ಗುಡ್​​ನ್ಯೂಸ್​: ದೇಶದಲ್ಲಿ ಸೋಂಕಿನ ಪ್ರಮಾಣ ಅರ್ಧದಷ್ಟು ಇಳಿಮುಖ.. ಗುಣಮುಖರ ಪ್ರಮಾಣ ಹೆಚ್ಚಳ

ಗುಡ್​​ನ್ಯೂಸ್​: ದೇಶದಲ್ಲಿ ಸೋಂಕಿನ ಪ್ರಮಾಣ ಅರ್ಧದಷ್ಟು ಇಳಿಮುಖ.. ಗುಣಮುಖರ ಪ್ರಮಾಣ ಹೆಚ್ಚಳ

ಭಾರತದಲ್ಲಿ ಕೊರೊನಾ ಎರಡನೇ ಅಲೆ ಶುರು ಆದಾಗಿನಿಂದ ಬರೀ ಕಹಿ ಸುದ್ದಿಗಳೇ ಹೆಚ್ಚಾಗಿ ಕೇಳಿ ಬರುತ್ತಿದೆ. ಯಾವಾಗ ಹೆಮ್ಮಾರಿ ತನ್ನ ಆರ್ಭಟ ನಿಲ್ಲಿಸೋದು ಅನ್ನೋ ಪ್ರಶ್ನೆ ಪ್ರತಿಯೊಬ್ಬರಲ್ಲಿಯೂ ಕಾಡುತ್ತಿತ್ತು. ಆದ್ರೆ ದಿನ ಕಳೆದಂತೆ, ಲಾಕ್​ಡೌನ್ ವಿಚಾರದಲ್ಲಿ ಕಠಿಣ ಗೊಳಿಸುತ್ತಾ ಹೋದಂತೆ ದೇಶದ ಸ್ಥಿತಿ ಕೊರೊನಾ ವಿಚಾರದಲ್ಲಿ ಬದಲಾವಣೆಯತ್ತ ಸಾಗುತ್ತಿದೆ.

ದೇಶಾದ್ಯಂತ ಇವತ್ತು ಕೊರೊನಾ ಎರಡನೇ ಅಲೆಯದ್ದೇ ಸುದ್ದಿ. ಎಲ್ಲಿ ನೋಡಿದ್ರು ಕೂಡ ಬರೀ ಸಾವು ನೋವಿನ ಸುದ್ದಿ. ಇದನ್ನೆ ಕೇಳಿ ಕೇಳಿ ಜನ ಮೂರನೆ ಅಲೆ ಬಂದ್ರೆ ಇನ್ನೇನಪ್ಪ ಕಥೆ ಅಂದುಕೊಳ್ಳುತ್ತಿದ್ದಾರೆ. 2020 ರಲ್ಲಿ ಕೊರೊನಾ ಮೊದಲನೆ ಅಲೆ ಭಾರತದಕ್ಕೆ ಕೊಟ್ಟ ಹೊಡೆತ ಇನ್ನು ಚೇತರಿಸಿಕೊಂಡಿಲ್ಲ. ಈಗ 2021 ಕೊರೊನಾ ಎರಡನೇ ಅಲೆ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತಾಗಿ ಬಿಟ್ಟಿದೆ ಜನಸಾಮಾನ್ಯರ ಪರಿಸ್ಥಿತಿ. ಇದೆಲ್ಲಾ ತಣ್ಣಗಾಗೋದು ಯಾವಾಗ ಅನ್ನೋ ಪ್ರಶ್ನೆಗಳೇ ಹರಿದಾಡುತ್ತಿತ್ತು. ಅದಕ್ಕಿತ ಉತ್ತರ ಕೂಡ ಸಿಗುವಂತ ಸಮಯ ನಮ್ಮ ಕಣ್ಣ ಮುಂದೆ ಗೋಚರವಾಗುತ್ತಿದೆ. ಯಾಕೆ ಅನ್ನೋದನ್ನ ನಿಮ್ಮ ಮುಂದೆ ಅಂಕಿ ಅಂಶಗಳ ಸಮೇತ ವಿವರಿಸಿದ್ದೇವೆ.

ಕೊರೊನಾ ಸೋಂಕಿತರಲ್ಲಿ ಅರ್ಧದಷ್ಟು ಇಳಿಮುಖ
ಕೊರೊನಾ ಎರಡನೇ ಅಲೆ ಆರಂಭಗೊಂಡಾಗ ಜನ ಅಷ್ಟೇನು ಎಚ್ಚೆತ್ತುಕೊಳ್ಳಲಿಲ್ಲ. ಆದ್ರೆ ಯಾವಾಗ ಬರ್ತಾ ಬರ್ತಾ ದಿನನಿತ್ಯ ಸೋಂಕಿತರ ಪ್ರಮಾಣದಲ್ಲಿ ದಾಖಲೆಯೆ ಏರಿಕೆ ಕಂಡು ಬಂದಿತ್ತೋ ಆಗಲೇ ನೋಡಿ ಕೇಂದ್ರ ಸರ್ಕಾರ ಒಂದು ಕಠಿಣ ನಿರ್ಧಾರವನ್ನ ಮಾಡಿದ್ದು. ಅದು ಆಯಾ ರಾಜ್ಯಗಳಿಗೆ ಜವಾಬ್ದಾರಿಯನ್ನ ಕೊಟ್ಟುಬಿಟ್ಟಿತ್ತು. ಇದೊಂದು ಆದೇಶಕ್ಕಾಗಿ ಕಾಯುತ್ತಿದ್ದ ಹಲವು ರಾಜ್ಯಗಳ ರಾಜ್ಯ ಸರ್ಕಾರ ಹಿಂದೆ ಮುಂದೆ ನೋಡದೆ ಲಾಕ್ ಡೌನ್ ಅನ್ನ ಜಾರಿ ಮಾಡಿಬಿಟ್ಟಿತ್ತು. ಅದರಲ್ಲಿ ಕರ್ನಾಟಕ ಕೂಡ ಹೊರತಾಗಿಲ್ಲ. ಲಾಕ್ ಡೌನ್​​ ಗೂ ಮುನ್ನ ದೇಶದಲ್ಲಿ ಪತ್ತೆ ಆಗುತ್ತಿದ್ದ ಕೇಸ್​​ಗಳು ಬರೋಬ್ಬರಿ ನಾಲ್ಕು ಲಕ್ಷ ಗಡಿ ದಾಟುವಂತಿತ್ತು. ಆದ್ರೆ ಇವತ್ತಿನ ಅಂಕಿ ಅಂಶ ನೋಡಿದ್ರೆ ಅದು ಅರ್ಧಕ್ಕೆ ಅರ್ಧದಷ್ಟು ಕಡಿಮೆ ಆಗಿದೆ. ಅದಕ್ಕೆ ಕಾರಣ ಲಾಕ್​ಡೌನ್​ ಅಂತಾ ಹೇಳಲಾಗ್ತಾಯಿದೆ. ಇದನ್ನ ನಾವಲ್ಲ ಅಂಕಿ ಅಂಶಗಳೇ ಬಿಚ್ಚಿಟ್ಟಿರೋ ಮಾಹಿತಿ.

ದೇಶಾದ್ಯಂತ ಜಾರಿ ಮಾಡಿರುವ ಲಾಕ್​ಡೌನ್​​ ಪರಿಣಾಮ ಬೀರೋದಕ್ಕೆ ಆರಂಭ ಮಾಡಿದೆ. ಉದಾಹರಣೆಗೆ ಎಂಬಂತೆ ಇವತ್ತು ದೇಶದ ನಾನಾ ಭಾಗಗಳಲ್ಲಿ ಕೊರೊನಾ ಸೋಂಕು ಮತ್ತು ಕೊರೊನಾದಿಂದ ಮೃತ ಪಡುತ್ತಿರುವ ಸಂಖ್ಯೆಯಲ್ಲಿ ಸ್ಥಿರವಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾಹಿತಿಯೆ ಸಾರಿ ಸಾರಿ ಹೇಳುತ್ತಿದೆ. ಹಾಗಂತ ದೇಶದಲ್ಲಿ ಎಲ್ಲಾ ಕಡೆಯೂ ಕೊರೊನಾ ನಿಯಂತ್ರಣಕ್ಕೆ ಬಂದಿದೆ ಅನ್ನೋ ಅರ್ಥ ಅಲ್ಲ. ಇನ್ನು ನಾನಾ ಭಾಗಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಹಾಗಾಗಿ ನಮ್ಮ ಲಾಕ್​ಡೌನ್​ ನಿಯಮ ಇನ್ನು ಕಟ್ಟು ನಿಟ್ಟಾಗಿ ಪಾಲನೆ ಆಗಬೇಕು.

ಸೋಂಕಿತರಿಗಿಂತ ಗುಣಮುಖರಾಗುತ್ತಿರೋರೆ ಹೆಚ್ಚು
ಕಳೆದ 9 ದಿನಗಳಿಂದ ಪ್ರತಿ ನಿತ್ಯ ಪತ್ತೆ ಆಗುತ್ತಿರುವ ಹೊಸ ಸೋಂಕಿತರ ಪ್ರಮಾಣಕ್ಕಿಂತ, ಸೋಂಕು ದೃಢಪಟ್ಟು ಚಿಕಿತ್ಸೆ ಪಡೆದು ಅದರಿಂದ ಗುಣಮುಖ ರಾಗುತ್ತಿರೋರ ಸಂಖ್ಯೆ ಹೆಚ್ಚಾಗಿದೆ. ಇದು ನಿಜಕ್ಕೂ ಸಮಾಧಾನದ ಸಂಗತಿ. ಇದು ಕರ್ನಾಟಕದ ಮಟ್ಟಿಗಂತೂ ಸ್ವಲ್ಪ ನಿಟ್ಟುಸಿರು ಬಿಡುವಂತೆ ಮಾಡಿದೆ. ದೇಶದಲ್ಲೂ ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆ ಆಗ್ತಾ ಇದೆ. ಕಳೆದ 24 ಗಂಟೆಯಲ್ಲಿ ವರದಿಯಾಗಿರುವ ಪ್ರಕರಣಗಳನ್ನೇ ಗಮನಿಸಿದ್ರೆ ಇದು ಗೊತ್ತಾಗುತ್ತೆ.

ಕಳೆದ 24 ಗಂಟೆಯಲ್ಲಿ ದೇಶದಲ್ಲಿ 2.40 ಲಕ್ಷ ಹೊಸ ಕೇಸ್
ದೇಶಾದ್ಯಂತ ಕಳೆದ 24 ಗಂಟೆಯಲ್ಲಿ 2 ಲಕ್ಷದ 40 ಸಾವಿರ ಹೊಸ ಕೇಸ್ ಗಳು ಬಂದಿವೆ. ಕಳೆದ ಒಂದು ವಾರದ ಹಿಂದೆ ಹೋಲಿಸಿದರೆ ಇದು ಹೊಸ ಕೇಸ್ ಗಳ ಸಂಖ್ಯೆ ಇಳಿಮುಖ ಕಂಡಿದೆ. ದೇಶದಲ್ಲಿ ನಿತ್ಯ ಬರುತ್ತಿರುವ ಹೊಸ ಕೇಸ್ ಗಳ ಸಂಖ್ಯೆಯೇ 4 ಲಕ್ಷ ದಾಟಿ ಬಿಟ್ಟಿತ್ತು. ಯಾವಾಗ ದೇಶದಲ್ಲಿ ನಿತ್ಯದ ಕೇಸ್ ಗಳ ಸಂಖ್ಯೆ ನಾಲ್ಕು ಲಕ್ಷದ ಗಡಿ ದಾಟಿತೋ ಆಗ ಎಲ್ಲಾ ಕಡೆ ಆತಂಕ ಹೆಚ್ಚಾಗಿತ್ತು. ಎರಡನೇ ಅಲೆ ಬಹುಷಃ ಗರಿಷ್ಠ ಮಟ್ಟ ಆಗಲೇ ತಲುಪಿತ್ತು ಅನಿಸುತ್ತೆ. ಎರಡನೇ ಅಲೆ ಗರಿಷ್ಠ ಮಟ್ಟ ತಲುಪಿದಾಗಲೇ ದೇಶದಲ್ಲಿ ಆಕ್ಸಿಜನ್ ಕೊರತೆ ಕಾಣಿಸಿಕೊಂಡಿದ್ದು. ಆಗಲೇ ವಿಶ್ವ ಸಮುದಾಯದ ಭಾರತದ ಆರೋಗ್ಯ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಆದ್ರೆ ಒಂದೇ ವಾರದಲ್ಲಿ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ.

ದೇಶದಲ್ಲಿರುವ ಸಕ್ರಿಯ ಪ್ರಕರಣಗಳ ಸಂಖ್ಯೆ 28,05,399
ಹಾಲಿ ದೇಶದಲ್ಲಿ ಕೊರೊನಾ ಇಳಿಮುಖವಾಗ್ತಾ ಇರೋದ್ರಿಂದ ಸಕ್ರಿಯ ಪ್ರಕರಣಗಳ ಏರುಗತಿ ನಿಧಾನಗೊಂಡಿದೆ. ಹಾಲಿ ದೇಶದಲ್ಲಿ 28 ಲಕ್ಷ ಸಕ್ರಿಯ ಕೇಸ್​ಗಳಿವೆ. ಇವರಲ್ಲಿ ಬಹುತೇಕರು ತಮ್ಮ ತಮ್ಮ ಮನೆಗಳಲ್ಲೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಬಹುಷಃ ಇನ್ನು ಒಂದೆರಡು ವಾರಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಯಲಿದೆ. ಕಾರಣ ಈಗ ಬರ್ತಾ ಇರುವ ಹೊಸ ಕೇಸ್ ಗಳ ಸಂಖ್ಯೆಯಲ್ಲೂ ಇಳಿಮುಖವಾಗ್ತಿರೋದು. ಆದರೆ, ದೇಶದಲ್ಲಾಗುತ್ತಿರುವ ಸಾವಿನ ಸಂಖ್ಯೆ ಗಮನಿಸಿದ್ರೆ ಗಾಬರಿ ಭೀತಿ ಮುಂದುವರೆದಿದೆ. ಕಳೆದ 24 ಗಂಟೆಯಲ್ಲೇ 3,741 ಜನ ಸಾವಿಗೀಡಾಗಿದ್ದಾರೆ. ನಿತ್ಯದ ಸಾವಿನ ಸಂಖ್ಯೆಯೇ ನಾಲ್ಕುವರೆ ಸಾವಿರದ ಗಡಿ ದಾಟಿ ಬಿಟ್ಟಿತ್ತು. ಇದು ವಿಶ್ವದಲ್ಲೇ ಅತಿ ಹೆಚ್ಚು ಅಂತ ಹೇಳಲಾಗಿತ್ತು. ಇದರ ಜೊತೆಗೆ ಯಾವ್ಯಾವ ರಾಜ್ಯದಲ್ಲಿ ಎಷ್ಟೆಷ್ಟು ಸಕ್ರಿಯ ಪ್ರಕರಣಗಳಿವೆ ಎಂದು ನೋಡಿದರೆ..

ಹೆಚ್ಚು ಸೋಂಕಿತರಿರುವ ರಾಜ್ಯ..!
ಕರ್ನಾಟಕದಲ್ಲಿ 4,83,225 ಸಕ್ರಿಯ ಪ್ರಕರಣಗಳಿದ್ದಾವೆ. ನೆರೆಯ ಮಹಾರಾಷ್ಟ್ರದಲ್ಲಿ 3,54,830 ಸಕ್ರಿಯ ಪ್ರಕರಣಗಳಿವೆ. ಇನ್ನು ಕೇರಳದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಕಡಿಮೆ ಆಗ್ತಾ ಇದ್ದು ಹಾಲಿ 2,89,657 ಕೇಸ್ ಗಳಿವೆ. ತಮಿಳುನಾಡಿನಲ್ಲಿ 2,84,278, ಆಂಧ್ರಪ್ರದೇಶದಲ್ಲಿ 2,10,683, ಪಶ್ಚಿಮ ಬಂಗಾಳದಲ್ಲಿ 1,31,688, ರಾಜಸ್ಥಾನದಲ್ಲಿ 1,22,330 ಸಕ್ರಿಯ ಪ್ರಕರಣಗಳಿವೆ.

ವಾಣಿಜ್ಯ ನಗರಿ ಮುಂಬೈನಲ್ಲಿ ಕಡಿಮೆಯಾದ ಕೊರೊನಾ
ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಕಳೆದ ಒಂದು ವಾರಗಳಿಂದ ಹೊಸ ಕೇಸ್ ಗಳು ಕಡಿಮೆ ಆಗ್ತಾ ಇದ್ದಾವೆ. ಕಳೆದ ಹಲವು ದಿನಗಳಿಂದ ಮುಂಬೈ ಮಹಾನಗರವನ್ನು ಕಂಪ್ಲೀಟ್ ಬಂದ್ ಮಾಡಲಾಗಿರುವ ಕಾರಣ ಬಹುತೇಕ ಚೈನ್ ಬ್ರೇಕ್ ಆಗಿದೆ. ಹೀಗಾಗಿ ಮಹಾನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯೂ ಇಳಿಮುಖವಾಗಿದೆ. ಎರಡನೇ ಅಲೆ ಬಂದಾಗ ಮಹಾರಾಷ್ಟ್ರದಲ್ಲೇ ಅತಿ ಹೆಚ್ಚು ಕೇಸ್ ಕಂಡು ಬಂದಿತ್ತು. ಆದ್ರೆ ನಿನ್ನೆ ಮುಂಬೈನಲ್ಲಿ 1,299 ಹೊಸ ಕೇಸ್ ಮಾತ್ರ ಬಂದಿದೆ. ಇದರಿಂದ ಮುಂಬೈ ಜನತೆಗೆ ಬಹಳ ದಿನಗಳ ಬಳಿಕ ಆತಂಕ ಕಡಿಮೆಯಾಗಿದೆ. ಇದೆಲ್ಲ ಸಾಧ್ಯವಾಗಿದ್ದು ಮುಂಬೈನಲ್ಲಿ ಕೈಗೊಂಡ ಕಠಿಣ ಕ್ರಮಗಳಿಂದಾಗಿ. ಟಿಟಿಟಿ ಸೂತ್ರವನ್ನು ಕಟ್ಟು ನಿಟ್ಟಾಗಿ ಪಾಲಿಸಿದ ಪರಿಣಾಮ ಮುಂಬೈನಲ್ಲಿ ಪರಿಸ್ಥಿತಿ ಸುಧಾರಿಸಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಹೊಸ ಕೇಸ್ ಕಡಿಮೆ
ದೆಹಲಿಯಲ್ಲಂತೂ ಕೊರೊನಾ ಸಿಕ್ಕಾಪಟ್ಟೆ ಅಬ್ಬರಿಸಿತ್ತು. ಜನರಿಗೆ ಬೆಡ್ ಸಿಗದೇ, ಆಕ್ಸಿಜನ್ ಸಿಗದೇ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಫೈನಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಲಾಕ್​​ಡೌನ್ ತೀರ್ಮಾನ ಮಾಡಿದ್ದರು. ಇಂದು ಮತ್ತೆ ಒಂದು ವಾರಗಳ ಕಾಲ ದೆಹಲಿಯಲ್ಲಿ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ. ದೆಹಲಿಯಲ್ಲಿ ಹೊಸ ಕೇಸ್ ಗಳ ಸಂಖ್ಯೆಯಲ್ಲೂ ಇಳಿಕೆ ಕಂಡು ಬಂದಿದೆ. ನಿನ್ನೆ 2260 ಹೊಸ ಕೇಸ್ ಗಳು ಮಾತ್ರ ಬಂದಿರೋದು ದೆಹಲಿಯ ಜನತೆಯಲ್ಲಿ ಭೀತಿ ಕಡಿಮೆ ಆಗಿದೆ. ಆದರೂ ಇನ್ನಷ್ಟು ದಿನ ಲಾಕ್ ಡೌನ್ ಅಗತ್ಯತೆ ಇದೆ ಅಂತ ತಜ್ಞರು ದೆಹಲಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಮುಂಬೈ, ದೆಹಲಿಗೆ ಹೋಲಿಸಿದ್ರೆ ಬೆಂಗಳೂರಿನಲ್ಲಿ ಹೆಚ್ಚು
ಮುಂಬೈ ಮತ್ತು ದೆಹಲಿಗೆ ಹೋಲಿಸಿದ್ರೆ ಬೆಂಗಳೂರಿನಲ್ಲೇ ಅತಿ ಹೆಚ್ಚು ಹೊಸ ಪ್ರಕರಣಗಳು ದಾಖಲಾಗ್ತಾ ಇದ್ದಾವೆ. ನಿತ್ಯ ಎಂಟತ್ತು ಸಾವಿರದ ಆಸು ಪಾಸಿನಲ್ಲಿ ಹೊಸ ಕೇಸ್ ಗಳು ದಾಖಲಾಗ್ತಾ ಇದ್ದಾವೆ. ಜೂನ್ 7ರವರೆಗೆ ಲಾಕ್ ಡೌನ್ ವಿಸ್ತರಣೆ ಆಗಿರೋದ್ರಿಂದ ಬಹುಷಃ ಅಷ್ಟರ ವೇಳೆಗೆ ಬೆಂಗಳೂರಿನಲ್ಲಿ ಪೂರ್ಣ ಪ್ರಮಾಣದಲ್ಲಿ ಕೊರೊನಾ ಇಳಿಮುಖ ಆಗಬಹುದು ಅಂತ ಅಂದಾಜು ಮಾಡಲಾಗಿದೆ. ಬೆಂಗಳೂರು ಕಂಪ್ಲೀಟ್ ಬಂದ್ ಆಗಿದ್ದು ಇನ್ನ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹೀಗಾಗಿ ಬೆಂಗಳೂರಿನಲ್ಲೂ ಆದಷ್ಟು ಬೇಗ ಸುಧಾರಿಸುವ ನಿರೀಕ್ಷೆ ಹೊಂದಲಾಗಿದೆ.

ಇನ್ನು ದೇಶದಲ್ಲಿ ಕಳೆದ ಕೆಲ ದಿನಗಳಿಂದ ಕೊರೊನಾ ಸೋಂಕಿತರು ಸಂಖ್ಯೆಯಲ್ಲಿ ಇಳಿಮುಖ ಆಗುತ್ತಿದೆ. ಅದನ್ನ ಅಂಕಿ ಅಂಶಗಳ ಪ್ರಕಾರ ನೋಡೋದಾದ್ರೆ…. ಸೋಂಕಿತರಲ್ಲಿ ಇಳಿಮುಖ

  1. ಮೇ 5 ರಂದು ದೇಶದಲ್ಲಿ ಪತ್ತೆಯಾದ ಸೋಂಕಿತರು – 4,12,431
  2. ಮೇ 10 ರಂದು ದೇಶದಲ್ಲಿ ಪತ್ತೆಯಾದ ಸೋಂಕಿತರು – 3,29,942
  3. ಮೇ 15 ರಂದು ದೇಶದಲ್ಲಿ ಪತ್ತೆಯಾದ ಸೋಂಕಿತರು – 3,11,170
  4. ಮೇ 20 ರಂದು ದೇಶದಲ್ಲಿ ಪತ್ತೆಯಾದ ಸೋಂಕಿತರು – 2,59,551
  5. ಮೇ 23 ರಂದು ದೇಶದಲ್ಲಿ ಪತ್ತೆಯಾದ ಸೋಂಕಿತರು – 2,40,842

ಕಳೆದ 20 ದಿನಗಳ ಅಂಕಿ ಅಂಶಗಳನ್ನ ಗಮನಿಸಿದರೆ ದಿನದಿಂದ ದಿನಕ್ಕೆ ಗಣನೀಯವಾಗಿ ಇಳಿಮುಖವಾಗುತ್ತಿದೆ. ಇದಕ್ಕೆ ಕಾರಣವೇ ಲಾಕ್​ಡೌನ್ ಅಂತಾ ಒಂದು ಕಡೆಯಿಂದಲೂ ಹೇಳಲಾಗುತ್ತಿದೆ. ಇನ್ನು ಸತತವಾಗಿ ಕಳೆದ 10 ದಿನಗಳಿಂದ ಗುಣಮುಖರಾಗುತ್ತಿರೋರ ಸಂಖ್ಯೆ ಕೂಡ ಹಚ್ಚಾಗುತ್ತಿದೆ. ವಿಶೇಷ ಏನಂದ್ರೆ ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆಯೇ ಹೆಚ್ಚು ಅನ್ನೋ ಅಂಶ ಬೆಳಕಿಗೆ ಬಂದಿದೆ.

ಗುಣಮುಖರಾಗುತ್ತಿರೋರ ಪ್ರಮಾಣ ಹೆಚ್ಚಳ
ಇನ್ನು ಯಾವಾಗ ದೇಶದ ನಾನಾ ರಾಜ್ಯಗಳಲ್ಲಿ ಲಾಕ್​​ಡೌನ್ ಅನ್ನ ಜಾರಿಗೆ ತರಲಾಗಿತ್ತೋ ಆಗಲೇ ನೋಡಿ ಸೋಂಕಿತರ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದ್ರೆ, ಚೇತರಿಕೆ ಆಗುತ್ತಿರವ ಪ್ರಮಾಣ ಕೂಡ ಹೆಚ್ಚಾಗಿದೆ. ಹಿಂದೆ 17.13 ರಷ್ಟು ಪ್ರಮಾಣದಲ್ಲಿ ಸೋಂಕಿತರು ಪತ್ತೆ ಆಗುತ್ತಿದ್ದರು, ಈಗ ಅದು 11.12 ಕ್ಕೆ ಇಳಿಕೆ ಆಗಿದೆ. ಇನ್ನು ಚೇತರಿಕೆಯ ಪ್ರಮಾಣದಲ್ಲಿ ಏರಿಕೆ ಆಗಿದ್ದು, ಶೇ81.97 ರಷ್ಟಿದ್ದ ಪ್ರಮಾಣ ಶೇ 87.76 ಕ್ಕೆ ಏರಿಕೆ ಆಗಿದೆ. ಇದೆಲ್ಲಾ ಅಂಕಿ ಅಂಶಗನ್ನ ನೋಡಿದ ಮೇಲೆಯೇ ಹೇಳಬೋದು ಲಾಕ್​ಡೌನ್​ ಜಾರಿಗೆ ತಂದಮೇಲೆ ಸೋಂಕಿತರ ಪ್ರಮಾಣದಲ್ಲಿ ಇಳಿಮುಖಗೊಂಡಿದೆ ಎಂದು.

ಒಟ್ಟಾರೆಯಾಗಿ ಲಾಕ್​ಡೌನ್​ ನಿಂದಾಗಿ ಕೊರೋನಾ ಹರಡುವಿಕೆಗೆ ಬ್ರೇಕ್ ಬಿದ್ದಿದೆ ಅಂದ್ರೆ ತಪ್ಪಾಗೋದಿಲ್ಲಾ. ಹಾಗಂತ ನಾವು ಮೈ ಮರಿಬಾರದು. ಯಾಕಂದರೆ ಇವತ್ತು ದೇಶದ ಅದೆಷ್ಟೋ ಜಿಲ್ಲೆಗಳಲ್ಲಿ ಇನ್ನು ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಬಂದಿಲ್ಲ. ಹಾಗಾಗಿ ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು.

The post ಗುಡ್​​ನ್ಯೂಸ್​: ದೇಶದಲ್ಲಿ ಸೋಂಕಿನ ಪ್ರಮಾಣ ಅರ್ಧದಷ್ಟು ಇಳಿಮುಖ.. ಗುಣಮುಖರ ಪ್ರಮಾಣ ಹೆಚ್ಚಳ appeared first on News First Kannada.

Source: newsfirstlive.com

Source link