ಗೋಪೂಜೆ ಮಾಡಿದ ಜೆಡಿಎಸ್ ನಾಯಕ ಎಚ್​ಡಿ ಕುಮಾರಸ್ವಾಮಿ, ಸಚಿವ ಕೋಟ ಶ್ರೀನಿವಾಸಪೂಜಾರಿ | JDS Leader HD Kumaraswamy Minister Kota Srinivas Poojary Worship Cow


ಗೋಪೂಜೆ ಮಾಡಿದ ಜೆಡಿಎಸ್ ನಾಯಕ ಎಚ್​ಡಿ ಕುಮಾರಸ್ವಾಮಿ, ಸಚಿವ ಕೋಟ ಶ್ರೀನಿವಾಸಪೂಜಾರಿ

ಗೋಪೂಜೆ ನೆರವೇರಿಸಿದ ಕುಮಾರಸ್ವಾಮಿ ದಂಪತಿ

ರಾಮನಗರ/ಉಡುಪಿ: ಕರ್ನಾಟಕದೆಲ್ಲೆಡೆ ಶುಕ್ರವಾರ ಬಲಿಪಾಡ್ಯಮಿಯನ್ನು ಸಡಗರ-ಸಂಭ್ರಮದಿಂದ ಆಚರಿಸಲಾಯಿತು. ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ ರಾಮನಗರ ತಾಲ್ಲೂಕಿನ ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ಗೋಪೂಜೆ ನೆರವೇರಿಸಿದರೆ, ಉಡುಪಿ ನಗರದ ದೊಡ್ಡಣಗುಡ್ಡೆಯಲ್ಲಿ ಸಚಿವ ಕೋಟ ಶ್ರೀನಿವಾಸಪೂಜಾರಿ ಗೋಪೂಜೆ ನೆರವೇರಿಸಿದರು.

ಗೋಪೂಜೆ ಮಾಡಿದ ಬಗ್ಗೆ ಟ್ವೀಟ್ ಮಾಡಿರುವ ಎಚ್​.ಡಿ.ಕುಮಾರಸ್ವಾಮಿ, ಭಾಗವತ ಪುರಾಣದ ಪ್ರಕಾರ ಕಾರ್ತಿಕ ಶುಕ್ಲ ಪಾಡ್ಯಮಿ ದಿನ ಶ್ರೀಕೃಷ್ಣ ಪರಮಾತ್ಮನು ಇಂದ್ರನನ್ನು ಸೋಲಿಸಿದ ದಿನವೂ ಹೌದು. ಇಂದ್ರನ ದಾಳಿಯಿಂದ ತನ್ನ ಗೋ-ಸಮೂಹವನ್ನು ರಕ್ಷಿಸಲು ಗೋಪಾಲನು ಗೋವರ್ದನ ಗಿರಿಯನ್ನೆತ್ತಿದ ದಿನವಿದು. ಆದ್ದರಿಂದಲೇ ಇಂದು ಗೋ ಪೂಜೆ, ಗೋವರ್ದನ ಪೂಜೆ. ಕೆಲವೆಡೆ ರೈತರು ಇದನ್ನು ಹಟ್ಟಿಹಬ್ಬವೆಂದು ಆಚರಿಸುತ್ತಾರೆ. ಅದರಲ್ಲೂ ಬೆಳಕಿನ ಹಬ್ಬ ದೀಪಾವಳಿ ವೇಳೆ ಗೋವಿನ ಪೂಜೆಗೆ ವಿಶೇಷ ಮಹತ್ವವಿದೆ. ಈ ಹಿನ್ನೆಲೆಯಲ್ಲಿ ಬಿಡದಿಯ ನನ್ನ ತೋಟದಲ್ಲಿ ಗೋಪೂಜೆಯನ್ನು ಇಂದು ನೆರವೇರಿಸಲಾಯಿತು. ಎಲ್ಲರಿಗೂ ದೀಪಾವಳಿ ಶುಭಾಶಯಗಳು ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

Kota-Srinivasa-Pujari

ಗೋಪೂಜೆ ಮಾಡುತ್ತಿರುವ ಕೋಟ ಶ್ರೀನಿವಾಸ ಪೂಜಾರಿ

ದಲಿತರ ಮನೆಯಲ್ಲಿ ಗೋಪೂಜೆ ಮಾಡಿದ ಶ್ರೀನಿವಾಸ ಪೂಜಾರಿ
ಉಡುಪಿ ನಗರದ ದೊಡ್ಡಣಗುಡ್ಡೆಯ ದಲಿತರ ಕಾಲೋನಿಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ದಲಿತರ ಮನೆಯಲ್ಲಿ ಗೋಪೂಜೆ ನೆರವೇರಿಸಿದರು. ಕೇವಲ ಮೂರು ಸೆಂಟ್ಸ್ ಭೂಮಿಯಲ್ಲಿ 20ಕ್ಕೂ ಹೆಚ್ಚು ಹಸುಗಳನ್ನು ಕಮಲ ಎನ್ನುವವರು ಸಾಕಿದ್ದರೆ. ಇವರ ಮನೆಯಲ್ಲಿಯೇ ಸಮಾಜಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಗೋಪೂಜೆ ನಡೆಯಿತು.

ಗೋಪೂಜೆ ನೆರವೇರಿಸಿದ ನಂತರ ಮಾತನಾಡಿದ ಶ್ರೀನಿವಾಸಪೂಜಾರಿ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಮನೆಯಲ್ಲಿ ಗೋಪೂಜೆ ಮಾಡಿದ್ದೇನೆ. ಇದು ನನಗೆ ಅತ್ಯಂತ ಖುಷಿ ಕೊಟ್ಟಿದೆ ಎಂದರು. ಬಿಜೆಪಿ ಸೋತರೆ ಪೆಟ್ರೋಲ್ ದರ ಕಡಿಮೆಯಾಗುತ್ತದೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಉಪಚುನಾವಣೆ ಫಲಿತಾಂಶ ಗಮನದಲ್ಲಿಟ್ಟುಕೊಂಡು ಅವರು ಮಾತನಾಡಿರಬಹುದು ಎಂದು ವಿಶ್ಲೇಷಿಸಿದರು.

ಸಿಂದಗಿಯಲ್ಲಿ 30 ಸಾವಿರ ಮತಗಳ ಅಂತರದಲ್ಲಿ ಗೆದ್ದಿದ್ದೇವೆ. ಅನುಕಂಪದ ಆಧಾರದಲ್ಲಿ ಸೋಲು-ಗೆಲುವು ಬರುವುದು ಸ್ವಾಭಾವಿಕ. ಸಿದ್ದರಾಮಯ್ಯ ಬಿಜೆಪಿಯನ್ನು ಸೋಲಿಸುವ ಭ್ರಮೆಯಲ್ಲಿದ್ದರೇನೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು. ಇಂಧನ ದರ ಕಡಿಮೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ತೆರಿಗೆ ಕಡಿತಗೊಳಿಸಿದೆ. ಇದರಿಂದ ಬೊಕ್ಕಸಕ್ಕೆ ಸುಮಾರು ₹ 2100 ಕೋಟಿ ನಷ್ಟವಾಗಬಹುದು ಎಂದು ಅಂದಾಜಿಸಲಾಗಿದೆ. ಇಂಥ ಸಂದರ್ಭದಲ್ಲಿ ಸರಕಾರಕ್ಕೆ ಅಭಿನಂದನೆ ಹೇಳಬೇಕಾದ್ದು ಪ್ರಜಾಪ್ರಭುತ್ವದಲ್ಲಿ ವಿರೋಧಪಕ್ಷ ನಾಯಕರ ಕ್ರಮ ಎಂದು ಅಭಿಪ್ರಾಯಪಟ್ಟರು.

ಏನಾದರೂ ಮಾತನಾಡುವುದು ತನ್ನ ಹಕ್ಕು ಎಂದು ಸಿದ್ದರಾಮಯ್ಯ ಭಾವಿಸಿದ್ದರೆ ನಾನು ಅದಕ್ಕೆ ಆಕ್ಷೇಪಿಸುವುದಿಲ್ಲ. ಹಾನಗಲ್​ನಲ್ಲಿ ಮುಂದಿನ ದಿನಗಳಲ್ಲಿ ಗೆದ್ದೇ ಗೆಲ್ಲುತ್ತೇವೆ. ಈ ವಿಚಾರದಲ್ಲಿ ನಮಗೆ ಅನುಮಾನ ಇಲ್ಲ. ಸಿದ್ದರಾಮಯ್ಯನವರು ಕಾಲಕಾಲಕ್ಕೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು. ಮುಖ್ಯಮಂತ್ರಿಯ ಜಿಲ್ಲೆಯಲ್ಲಿಯೇ ಸೋತಿರುವ ಕುರಿತು ಕೇಳಿಬರುತ್ತಿರುವ ಆಕ್ಷೇಪಗಳಿಗೆ ಪ್ರತಿಕ್ರಿಯಿಸಿದ ಅವರು, ಹಿಂದೆಯೂ ಮುಖ್ಯಮಂತ್ರಿ ಆಗಿದ್ದವರೇ ಸೋತಿದ್ದಾರೆ. ಚಾಮುಂಡೇಶ್ವರಿಯಲ್ಲಿ ಮುಖ್ಯಮಂತ್ರಿಯಾಗಿದ್ದವರೇ ಸೋತಿರಲಿಲ್ಲವೇ? ಈ ವಿಚಾರವನ್ನು ಸಿದ್ದರಾಮಯ್ಯನವರಿಗೆ ನೆನಪಿಸಲು ಬಯಸುತ್ತೇನೆ ಎಂದು ಮಾರ್ಮಿಕವಾಗಿ ನುಡಿದರು.

ಇದನ್ನೂ ಓದಿ: ದೇಗುಲಗಳಲ್ಲಿ ಗೋಪೂಜೆ ನೆರವೇರಿಸಲು ಅಧಿಕಾರಿಗಳ ನಿಯೋಜನೆ

TV9 Kannada


Leave a Reply

Your email address will not be published. Required fields are marked *