ಗೋಕರ್ಣದ ಕಡಲಿಗಿಳಿದು ತುರಿಕೆಯಿಂದಾಗಿ ಆಸ್ಪತ್ರೆಗೆ ಸೇರಿದ ಪ್ರವಾಸಿಗರು; ಕಾರಣವೇನು ಗೊತ್ತಾ? | Tourists who bath in beach Hospitalized due to itching in karwar


ಗೋಕರ್ಣದ ಕಡಲಿಗಿಳಿದು ತುರಿಕೆಯಿಂದಾಗಿ ಆಸ್ಪತ್ರೆಗೆ ಸೇರಿದ ಪ್ರವಾಸಿಗರು; ಕಾರಣವೇನು ಗೊತ್ತಾ?

ಸಮುದ್ರ ತೀರ

ಉತ್ತರ ಕನ್ನಡ: ಪ್ರವಾಸಕ್ಕೆಂದು ಗೋಕರ್ಣಕ್ಕೆ ಬಂದು ಕಡಲಿಗೆ ಇಳಿದವರು ಮೈಯೆಲ್ಲ ತುರಿಕೆಯಾಗಿ ಆಸ್ಪತ್ರೆ ಸೇರುತ್ತಿರುವ ಘಟನೆಗಳು ನಡೆಯುತ್ತಿದೆ. ಗೋಕರ್ಣ ಹೇಳಿಕೇಳಿ ಪ್ರಸಿದ್ಧ ಪ್ರವಾಸಿ ತಾಣ(Tourist place). ಇಲ್ಲಿಗೆ ದಿನಂಪ್ರತಿ ಸಾವಿರಾರು ದೇಶಿ-ವಿದೇಶಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ರಸಿದ್ಧ ಧಾರ್ಮಿಕ ಕ್ಷೇತ್ರವೂ ಆಗಿರುವ ಕಾರಣ ಇಲ್ಲಿನ ಆತ್ಮಲಿಂಗದ ದರ್ಶನಕ್ಕೂ ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ. ಇಲ್ಲಿಗೆ ಭೇಟಿ ನೀಡಿದವರು ಸಮೀಪದ ಮೇನ್ ಬೀಚ್, ಕುಡ್ಲೆ ಬೀಚ್, ಹಾಫ್ ಮೂನ್ ಬೀಚ್​ಗಳಿಗೆ ಭೇಟಿ ನೀಡಿಯೇ ತೆರಳುತ್ತಾರೆ. ಆದರೆ ಕಳೆದ ಕೆಲವು ದಿನಗಳಿಂದ ಸಮುದ್ರಕ್ಕೆ ಆಟವಾಡಲು ಇಳಿದವರು ತುರಿಕೆ, ಉರಿ (ಅಲರ್ಜಿ) ಯಿಂದ ಬಳಲುತ್ತ, ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ. ಬಹುತೇಕ ಪ್ರವಾಸಿಗರು ಈ ತುರಿಕೆ, ಉರಿಯಿಂದಾಗಿ ಆತಂಕಕ್ಕೊಳಗಾಗುತ್ತಿದ್ದಾರೆ.

ಸದ್ಯ ಗೋಕರ್ಣದ ಕಡಲತೀರದಲ್ಲಿ ಜೆಲ್ಲಿ ಫಿಶ್​ಗಳು ಕಾಣಸಿಗಲಾರಂಭಿಸಿದೆ. ಮೀನುಗಾರರಿಗೂ ಹೇರಳ ಪ್ರಮಾಣದಲ್ಲಿ ಇವು ಬಲೆಗೆ ಬೀಳುತ್ತಿವೆ. ಪ್ರವಾಸಿಗರಿಗೆ ಈ ಜೆಲ್ಲಿ ಫಿಶ್​ಗಳ ಕುರಿತಾದ ಹೆಚ್ಚಿನ ಮಾಹಿತಿ ಇಲ್ಲದ ಕಾರಣ ಪ್ರವಾಸಿಗರು ಆತಂಕಕ್ಕೊಳಗಾಗುತ್ತಿದ್ದಾರೆ.

ಏನಿದು ಜೆಲ್ಲಿ ಫಿಶ್?
ಹಿಂದೂ ಮಹಾಸಾಗರ ಹಾಗೂ ಶಾಂತ ಸಾಗರದಲ್ಲಿ ಹೆಚ್ಚಾಗಿ ಕಂಡುಬರುವ ಈ ಜೆಲ್ಲಿ ಫಿಶ್​ಗಳು ಇತ್ತೀಚೆಗೆ ಉತ್ತರ ಕನ್ನಡದ ಕರಾವಳಿ ತೀರಗಳಲ್ಲೂ ಕಂಡುಬರುತ್ತಿವೆ. ನವೆಂಬರ್- ಡಿಸೆಂಬರ್ ಹೆಚ್ಚು ಶೀತ ತಿಂಗಳುಗಳು. ಈ ಸಂದರ್ಭದಲ್ಲಿ ಸಮುದ್ರ ಕೂಡ ತಂಪಾಗಿರುತ್ತವೆ. ಈ ಜೆಲ್ಲಿ ಫಿಶ್​ಗಳು ಕೂಡ ತಂಪು ನೀರಿನಲ್ಲೇ ಹೆಚ್ಚು ಕಂಡುಬರುತ್ತವೆ ಎಂದು ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ.ಶಿವಕುಮಾರ್ ಹರಗಿ ಹೇಳಿದ್ದಾರೆ.

ತುರಿಕೆ ಉಂಟಾಗಲು ಕಾರಣವೇನು?
ಜೆಲ್ಲಿ ಫಿಶ್​ಗಳಲ್ಲಿ ಸೂಜಿ ಥರನಾದ ಅತಿ ಸೂಕ್ಷ್ಮ ಮುಳ್ಳುಗಳಿರುತ್ತವೆ. ಅವು ನೀರಿನಲ್ಲಿ ಬಿದ್ದು ಹೋಗಿರುತ್ತವೆ. ಈ ಸಂದರ್ಭದಲ್ಲಿ ಸಮುದ್ರಕ್ಕೆ ಇಳಿದರೆ ಅದು ಚರ್ಮಕ್ಕೆ ತಾಗಿ ತುರಿಕೆಯನ್ನುಂಟು ಮಾಡುತ್ತದೆ. ನಮ್ಮಲ್ಲಿ ಕಂಡುಬರುವ ಜೆಲ್ಲಿ ಫಿಶ್​ಗಳು ಜೀವಕ್ಕೆ ಹೆಚ್ಚು ಅಪಾಯಕಾರಿಯಲ್ಲ. ಆದರೆ ಆಸ್ಟ್ರೇಲಿಯಾದ ಕಡಲಿನಲ್ಲಿ ಕಂಡುಬರುವ ಬಾಕ್ಸ್ ಜೆಲ್ಲಿ ಫಿಶ್​ಗಳು ತಾಗಿ ಅದರಿಂದ ಸಾವು ಉಂಟಾಗಿರುವುದು ಕೂಡ ಇದೆ ಎಂದು ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ.ಶಿವಕುಮಾರ್ ಹರಗಿ ತಿಳಿಸಿದ್ದಾರೆ.

ನೀರಿಗೆ ಇಳಿಯುವುದನ್ನು ತಡೆಯಬೇಕು
ಈ ಜೆಲ್ಲಿ ಫಿಶ್​ಗಳಿಂದಾಗಿ ಉಂಟಾಗುವ ತುರಿಕೆಯನ್ನು ತಡೆದುಕೊಳ್ಳುವ ಶಕ್ತಿ ಮೀನುಗಾರರಿಗಿದೆ. ಅವರಿಗೆ ಇದು ಅಭ್ಯಾಸವಾಗಿದೆ. ಬಂಗುಡೆ ಬಳ್ಳಿ ಅಥವಾ ರೇತಿಯನ್ನು ಬಳಸಿಕೊಂಡು ತುರಿಕೆಯನ್ನು ಕಡಿಮೆ ಮಾಡಿಕೊಳ್ಳುತ್ತಾರೆ. ಆದರೆ ಸಾಮಾನ್ಯ ಜನರಿಗೆ, ಪ್ರವಾಸಿಗರಿಗೆ ಇದು ಹೊಸತು. ಸಾಮಾನ್ಯವಾಗಿ ಈ ಜೆಲ್ಲಿ ಫಿಶ್​ಗಳು ಕಡಲತೀರದಲ್ಲಿ ಸತ್ತು ಬಿದ್ದಿರುವುದು ಕಂಡುಬರುತ್ತವೆ. ನಮ್ಮ ಜಿಲ್ಲೆಯ ಎಲ್ಲಾ ಕಡಲತೀರಗಳಲ್ಲಿ ಜೀವ ರಕ್ಷಕ ಸಿಬ್ಬಂದಿ ಕೂಡ ಇದ್ದಾರೆ. ಹೀಗೆ ತೀರದಲ್ಲಿ ಜೆಲ್ಲಿ ಫಿಶ್​ಗಳು ಕಂಡುಬಂದಾಗ ಜೀವ ರಕ್ಷಕ ಸಿಬ್ಬಂದಿ ಪ್ರವಾಸಿಗರು ಕಡಲಿಗೆ ಇಳಿಯುವುದನ್ನು ತಡೆದರೆ ಒಳ್ಳೆಯದು ಎಂದು ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ.ಶಿವಕುಮಾರ್ ಹರಗಿ ಹೇಳಿದ್ದಾರೆ.

ವರದಿ: ದೇವರಾಜ್​ ನಾಯ್ಕ್

ಇದನ್ನೂ ಓದಿ:
ಗೋಕರ್ಣ ಆತ್ಮಲಿಂಗ ದರ್ಶನ; ಭಕ್ತರಿಗೆ ಅಡ್ಡಿಪಡಿಸದಂತೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಸೂಚನೆ

ರಾತ್ರಿ ಊಟ ಮಾಡಿ ಮಲಗಿದ್ದ ವಿದ್ಯಾರ್ಥಿಗಳಿಗೆ ಫುಡ್ ಪಾಯಿಸನ್‌ನಿಂದ ವಾಂತಿ-ಭೇದಿ, 8 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

TV9 Kannada


Leave a Reply

Your email address will not be published.