ದಾವಣಗೆರೆ: ವಾಲ್ಮೀಕಿ ಸಮುದಾಯಕ್ಕೆ ಸರ್ಕಾರ 7.5 ಮೀಸಲಾತಿ ನೀಡದ ವಿಚಾರವಾಗಿ, ಮೀಸಲಾತಿ ಸಿಗದೆ ಸಮುದಾಯದ ಜನರು ಅನುಭವಿಸುತ್ತಿರುವ ಕಷ್ಟ ನೆನೆದು ಪ್ರಸನ್ನಾನಂದಪುರಿ ಸ್ವಾಮೀಜಿ ಕಣ್ಣೀರಿಟ್ಟಿದ್ದಾರೆ.
ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ನಡೆದ ವಾಲ್ಮೀಕಿ ಜಾತ್ರೆ ಕುರಿತು ನಡೆದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದ ಸ್ವಾಮೀಜಿಗಳು, ಮೊನ್ನೆ ಹಾನಗಲ್ ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ಏನಾಯ್ತು..? ನಮ್ಮ ಸಮುದಾಯದ 18 ಸಾವಿರ ಮತದಾರರು ಬುದ್ದಿ ಕಲಿಸಿದ್ದಾರೆ. ಈ ಸಂದೇಶ ಎಲ್ಲಿಗೆ ಹೋಗಬೇಕೋ ಅಲ್ಲಿಗೆ ಹೋಗಿದೆ. ಮುಂದೆ ವಿಧಾನಸಭೆ ಚುನಾವಣೆ ಬರುತ್ತೆ.. ಊರಿಗೆ ಬಂದಾಕೆ ನೀರಿಗೆ ಬರಲೇಬೇಕು ಪರೋಕ್ಷವಾಗಿ ಸರ್ಕಾರದ ವಿರುದ್ಧ ಕಿಡಿಕಾರಿದರು.
ನಮ್ಮ ಸಮುದಾಯದ ಜನ ವಾಲ್ಮೀಕಿ ಜಾತ್ರೆಗೆ ಚಾಮರಾಜನಗರ-ಬೀದರ್ ನಿಂದ ಬರುತ್ತಾರೆ. ದೂರದ ಊರಿನಿಂದ ವಾಹನಗಳನ್ನ ಮಾಡಿಕೊಂಡು ಬಂದಿರುತ್ತಾರೆ. ಯಾರಿಗೂ ಯಾವುದೇ ರೀತಿ ತೊಂದರೆ ಆಗಬಾರದು. ಮುಂದಿನ ವರ್ಷ ಫೆ.8, 9 ರಂದು ವಾಲ್ಮೀಕಿ ಜಾತ್ರೆ ನಡೆಯುತ್ತೆ. ದೂರದ ಊರಿನಿಂದ ಲಕ್ಷಾಂತರ ಜನ ಬಂದಿರುತ್ತಾರೆ. ಅವರು ಬಂದು ನೆಮ್ಮದಿಯಾಗಿ ಊಟ ಮಾಡಿ ಅವರು ಊರು ಸೇರಬೇಕು. ಅವಾಗ ನನಗೆ ನೆಮ್ಮದಿಯಾಗುತ್ತೆ ಎಂದು ವಾಲ್ಮೀಕಿ ಸಮಾಜದ ಜನರು ಅನುಭವಿಸುವ ಕಷ್ಟಗಳಿಗೆ ಸ್ವಾಮೀಜಿ ಭಾವುಕರಾದರು.