ಗಾಬರಿಯಿಂದ ಬೆಂಗಳೂರಿಗೆ ಹೊರಟ ಈಶ್ವರಪ್ಪ: ಸಿಎಂ ಭೇಟಿ ಬಳಿಕ ರಾಜೀನಾಮೆ ಕುರಿತ ನಿರ್ಧಾರ ಪ್ರಕಟ ಸಾಧ್ಯತೆ | Minister KS Eshwarappa Left for Bangalore in a hurry May announces Resignation After Meeting with CM Basavaraj Bommai


ಗಾಬರಿಯಿಂದ ಬೆಂಗಳೂರಿಗೆ ಹೊರಟ ಈಶ್ವರಪ್ಪ: ಸಿಎಂ ಭೇಟಿ ಬಳಿಕ ರಾಜೀನಾಮೆ ಕುರಿತ ನಿರ್ಧಾರ ಪ್ರಕಟ ಸಾಧ್ಯತೆ

ಮೈಸೂರಿನ ಲಲಿತ ಮಹಲ್​ನಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಮೊಬೈಲ್ ಸಂಭಾಷಣೆ

ಮೈಸೂರು: ಮುಂದಿನ ವಿಧಾನಸಭಾ ಚುನಾವಣೆಗೆ ಬಿಜೆಪಿ ಸಂಘಟನೆಯನ್ನು ಬಲಪಡಿಸಿಕೊಳ್ಳಲು ಯತ್ನಿಸುತ್ತಿರುವ ಸಂದರ್ಭದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಕೇಳಿಬಂದಿರುವ ಶೇ 40ರ ಕಮಿಷನ್ ಆರೋಪ ಪಕ್ಷಕ್ಕೆ ಹಿನ್ನಡೆ ತಂದೊಡ್ಡಬಹುದು ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಮೈಸೂರಿನಲ್ಲಿ ಬುಧವಾರ ಎರಡನೇ ದಿನದ ಬಿಜೆಪಿ ಸಂಘಟನಾತ್ಮಕ ಯಾತ್ರೆ ನಡೆಯಬೇಕಿತ್ತು. ಸಚಿವ ಸಂಪುಟದಲ್ಲಿ ಹಿರಿಯ ಸಚಿವರಾಗಿರುವ ಕೆ.ಎಸ್.ಈಶ್ವರಪ್ಪ ಹಲವು ಪ್ರಮುಖರನ್ನು ಭೇಟಿಯಾಗಿ ಸಂಘಟನೆ ಬಲಗೊಳಿಸುವ ಬಗ್ಗೆ ಚರ್ಚಿಸಬೇಕಿತ್ತು. ಆದರೆ ಯಾವುದೋ ಫೋನ್ ಕರೆ ಬಂದ ನಂತರ ಉದ್ವಿಗ್ನಗೊಂಡ ಅವರು ತರಾತುರಿಯಲ್ಲಿ ಬೆಂಗಳೂರಿಗೆ ಹೊರಟರು. ಸುಮಾರು 15 ನಿಮಿಷಗಳ ಕಾಲ ಫೋನ್​ನಲ್ಲಿ ಮಾತನಾಡಿದ ಅವರು ಸಂಘಟನಾತ್ಮಕ ಸಭೆಯಲ್ಲಿ ಭಾಗಿಯಾಗದೆ ಬೆಂಗಳೂರಿಗೆ ಧಾವಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಚರ್ಚಿಸಿದ ಬಳಿಕ ರಾಜೀನಾಮೆ ಕುರಿತು ಅಂತಿಮ ನಿರ್ಧಾರ ಪ್ರಕಟಿಸಬಹುದು ಎಂದು ಉನ್ನತ ಮೂಲಗಳು ಹೇಳಿವೆ. ಸದ್ಯ ಮಂಗಳೂರಿನಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಧ್ಯಾಹ್ನ 2.30ಕ್ಕೆ ಬೆಂಗಳೂರಿಗೆ ಆಗಮಿಸಲಿದ್ದಾರೆ.

ಮೈಸೂರಿನ ಲಲಿತ್ ಮಹಲ್​ನಲ್ಲಿ ಕೆ.ಎಸ್.ಈಶ್ವರಪ್ಪ ವಾಸ್ತವ್ಯ ಹೂಡಿದ್ದರು. ಲಲಿತ್ ಮಹಲ್​ನ ಒಳ ಆವರಣದಲ್ಲಿ ಏಕಾಂಗಿಯಾಗಿ ಫೋನ್​ನಲ್ಲಿ ಬಿರುಸಿನ ಮಾತುಕತೆ ನಡೆಸಿದರು. ಫೋನ್ ಮಾತುಕತೆಯ ನಂತರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲು ಭೇಟಿಗೆ ಯತ್ನಿಸಿದರಾದರೂ ಅದು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ರೂಮಿಗೆ ತೆರಳಿ ವಾಪಸ್ ಬಂದರು. ತಿಂಡಿ‌ ಮುಗಿಸಿ ಮತ್ತೆ ಫೋನ್​ ಸಂಭಾಷಣೆ ನಡೆಸುತ್ತಲೇ ಕಾರು ಹತ್ತಿ ಬೆಂಗಳೂರಿಗೆ ಹೊರಟರು.

ರಾಜೀನಾಮೆ ಪರಿಸ್ಥಿತಿ ನಿರ್ಮಾಣವಾಗಿಲ್ಲ: ಕಟೀಲ್
ಸಂತೋಷ್ ಪಾಟೀಲ್ ಆತ್ಮಹತ್ಯೆ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ವಿಪಕ್ಷದವರು ಪ್ರತಿ ಸಣ್ಣ ವಿಚಾರಕ್ಕೂ ರಾಜೀನಾಮೆ ಕೇಳುತ್ತಾರೆ. ಅವರು ಕೇಳಿದ್ದಕ್ಕೆಲ್ಲಾ ರಾಜೀನಾಮೆ ಕೊಡಲು ಆಗುವುದಿಲ್ಲ. ಡಿವೈಎಸ್​ಪಿ ಗಣಪತಿ ಪ್ರಕರಣದಲ್ಲಿ ಅಂದಿನ ಗೃಹ ಸಚಿವ ಕೆ.ಜೆ.ಜಾರ್ಜ್ 7 ತಿಂಗಳ ಬಳಿಕ ರಾಜೀನಾಮೆ ನೀಡಿದ್ದರು. ಆದರೆ ಈ ಪ್ರಕರಣದಲ್ಲಿ ಸರ್ಕಾರ ತಕ್ಷಣ ತನಿಖೆಗೆ ಆದೇಶಿಸಿದೆ. ಈಶ್ವರಪ್ಪ ರಾಜೀನಾಮೆ ಪಡೆಯುವ ಸ್ಥಿತಿ ಈಗ ನಿರ್ಮಾಣವಾಗಿಲ್ಲ. ತನಿಖೆ ಬಳಿಕ ತಪ್ಪಿತಸ್ಥರು ಎಂದು ಸಾಬೀತಾದರೆ ಕ್ರಮ ಕೈಗೊಳ್ಳುತ್ತೇವೆ ಎಂದರು.

ವಿರೋಧ ಪಕ್ಷಗಳು ಇಂದು ರಾಜ್ಯಪಾಲರ ಭೇಟಿ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯಪಾಲರನ್ನೇಕೆ ಸಮಯ ಸಿಕ್ಕರೆ ರಾಷ್ಟ್ರಪತಿಗಳನ್ನೇ ಭೇಟಿ ಮಾಡಲಿ ಎಂದರು. ಸಿಎಂ ರಾಜೀನಾಮೆ ಕೇಳಿದರೆ ಕೊಡುತ್ತೇನೆ ಎಂಬ ಈಶ್ವರಪ್ಪ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಅದು ಸಿಎಂಗೆ ಬಿಟ್ಟ ವಿಚಾರ. ರಾಜ್ಯಾಧ್ಯಕ್ಷನಾಗಿ ನಾನು ನನ್ನ ಹೇಳಿಕೆ ತಿಳಿಸಿದ್ದೇನೆ. ಸಿಎಂಗೆ ಈ ಬಗ್ಗೆ ನಾನು ಏನಾದರೂ ಹೇಳುವುದಿದ್ದರೆ ಅವರನ್ನು ಭೇಟಿ ಮಾಡಿ ಹೇಳುತ್ತೇನ ಎಂದರು.

TV9 Kannada


Leave a Reply

Your email address will not be published.