆಲಸಮಾಡುತ್ತದೆ. ಬೆನ್ನು ಮೂಳೆಯ ಆರೋಗ್ಯಕ್ಕೆ ಈ
ಆಸನ ಬಹಳ ಉಪಯುಕ್ತ.

ಆರೋಗ್ಯ – Udayavani – ಉದಯವಾಣಿ
Read More

Leave a comment