ಗುರು ರವಿದಾಸ ಜಯಂತಿ; ಚುನಾವಣೆ ಮುಂದೂಡುವಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆದ ಬಿಜೆಪಿ | BJP asks Election Commission to postpone Punjab election


ಗುರು ರವಿದಾಸ ಜಯಂತಿ; ಚುನಾವಣೆ ಮುಂದೂಡುವಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆದ ಬಿಜೆಪಿ

ಸಾಂಕೇತಿಕ ಚಿತ್ರ

ಗುರು ರವಿದಾಸ ಜಯಂತಿ ಫೆಬ್ರವರಿ 16ರಂದ ನಡೆಯಲಿರುವ ಹಿನ್ನೆಲೆಯಲ್ಲಿ ಪಂಜಾಬ್​ ಚುನಾವಣೆಯನ್ನು ಮುಂದೂಡಬೇಕು ಎಂದು ಪಂಜಾಬ್​ ಮುಖ್ಯಮಂತ್ರಿ ಚರಣಜಿತ್​ ಸಿಂಗ್​ ಛನ್ನಿ ಚುನಾವಣಾ ಆಯೋಗಕ್ಕೆ ಪತ್ರ ಬರೆದ ಬೆನ್ನಲ್ಲೇ, ಪಂಜಾಬ್ ಬಿಜೆಪಿ ಕೂಡ ಇದೇ ಮನವಿ ಮಾಡಿ, ಆಯೋಗಕ್ಕೆ ಪತ್ರ ಬರೆದಿದೆ. ಪಂಜಾಬ್​​ನಲ್ಲಿ ಫೆಬ್ರವರಿ 14ರಂದು ಒಂದೇ ಹಂತದಲ್ಲಿ ಮತದಾನ ನಡೆಯುವುದು . ಮತ ಎಣಿಕೆ ಮಾರ್ಚ್​ 10ರಂದು ನಡೆಯಲಿದೆ ಎಂದು ಈಗಾಗಲೇ ಚುನಾವಣಾ ಆಯೋಗ ತಿಳಿಸಿದೆ.  ಇದೀಗ ಪಂಜಾಬ್​ ಮುಖ್ಯಮಂತ್ರಿ ಮತ್ತು ರಾಜ್ಯ ಬಿಜೆಪಿ ನಾಯಕರು ಚುನಾವಣಾ ಆಯೋಗಕ್ಕೆ ಈ ಮನವಿ ಸಲ್ಲಿಸಿದ್ದರೂ, ಸದ್ಯ ಇಲೆಕ್ಷನ್​ ಕಮಿಷನ್​ ಯಾವುದೇ ಪ್ರತಿಕ್ರಿಯೆಯನ್ನೂ ನೀಡಿಲ್ಲ. ಕೇಂದ್ರ ವಾಣಿಜ್ಯ ಮತ್ತು ಉದ್ದಿಮೆ ಸಚಿವಾಲಯದ ರಾಜ್ಯ ಸಚಿವ ಸೋಮ್ ಪ್ರಕಾಶ್​ ಅವರು ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದು, ಪಂಜಾಬ್​ ಚುನಾವಣೆಯನ್ನು ಫೆಬ್ರವರಿ 18ರಂದು ನಡೆಸಲು ಮನವಿ ಮಾಡಿದ್ದಾರೆ.  ಪಂಜಾಬ್​ ಲೋಕ್ ಕಾಂಗ್ರೆಸ್ ಕೂಡ ಇದೇ ಮನವಿಯನ್ನು ಮುಂದಿಟ್ಟಿದೆ.  

ಮುಖ್ಯಮಂತ್ರಿ ಛನ್ನಿ ಹೇಳಿದ್ದೇನು?
ಜನವರಿ 13ರಂದು  ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿರುವ ಪಂಜಾಬ್​ ಮುಖ್ಯಮಂತ್ರಿ ಚರಣಜಿತ್​ ಸಿಂಗ್ ಛನ್ನಿ, ಫೆ.16ರಂದು ಗುರು ರವಿದಾಸ್ ಜಯಂತಿ ಆಚರಣೆ ಇದೆ. ಈ ನಿಮಿತ್ತ ಪಂಜಾಬ್​ನ ಅನೇಕರು ಉತ್ತರಪ್ರದೇಶದ ವಾರಾಣಸಿಗೆ ಪ್ರಯಾಣ ಮಾಡಬೇಕಾಗುತ್ತದೆ. ಅವರು ಒಂದೆರಡು ದಿನ ಮುಂಚಿತವಾಗಿ ಹೋಗುವುದರಿಂದ ಫೆ.14ರಂದು ಮತದಾನಕ್ಕೆ ತೊಂದರೆಯಾಗುತ್ತದೆ ಎಂದು ಹೇಳಿದ್ದಾರೆ. ರವಿ ಗುರುದಾಸ್​ ಜಯಂತಿ ಆಚರಣೆ ಬಗ್ಗೆ ಪರಿಶಿಷ್ಟ ಜಾತಿ ಸಮುದಾಯದ ನಾಯಕರು ಛನ್ನಿಯವರ ಗಮನಕ್ಕೆ ತಂದಿದ್ದಾರೆ. ಗುರು ರವಿದಾಸ ಜಯಂತಿ ಹಿನ್ನೆಲೆಯಲ್ಲಿ ಫೆಬ್ರವರಿ 10 ರಿಂದ 16ರವರೆಗೆ ಏನಿಲ್ಲವೆಂದರೂ 20 ಲಕ್ಷಗಳಷ್ಟು ಪರಿಶಿಷ್ಟ ಜಾತಿ ಸಮುದಾಯದ ಭಕ್ತರು ಉತ್ತರ ಪ್ರದೇಶವ ವಾರಾಣಸಿಗೆ ಭೇಟಿ ಕೊಡುತ್ತಾರೆ.

ಗುರು ರವಿದಾಸರು 15-16ನೇ ಶತಮಾನದ ಸಂತರು. ಅತಿ ಮುಖ್ಯವಾಗಿ ಭಕ್ತಿ ಚಳವಳಿಯಲ್ಲಿ ಗುರುತಿಸಿಕೊಂಡಿದ್ದವರು. ಈ ಬಾರಿ ಫೆಬ್ರವರಿ 16ರಂದು ಅವರ 645ನೇ ಜನ್ಮ ವಾರ್ಷಿಕೋತ್ಸವ ನಡೆಯಲಿದೆ. ಇವರು ಬರೆದ ಸುಮಾರು 40 ಪದ್ಯಗಳು, ಸಿಖ್ಖರ ಪವಿತ್ರ ಧರ್ಮಗ್ರಂಥ ಆದಿ ಗ್ರಂಥದಲ್ಲಿ ಸೇರಿಸಲ್ಪಟ್ಟಿವೆ. ಜಾತೀಯತೆ, ತಾರತಮ್ಯವನ್ನು ಹೋಗಲಾಡಿಸಲು ಅವರು ತುಂಬ ಹೋರಾಡಿದ್ದರು ಎಂದು ಹೇಳಲಾಗುತ್ತದೆ. ಅವರ ಜಯಂತಿಯಂದು ಭಕ್ತರು ಪವಿತ್ರ ನದಿಗಳಲ್ಲಿ ಪುಣ್ಯಸ್ನಾನವನ್ನೂ ಮಾಡುತ್ತಾರೆ.

TV9 Kannada


Leave a Reply

Your email address will not be published. Required fields are marked *