– ಮುಂದಿನ ವಾರ ಮುಕ್ತ ಮಾರುಕಟ್ಟೆಗೆ ಸ್ಫುಟ್ನಿಕ್

ನವದೆಹಲಿ: ವ್ಯಾಕ್ಸಿನ್ ಕೊರತೆ ದೊಡ್ಡ ಪ್ರಮಾಣದಲ್ಲಿ ಕಂಡು ಬಂದಿರುವ ಸಂದರ್ಭದಲ್ಲಿಯೇ, ಕೋವಿಶೀಲ್ಡ್ ಲಸಿಕೆಯ ಮೊದಲ ಮತ್ತು ಎರಡನೇ ಡೋಸ್ ನಡುವಿನ ಅವಧಿಯನ್ನು 12 ವಾರಗಳಿಂದ 16 ವಾರಗಳ ತನಕ ಹೆಚ್ಚಿಸಲಾಗಿದೆ. ಈ ಸಂಬಂಧ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಮಾನ್ಯ ಮಾಡಿದೆ. ಇದೇ ವೇಳೆ ಗರ್ಭಿಣಿಯರಿಗೆ ಲಸಿಕೆ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ. ಬಾಣಂತಿಯರು ಯಾವಾಗ ಬೇಕಿದ್ದರೂ ಲಸಿಕೆ ತೆಗೆದುಕೊಳ್ಳಬಹುದಾಗಿದೆ.

ಕೊರೊನಾದಿಂದ ಚೇತರಿಸಿಕೊಂಡವರಿಗೆ 6 ವಾರಗಳ ಬಳಿಕ ಲಸಿಕೆ ನೀಡಲು ತೀರ್ಮಾನಿಸಿದೆ. ಈ ಹಿಂದೆಯೂ ಅಂದ್ರೆ ಕಳೆದ ಮಾರ್ಚ್‍ನಲ್ಲಿ, ಕೋವಿಶೀಲ್ಡ್ ಲಸಿಕೆಯ ಡೋಸ್‍ಗಳ ನಡುವಿನ ಅವಧಿಯನ್ನು ಕೇಂದ್ರ ಸರ್ಕಾರ ಹೆಚ್ಚಿಸಿತ್ತು. ಲಸಿಕೆ ಉತ್ತಮ ಪರಿಣಾಮ ಬೀರಲು ಡೋಸ್‍ಗಳ ನಡುವಿನ ಅವಧಿಯನ್ನು ಕೇಂದ್ರ ಸರ್ಕಾರ 28 ದಿನಗಳಿಂದ 6ರಿಂದ 8 ವಾರಗಳವರೆಗೆ ಹೆಚ್ಚಿಸಿತ್ತು.

ಮಕ್ಕಳ ಮೇಲೆ ವ್ಯಾಕ್ಸಿನ್ ಟ್ರಯಲ್‍ಗೆ ಸಿಗ್ನಲ್..!
ಮಕ್ಕಳ ಮೇಲೆ ಕೊವ್ಯಾಕ್ಸಿನ್ ಲಸಿಕೆಯ ಕ್ಲಿನಿಕಲ್ ಟ್ರಯಲ್ಸ್‍ಗೆ ಡಿಸಿಜಿಐ ಗ್ರೀನ್ ಸಿಗ್ನಲ್ ನೀಡಿದೆ. 2 ವರ್ಷದಿಂದ 18 ವರ್ಷದೊಳಗಿನ ಮಕ್ಕಳ ಮೇಲೆ ಕೊವ್ಯಾಕ್ಸಿನ್ ಕ್ಲಿನಿಕಲ್ ಟ್ರಯಲ್ಸ್‍ಗೆ ತಜ್ಞರ ತಂಡ ಶಿಫಾರಸು ಮಾಡಿತ್ತು. ಇದನ್ನು ಪರಿಗಣಿಸಿರೋ ಡಿಸಿಜಿಐ, ಸಿಗ್ನಲ್ ನೀಡಿದೆ. ಹೀಗಾಗಿ ಶೀಘ್ರವೇ ದೇಶಾದ್ಯಂತ ಏಮ್ಸ್ ಆಸ್ಪತ್ರೆಗಳಲ್ಲಿ ಮಕ್ಕಳ ಮೇಲೆ ಕ್ಲಿನಿಕಲ್ ಟ್ರಯಲ್ ಆರಂಭವಾಗಲಿದೆ. ಈ ಮಧ್ಯೆ ಕೊರೊನಾ 3ನೇ ಅಲೆಯಲ್ಲಿ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬಿರಲೀದೆ ಎಂಬ ತಜ್ಞರ ಆತಂಕ ಹಿನ್ನೆಲೆಯಲ್ಲಿ, ಮುಖ್ಯಕಾರ್ಯದರ್ಶಿಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಪತ್ರ ಬರೆದಿದ್ದು, 7 ಅಂಶಗಳನ್ನು ಶಿಫಾರಸು ಮಾಡಿದೆ.

ಮಕ್ಕಳ ರಕ್ಷಣೆಗೆ ಮಕ್ಕಳ ಆಯೋಗ ಪತ್ರ..!
> ಜಿಲ್ಲಾವಾರು ಮಕ್ಕಳ ಚಿಕಿತ್ಸಾ ತಜ್ಞರ ಟಾಸ್ಕ್ ಫೋರ್ಸ್ ರಚನೆ
> ಸೋಂಕಿತ ಮಕ್ಕಳಿಗೆ ಚಿಕಿತ್ಸೆ & ಐಸೋಲೆಷನ್‍ಗೆ ವ್ಯವಸ್ಥೆ ಅಗತ್ಯ ಸೌಲಭ್ಯ
> ಜಿಲ್ಲಾ ಆಸ್ಪತ್ರೆ, ಸರ್ಕಾರದಿಂದ ನಿಗದಿ ಪಡಿಸಿದ ಖಾಸಗಿ ಆಸ್ಪತ್ರೆಗಳಲ್ಲಿ ಮಕ್ಕಳಿಗೆ ಹಾಸಿಗೆ ಮೀಸಲಿಡಬೇಕು
> ಕೊರೊನಾದಿಂದ ಅನಾಥರಾದ ಮಕ್ಕಳ ರಕ್ಷಣೆಗೆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಮೇಲ್ವಿಚಾರಣೆ ಸಮಿತಿ ರಚನೆ
> ಮಕ್ಕಳ ಚಿಕಿತ್ಸೆಗೆ ಮಹಾರಾಷ್ಟ್ರ ಮಾದರಿಯಲ್ಲಿ ವಿಶೇಷ ಆಸ್ಪತ್ರೆ ತೆರೆದು ವೈದ್ಯಕೀಯ ಸೌಲಭ್ಯ ಒದಗಿಸಬೇಕು.

3ನೇ ಅಲೆ ಬಗ್ಗೆ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ಇದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಖ್ಯಾತ ತಜ್ಞರಾದ ಡಾ.ದೇವಿ ಪ್ರಸಾದ್ ಶೆಟ್ಟಿ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಿದೆ. ಈ ಮಧ್ಯೆ ಸ್ಫುಟ್ನಿಕ್ ಲಸಿಕೆಯನ್ನು ಮುಂದಿನವಾರ ಭಾರತದ ಮುಕ್ತ ಮಾರುಕಟ್ಟೆಗೆ ಬಿಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಭಾರತಕ್ಕೆ ಎಂಆರ್‍ಎನ್‍ಎ ಕೋವಿಡ್ ವ್ಯಾಕ್ಸಿನ್‍ಗಳನ್ನು ತರುವ ಪ್ರಯತ್ನ ನಡೆದಿದೆ.

The post ಗರ್ಭಿಣಿ, ಬಾಣಂತಿಯರಿಗೆ ವ್ಯಾಕ್ಸಿನ್‍ಗೆ ಅವಕಾಶ- ಕೊರೊನಾ ಗೆದ್ದವರಿಗೆ 6 ವಾರಗಳ ಬಳಿಕ ಲಸಿಕೆ appeared first on Public TV.

Source: publictv.in

Source link