ಬೆಂಗಳೂರು: ನಟ ಪುನೀತ್ ರಾಜ್‍ಕುಮಾರ್ ನಿಧನದ ವಿಚಾರವಾಗಿ ರಾಜ್ಯ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರಿಗೆ ಪತ್ರ ಬರೆದಿರುವ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು, ಸಚಿವರಿಗೆ ಪತ್ರದಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ.
ಪುನೀತ್ ರಾಜ್‍ಕುಮಾರ್ ಆಗಲಿಕೆ ನಮಗಷ್ಟೇ ಅಲ್ಲದೇ ಇಡೀ ರಾಜ್ಯಕ್ಕೆ ಆಘಾತಕಾರಿ ವಿಷಯ. ಅವರು ವಿಶ್ವದಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ನಮ್ಮ ನೋವನ್ನು ಅಡಗಿಟ್ಟಿಸಿಕೊಂಡು ಅವರ ಸಕಲ ಗೌರವಗಳೊಂದಿಗೆ ಕಳುಹಿಸಿಕೊಡುವುದು ಅನಿವಾರ್ಯತೆಯಾಗಿತ್ತು. ಇಂತಹ ಸಂದರ್ಭದಲ್ಲಿ ಗೃಹಮಂತ್ರಿಗಳಾದ ತಾವು ನಮಗೆ ಬೆಂಬಲವಾಗಿ ನಿಂತಿದ್ದೀರಿ. ಲಕ್ಷಾಂತರ ಅಭಿಮಾನಿಗಳಿಗೆ ಅಂತಿಮ ದರ್ಶನದ ವ್ಯವಸ್ಥೆ ಮಾಡಿದಷ್ಟೇ ಅಲ್ಲದೇ ಅಂತ್ಯ ಸಂಸ್ಕಾರ ಸಂಪೂರ್ಣವಾಗುವವರೆಗೂ ಜೊತೆಗಿದ್ದು ಧೈರ್ಯ ನೀಡಿದ್ದೀರಿ. ಮೂರು ದಿನಗಳ ಕಾಲ ಯಾವುದೇ ಅಹಿತಕರ ಘಟನೆ ನಡೆಯದಂತೆ ನೀವು ಕೈಗೊಂಡ ಕ್ರಮಗಳಿಂದ ನಾವು ಅವರಿಗೊಂದು ಸೂಕ್ತವಾದ ವಿದಾಯ ಹೇಳಲು ಸಾಧ್ಯವಾಗಿದೆ. ನಿಮ್ಮ ಈ ಸಹಕಾರಕ್ಕೆ ನಮ್ಮ ಇಡೀ ಕುಟುಂಬ ಮತ್ತು ಎಲ್ಲಾ ಅಭಿಮಾನಿಗಳ ಪರವಾಗಿ ಹೃತ್ಪೂರ್ಪಕ ಕೃತಜ್ಞತೆಗಳು ಎಂದು ಅಶ್ವಿನಿ ಪುನೀತ್ ರಾಜ್‍ಕುಮಾರ್ ತಿಳಿಸಿದ್ದಾರೆ.
ಇನ್ನು, ನಾಳೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ 11ನೇ ದಿನದ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಲಿದ್ದು, ಕುಟುಂಬಸ್ಥರು ತಯಾರಿ ನಡೆಸಿದ್ದಾರೆ. ಮೊದಲು ಪುನೀತ್ ನಿವಾಸದಲ್ಲಿ ಪೂಜೆ ಸಲ್ಲಿಸಿ, ಬಳಿಕ ಕುಟುಂಬಸ್ಥರು ಕಂಠೀರವ ಸ್ಟುಡಿಯೋಗೆ ತೆರಳಿ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ. ಇನ್ನು ಮನೆಯಲ್ಲಿ ನಡೆಯುವ ಪುಣ್ಯಸ್ಮರಣೆ ಕಾರ್ಯದಲ್ಲಿ ಕುಟುಂಬದವರು ಮತ್ತು ಕೆಲ ಪ್ರಮುಖ ಕಲಾವಿದರಿಗೆ ಮತ್ತು ಗಣ್ಯವ್ಯಕ್ತಿಗಳಿಗೆ ಮಾತ್ರ ಅವಕಾಶ ಇದೆ ಎಂದು ಕುಟುಂಬದ ಆಪ್ತ ಮೂಲಗಳು ತಿಳಿಸಿವೆ. ನಂತರ ನಾಡಿದ್ದು 12 ಘಂಟೆಗೆ ಅರಮನೆ ಮೈದಾನದ ವೈಟ್ ಪೆಟಲ್ಸ್ ಹಾಗು ತ್ರಿಪುರವಾಸಿನಿಯಲ್ಲಿ ಅಭಿಮಾನಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.