ಒಂದೆಡೆ ರಿಟೆನ್ಶನ್, ಮೆಗಾ ಆಕ್ಷನ್ ಲೆಕ್ಕಾಚಾರ ನಡೀತಾ ಇದ್ರೆ, ಇನ್ನೊಂದೆಡೆ ಟೂರ್ನಿ ಆಯೋಜನೆಗೆ ಮುಂದಾಗಿರೋ ಬಿಸಿಸಿಐ ಹೊಸ ಗೊಂದಲಕ್ಕೆ ಸಿಲುಕಿದೆ. ಈ ಗೊಂದಲ ಕೆಲವೇ ದಿನಗಳಲ್ಲಿ ಬಗೆ ಹರಿಯದೇ ಇದ್ರೆ, ಮುಂದಿನ ಆವೃತ್ತಿಯ ಐಪಿಎಲ್ನ ಸ್ವರೂಪವೇ ಬದಲಾಗಲಿದೆ. ಅಷ್ಟಕ್ಕೂ ಏನದು ಗೊಂದಲ.? ಇಲ್ಲಿದೆ ಡಿಟೇಲ್ಸ್.
ದಿನ ಕಳೆದಂತೆ ಇಂಡಿಯನ್ ಪ್ರೀಮಿಯರ್ ಲೀಗ್ನ ಲೆಕ್ಕಾಚಾರಗಳು, ಜೋರಾಗಿವೆ. ಯಾವ ತಂಡ ಯಾವೆಲ್ಲಾ ಆಟಗಾರರನ್ನ ರಿಟೈನ್ ಮಾಡಿಕೊಳ್ಳುತ್ತೆ..? ಮೆಗಾ ಆಕ್ಷನ್ ಅಖಾಡದಲ್ಲಿ ಯಾರೆಲ್ಲಾ ಇರಲಿದ್ದಾರೆ ಎಂಬ ಚರ್ಚೆ ಜೋರಾಗಿದೆ. ಇದರ ಜೊತೆಗೆ ಯಾವೆಲ್ಲಾ ಆಟಗಾರರು ಹೊಸ ತಂಡಗಳ ಪಾಲಾಗ್ತಾರೆ ಅನ್ನೋದು, ಹಾಟ್ ಟಾಪಿಕ್ ಆಗಿಯೂ ಮಾರ್ಪಟ್ಟಿದೆ. ಆದ್ರೆ ಈ ಹೊಸ ತಂಡದ ವಿಚಾರವಾಗಿಯೇ ಬಿಸಿಸಿಐ, ಇದೀಗ ಗೊಂದಲಕ್ಕೆ ಸಿಲುಕಿದೆ.
14ನೇ ಆವೃತ್ತಿ ಐಪಿಎಲ್ ಮುಗಿದ ಬೆನ್ನಲ್ಲೇ, ಬಿಡ್ಡಿಂಗ್ ನಡೆಸಿದ್ದ ಬಿಸಿಸಿಐ ಮುಂದಿನ ಆವೃತ್ತಿಗೆ 2 ಹೊಸ ತಂಡಗಳ ಸೇರ್ಪಡೆಯನ್ನ ಖಚಿತಗೊಳಿಸಿತ್ತು. ಲಖನೌ ಹಾಗೂ ಅಹಮದಾಬಾದ್ ತಂಡಗಳು ಮುಂದಿನ ಆವೃತ್ತಿಯಲ್ಲಿರಲಿದ್ದು, 10 ತಂಡಗಳು ಭಾಗವಹಿಸಲಿವೆ ಎಂದು ಮಾಹಿತಿ ನೀಡಿತ್ತು. ಆದ್ರೆ, ಬರೋಬ್ಬರಿ 5,625 ಕೋಟಿ ರೂಪಾಯಿ ಕೊಟ್ಟು ಅಹಮದಾಬಾದ್ ಫ್ರಾಂಚೈಸಿ ಖರೀದಿಸಿದ ಸಿವಿಸಿ ಕ್ಯಾಪಿಟಲ್ಸ್ ಬಗ್ಗೆ, ಅಂದಿನಿಂದ ಇಂದಿನವರೆಗೆ ಸದ್ದಿಯೇ ಇಲ್ಲ. ಇದೇ ಹೊಸ ಗೊಂದಲ ಹುಟ್ಟಿಸಿದೆ.
ಬಿಸಿಸಿಐಗೇ ಗೊಂದಲ..!
ತಂಡವನ್ನ ಬಿಡ್ಡಿಂಗ್ನಲ್ಲಿ ಖರೀದಿಸಿದ ದಿನದಿಂದ ಈವರೆಗೆ, ಫ್ರಾಂಚೈಸಿ ಬಗ್ಗೆ ಮಾಹಿತಿಯೇ ಸಿಕ್ಕಿಲ್ಲ ಅನ್ನೋದು ಬಿಸಿಸಿಐನಲ್ಲಿ ಗೊಂದಲ ಹುಟ್ಟುಹಾಕಿದೆ. ಮೆಗಾ ಆಕ್ಷನ್, ಆಟಗಾರರ ರಿಟೈನೇಶನ್ ಬಗ್ಗೆ ಅಷ್ಟೆಲ್ಲಾ ಚರ್ಚೆಗಳು ನಡೀತಿದ್ರೂ ನೂತನ ಫ್ರಾಂಚೈಸಿ ಮಾತ್ರ ಮೌನಕ್ಕೆ ಜಾರಿದೆ. ಇದೇ ಈಗ ಮುಂದಿನ ಆವೃತ್ತಿಯಲ್ಲಿ ಕಣಕ್ಕಿಳಿಯೋದು, ಕೇವಲ 9 ತಂಡಗಳಾ? ಎಂಬ ಪ್ರಶ್ನೆ ಹುಟ್ಟುಹಾಕಿದೆ. ಅದರ ಜೊತೆಗೆ ಇದೇ ಫ್ರಾಂಚೈಸಿಯನ್ನ 5,100 ಕೋಟಿಗೆ ಬಿಡ್ ಮಾಡಿದ್ದ ಅದಾನಿ ಗ್ರೂಪ್ಸ್ಗೆ ಮಾಲಿಕತ್ವವನ್ನ ಹಸ್ತಾಂತರಿಸಲಾಗುತ್ತಾ ಎಂಬ ಚರ್ಚೆಯೂ ಎದ್ದಿದೆ.
ಸಿವಿಸಿ ಕ್ಯಾಪಿಟಲ್ಸ್ ಮೇಲಿದೆ ದೊಡ್ಡ ಆರೋಪ
ಸಿವಿಸಿ ಕ್ಯಾಪಿಟಲ್ಸ್ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಅನ್ನೋದು ಒಂದೆಡೆಯಾದ್ರೆ, ಇನ್ನೊಂದೆಡೆ ಕಂಪನಿಯ ಮೇಲಿರೋ ಆರೋಪ ಬಿಸಿಸಿಐ ತಲೆನೋವನ್ನ ಇನ್ನಷ್ಟು ಹೆಚ್ಚಿಸಿದೆ. ತಂಡದ ಬಿಡ್ಡಿಂಗ್ ಮಾಹಿತಿ ಹೊರ ಬಿದ್ದ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಲಲಿತ್ ಮೋದಿ ಬೆಟ್ಟಿಂಗ್ ಕಂಪನಿಗಳು ಐಪಿಎಲ್ ಒಡೆತನವನ್ನ ಹೊಂದಬಹುದಾ ಎಂದು ಪ್ರಶ್ನಿಸಿದ್ರು. ಸಿವಿಸಿ ಕ್ಯಾಪಿಟಲ್ಸ್ ವಿಶ್ವದ ವಿವಿಧ ಬೆಟ್ಟಿಂಗ್ ಕಂಪನಿಗಳಲ್ಲಿ ಹೂಡಿಕೆ ಮಾಡಿರೋದು ಇದಕ್ಕೆ ಕಾರಣವಾಗಿತ್ತು. ಈ ಆರೋಪದ ಬಗ್ಗೆಯೂ ಸ್ಪಷ್ಟ ಮಾಹಿತಿ ಬಿಸಿಸಿಐಗೆ ಇನ್ನೂ ಸಿಕ್ಕಿಲ್ಲ.
ಗೊಂದಲ ನಿವಾರಣೆಗೆ ಸಮಿತಿ ರಚನೆ ಮುಂದಾದ ಬಿಸಿಸಿಐ
ಇದೀಗ ಈ ಎಲ್ಲಾ ಗೊಂದಲಗಳನ್ನ ಬಗೆ ಹರಿಸಿಕೊಳ್ಳಲು ಬಿಸಿಸಿಐ ಹಾಗೂ ಐಪಿಎಲ್ ಆಡಳಿತ ಮಂಡಳಿ ನಿರ್ಧರಿಸಿವೆ. ಹೀಗಾಗಿಯೇ ಮುಂಬರುವ ಎಜಿಎಮ್ ಸಭೆಗೂ ಮುನ್ನ ಈ ಕರಿತ ತನಿಖೆಗೆ ಹೊಸ ಪ್ಯಾನಲ್ ರಚಿಸಲು ಮುಂದಾಗಿದೆ. ಈ ಪ್ಯಾನಲ್ನ ವರದಿ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳೋದು ಬಿಸಿಸಿಐನ ಯೋಜನೆಯಾಗಿದೆ.