ದಾವಣಗೆರೆ: ಪ್ರವೇಶ ದ್ವಾರದ ಗೇಟ್ಗೆ ಕೈ ಸಿಲುಕಿ ಬಾಲಕನೊಬ್ಬನ ಉಂಗುರ ಬೆರಳು ಕಟ್ ಆದ ಘಟನೆ ಜಿಲ್ಲೆಯ ಹರಿಹರ ಪಟ್ಟಣದ ಮಹಾತ್ಮಗಾಂಧಿ ಕ್ರೀಡಾಂಗಣದ ಬಳಿ ನಡೆದಿದೆ.
ಹರಿಹರ ಮರಾಠಗಲ್ಲಿಯ ನಾಗರಾಜ್ ಎಂಬುವವರ ಪುತ್ರ ಯಶವಂತಕುಮಾರ್ (15) ಬೆರೆಳು ಕಳೆದುಕೊಂಡ ಬಾಲಕ. ಕ್ರೀಡಾಂಗಣಕ್ಕೆ ಆಟವಾಡಲು ತೆರಳಿದ್ದ ಬಾಲಕ ಗಡಿಬಿಡಿಯಲ್ಲಿ ಗೇಟ್ ಹತ್ತಿ ಹೊರಟಿದ್ದಾಗ ಆಕಸ್ಮಿಕವಾಗಿ ಗೇಟ್ನ ಮೊನಚಾದ ಭಾಗದಲ್ಲಿ ಕೈ ಸಿಲುಕಿಕೊಂಡಿದೆ. ಈ ವೇಳೆ ಬಿಡಿಸಿಕೊಳ್ಳಲು ಪ್ರಯತ್ನಿಸಿದಾಗ ಉಂಗುರ ಬೆರಳು ಕಟ್ ಆಗಿದೆ. ಧೃತಿಗೆಡದ ಬಾಲಕ ಕಟ್ ಆದ ಬೆರಳನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದಾನೆ.
ಆತನನ್ನು ಗಮನಿಸಿದ ಸ್ನೇಹಿತರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಪ್ರಥಮ ಚಿಕಿತ್ಸೆ ಮಾಡಿದ ವೈದ್ಯರು ಕಟ್ ಆದ ಬೆರಳನ್ನು ತರಲು ಸೂಚಿಸಿದ್ದರು ಎನ್ನಲಾಗಿದ್ದು ವಾಪಾಸ್ ಬಂದ ಬಾಲಕ ಕಟ್ ಆಗಿದ್ದ ಬೆರಳನ್ನು ಹುಡುಕಿ ಆಸ್ಪತ್ರೆಗೆ ಒಯ್ದಿದ್ದಾನೆ. ಸದ್ಯ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ.