ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುಜರಾತ್ ವಿಧಾನಸಭಾ ಚುನಾವಣೆ ನಂತರ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಶಿವಮೊಗ್ಗ ದಲ್ಲಿ ಹೇಳಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಸಚಿವ ಆಕಾಂಕ್ಷಿಗಳು ಸಂಪುಟ ವಿಸ್ತರಣೆಗೆ ಕಾತೂರರಾಗಿದ್ದಾರೆ. ಇನ್ನು ಸಂಪುಟ ವಿಸ್ತರಣೆಯನ್ನು ಕಳೆದ ಕೆಲವು ತಿಂಗಳಿನಿಂದ ಮುಂದೂಡಿಗೊಂಡು ಬರಲಾಗುತ್ತಿತ್ತು. ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಗುಜರಾತ್ ವಿಧಾನಸಭಾ ಚುನಾವಣೆ (Gujurat Election) ನಂತರ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಶಿವಮೊಗ್ಗ (Shivamogga) ದಲ್ಲಿ ಹೇಳಿದ್ದಾರೆ.
ಈ ಕುರಿತು ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಗುಜರಾತ್ ವಿಧಾನಸಭಾ ಚುನಾವಣೆ ನಂತರ ರಾಜ್ಯದಲ್ಲಿ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ತಿಳಿಸಿದರು. ಸಿಎಂ ಬೊಮ್ಮಾಯಿ ನೇತೃತ್ವದ ಸರಕಾರ ರಚನೆಯಾದ ಬಳಿಕ ಈವರೆಗೆ ಒಂದು ಬಾರಿಯೂ ಸಂಪುಟ ವಿಸ್ತರಣೆಯೂ ಆಗಿಲ್ಲ, ಪುನಾರಚನೆಯೂ ಆಗಿಲ್ಲ. ಈ ನಿಟ್ಟಿನಲ್ಲಿ ಕೆಲ ಪ್ರಯತ್ನಗಳಾದರೂ ವರಿಷ್ಠರಿಂದ ನಿರೀಕ್ಷಿತ ಸ್ಪಂದನೆ ಸಿಗದ ಕಾರಣಕ್ಕೆ ಸಂಪುಟ ಸರ್ಜರಿ ವಿಚಾರ ನೆನೆಗುದಿಗೆ ಬಿದ್ದಿತ್ತು. ಈಗ ಇದಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಬೊಮ್ಮಾಯಿ ಸರ್ಕಾರದ ಸಂಪುಟದಲ್ಲಿ ಸ್ಥಾನ ಪಡೆಯಲು ಆಕಾಂಕ್ಷಿಗಳ ಪಟ್ಟಿಯೇ ಇದೆ.
40 ಪರ್ಸೆಂಟ್ ಕಮೀಷನ್ ಆರೋಪದಲ್ಲಿ ಮಾಜಿ ಸಚಿವ ಕೆ. ಎಸ್ ಈಶ್ವರಪ್ಪ ಸಚಿವ ಸ್ಥಾನ ಕಳೆದುಕೊಂಡಿದ್ದಾರೆ. ಇನ್ನು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರ ಆಪ್ತ, ಹೊನ್ನಾಳಿ ಬಿಜೆಪಿ ಶಾಸಕ ರೇಣುಕಾಚಾರ್ಯ ಕೂಡ ಸಚಿವ ಆಕಾಂಕ್ಷಿಗಳಾಗಿದ್ದಾರೆ. ಈ ಬಗ್ಗೆ ಮುಕ್ತವಾಗಿಯೇ ಹೇಳಿಕೊಂಡಿದ್ದರು. ಇನ್ನೂ ಸಿಡಿ ಪ್ರಕರಣದಲ್ಲಿ ಸಚಿವ ಸ್ಥಾನ ಕಳೆದುಕೊಂಡ ಸಾಹುಕಾರ್ ರಮೇಶ ಜಾರಕಿಹೊಳಿ ಕೂಡ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ.
ಮಹಾರಾಷ್ಟ್ರ ಗಡಿ ವಿವಾದ ಕುರಿತು ಸರ್ಕಾರ ಸ್ಪಷ್ಟ ನಿಲುವು ಹೊಂದಿದೆ
ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ನಾಯಕರ ಹೇಳಿಕೆಗಳ ನಂತರ ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವಿನ ಗಡಿ ವಿವಾದವು ಗರಿಗೆದರಿದೆ. ಇಂದು (ನ. 25) ಜಿಲ್ಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಮಹಾರಾಷ್ಟ್ರ ಗಡಿ ವಿವಾದ ಕುರಿತು ಸರ್ಕಾರ ಸ್ಪಷ್ಟ ನಿಲುವು ಹೊಂದಿದೆ. ಈಗಾಗಲೇ ಏನು ಮಾಡಬೇಕು ಅದನ್ನೆಲ್ಲಾ ರಾಜ್ಯ ಸರ್ಕಾರ ಮಾಡಿದೆ. ಈ ವಿವಾದಾತ್ಮಕ ವಿಷಯದ ಕುರಿತು ಮುಂದಿನ ವಾರ ಸರ್ವಪಕ್ಷ ಸಭೆ ನಡೆಸಲಾಗುವುದು ಸ್ಪಷ್ಟಪಡಿಸಿದರು.
ಮಂಗಳೂರಿನಲ್ಲಿ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಯುಎಪಿಎ ಕಾಯ್ದೆ ದಾಖಲಾದ ಪ್ರಕರಣಗಳನ್ನು ಎನ್ಐಎ ತನಿಖಾ ಸಂಸ್ಥೆಗಳಿಗೆ ವಹಿಸಬೇಕಾಗಿದೆ. 24 ಗಂಟೆಗಳಲ್ಲೇ ರಾಜ್ಯ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ. ಕರ್ನಾಟಕದ ಪೊಲೀಸರು ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಮೂರು ದಿನಗಳ ಕಾಲ ಪ್ರಶಿಕ್ಷಣ ಶಿಬಿರ
ಶಿವಮೊಗ್ಗದಲ್ಲಿ ಮೂರು ದಿನಗಳ ಕಾಲ ಪ್ರಶಿಕ್ಷಣ ಶಿಬಿರ ನಡೆಯುತ್ತಿದೆ. ರಾಷ್ಟ್ರದ ಅಭಿವೃದ್ದಿ ಕೇವಲ ಬಿಜೆಪಿಯ ಪಕ್ಷದಿಂದ ಮಾತ್ರ ಸಾಧ್ಯ. ಮೌಲ್ಯಾಧಾರಿತ ರಾಜಕಾರಣ ಮಾಡುವುದು ಬಿಜೆಪಿಗೆ ಮಾತ್ರ ಗೊತ್ತು. ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕು. ಬಿಜೆಪಿಯ ಕುರಿತ ಸಾಕಷ್ಟು ಅಪಪ್ರಚಾರ ಮಾಡಲಾಗುತ್ತಿದೆ. ಸಂವಿಧಾನ ಬದಲು ಮಾಡುತ್ತಾರೆ ಎನ್ನುವ ಟೀಕೆ ಇತ್ತು. ಮೋದಿ ನೇತೃತ್ವದಲ್ಲಿ ಈಗ ಸಂವಿಧಾನದ ಅಡಿಯಲ್ಲಿ ಎಲ್ಲ ಅಭಿವೃದ್ದಿ ಕಾರ್ಯ ಮಾಡಲಾಗುತ್ತಿದೆ. ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಸಾಕಷ್ಟು ನೋವು ಕೊಟ್ಟಿದೆ. ಕಾಂಗ್ರೆಸ ಕೇವಲ ಲಾಭ ಪಡೆಯುವರು ಮಾತ್ರ. ಅವರಿಗೆ ಅಧಿಕಾರ ಬಿಟ್ಟರೆ ಏನು ಯೋಚನೆ ಇಲ್ಲ. ಅಂಬೇಡ್ಕರ್ ಸಂವಿಧಾನ ರಚಿಸಿದ ಬಳಿಕ ಅವರ ಹೆಸರನ್ನು ಪ್ರಚಾರಕ್ಕೆ ಬಳಕೆ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಸಿಎಂ ಬೊಮ್ಮಾಯಿ ವಾಗ್ದಾಳಿ ಮಾಡಿದರು.
ಜನರ ಬದುಕು ಕಟ್ಟಿದ್ದು ಬಿಜೆಪಿ ಪಕ್ಷದ ಸಾಧನೆ
10 ಕೋಟಿ ರೂ. ಹೆಚ್ಚು ಮನೆಗೆ ಕುಡಿಯುವ ನೀರು ಕೇಂದ್ರ ಸರ್ಕಾರ ಹೇಳಿತ್ತು. ಅದರಂತೆ 7 ಕೋಟಿ ಅಧಿಕ ಈಗ ಮನೆಗೆ ನೀರು ಕೊಟ್ಟಿದ್ದಾರೆ. ಮೋದಿ ಅದನ್ನು ಕೃತಿಯಲ್ಲಿ ಮಾಡಿ ತೋರಿಸಿದ್ದಾರೆ. ಈ ಧೈರ್ಯ ಯಾರಿಗೂ ಇರುವುದಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಸಮಸ್ಯೆಗಳು ಬಂದರೆ ಈಗ ಅವರು ದೇಶದತ್ತ ತಿರುಗಿ ನೋಡುವಂತಾಗಿದೆ. ಕೋವಿಡ್ ಸಂದರ್ಭದಲ್ಲಿ ಜನರ ಬದುಕು ಕಟ್ಟಿದ್ದು ಬಿಜೆಪಿ ಪಕ್ಷದ ಸಾಧನೆ ಆಗಿದೆ. ದೇಶ ಈಗ ಆರ್ಥಿಕ ವಾಗಿ ಸದೃಢವಾಗಿದೆ. ರಾಜ್ಯ ಸರ್ಕಾರ ಕೊವಿಡ್ ಯಶಸ್ಸು ಆಗಿ ನಿರ್ವಹಣೆ ಮಾಡಿದ್ದಾರೆ. ಆಕ್ಸಿಜನ್ ಕೊರತೆ ಕೂಡಲೇ ನಿಗಿಸಲಾಗಿತ್ತು. ವಿದೇಶಗಳಿಂದ ಆಕ್ಸೀಜನ್ ತರಲಾಯಿತು ಎಂದರು.
ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅತುತ್ತಮವಾಗಿ ಕೊವಿಡ್ ಸಮಸ್ಯೆಯ ನಿರ್ವಹಣೆ ಮಾಡಿದೆ. ರಾಜ್ಯದ ಆರ್ಥಿಕ ಸ್ಥಿತಿ ಗಟ್ಟಿಯಾಗಿದೆ. ಎಲ್ಲ ಮೂಲಗಳಿಂದ ಆದಾಯ ಸಂಗ್ರಹ ಆಗಿದೆ. ವಿವಿಧ ನೀರಾವರಿ ಯೋಜನೆಗಳಿಗೆ ಸಾವಿರಾರು ಕೋಟಿ ಮೀಸಲು ಇಡಲಾಗಿದೆ. ರಾಜ್ಯವನ್ನು ಎಲ್ಲ ರೀತಿಯಿಂದಲ್ಲೂ ಭದ್ರವಾಗಿ ಕಟ್ಟಲಾಗುತ್ತಿದೆ. ಶಿಕ್ಷಣ ಅತೀ ಮುಖ್ಯವಾಗಿದ್ದು, ದಾಖಲೆ ಪ್ರಮಾಣದ ಕೊಠಡಿ ನಿರ್ಮಾಣ ಮಾಡಲಾಗಿದೆ. 15 ಸಾವಿರ ಶಿಕ್ಷಕರ ನೇಮಕಾತಿ ಆಗಿದೆ. ಮತ್ತೆ 15 ಸಾವಿರ ಶಿಕ್ಷಕರ ನೇಮಕಾತಿ ಶೀಘ್ರದಲ್ಲೇ ಮಾಡಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ತಾಜಾ ಸುದ್ದಿ