ಗೃಹ ಸಚಿವಾಲಯ ಏನು ಮಾಡುತ್ತಿದೆ? ನಾಗಾಲ್ಯಾಂಡ್  ಘಟನೆ ಬಗ್ಗೆ ರಾಹುಲ್ ಗಾಂಧಿ ಪ್ರಶ್ನೆ | Nagaland Civilian Deaths neither civilians nor security personnel are safe in our own land What Is Home Ministry Doing asks Rahul Gandhi


ಗೃಹ ಸಚಿವಾಲಯ ಏನು ಮಾಡುತ್ತಿದೆ? ನಾಗಾಲ್ಯಾಂಡ್  ಘಟನೆ ಬಗ್ಗೆ ರಾಹುಲ್ ಗಾಂಧಿ ಪ್ರಶ್ನೆ

ರಾಹುಲ್ ಗಾಂಧಿ

ದೆಹಲಿ: ನಾಗಾಲ್ಯಾಂಡ್‌ನ (Nagaland) ಮೋನ್ ಜಿಲ್ಲೆಯಲ್ಲಿ(Mon district) ನಡೆದ ಬಂಡಾಯ ವಿರೋಧಿ ಕಾರ್ಯಾಚರಣೆಯಲ್ಲಿ (anti-insurgency operation) ನಾಗರಿಕರ ಹತ್ಯೆಯ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಭಾನುವಾರ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ನಾಗರಿಕರು ಅಥವಾ ಭದ್ರತಾ ಸಿಬ್ಬಂದಿಗಳು ನಮ್ಮದೇ ನೆಲದಲ್ಲಿ ಸುರಕ್ಷಿತರಾಗಿ ಇಲ್ಲದಿರುವಾಗ ಗೃಹ ಸಚಿವಾಲಯ (Home Ministry) ಏನು ಮಾಡುತ್ತಿದೆ ಎಂಬುದಕ್ಕೆ ಸರ್ಕಾರ “ನಿಜವಾದ ಉತ್ತರ” ನೀಡಬೇಕು ಎಂದು ರಾಹುಲ್ ಹೇಳಿದ್ದಾರೆ.  ಭದ್ರತಾ ಪಡೆಗಳಿಂದ ಕನಿಷ್ಠ 11 ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು ಘಟನೆಯು ತಪ್ಪಾದ ಗುರುತಿನ ಪ್ರಕರಣವೇ ಎಂದು ತನಿಖೆ ನಡೆಸುತ್ತಿದೆ ಎಂದು ನಾಗಾಲ್ಯಾಂಡ್‌ನ ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಪ್ರತಿಕ್ರಿಯಿಸಿದ  ರಾಹುಲ್  ಗಾಂಧಿ, “ಇದು ಹೃದಯ ವಿದ್ರಾವಕವಾಗಿದೆ. ಭಾರತ ಸರ್ಕಾರ ನಿಜವಾದ ಉತ್ತರವನ್ನು ನೀಡಬೇಕು. ನಮ್ಮ ಸ್ವಂತ ಭೂಮಿಯಲ್ಲಿ ನಾಗರಿಕರು ಅಥವಾ ಭದ್ರತಾ ಸಿಬ್ಬಂದಿ ಸುರಕ್ಷಿತವಾಗಿಲ್ಲದಿರುವಾಗ ಗೃಹ ಸಚಿವಾಲಯ ನಿಜವಾಗಿಯೂ ಏನು ಮಾಡುತ್ತಿದೆ?” ಎಂದು ಕೇಳಿದ್ದಾರೆ. ಸೇನೆಯು ನಾಗರಿಕರ ಹತ್ಯೆಯ ಕುರಿತು ನ್ಯಾಯಾಲಯದ ವಿಚಾರಣೆಗೆ ಭಾನುವಾರ ಆದೇಶಿಸಿದೆ ಮತ್ತು ಘಟನೆಯ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದೆ.

ಮ್ಯಾನ್ಮಾರ್‌ನ ಗಡಿಯಲ್ಲಿರುವ ಮೋನ್ ಜಿಲ್ಲೆಯಲ್ಲಿ ಈ ಪ್ರದೇಶದಲ್ಲಿ ದಂಗೆಕೋರರ ಚಲನವಲನದ ಬಗ್ಗೆ ವಿಶ್ವಾಸಾರ್ಹ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳಿಗೆ ತೀವ್ರ ಗಾಯಗಳಾಗಿದ್ದು, ಓರ್ವ ಯೋಧ ಗಾಯಗೊಂಡು ಸಾವಿಗೀಡಾಗಿದ್ದಾರೆ ಎಂದು ಅದು ಹೇಳಿದೆ.

ಏನಿದು  ಪ್ರಕರಣ? 
ನಾಗಾಲ್ಯಾಂಡ್​​ನ ಮೋನ್​ ಜಿಲ್ಲೆಯ ತಿರು ಗ್ರಾಮದಲ್ಲಿ ನಿನ್ನೆ ಸಂಜೆ ನಡೆದ ಗುಂಡಿನ ದಾಳಿಯಲ್ಲಿ ಯೋಧನೊಬ್ಬ ಸೇರಿ 13 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಈ ಘಟನೆಯಲ್ಲಿ 13 ಜನರು ಮೃತಪಟ್ಟಿದ್ದಾಗಿ ಪೊಲೀಸ್ ವರಿಷ್ಠಾಧಿಕಾರಿ ಇಮ್ನಾಲೆನ್ಸಾ ದೃಢಪಡಿಸಿದ್ದಾರೆ. ಇಲ್ಲಿನ ಓಟಿಂಗ್​ ಎಂಬ ಗ್ರಾಮದ ಜನರು ಒಂದು ಪಿಕ್​ ಅಪ್​ ಮಿನಿ ಟ್ರಕ್​ ಮೂಲಕ ಮನೆಗೆ ವಾಪಸ್​ ಬರುತ್ತಿದ್ದರು. ಈ ವೇಳೆ ತಿರು ಗ್ರಾಮದ ಬಳಿ ಅವರ ಮೇಲೆ ಗುಂಡಿನ ದಾಳಿಯಾಗಿದೆ. ಇವರಿನ್ನೂ ಬರಲಿಲ್ಲ ಎಂದು ಹುಡುಕುತ್ತ ಹೋದ ಸ್ಥಳೀಯರಿಗೆ ಟ್ರಕ್​ ಮತ್ತು 13 ಮಂದಿ ನಾಗರಿಕರ ಮೃತದೇಹ ಸಿಕ್ಕಿದೆ. ಅದನ್ನು ನೋಡಿ ಕೋಪಗೊಂಡ ಜನರು ಭದ್ರತಾ ಪಡೆಯ ಎರಡು ವಾಹನಕ್ಕೆ ಬೆಂಕಿ ಹಾಕಿದ್ದಾರೆ.

ಘಟನೆಗೆ ನಿಜವಾದ ಕಾರಣ ಗೊತ್ತಾಗಿಲ್ಲ. ಗುಂಡಿನ ದಾಳಿ ನಡೆಸಿದ್ದು ಯಾರೆಂಬುದು ಇನ್ನೂ ನಿಗೂಢವಾಗಿಯೇ ಇದೆ. ಹಾಗೇ, ನಾಗಾಲ್ಯಾಂಡ್​ನ ಮುಖ್ಯಮಂತ್ರಿ ನಿಫಿಯು ರಿಯೊ ಅವರು ಉನ್ನತ ಮಟ್ಟದ ವಿಶೇಷ ತನಿಖೆಗೆ ಆದೇಶಿಸಿದ್ದಾರೆ. ಈ ಗುಂಡಿನ ದಾಳಿ ತೀವ್ರ ಖಂಡನೀಯ. ಅನ್ಯಾಯವಾಗಿ ಬಲಿಯಾದವರ ಸಾವಿಗೆ ನ್ಯಾಯ ಒದಗಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲ, ಸ್ಥಳೀಯರು ಶಾಂತಿಯುತವಾಗಿರಬೇಕು ಎಂದು ಮನವಿ ಮಾಡಿದ್ದಾರೆ.

ಗೃಹ ಸಚಿವ ಅಮಿತ್​ ಶಾ ಕೂಡ ಟ್ವೀಟ್ ಮಾಡಿದ್ದು, ನಾಗಾಲ್ಯಾಂಡ್​​ನ ಓಟಿಂಗ್​​ನಲ್ಲಿ ನಡೆದ ಘಟನೆಯಿಂದ ನೋವಾಗಿದೆ. ಮೃತರ ಕುಟುಂಗಳಿಗೆ ನನ್ನ ಸಾಂತ್ವನಗಳು. ಈ ಘಟನೆ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಉನ್ನತ ಮಟ್ಟದ ಎಸ್​ಐಟಿ ರಚನೆ ಮಾಡಲಿದೆ ಎಂದು ಹೇಳಿದ್ದಾರೆ.

TV9 Kannada


Leave a Reply

Your email address will not be published. Required fields are marked *