ತಮಿಳುನಾಡು: ಕನ್ನಡದ ಸ್ಟಾರ್ ನಟ ಪುನೀತ್ ರಾಜ್ಕುಮಾರ್ ಅವರಿಗೆ ಪಕ್ಕದ ತಮಿಳುನಾಡಿನ ತಾಳವಾಡಿ ತಾಲೂಕಿನ ಗುಮಟಾಪುರದಲ್ಲಿ ಹಬ್ಬದ ಆಚರಣೆಯ ನಡುವೆ ಜನರು ಶ್ರದ್ದಾಂಜಲಿ ಸಲ್ಲಿಸಿದ್ದಾರೆ.
ಬಹುತೇಕ ಕನ್ನಡಿಗರೇ ಇರುವ ನೆರೆಯ ತಾಳವಾಡಿ ಪ್ರದೇಶದಲ್ಲಿ ಗೋರೆ ಹಬ್ಬದ ಆಚರಣೆಯಲ್ಲಿ ಪುನೀತ್ ಫೋಟೋಗೆ ಹೂವಿನ ಹಾರ ಹಾಕಿ ನಮನ ಸಲ್ಲಿಸಲಾಗಿದೆ. ವಿಶಿಷ್ಟ ಆಚರಣೆಯ ಈ ಹಬ್ಬದಲ್ಲಿ ಅಪ್ಪು ಫೋಟೋ ಹಿಡಿದು ಜೈಕಾರ ಕೂಗಿ ತಮಿಳುನಾಡಿನ ಕನ್ನಡಿಗರು ಅಗಲಿದ ನಟನಿಗೆ ವಿಶಿಷ್ಟವಾಗಿ ಗೌರವ ಸಲ್ಲಿಸಿದ್ದಾರೆ.
ಏನಿದು ಗೋರೆ ಹಬ್ಬ?
ಸಗಣಿಯನ್ನು ರಾಶಿ ಹಾಕಿ ಅದನ್ನು ದೊಡ್ಡ ದೊಡ್ಡ ಉಂಡೆ ಮಾಡಿ ಯುವಕರು, ವಯಸ್ಕರು ಎಂಬ ವಯಸ್ಸಿನ ಬೇಧವಿಲ್ಲದೆ ಪರಸ್ಪರರ ಮೇಲೆ ಎರಚಿಕೊಂಡು ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ವಿಶಿಷ್ಟ ಆಚರಣೆಗೆ ಗೋರೆ ಹಬ್ಬ ಎಂದು ಕರೆಯಲಾಗುತ್ತದೆ. ದೀಪಾವಳಿಯ ಮಾರನೇ ದಿನ ಈ ಹಬ್ಬವನ್ನು ಆಚರಿಸಲಾಗುವುದು. ಇದು ಸಾಮಾಜಿಕ ಸಾಮರಸ್ಯ ಸಾರುವ ಹಬ್ಬವೆಂದು ಖ್ಯಾತಿ ಗಳಿಸಿದೆ.