ಬೆಂಗಳೂರು: ಎಲ್ಲಾ ಅರ್ಹರಿಗೂ ವ್ಯಾಕ್ಸಿನ್ ಹಾಕಿಸಿ, ಮುಂದಿನ ಕೆಲವು ತಿಂಗಳಲ್ಲಿ ಮೂರನೇ ಅಲೆ ಪ್ರಾರಂಭವಾಗುತ್ತದೆಂದು ತಜ್ಞರು ಹೇಳುತ್ತಿದ್ದಾರೆ. ಆದ್ದರಿಂದ ಒಂದೆರಡು ತಿಂಗಳಲ್ಲಿ ಸಂಪೂರ್ಣ ಲಸಿಕೆ ಹಾಕಿಸಿ ಮುಗಿಸಬೇಕು. ಲಸಿಕೆ ವಿಷಯದಲ್ಲಿ ರಾಜಕೀಯ ಬೇಡ ಎಂದು ಸಿಎಂ ಬಿ.ಬಿಎಸ್ ಯಡಿಯೂರಪ್ಪ ಅವರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

ತಮ್ಮ ಪತ್ರದಲ್ಲಿ ಲಸಿಕೆ ವಿತರಣೆ ಕುರಿತಂತೆ ವಿವರವಾಗಿ ಅಂಕಿಅಂಶಗಳನ್ನು ನೀಡಿ ಸಿದ್ದರಾಮಯ್ಯ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಎಲ್ಲಾ ಅರ್ಹರಿಗೂ ವ್ಯಾಕ್ಸಿನ್ ನೀಡಲು ಅಗತ್ಯವಿರುವ ಲಸಿಕೆಗಳನ್ನು ಕೇಂದ್ರದಿಂದಾದರೂ ಪಡೆಯಬೇಕು ಇಲ್ಲ ರಾಜ್ಯದಲ್ಲೇ ಉತ್ಪಾದಿಸಿಕೊಳ್ಳಬೇಕು. 18 ವರ್ಷ ತುಂಬಿದವರು 4,37,80,330 ಜನರಿದ್ದಾರೆ, ಆದರೆ ಇದುವರೆಗೆ ಎರಡೂ ಡೋಸ್ ಲಸಿಕೆ ನೀಡಿರುವುದು ಕೇವಲ 17,77,751 ಜನರಿಗೆ ಮಾತ್ರ. ಅಂದರೆ ಕೇವಲ ಶೇ.4.06 ರಷ್ಟು ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ ಎಂದರ್ಥ. ಇದರಲ್ಲಿ ರಾಜ್ಯದಲ್ಲಿ 6,85,327 ಜನ ಹೆಲ್ತ್ ಕೇರ್ ಕಾರ್ಯಕರ್ತರಿಗೆ ಮೊದಲ ಡೋಸ್ ನೀಡಲಾಗಿದೆ. ಆದರೆ ಎರಡನೇ ಡೋಸ್ ನೀಡಿರುವುದು ಕೇವಲ 4,39,162 ಜನರಿಗೆ ಮಾತ್ರ. 4,40,302 ಜನ ಫ್ರಂಟ್ ಲೈನ್ ಕಾರ್ಯಕರ್ತರಿಗೆ ಮೊದಲ ಡೊಸ್ ನೀಡಲಾಗಿದ್ದರೆ, ಎರಡನೆ ಡೋಸ್ ನೀಡಿರುವುದು ಕೇವಲ 1,67,581 ಜನರಿಗೆ ಮಾತ್ರ.

60 ವರ್ಷ ತುಂಬಿದವರಲ್ಲಿ 8,41,056 ಜನರಿಗೆ ಎರಡನೇ ಡೋಸ್ ನೀಡಲಾಗಿದೆ. 44 ರಿಂದ 59 ವರ್ಷದ ಒಳಗೆ ಇರುವವರಿಗೆ 3,29,952 ಜನರಿಗೆ ಮಾತ್ರ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಮೊದಲ ಡೋಸ್ ಅನ್ನು ಎಷ್ಟೇ ಜನರಿಗೆ ನೀಡಿದ್ದರೂ ಸಹ ನಿಗದಿತ ಸಮಯದಲ್ಲಿ ಎರಡನೇ ಲಸಿಕೆ ನೀಡದಿದ್ದರೆ ಲಸಿಕೆ ಉಪಯೋಗಕ್ಕೆ ಬರುವುದಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ. ಹಾಗಾಗಿ ಅವಧಿ ಮೀರುವ ಮೊದಲೇ ಎರಡನೇ ಡೋಸನ್ನು ಶೀಘ್ರವಾಗಿ ನೀಡಬೇಕು.

18 ರಿಂದ 45ರ ವಯೋಮಾನದವರಲ್ಲಿ ಇದುವರೆಗೆ ಕೇವಲ 5,759 ಜನರಿಗೆ ಮಾತ್ರ ಮೊದಲ ಡೋಸ್ ಲಸಿಕೆಯನ್ನು ನೀಡಲಾಗಿದೆ. ಕೋವಿಡ್ ಎರಡನೇ ಅಲೆಯಲ್ಲಿ ಹೆಚ್ಚು ಬಾಧಿತರಾಗಿ ಸಾವು ನೋವುಗಳಿಗೆ ಗುರಿಯಾಗುತ್ತಿರುವವರಲ್ಲಿ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಯುವ ಸಮುದಾಯಕ್ಕೆ ಯುದ್ಧೋಪಾದಿಯಲ್ಲಿ ಲಸಿಕೆಯನ್ನು ನೀಡಬೇಕಾಗಿದೆ. ಕೇಂದ್ರ ಸರ್ಕಾರ ಯುವ ಜನತೆಗೆ ಲಸಿಕೆ ನೀಡುವ ವಿಚಾರದಲ್ಲೂ ಭೀಕರ ರಾಜಕಾರಣ ಮಾಡುತ್ತಿದೆ. ಗುಜರಾತ್, ಉತ್ತರ ಪ್ರದೇಶ ಮುಂತಾದ ರಾಜ್ಯಗಳ ಯುವಕರಿಗೆ ವ್ಯಾಪಕ ಪ್ರಮಾಣದಲ್ಲಿ ಲಸಿಕೆ ಹಾಕಲಾಗುತ್ತಿದೆ. ಆದರೆ ರಾಜ್ಯದಲ್ಲಿ ಬೆರಣಿಕೆಯಷ್ಟು ಜನರಿಗೆ ಮಾತ್ರ ನೀಡಲಾಗಿದೆ. ಲಸಿಕೆ ದರವನ್ನು 150, 300, 400, 600 ರೂಪಾಯಿಗಳೆಂದು ವ್ಯಾಪಾರಕ್ಕಿಡಲಾಗಿದೆ. ತಾರತಮ್ಯಕರವಾದ ಈ ಬೆಲೆಗಳನ್ನು ಕೇಂದ್ರ ಸರ್ಕಾರವೇ ನಿಗದಿ ಮಾಡುತ್ತಿದೆ. ಇದನ್ನು ನೋಡಿದರೆ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಅಂಗಡಿ ನಡೆಸುತ್ತಿದೆಯೇ ಎಂಬ ಅನುಮಾನ ಬರುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

The post ಗುಜರಾತ್, ಉ.ಪ್ರದೇಶಕ್ಕೆ ಹೆಚ್ಚು.. ರಾಜ್ಯಕ್ಕೆ ಬೆರಳೆಣಿಕೆಯಷ್ಟು – ಸಿಎಂಗೆ ಪತ್ರ ಬರೆದ ಸಿದ್ದರಾಮಯ್ಯ appeared first on News First Kannada.

Source: newsfirstlive.com

Source link