ಗುರು ತೇಗ್ ಬಹಾದೂರ್ ಅವರ ಬಲಿದಾನ ದೇಶವನ್ನು ರಕ್ಷಿಸುವ ದಿಶೆಯಲ್ಲಿ ನಮ್ಮೆಲ್ಲರಿಗೆ ಪ್ರೇರೇಪಣೆಯಾಗಿದೆ: ಪ್ರಧಾನಿ ನರೇಂದ್ರ ಮೋದಿ | Sacrifices of Guru Tegh Bahadur inspire every Indian in protecting the  country: PM Modi ARB


ಗುರು ತೇಗ್ ಬಹಾದೂರ್ ಅವರ ಬಲಿದಾನ ದೇಶವನ್ನು ರಕ್ಷಿಸುವ ದಿಶೆಯಲ್ಲಿ ನಮ್ಮೆಲ್ಲರಿಗೆ ಪ್ರೇರೇಪಣೆಯಾಗಿದೆ: ಪ್ರಧಾನಿ ನರೇಂದ್ರ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ

ದೆಹಲಿ: ಸಿಖ್ ಧರ್ಮದ 9 ನೇ ಗುರು, ಗುರು ತೇಗ್ ಬಹಾದೂರ್ (Guru Tegh Bahadur) ಅವರ 400 ಜಯಂತ್ಯುತ್ಸವ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ರಾಜಧಾನಿಯ ಕೆಂಪುಕೋಟೆಯ (Red Fort) ಆವರಣದಿಂದ ದೇಶವನ್ನು ಉದ್ದೇಶಿಸಿ ಮಾತಾಡಿದರು. ಸೂರ್ಯಾಸ್ತದ ಬಳಿಕ ಕೆಂಪುಕೋಟೆಯಿಂದ ಭಾಷಣ ಮಾಡಿದ ಭಾರತದ ಮೊಟ್ಟ ಮೊದಲ ಪ್ರಧಾನಿ ಮೋದಿ ಅವರಾಗಿದ್ದಾರೆ. ಗುರು ತೇಗ್ ಬಹಾದೂರ ಅವರನ್ನು ಗಲ್ಲಿಗೇರಿಸುವಂತೆ ಮೊಘಲ್ ಸಾಮ್ರಾಟ ಔರಂಗಜೇಬ್ ಇದೇ ಕೋಟೆಯಿಂದ ಆಜ್ಞೆ ಹೊರಡಿಸಿದ್ದರಿಂದ ಪ್ರಧಾನಿ ಮೋದಿ ಈ ಸ್ಥಳವನ್ನು ತಮ್ಮ ಭಾಷಣಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ.

‘ಈ ಪವಿತ್ರ ಸಂದರ್ಭದಲ್ಲಿ ಎಲ್ಲ ಹತ್ತು ಸಿಖ್ ಗುರುಗಳ ಪಾದಗಳಿಗೆ ವಂದಿಸುತ್ತೇನೆ,’ ಎಂದು ಮಾತು ಆರಂಭಿಸಿದ ಪ್ರಧಾನಿಗಳು, ‘ಭಾರತ ದೇಶವು ನಮ್ಮ ಗುರುಗಳು ತೋರಿಸಿದ ಮಾರ್ಗದಲ್ಲಿ ಸಂಪೂರ್ಣ ಸಂಕಲ್ಪ ಮತ್ತು ಬದ್ಧತೆಯೊಂದಿಗೆ ಮುನ್ನಡೆಯುತ್ತಿರುವುದು ನನ್ನಲ್ಲಿ ಆನಂದವನ್ನುಂಟು ಮಾಡಿದೆ. ಎಲ್ಲರಿಗೂ ಪ್ರಕಾಶ ಪೂರಬ್ನ ಹಾರ್ದಿಕ ಶುಭಾಶಯಗಳು,’ ಎಂದರು.

‘ಕೆಂಪು ಕೋಟೆಯನ್ನು ನೋಡುತ್ತಿದ್ದರೆ ನನಗೆ ಗುರು ತೇಗ್ ಬಹಾದೂರ್ ಅವರ ಬಲಿದಾನ ನೆನೆಪಿಗೆ ಬರುತ್ತವೆ. ಔರಂಗಜೇಬನ ದಮನಕಾರಿ ನೀತಿಗಳ ನಡುವೆ ಗುರು ತೇಗ್ ಬಹಾದೂರ ಅವರು ಹಿಂದ್ ಕಾ ಚಾದರ್ ಆಗಿ ಉದ್ಭವಿಸಿದರು ಮತ್ತು ಅವನ ವಿರುದ್ಧ ಅಚಲ ಬಂಡೆಯಂತೆ ನಿಂತರು. ಔರಂಗಜೇಬ ಅನೇಕ ಭಾರತೀಯರ ತಲೆಗಳನ್ನು ಕಡಿದು ಹಾಕಿದ್ದಕ್ಕೆ ಈ ಕೆಂಪುಕೋಟೆ ಸಾಕ್ಷಿಯಾಗಿದೆ, ಆದರೆ ಅವನ ಕ್ರೌರ್ಯ, ನರಮೇಧ ನಮ್ಮ ವಿಶ್ವಾಸವನ್ನು ಕದಡುವಲ್ಲಿ ವಿಫಲವಾಗಿದೆ, ಎಂದು ಪ್ರಧಾನಿ ಮೋದಿ ಹೇಳಿದರು.

‘ಗುರು ನಾನಕ್ ದೇವ್ ಜೀ ಅವರು ಇಡೀ ದೇಶವನ್ನು ಒಂದು ದಾರದಲ್ಲಿ ಒಗ್ಗೂಡಿಸಿದರು. ಗುರು ತೇಗ್ ಬಹಾದೂರ್ ಅವರ ಅನುಯಾಯಿಗಳು ಎಲ್ಲೆಡೆ ಹಬ್ಬಿದ್ದಾರೆ. ಗುರುಗಳ ಜ್ಞಾನ ಮತ್ತು ಆಶೀರ್ವಾದಗಳನ್ನು ಪ್ರತಿನಿಧಿಸುವ ಪಾಟ್ನಾದ ಪಾಟ್ನಾ ಸಾಹಿಬ್ ಮತ್ತು ದೆಹಲಿಯ ರಕಬ್ಗಂಜ್ ಸಾಹಿಬ್ ಮೂಲಕ ನಮಗೆ ಏಕ್ ಭಾರತ್ ದರ್ಶನವಾಗುತ್ತದೆ,’ ಎಂದು ಮೋದಿ ಹೇಳಿದರು.

‘ನಮ್ಮ ನಾಗರಿಕತೆಗೆ ಆಪತ್ತು ಎದುರಾದಾಗಲೆಲ್ಲ ಒಬ್ಬ ಹೊಸ ಶೂರ ನಮ್ಮ ನಡುವೆ ಜನ್ಮ ತಳೆದಿದ್ದಾನೆ. ಸಾಮ್ರಾಟರು ಬಂದರು ಹೋದರು, ಸಾಮ್ರಾಜ್ಯಗಳು ಅಳಿದು ಹೋದವು, ಆದರೆ ಭಾರತದ ಪ್ರಗತಿ ಯಾವತ್ತೂ ನಿಂತಿಲ್ಲ. ಇನ್ನು ಮುಂದೆ ಪ್ರತಿವರ್ಷ ಡಿಸೆಂಬರ್ 26 ರಂದು ವೀರ ಬಾಲ ದಿವಸ ಆಚರಿಸಲಾಗುವುದು,’ ಎಂದು ಪ್ರಧಾನಿ ಹೇಳಿದರು.

‘ಭಾರತದ ಸಂಸ್ಕೃತಿಗ, ಪರಂಪರೆ, ದೇಶದ ಭದ್ರತೆ ಮತ್ತು ಪ್ರಗತಿಗೆ ಸಿಖ್ ಸಮುದಾಯದ ಕೊಡುಗೆ ಅಪಾರವಾದ್ದು. ದೇಳದ ಏಳಿಗೆಗೆ ಪ್ರತಿಯೊಂದು ಸಮುದಾಯದ ಪ್ರತಿಯೊಬ್ಬ ವ್ಯಕ್ತಿ ಕೊಡುಗೆ ನೀಡಬೇಕು,’ ಎಂದು ಪ್ರಧಾನಿ ಮೋದಿ ಕರೆ ನೀಡಿದರು.

‘ಸಿಖ್ ಗುರುಗಳನ್ನು ಗೌರವಿಸುವ ಅವಕಾಶ ನಮ್ಮ ಸರ್ಕಾರಕ್ಕೆ ದೊರಕಿದ್ದು ನಮ್ಮ ಸೌಭಾಗ್ಯವೆಂದು ಪರಿಗಣಿಸುತ್ತೇನೆ. ಗುರು ತೇಗ್ ಬಹದ್ದೂರ್ ಅವರ ತ್ಯಾಗ ನಮಗೆಲ್ಲ ಪ್ರೇರಣೆಯಾಗಿದೆ. ಅವರು ಎಲ್ಲ ಭಾರತೀಯರಿಗಾಗಿ ಹುತಾತ್ಮರಾದರು. ಅವರು ನಡೆಸಿದ ಬದುಕು ನಮ್ಮ ದೇಶದ ಘನತೆಯನ್ನು ರಕ್ಷಿಸಲು, ಕಾಪಾಡಲು ಮತ್ತು ಯಾವುದೇ ಬಲಿದಾನ ನೀಡಲು ಪ್ರೇರೇಪಣೆಯಾಗಿದೆ.’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

TV9 Kannada


Leave a Reply

Your email address will not be published.