ಬೆಂಗಳೂರು: ಶಾಸಕ ಜಮೀರ್ ಅಹ್ಮದ್ ಖಾನ್, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಮತ್ತು ಮಾಜಿ ಸಿಎಂ ಹೆಚ್​​ಡಿ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ನಾಯಕತ್ವ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಜಮೀರ್, ರಾಜ್ಯದಲ್ಲಿ ಬಿಜೆಪಿ ನೆಲ‌ ಕಚ್ಚಿತ್ತು. ಅದು ಮೇಲೆಳೆಲು ಕುಮಾರಸ್ವಾಮಿಯವರೇ ಸಹಾಯ ಮಾಡಿದ್ದು ಎಂದು ಆರೋಪಿಸಿದ್ರು. 20/20 ಅಧಿಕಾರ ಕೊಡಬೇಕಿತ್ತು. ಬಿಜೆಪಿಯವರಿಗೆ ಕೊಡಿ ಅಂತ ಹೇಳಿದ್ದೆ. ಕೊಟ್ಟಿದ್ದರೆ ಅವತ್ತೇ ಅವರು ಕಿತ್ತಾಡಿಕೊಂಡು ಹೋಗ್ತಿದ್ರು. ಆಗ ಮಾಡಿದ ತಪ್ಪಿಗೆ ಈಗ ಅಧಿಕಾರ ಹಿಡಿದಿದ್ದಾರೆ. ಸಿ.ಟಿ ರವಿಯರು ಇದನ್ನ ಅರ್ಥ ಮಾಡಿಕೊಳ್ಳಬೇಕು ಎಂದರು. ಜನ ಇವತ್ತು ಶಾಪ ಹಾಕ್ತಿದ್ದಾರೆ. ಸರ್ಕಾರಕ್ಕೆ ಥೂ ಛೀ ಅಂತ ಛಿಮಾರಿ ಹಾಕ್ತಿದ್ದಾರೆ. ನಾವಿದ್ದರೆ ಸಹಾಯ ಹಸ್ತ ಚಾಚುತ್ತಿದ್ದೆವು. ಬಿಜೆಪಿಗೆ ಜ‌ನ ಬಹುಮತ ಕೊಟ್ಟಿಲ್ಲ. ಆಪರೇಷನ್ ಕಮಲ ಮಾಡಿ ಬಂದವರು ಅಂತ ಹರಿಹಾಯ್ದರು.

ಸಿದ್ದರಾಮಯ್ಯ ಸಿಎಂ ಆಗಬೇಕು
ಇದೇ ವೇಳೆ, ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಬೇಕು ಅಂತ ಜಮೀರ್​​​ ಪುನರುಚ್ಛರಿಸಿದ್ರು. ನಾನು ಪದೇ ಪದೇ ಅದನ್ನೇ ಹೇಳ್ತಿದ್ದೇನೆ. ಇವತ್ತಿಗೂ ನನ್ನ ಅಭಿಪ್ರಾಯ ಸಿದ್ದರಾಮಯ್ಯ ಸಿಎಂ ಆಗಬೇಕು. ಇದು ನಾನು ಹೇಳ್ತಿರೋದಲ್ಲ ಜನರೇ ಹೇಳ್ತಿದ್ದಾರೆ. ಅವರು ಮಾಡಿದ ಕೆಲಸ ಜನ ಗುರುತಿಸುತ್ತಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರೇ ಸಿಎಂ ಆಗ್ಬೇಕು. ಪಕ್ಷ ಮೊದಲು ಅಧಿಕಾರಕ್ಕೆ ಬರಲಿ. ಆಮೇಲೆ ಪಕ್ಷದ ಹೈಕಮಾಂಡ್ ಯಾರು ಸಿಎಂ ಅನ್ನೋದನ್ನ ನಿರ್ಧಾರ ಮಾಡುತ್ತೆ ಅಂತ  ಹೇಳಿದ್ರು.

‘ಅಧಿಕಾರಕ್ಕಾಗಿ ಯಾರ್​ ಕಾಲು ಬೇಕಾದ್ರೂ ಹಿಡಿತಾರೆ’
ಬಿಜೆಪಿಯವರಿಗೆ ಕುಮಾರಸ್ವಾಮಿ ಅವಶ್ಯಕತೆಯಿಲ್ಲ. ಅವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರ ಪಕ್ಷದಲ್ಲೇ ಗೊಂದಲ ಮುಂದುವರಿದಿದೆ. ಅವರ ಪಾರ್ಟಿ ವಿಚಾರ ನಮಗೇಕೆ ಎಂದು ಜಮೀರ್ ಹೇಳಿದ್ರು. ಇದೇ ವೇಳೆ ಹೆಚ್​​ಡಿಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಕುಮಾರಸ್ವಾಮಿ ಲಾಭ ಇದೆ ಅಂದ್ರೆ ಸಾಕು ಪಲ್ಟಿ ಹೊಡೆಯುತ್ತಾರೆ. ದೇವೇಗೌಡರು ಹಾಗಲ್ಲ, ಅವರು ಸೆಕ್ಯೂಲರ್ ಸಿದ್ಧಾಂತದವರು. ಕುಮಾರಸ್ವಾಮಿಗೆ ಯಾವ ಸಿದ್ಧಾಂತವೂ ಇಲ್ಲ. ಹಣ, ಅಧಿಕಾರ ಸಿಕ್ಕರೆ ಎಲ್ಲಿಗೆ ಬೇಕಾದ್ರೂ ಹೋಗ್ತಾರೆ. ಅಧಿಕಾರಕ್ಕಾಗಿ ಯಾರ ಕಾಲು ಬೇಕಾದ್ರೂ ಹಿಡಿಯುತ್ತಾರೆ ಎಂದು ಹೇಳಿದ್ರು. ಪದೇ ಪದೇ ಸಿಎಂ ಹತ್ರ ಕುಮಾರಸ್ವಾಮಿ ಯಾಕೆ ಹೋಗಬೇಕು? ಕುಮಾರಸ್ವಾಮಿ ಪಲ್ಟಿ ಗಿರಾಕಿ. ಯಾವಾಗ ಎಲ್ಲಿ ಬೇಕಾದ್ರೂ ಪಲ್ಟಿ ಹೊಡೆಯುತ್ತಾರೆ. ಕುಮಾರಸ್ವಾಮಿಗೆ ದುಡ್ಡು ಅಧಿಕಾರ ಎರಡೇ ಬೇಕಾಗಿರೋದು ಎಂದು ಹೆಚ್​​ಡಿಕೆ ವಿರುದ್ಧ ಜಮೀರ್ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ರು

 ₹15 ಲಕ್ಷ ಎಲ್ಲಿ ಹಾಕಿದ್ರು ಅಕೌಂಟಿಗೆ..? 2 ಕೋಟಿ ಉದ್ಯೋಗ ಕೊಟ್ರಾ..?
ಇನ್ನು ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಜಮೀರ್, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂದ್ರು. ಎಲ್ಲಿದೆ ಸ್ವಾಮಿ ಸಬ್ ಕಾ ವಿಕಾಸ್​​? ಮನಮೋಹನ್ ಸಿಂಗ್ ಸರ್ಕಾರದ ವೇಳೆ ಕ್ರೂಡ್ ಆಯಿಲ್ 140 ಡಾಲರ್ ಇತ್ತು. ಇವತ್ತು 71 ಡಾಲರ್ ಗೆ ಕ್ರೂಡ್ ಆಯಿಲ್ ಸಿಗ್ತಿದೆ. ಆದ್ರೂ ಪೆಟ್ರೋಲ್ ಬೆಲೆ ಏರಿಸಿದ್ದಾರೆ. ಕೇಂದ್ರ, ರಾಜ್ಯ, ಡೀಲರ್ ಸೆಸ್ ಎಲ್ಲವೂ ಹಾಕ್ತಿದ್ದಾರೆ. 100 ರೂಪಾಯಿ ಪೆಟ್ರೋಲ್.. ಎಲ್ಲಿ ಹೋಗ್ಬೇಕು ನಾವು ಎಂದು ಪ್ರಶ್ನಿಸಿದ್ರು. 61% ಟ್ಯಾಕ್ಸ್ ಇವತ್ತು ಪೆಟ್ರೋಲ್ ಮೇಲೆ ಹಾಕಿದ್ದಾರೆ. 15 ಲಕ್ಷ ಎಲ್ಲಿ ಹಾಕಿದ್ರು ಅಕೌಂಟಿಗೆ..? 2 ಕೋಟಿ ಉದ್ಯೋಗ ಕೊಟ್ರಾ..? ಜನರಿಗೆ ಅಚ್ಚೇ ದಿನ್ ಬಂದಿಲ್ಲ. ನಮಗೆ ಹಳೆ‌ ದಿನ ಕೊಡಿ ಸ್ವಾಮಿ ಎಂದು ಗುಡುಗಿದ್ರು.

ನನ್ನ ಕ್ಷೇತ್ರದಲ್ಲಿ ಧಾರ್ಮಿಕ ಗುರುಗಳಿಗೆ ಸಹಾಯ ಮಾಡಿದ್ದೇವೆ. ₹5000, ಫುಡ್ ಕಿಟ್​ಗಳನ್ನ ವಿತರಿಸಿದ್ದೇವೆ. ಅರ್ಚಕರು, ಜೈನ್, ಕ್ರೈಸ್ತ, ಸರ್ದಾರ್​​​ಜೀಗಳಿಗೆ ಕಿಟ್ ವಿತರಿಸಿದ್ದೇವೆ. ಕೊರೊನಾ ಬೇಗ ತೊಲಗಲಿ ಎಂದು ಈ ಸಹಾಯ. ಎಲ್ಲಾ ದೇಗುಲ, ಚರ್ಚ್, ಮಸೀದಿ ಗುರುಗಳಿಗೆ ನೆರವು ಕೊಟ್ಟಿದ್ದೇನೆ. ಒಟ್ಟು 385 ಜನರಿಗೆ ತಲಾ ₹5000 ನೀಡಿದ್ದೇವೆ. ಬೇರೆಯವರು ಇದೇ ರೀತಿ ಸಹಾಯ ಹಸ್ತ ಚಾಚಬೇಕು ಎಂದರು.

ಮುಜರಾಯಿ ಇಲಾಖೆ ಪ್ಯಾಕೇಜ್ ಘೋಷಿಸಿದೆ. ಅರ್ಚಕರು, ಇಮಾಮರಿಗೆ ನೆರವು ನೀಡಿದ್ದಾರೆ. ಆದ್ರೆ ಜೈನ್, ಕ್ರಿಸ್ತ, ಬೌದ್ಧ ಗುರುಗಳಿಗೆ ನೀಡಿಲ್ಲ. ಅಂಥವರಿಗೆ ನಾವು ಸಹಾಯ ಹಸ್ತ ಚಾಚಿದ್ದೇವೆ. ಒಂದೇ ವೇದಿಕೆಯಲ್ಲಿ ಎಲ್ಲ ಗುರುಗಳನ್ನ ಸೇರಿಸಿದ್ದೇವೆ ಎಂದು ಹೇಳಿದ್ರು.

The post ‘ಗುರು ಹೇಳ್ತಾ ಇಲ್ವ..ಅಧಿಕಾರಕ್ಕಾಗಿ ಯಾರ್ ಕಾಲು ಬೇಕಾದ್ರೂ ಹಿಡಿತಾರೆ’ -HDK ವಿರುದ್ಧ ಜಮೀರ್​ ವಾಗ್ದಾಳಿ appeared first on News First Kannada.

Source: newsfirstlive.com

Source link