ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೇ ಆರಂಭವಾಗಿದ್ದು, ಬಹುತೇಕ ಕ್ಷೇತ್ರಗಳಲ್ಲಿ ಡಿಎಂಕೆ ಪಕ್ಷದ ಅಭ್ಯರ್ಥಿಗಳು ಮುನ್ನಡೆ ಪಡೆದುಕೊಂಡಿದ್ದಾರೆ. ಈ ಸಂಖ್ಯೆಯನ್ನು ಗಮನಿಸಿದರೆ ಅಧಿಕಾರ ಪಡೆಯುವ ಮ್ಯಾಜಿಕ್ ನಂಬರ್​​ಅನ್ನು ಡಿಎಂಕೆ ದಾಟಿದ್ದು, 10 ವರ್ಷಗಳಿಂದ ಅಧಿಕಾರದಿಂದ ದೂರ ಉಳಿದಿದ್ದ ಡಿಎಂಕೆ ಮತ್ತೆ ಅಧಿಕಾರ ಪಡೆಯವುದು ಬಹುತೇಕ ಖಚಿತ ಎಂಬ ಮಾತು ವಿಮರ್ಶಕರಿಂದ ಕೇಳಿ ಬರುತ್ತಿದೆ.

ಸದ್ಯ ಮಾಹಿತಿ ಅನ್ವಯ ಚುನಾವಣಾ ಮತ ಎಣಿಕೆಯಲ್ಲಿ ಡಿಎಂಕೆ ಪಕ್ಷ ಅಭ್ಯರ್ಥಿಗಳು 141 ಕ್ಷೇತ್ರಗಳಲ್ಲಿ ಮುನ್ನಡೆ ಪಡೆಯುತ್ತಿರುವ ಮಾಹಿತಿ ಹೊರ ಬೀಳುತ್ತಿದಂತೆ ಕಾರ್ಯಕರ್ತರು ಪಕ್ಷದ ಕಚೇರಿಗಳ ಎದುರು ಸಂಭ್ರಮಾಚರಣೆಯನ್ನು ಆರಂಭ ಮಾಡಿದ್ದಾರೆ. ಪಟಾಕಿ, ಸಿಹಿ ಹಂಚಿಕೆ ಮಾಡಿ ಡಾನ್ಸ್​ ಮಾಡುವ ಮೂಲಕ ಸಂಭ್ರಮಾಚರಣೆ ಮಾಡುತ್ತಿರುವ ವಿಡಿಯೋ ಹಾಗೂ ಫೋಟೋಗಳನ್ನು ಹಲವು ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇತ್ತ ಕೇಂದ್ರ ಚುನಾವಣಾ ಆಯೋಗ ಫಲಿತಾಂಶದ ಸಂದರ್ಭದಲ್ಲಿ ಯಾವುದೇ ಸಂಭ್ರಮಾಚರಣೆ ಮಾಡದಂತೆ ನಿಷೇಧ ವಿಧಿಸಿತ್ತು. ಕಾರ್ಯಕರ್ತರು ಮಾಸ್ಕ್​​, ಸಾಮಾಜಿಕ ಅಂತರ ಇಲ್ಲದೇ ಕೊರೊನಾ ಮಾರ್ಗಸೂಚಿಗಳನ್ನು ಉಲ್ಲಂಘಟನೆ ಮಾಡಿ ಸಂಭ್ರಮಾಚರಣೆ ಮಾಡುತ್ತಿರುವುದು ಕಾಣಬಹುದಾಗಿದೆ. ಚೆನ್ನೈ ಡಿಎಂಕೆ ಪಕ್ಷದ ಕೇಂದ್ರ ಕಚೇರಿಯ ಎದುರು ಕೂಡ ಕಾರ್ಯಕರ್ತರು ಸಿಹಿ ಹಂಚಿಕೆ ಮಾಡಿ ಸಂಭ್ರಮಾಚರಣೆ ಮಾಡಿದ್ದಾರೆ. ಕಾರ್ಯಕರ್ತರ ಸಂಭ್ರಮ ಹಿನ್ನೆಲೆ ಕರ್ತವ್ಯ ಲೋಪ ಆರೋಪದಡಿ ತೆನ್ನಂಪೇಟ್​​ನಲ್ಲಿ ಪೊಲೀಸ್ ಅಧಿಕಾರಿಯೋರ್ವರನ್ನು ಅಮಾನತ್ತು ಮಾಡಲಾಗಿದೆ.

The post ಗೆಲುವಿನತ್ತ ಡಿಎಂಕೆ; ಕಾರ್ಯಕರ್ತರ ಸಂಭ್ರಮಾಚರಣೆ ಹಿನ್ನೆಲೆ ಪೊಲೀಸ್ ಅಧಿಕಾರಿ ಸಸ್ಪೆಂಡ್ appeared first on News First Kannada.

Source: newsfirstlive.com

Source link