ಗೋವಾ, ಉತ್ತರಾಖಂಡ್​ನಲ್ಲಿ ಇಂದು ಎಲೆಕ್ಷನ್; ಉತ್ತರ ಪ್ರದೇಶದಲ್ಲಿ 2ನೇ ಹಂತದ ಮತದಾನ


ಪಂಚರಾಜ್ಯಗಳ ಚುನಾವಣೆಯಲ್ಲಿ ಎರಡನೇ ಅಧ್ಯಾಯ ಶುರುವಾಗಿದೆ. ಇಂದು ಉತ್ತರಪ್ರದೇಶದಲ್ಲಿ 2ನೇ ಹಂತದ ಮತದಾನ. ಜೊತೆಗೆ ಗೋವಾ ಹಾಗೂ ಉತ್ತರಾಖಂಡದಲ್ಲೂ ವೋಟಿಂಗ್. ಇವತ್ತಿನ ಮತದಾನ ಅಖಿಲೇಶ್‌ ಯಾದವ್ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ.

ಉತ್ತರ ಪ್ರದೇಶದಲ್ಲಿ ಇಂದು 2ನೇ ಹಂತದ ಮತದಾನ
ಇಂದು ಉತ್ತರಪ್ರದೇಶದಲ್ಲಿ 2ನೇ ಹಂತದ ಮತದಾನ ನಡೆಯಲಿದ್ದು, ಚುನಾವಣಾ ಆಯೋಗ ಸಕಲ ಸಿದ್ಧತೆ ಕೈಗೊಂಡಿದೆ. 9 ಜಿಲ್ಲೆಗಳ 55 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಸಹರನ್‌ಪುರ್, ಬಿಜ್ನೋರ್, ಮೊರದಾಬಾದ್, ಸಂಭಾಲ್, ರಾಮ್‌ಪುರ, ಅಮೋರಾ, ಬುದೌನ್, ಬರೇಲ್ವಿ ಹಾಗೂ ಶಹಜನ್‌ಪುರ ಜಿಲ್ಲೆಗಳಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದೆ.

2ನೇ ಹಂತದಲ್ಲಿ ಮುಸ್ಲಿಂ ಮತಗಳೇ ನಿರ್ಣಾಯಕ
ಮೊದಲ ಹಂತದಲ್ಲಿ ಮೇಲ್ವರ್ಗದ ಮತಗಳೇ ದಿಕ್ಸೂಚಿ ಆಗಿರುವಂತೆ ಎರಡನೇ ಹಂತದಲ್ಲಿ ಮುಸ್ಲಿಂ ಮತಗಳೇ ನಿರ್ಣಾಯಕ. ಹೀಗಾಗಿ, ಸಮಾಜವಾದಿ ಪಕ್ಷಕ್ಕೆ ಇವತ್ತಿನ ಮತದಾನ ಅತ್ಯಂತ ಮಹತ್ವದ್ದಾಗಿದೆ. ಬರೇಲ್ವಿ ಹಾಗೂ ದೇವಬಂದ್ ಪ್ರಾಂತ್ಯದಲ್ಲಿ ಅಖಿಲೇಶ್ ಪ್ರಾಬಲ್ಯ ಹೊಂದಿದ್ದಾರೆ. ಅಜಂಖಾನ್, ಸುರೇಶ್ ಖನ್ನಾ, ಧರಂಸಿಂಗ್ ಸೈನ್ ಕಣದಲ್ಲಿರೋ ಪ್ರಮುಖ ಹುರಿಯಾಳುಗಳು.

2017ರಲ್ಲಿ 55 ಕ್ಷೇತ್ರಗಳ ಪೈಕಿ ಬಿಜೆಪಿ 38, ಎಸ್ಪಿ 15, ಕಾಂಗ್ರೆಸ್ 2 ಕ್ಷೇತ್ರಗಳಲ್ಲಿ ಜಯಗಳಿಸಿದ್ದವು. ಎಸ್ಪಿ ಗೆದ್ದಂತಹ 15 ಕ್ಷೇತ್ರಗಳ ಪೈಕಿ 10ರಲ್ಲಿ ಮುಸ್ಲಿಂ ಅಭ್ಯರ್ಥಿಗಳೇ ಜಯ ಸಾಧಿಸಿದ್ದರು. ಕಳೆದ ಬಾರಿ ಕಾಂಗ್ರೆಸ್- ಎಸ್ಪಿ ಮೈತ್ರಿ ಮೂಲಕ ಸ್ಪರ್ಧಿಸಿದ್ದವು. ಆದ್ರೆ, ಈ ಬಾರಿ ಪ್ರತ್ಯೇಕವಾಗಿ ಅಖಾಡಕ್ಕಿಳಿದಿದ್ದು, ಮತ ವಿಭಜನೆ ಸಾಧ್ಯತೆ ಇದೆ.

ಗೋವಾದಲ್ಲಿ ಒಂದೇ ಹಂತದಲ್ಲಿ ವೋಟಿಂಗ್
ಗೋವಾದ 40 ಕ್ಷೇತ್ರಗಳಿಗೆ ಇಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, 301 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸಂಪ್ರದಾಯದಂತೆ ಬಿಜೆಪಿ, ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ. ಜೊತೆಗೆ ಹೊಸದಾಗಿ ಕೇಜ್ರಿವಾಲ್ ನೇತೃತ್ವದ ಆಪ್‌, ಮಮತಾ ನೇತೃತ್ವದ ಟಿಎಂಸಿ, ಠಾಕ್ರೆ ನೇತೃತ್ವದ ಶಿವಸೇನೆ ಕಣಕ್ಕಿಳಿದಿವೆ. ಆಡಳಿತರೂಢ ಬಿಜೆಪಿಗೆ ಇದು ಬಹುದೊಡ್ಡ ಸವಾಲಾಗಿದೆ.

ಮಾಜಿ ಸಿಎಂ ಪರಿಕ್ಕರ್ ಪುತ್ರ ಉಪ್ಪಾಲ್ ಪರಿಕ್ಕರ್ ತನ್ನ ತಂದೆಯ ಕ್ಷೇತ್ರವಾದ ಪಣಜಿಯಿಂದ ಪಕ್ಷೇತರವಾಗಿ ಕಣಕ್ಕಿಳಿದ್ದಾರೆ. ಪಣಜಿಯಿಂದ ಟಿಕೆಟ್ ನಿರಾಕರಿಸಿದ ಬಳಿಕ ಬಿಜೆಪಿಯಿಂದ ಹೊರಬಂದಿದ್ದರು. ಬಿಜೆಪಿಯಿಂದ ಕಾಂಗ್ರೆಸ್ ವಲಸಿಗ ಬಾಬುಷ್ ಮಾನ್ಸೆರೇಟ್ ಸ್ಪರ್ಧಿಸಿದ್ದಾರೆ. ಕೇಜ್ರಿವಾಲ್ ಮಹಿಳೆಯರಿಗೆ ಭರವಸೆಗಳನ್ನೇ ಸುರಿಸಿದ್ದಾರೆ.

ಉತ್ತರಾಖಂಡಕ್ಕೆ ಈಗಲಾದ್ರೂ ಸಿಗುತ್ತಾ ಸ್ಥಿರತೆ?
ಕಳೆದ 20 ವರ್ಷಗಳಲ್ಲಿ 11 ಸಿಎಂ ಕಂಡಿರುವ ಉತ್ತರಾಖಂಡದಲ್ಲೂ ಇಂದು ವಿಧಾನಸಭೆ ಚುನಾವಣೆಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. 70 ಕ್ಷೇತ್ರಗಳಲ್ಲಿ 632 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ ಮರು ಆಯ್ಕೆ ಕನಸು ಕಂಡಿದ್ದರೆ, ಕಾಂಗ್ರೆಸ್ ಮರಳಿ ಅಧಿಕಾರ ಪಡೆಯಲು ಪರದಾಡುತ್ತಿದೆ. ಈ ಬಾರಿ ಆಪ್, ಎಸ್ಪಿ, ಬಿಎಸ್ಪಿ ಕೂಡ ಅಖಾಡದಲ್ಲಿವೆ. ಹಾಲಿ ಸಿಎಂ ಪುಷ್ಪಕರ್ ಸಿಂಗ್ ಧಾಮಿ ಖತೀಮಾದಿಂದ, ಮಾಜಿ ಸಿಎಂ ಹರೀಶ್ ರಾವತ್ ಲಾಲ್ಕುವ್‌ದಿಂದ ಕಣಕ್ಕಿಳಿದಿದ್ದಾರೆ.

ಒಟ್ಟಿನಲ್ಲಿ ಪಂಚ ರಾಜ್ಯಗಳ ಪೈಕಿ ಇಂದು ಗೋವಾ, ಉತ್ತರಾಖಂಡದಲ್ಲಿ ಮತದಾನ ಪ್ರಕ್ರಿಯೆಗೆ ತೆರೆ ಬೀಳಲಿದೆ. ಇವತ್ತು ಹೊರತುಪಡಿಸಿ ಉತ್ತರಪ್ರದೇಶದಲ್ಲಿ ಇನ್ನೂ 5 ಹಂತಗಳ ಮತದಾನ ಬಾಕಿ ಇರಲಿದೆ. ಫೆಬ್ರವರಿ 20ರಂದು ಪಂಜಾಬ್‌ನಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10ಕ್ಕೆ ಫಲಿತಾಂಶ ಹೊರಬೀಳಲಿದೆ.

News First Live Kannada


Leave a Reply

Your email address will not be published.