ಗುರುಸಾರ್ವಭೌಮನ ಸನ್ನಿಧಿಯಲ್ಲಿ ಸಂಭ್ರಮದ ತೆಪ್ಪೋತ್ಸವ, ತುಂಗಾರತಿ: ಕಳೆಗಟ್ಟಿದ ಕಾರ್ತಿಕ ಪೂರ್ಣಿಮಾ


ರಾಯಚೂರು: ರಾಯರು ಅಂದ್ರೆ ಮೊದಲು ನೆನಪಾಗುವುದೇ ಮಂತ್ರಾಲಯ ಸನ್ನಿಧಿ. ಯಾವುದೇ ಕಷ್ಟವಿದ್ದರೂ ರಾಯರನ್ನು ನೆನೆದರೆ, ರಾಯರ ದರ್ಶನ ಮಾಡಿದರೆ ಕಷ್ಟಗಳೆಲ್ಲಾ ನಿವಾರಣೆ ಆಗುತ್ತದೆ. ಹೀಗಾಗಿ ಇಡೀ ಭಕ್ತ ಸಮೂಹ ಮಂತ್ರಾಲಯದ ಮಠಕ್ಕೆ ಹರಿದು ಬರುತ್ತದೆ.‌ ಇಂತಹ ಪವಿತ್ರ ಸ್ಥಳದಲ್ಲಿ ಅದ್ಧೂರಿ ತುಂಗಾರತಿ ನಡೆಯಿತು.

ಕಲಿಯುಗದ ಕಾಮಧೇನು ಶ್ರೀ ರಾಘವೇಂದ್ರ ನೆಲೆಸಿರುವ ತಾಣವೇ ಸುಕ್ಷೇತ್ರ ಮಂತ್ರಾಲಯ. ಮಂತ್ರಾಲಯ ಮಠಕ್ಕೆ ವರ್ಷದ 365 ದಿನಗಳ ಕಾಲವೂ ಭಕ್ತರ ದಂಡು ಹರಿದು ಬರುತ್ತೆ. ಇಂತಹ ಪುಣ್ಯ ಸ್ಥಾನ ಮಂತ್ರಾಲಯದಲ್ಲಿ ಕಾರ್ತಿಕ ಪೂರ್ಣಿಮಾ ಹಿನ್ನೆಲೆಯಲ್ಲಿ ತುಂಗಾರತಿ ಹಾಗೂ ತೆಪ್ಪೋತ್ಸವವನ್ನು ಅದ್ಧೂರಿಯಾಗಿ ನೇರವೇರಿಸಲಾಯಿತು.

ಮಂತ್ರಾಲಯ ಮಠದ ಆಚರಣೆ ವಿಧಿ-ವಿಧಾನದಂತೆ ಧಾರ್ಮಿಕ ಕಾರ್ಯಕ್ರಮಗಳು ಗುರು ರಾಯರ ಮಠದಲ್ಲಿ‌‌ ಜರುಗಿತು. ನಂತರ ಶ್ರೀಮಠದಿಂದ ತುಂಗಭದ್ರಾ ನದಿಯವರೆಗೆ ಶ್ರೀಪ್ರಹ್ಲಾದ್ ರಾಜರ ಉತ್ಸವ ಮೂರ್ತಿಯನ್ನ ಹೊತ್ತ ಪಲ್ಲಕ್ಕಿ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಆ ಬಳಿಕ ತುಂಗಭದ್ರಾ ನದಿಗೆ ಆರತಿ ನೇರವೇರಿಸಿ, ಸಾವಿರಾರು ಭಕ್ತರ ಸಮ್ಮುಖದಲ್ಲಿ ತೆಪ್ಪೋತ್ಸವ ವಿಜೃಂಭಣೆಯಿಂದ ನೆರವೇರಿಸಲಾಯಿತು.

ತುಂಗಭದ್ರಾ ನದಿ ತೀರದಲ್ಲಿ ನಡೆದ ತುಂಗಾರತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಕ್ತಸೋಮ ತುಂಗಾರತಿ ನೋಡುವುದರ ಜೊತೆಗೆ ನದಿಯಲ್ಲಿ ದೀಪಗಳನ್ನು ತೇಲಿಬಿಟ್ಟರು‌. ದೇಶದ ಮೂಲೆಮೂಲೆಯಿಂದ ಬಂದ ಸಾವಿರಾರು ಭಕ್ತರು ರಾಯರಿಗೆ ತಮ್ಮ ಭಕ್ತಿ ಸಮರ್ಪಿಸಿ ಭಕ್ತಿ ಭಾವದಲ್ಲಿ‌ ಮುಳುಗಿದ್ರು‌. ಮಂತ್ರಾಲಯ ಮಠದ ಪೀಠಾಧಿಪತಿಗಳು ಭಕ್ತರನ್ನು ಉದ್ದೇಶಿಸಿ ಅನುಗ್ರಹ ಸಂದೇಶ ನೀಡಿದ್ರು.

ಒಟ್ಟಿನಲ್ಲಿ ಕಾರ್ತಿಕ ಪೂರ್ಣಿಮೆಯ ನಿಮಿತ್ತ ನಡೆದ ತುಂಗಾರತಿ ಉತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ತುಂಗಾರತಿ ಕಣ್ಣುತುಂಬಿಕೊಂಡರು. ಮಂತ್ರಾಲಯ ಮಠವೂ ಸಹ ಭಕ್ತರ ಸಾಮರಸ್ಯ ಕೇಂದ್ರವಾಗಿದ್ದು, ಸರ್ವ ಜನಾಂಗದ ಭಕ್ತರು ಶ್ರೀ ಮಠಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದು ತುಂಗಾರತಿ ನೋಡಿ ಪುನೀತರಾದ್ರು.

ವಿಶೇಷ ವರದಿ:  ಶ್ರೀಕಾಂತ್ ಸಾವೂರ್, ನ್ಯೂಸ್ ಫಸ್ಟ್, ರಾಯಚೂರು

News First Live Kannada


Leave a Reply

Your email address will not be published. Required fields are marked *