ಗುತ್ತಿಗೆದಾರ ಸಂತೋಷ್ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರ; ಪೊಲೀಸ್ ಭದ್ರತೆಯಲ್ಲಿ ಬೆಳಗಾವಿಗೆ ರವಾನೆ | Santosh Suicide Case Body handover to Santosh Family KS Eshwarappa Case Udupi Police reaction


ಗುತ್ತಿಗೆದಾರ ಸಂತೋಷ್ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರ; ಪೊಲೀಸ್ ಭದ್ರತೆಯಲ್ಲಿ ಬೆಳಗಾವಿಗೆ ರವಾನೆ

ಸಂತೋಷ್ ಪಾಟೀಲ್ (ಸಂಗ್ರಹ ಚಿತ್ರ)

ಉಡುಪಿ: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ವಿರುದ್ಧ ಪರ್ಸೆಂಟೇಜ್ ಆರೋಪದಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಮೃತದೇಹವನ್ನು ಮಣಿಪಾಲ ಫಾರೆನ್ಸಿಕ್ ಮೆಡಿಸಿನ್ ವಿಭಾಗದಲ್ಲಿ ಹಸ್ತಾಂತರ ಮಾಡಲಾಗಿದೆ. ಬಳಿಕ, ಹವಾನಿಯಂತ್ರಿತ ಅಂಬುಲೆನ್ಸ್​ನಲ್ಲಿ ಮೃತದೇಹ ಬೆಳಗಾವಿಗೆ ರವಾನೆ ಮಾಡಲಾಗಿದೆ. ಬೆಳಗ್ಗೆ 4 ಗಂಟೆ ಸುಮಾರಿಗೆ ಮೃತದೇಹ ಹಿಂಡಲಗಾ ತಲುಪುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಸಂತೋಷ್ ಪಾಟೀಲ್ ಕುಟುಂಬಸ್ಥರು ಮೃತದೇಹದ ಜೊತೆ ಹೊರಟಿದ್ದಾರೆ.

ಇದಕ್ಕೂ ಮೊದಲು ಮರಣೋತ್ತರ ಪರೀಕ್ಷೆ ನಡೆಸಿ ಶವ ಕೊಂಡೊಯ್ಯಲು ಸೂಚನೆ ಕೊಡಲಾಗಿತ್ತು. ಆದರೆ, ಕೆಎಂಸಿ ಆಸ್ಪತ್ರೆ ಸಿಬ್ಬಂದಿ ಈ ಬಗ್ಗೆ ತಿಳಿ ಹೇಳಿದರೂ ಕುಟುಂಬಸ್ಥರು ಒಪ್ಪಿಗೆ ಸೂಚಿಸಿರಲಿಲ್ಲ. ಸಚಿವ ಕೆ.ಎಸ್‌. ಈಶ್ವರಪ್ಪ ಸೇರಿ ಆರೋಪಿಗಳನ್ನು ಬಂಧಿಸಲಿ. ನಂತರ ಶವ ಕೊಂಡೊಯ್ಯುವುದಾಗಿ ಕುಟುಂಬಸ್ಥರು ಹೇಳಿದ್ದರು. ಆರೋಪಿಗಳನ್ನು ಬಂಧಿಸುವವರೆಗೂ ಶವ ಪಡೆಯುವುದಿಲ್ಲ. ಆಸ್ಪತ್ರೆಯಿಂದ ಶವ ತಗೊಂಡು ಹೋದರೆ ನ್ಯಾಯ ಸಿಗಲ್ಲ. ಆರೋಪಿಗಳನ್ನು ಬಂಧಿಸಿದ್ರೆ ಮಾತ್ರ ಶವ ಪಡೆಯುತ್ತೇವೆ. ಅಲ್ಲಿವರೆಗೂ ಮೃತದೇಹವನ್ನು ಸಾಗಿಸುವುದಿಲ್ಲವೆಂದು ಪಟ್ಟು ಹಿಡಿದಿದ್ದರು.

ಆದರೆ, ಕೊನೆಗೂ ಆಸ್ಪತ್ರೆಯ ಸಿಬ್ಬಂದಿ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಿದ್ದಾರೆ. ಬಿಗಿ ಭದ್ರತೆ ನಡುವೆ ಬೆಳಗಾವಿಗೆ ಸಂತೋಷ್ ಶವ ರವಾನೆ ಮಾಡಲಾಗಿದೆ. ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಭರವಸೆ ಹಿನ್ನೆಲೆ ಮೃತದೇಹವನ್ನು ಸಂತೋಷ್​ ಕುಟುಂಬಸ್ಥರು ಕೊಂಡೊಯ್ದಿದ್ದಾರೆ. ಐಜಿಪಿ ದೇವಜ್ಯೋತಿ ರೇ ಆರೋಪಿಗಳನ್ನ ಬಂಧಿಸುವ ಭರವಸೆ ನೀಡಿದ್ದಾರೆ. ಐಜಿಪಿ ಭರವಸೆ ಬಳಿಕ ಕುಟುಂಬಸ್ಥರು ಶವ ಪಡೆದು ಕೊಂಡೊಯ್ದಿದ್ದಾರೆ.

ಉಡುಪಿಯಲ್ಲಿ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಹೇಳಿಕೆ ನೀಡಿದ್ದಾರೆ. ಸಂತೋಷ್​​ ಶವದ ಮರಣೋತ್ತರ ಪರೀಕ್ಷೆ ಪೂರೈಸಿದ್ದೇವೆ. ಸಂತೋಷ್​ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದೇವೆ. ಉಡುಪಿ ಪೊಲೀಸರು ಬೆಳಗಾವಿಯವರೆಗೂ ತೆರಳಲಿದ್ದಾರೆ. ಪೊಲೀಸ್ ಭದ್ರತೆಯಲ್ಲಿ ಮೃತದೇಹವನ್ನ ಕಳುಹಿಸಲಾಗಿದೆ. ಸೂಕ್ತ ತನಿಖೆ ಮಾಡುವುದಾಗಿ ಕುಟುಂಬಸ್ಥರಿಗೆ ಹೇಳಿದ್ದೇವೆ ಎಂದು ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ತಿಳಿಸಿದ್ದಾರೆ.

TV9 Kannada


Leave a Reply

Your email address will not be published.