ಬೆಂಗಳೂರು: ದೇಶಕ್ಕಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದ ತನ್ನ ಆಪ್ತ ಗೆಳೆಯನ ಜೀವ ಉಳಿಸಿಕೊಳ್ಳಲಾಗದೆ ನಿವೃತ್ತ ಸೈನಿಕ ಗಂಗಾಧರಯ್ಯ ಎಂಬವರು ಕಣ್ಣೀರಿಟ್ಟಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿದ್ದ ಮಾಜಿ ಸೈನಿಕ ರಮೇಶ್ ಬಾಬು ಎಂಬರಿಗೆ ಚಿಕಿತ್ಸೆ ಕೊಡಿಸಲು ನಾನ್​ ಕೋವಿಡ್​ ಬೆಡ್​​​ ಸಿಗದೆ ಪರದಾಟ ನಡೆಸಿರುವ ಘಟನೆ ನಗರದಲ್ಲಿ ನಡೆದಿದೆ.

ಎಲೆಕ್ಟ್ರಾನಿಕ್ ಸಿಟಿಯ ನಿವಾಸಿಯಾಗಿರುವ ನಿವೃತ್ತ ಸೈನಿಕ ರಮೇಶ್ ಬಾಬು ಅವರಿಗೆ ಮೇ 27 ರಂದು ಎಲೆಕ್ಟ್ರಾನಿಕ್ ಸಿಟಿ ಬಳಿ ಬೈಕ್​​​ನಲ್ಲಿ ತೆರಳುವ ವೇಳೆ ಅಪಘಾತ ಉಂಟಾಗಿತ್ತು. ಆ ವೇಳೆ ಅವರನ್ನು ಚಿಕಿತ್ಸೆಗಾಗಿ ನಗರದ ಸ್ಪರ್ಷ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಮೂರು ದಿನಗಳಿಂದ ಚಿಕಿತ್ಸೆ ನೀಡಿದ್ದ ಆಸ್ಪತ್ರೆ 3 ಲಕ್ಷ ರೂಪಾಯಿ ಬಿಲ್​ ಮಾಡಿ ಕಮಾಂಡೋ ಆಸ್ಪತ್ರೆಗೆ ತೆರಳುವಂತೆ ಸೂಚನೆ ನೀಡಿ ಡಿಸ್ಚಾರ್ಜ್​ ಮಾಡಿತ್ತು.

ಇತ್ತ ಮೊದಲು ಪೇಶೆಂಟ್ ಕರೆತನ್ನಿ ಎಂದಿದ್ದ ಕಮಾಂಡೋ ಆಸ್ಪತ್ರೆಯವರು ಅಲ್ಲಿಗೆ ರೋಗಿಯೊಂದಿಗೆ ತೆರಳುತ್ತಿದಂತೆ ಕರ್ತವ್ಯದಲ್ಲಿರೋ ಸೈನಿಕರಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತದೆ ಎಂದು ಹೇಳಿ ದಾಖಲು ಮಾಡಿಕೊಳ್ಳಲು ನಿರಾಕರಿಸಿದ್ದರು.

ಗೆಳೆಯನ ಜೀವ ಉಳಿಸಿಕೊಳ್ಳಲು ನಿರಂತರವಾಗಿ ಪ್ರಯತ್ನಿಸಿದ ಗೆಳೆಯ ನಾನ್​ ಕೋವಿಡ್​ ಬೆಡ್​​ಗಾಗಿ ರಾಮಯ್ಯ ಆಸ್ಪತ್ರೆ, ಮಣಿಪಾಲ್ ಹಾಗೂ ವಿಕ್ರಮ್ ಆಸ್ಪತ್ರೆಯನ್ನು ಸುತ್ತಿದ್ದರು. ಆದರೆ ಅವರಿಗೆ ಎಲ್ಲೂ ನಾನ್ ಕೋವಿಡ್ ಪೇಶೆಂಟ್​​ ಬೆಡ್​ ಸಿಕ್ಕಿರಲಿಲ್ಲ. ದೇಶಕ್ಕಾಗಿ ಹೋರಾಡಿದ ಗೆಳೆಯನಿಗೆ ಸಕಾಲಕ್ಕೊಂದು ಬೆಡ್ ಸಿಗಲಿಲ್ಲ ಅಂತ ಮಾಜಿ ಸೈನಿಕ ಅಳಲು ತೊಡಿಕೊಂಡಿದ್ದಾರೆ.

ಕೊನೆಗೆ ಬೇರೆ ದಾರಿ ಕಾಣದೆ ಮತ್ತೆ ಅದೇ ಆಸ್ಪತ್ರೆಯಲ್ಲಿ ಅವರನ್ನು ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಆದರೆ ಇಂದು ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ನಮಗೆ ಕರ್ತವ್ಯದಲ್ಲಿ ಇರುವವರೆಗೂ ಮಾತ್ರ ಅಷ್ಟೇ ಗೌರವ ಸಿಗುತ್ತದೆ. ಆ ಬಳಿಕ ನಿನ್ನ ಜೀವನ ನೀನೇ ಸಾಯಿ ಅಂತಾರೇ. ಬೇರೆ ಯಾರಿಗೂ ಇಂತಹ ಸ್ಥಿತಿ ಆಗದಂತೆ ವ್ಯವಸ್ಥೆ ಬದಲಾಗಬೇಕಿದೆ. ಈಗ ನನ್ನ ಗೆಳೆಯ ಸಾವನ್ನಪ್ಪಿದ್ದು, ಆತನ ಮೃತ ದೇಹ ಪಡೆಯಲು ಕೂಡ ಪರದಾಟ ನಡೆಸುವ ಸ್ಥಿತಿ ಎದುರಾಗಿದೆ ಎಂದು ವಿಡಿಯೋ ಮಾಡಿ ಕಣ್ಣೀರಿಟ್ಟಿದ್ದಾರೆ.

The post ಗೆಳೆಯನ ಪ್ರಾಣ ಉಳಿಸಿಕೊಳ್ಳಲಾಗದೆ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ನಿವೃತ್ತ ಸೈನಿಕ appeared first on News First Kannada.

Source: newsfirstlive.com

Source link