ಗೋವಿಂದರಾಜನಗರದ ಹೊಸ ಪೊಲೀಸ್​ ಸ್ಟೇಶನ್​ ಲೋಕಾರ್ಪಣೆಗೊಳಿಸಿದ ಸಿಎಂ ಬೊಮ್ಮಾಯಿ


ಬೆಂಗಳೂರು:  ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ನೂತನ ಪೊಲೀಸ್ ಠಾಣೆಯನ್ನು  ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲೋಕಾರ್ಪಣೆಗೊಳಿಸಿದರು.

ಲೋಕಾರ್ಪಣೆ ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಒಂದು ಕಾಲದಲ್ಲಿ ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿತ್ತು. ಆದರೆ ಈಗ ಕಾಲ ಬದಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯಾದಾದ್ಯಂತ ಕಾನೂನು ಸುವ್ಯವಸ್ಥೆ ಪಾಲನೆಯಾಗುತ್ತಿದೆ. ಇದಕ್ಕೆ ಕಾರಣರಾದ ಕರ್ನಾಟಕ ಪೊಲೀಸರಿಗೆ ಧನ್ಯವಾದಗಳು.  ಇನ್ನು ವಿ.ಸೋಮಣ್ಣ ಅವರು ಕ್ಷೇತ್ರದ ಅಭಿವೃದ್ಧಿಗೆ ಹಠ ತೊಟ್ಟಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರಕ್ಕೆ ಒಂದು ಲಕ್ಷ ಮನೆಗಳ ನಿರ್ಮಾಣ, ಗ್ರಾಮೀಣ ಪ್ರದೇಶದಲ್ಲಿ ಬಸವ ವಸತಿ ಯೋಜನೆಯ ಮೂಲಕ ಐದು ಲಕ್ಷ ಮನೆಗಳ ನಿರ್ಮಾಣ ಮಾಡುವ ನಿಟ್ಟಿನಲ್ಲಿ ವಸತಿ ಭಗೀರಥನಂತೆ ವಿ.ಸೋಮಣ್ಣ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಇಷ್ಟು ಸುಂದರವಾದ ಪೊಲೀಸ್ ಠಾಣೆ ಬೆಂಗಳೂರಿನಲ್ಲಿ ಎಲ್ಲಿಯೂ ಇಲ್ಲ ಎಂದರು. ಹಗಲಿರುಳೆನ್ನದೇ ಅಭಿವೃದ್ಧಿಗಾಗಿ ಶ್ರಮಿಸುವ ವಿ.ಸೋಮಣ್ಣ ಅವರಿಗೆ ದೇವರು ಮತ್ತಷ್ಟು ಶಕ್ತಿ ನೀಡಲಿ ಎಂದರು.

ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಮಾತನಾಡಿ, ನಮ್ಮ ಮಾನ, ಪ್ರಾಣ ಕಾಪಾಡುವ ಪೊಲೀಸರಿಗೆ ಉತ್ತಮ ಮೂಲಸೌಲಭ್ಯ ಒದಗಿಸುವುದು ಜನಪ್ರತಿನಿಧಿಗಳ ಕರ್ತವ್ಯ. ಈ ನಿಟ್ಟಿನಲ್ಲಿ ಸುಸಜ್ಜಿತವಾದ ಪೊಲೀಸ್ ಠಾಣೆ ನಿರ್ಮಿಸುವ ಮೂಲಕ ಪೊಲೀಸರಿಗೆ ಎಲ್ಲ ರೀತಿಯ ಮೂಲಸೌಲಭ್ಯಗಳನ್ನು ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ನೀಡುವಲ್ಲಿ ವಿ.ಸೋಮಣ್ಣ ಅವರು ಯಶಸ್ವಿಯಾಗಿದ್ದಾರೆ ಎಂದರು.

ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ಗೋವಿಂದರಾಜನಗರ ಪೊಲೀಸ್ ಠಾಣೆ ಸುಸಜ್ಜಿತ ಕಟ್ಟಡವಾಗಿದ್ದು ಈ ಥರದ ಪೊಲೀಸ್ ಠಾಣೆ ಎಲ್ಲಿಯೂ ಕಾಣಸಿಗುವುದಿಲ್ಲ. ವಿ.ಸೋಮಣ್ಣ ಅವರ ಅಭಿವೃದ್ಧಿ ಕಾರ್ಯಗಳು ಹೀಗೆಯೇ ಮುಂದುವರೆಯಲಿ ಎಂದರು. ಇನ್ನು  ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ವಿ.ಸೋಮಣ್ಣ ಅವರ ಶಿಸ್ತು ಸಾರ್ವಜನಿಕ ಜೀವನದಲ್ಲಿರುವ ನಮ್ಮಂಥ ಯುವ ನಾಯಕರಿಗೆ ಮಾದರಿ. ಇವರ ನೇತೃತ್ವದಲ್ಲಿ ಕ್ಷೇತ್ರದಾದ್ಯಂತ ಶಾಲೆಗಳ ನವೀಕರಣ, ಆಸ್ಪತ್ರೆಗಳ ನಿರ್ಮಾಣ, ದೇವಸ್ಥಾನಗಳ ಜೀರ್ಣೋದ್ಧಾರ, ಉದ್ಯಾನವನಗಳ ನಿರ್ಮಾಣ ಸೇರಿದಂತೆ ಅನೇಕ ಕಾರ್ಯಗಳು ವಿ.ಸೋಮಣ್ಣ ಅವರ ನೇತೃತ್ವದಲ್ಲಿ ನಡೆದಿವೆ. ಇದು ಹೀಗೆಯೇ ಮುಂದುವರೆಯಲಿ ಎಂದರು.

“ವಸತಿ ಸಚಿವ ವಿ.ಸೋಮಣ್ಣ” ಅವರು ಮಾತನಾಡಿ, ಬೆಂಗಳೂರಿನ ಮೂಲಭೂತ ಸೌಲಭ್ಯಗಳಿಗೆ ಹೇಗೆ ಒತ್ತು ನೀಡಬೇಕೆಂದು ಹಿರಿಯ ನಾಯಕರಿಂದ ಕಲಿತಿದ್ದೇನೆ. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಗೋವಿಂದರಾಜನಗರ ವಿಶಾಲವಾದ ಕ್ಷೇತ್ರ. ಹೀಗಾಗಿ ಇಲ್ಲಿಗೆ ಪ್ರತ್ಯೇಕ ಪೊಲೀಸ್ ಠಾಣೆಯ ಅವಶ್ಯಕತೆಯಿತ್ತು. ಪೊಲೀಸ್ ಠಾಣೆಯ ನಿರ್ಮಾಣದ ಮೂಲಕ ಕ್ಷೇತ್ರದ ಜನತೆಯ ಅಳಿಲು ಸೇವೆ ಮಾಡಿದ್ದೇನೆ. ಗೋವಿಂದರಾಜನಗರ ಹಾಗೂ ವಿಜಯನಗರ ನನ್ನ ಎರಡು ಕಣ್ಣುಗಳಿದ್ದಂತೆ. ಗೋವಿಂದರಾಜನಗರದ ಅಭಿವೃದ್ಧಿಯ ಜೊತೆಗೇ ವಿಜಯನಗರದ ಅಭಿವೃದ್ಧಿಯೂ ನಮ್ಮ ಹೊಣೆ. ಸಾಮಾನ್ಯ ಜನರ ನೋವನ್ನು ಪರಿಹರಿಸಲು ಜಾತ್ಯಾತೀತವಾಗಿ ಕಾರ್ಯ ನಿರ್ವಹಿಸುವುದೇ ನನ್ನ ಸಂಕಲ್ಪ. ಧ್ವನಿಯಿಲ್ಲದವರಿಗೆ ಆಸರೆ ನೀಡುವುದು ಪೊಲೀಸರ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಗೋವಿಂದರಾಜನಗರ ಪೊಲೀಸ್ ಠಾಣೆ ಕಾರ್ಯಾರಂಭ ಮಾಡಲಿದೆ. ನಿಮ್ಮೆಲ್ಲರ ಮಾರ್ಗದರ್ಶನ ಹೀಗೆಯೇ ಇರಲಿ ಎಂದರು.

ಇನ್ನು  ಕಾರ್ಯಕ್ರಮದಲ್ಲಿ ಶಾಸಕ ಎ.ದೇವೇಗೌಡ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹಾಗೂ ಸ್ಥಳೀಯ ಮುಖಂಡರು ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.

News First Live Kannada


Leave a Reply

Your email address will not be published. Required fields are marked *