ಗೌಡರ ಕುಟುಂಬದಿಂದ ವಿಧಾನಸೌಧಕ್ಕೆ ಮತ್ತೊಬ್ಬರ ಪ್ರವೇಶ? ಭವಾನಿಗೆ ಮೇಲ್ಮನೆ ಟಿಕೆಟ್ ನೀಡುವಂತೆ ಹಾಸನ ಶಾಸಕರ ಒತ್ತಾಯ | Bhavani Revanna to enter karnataka legislative council hassan jds mlas plead ticket for her 


ಗೌಡರ ಕುಟುಂಬದಿಂದ ವಿಧಾನಸೌಧಕ್ಕೆ ಮತ್ತೊಬ್ಬರ ಪ್ರವೇಶ? ಭವಾನಿಗೆ ಮೇಲ್ಮನೆ ಟಿಕೆಟ್ ನೀಡುವಂತೆ ಹಾಸನ ಶಾಸಕರ ಒತ್ತಾಯ

ಗೌಡರ ಕುಟುಂಬದಿಂದ ವಿಧಾನಸೌಧಕ್ಕೆ ಮತ್ತೊಬ್ಬರು ಪ್ರವೇಶ; ಭವಾನಿ ರೇವಣ್ಣಗೆ ಮೇಲ್ಮನೆ ಟಿಕೆಟ್ ನೀಡುವಂತೆ ಹಾಸನ ಶಾಸಕರ ಒತ್ತಾಯ

ಹಾಸನ: ರಾಜ್ಯ ವಿಧಾನ ಪರಿಷತ್​ಗೆ ಡಿಸೆಂಬರ್​​ನಲ್ಲಿ ಚುನಾವಣೆ ಘೋಷಣೆಯಾಗಿದೆ. ಅದರೊಂದಿಗೆ ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ಬಿರುಸಿನ ಚಟುವಟಿಕೆ ನಡೆದಿದೆ. ಪ್ರಮುಖ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಪಕ್ಷದಲ್ಲಿಯೂ ರಾಜಕೀಯ ಶುರುವಾಗಿದೆ. ಮೇಲ್ಮನೆಗೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ​ಮೊದಲಿಗೆ ಮಾಜಿ ಸಚಿವ ಹೆಚ್​.ಡಿ.ರೇವಣ್ಣ ಅವರ ಕೊನೆಯ ಪುತ್ರ ಸೂರಜ್​ ರೇವಣ್ಣಗೆ ಈ ಬಾರಿ ಟಿಕೆಟ್ ಗ್ಯಾರಂಟಿ ಎಂಬ ಮಾತುಗಳು ಕೇಳಿಬಂದವು. ಆದರೆ ಅದಕ್ಕೆ ತಕ್ಷಣ ಬ್ರೇಕ್ ಹಾಕಿದ ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಅವರು ಅಂತಹ ಪ್ರಸ್ತಾಪ ಯಾವುದೂ ಹಾಸನ ಜೆಡಿಎಸ್ ಘಟಕದಿಂದ ಬಂದಿಲ್ಲ ಎಂದಿದ್ದರು.  

ಈ ಬೆಳವಣಿಗೆಗಳ ನಡುವೆ ಇದೀಗ, ಪರಿಷತ್ ಚುನಾವಣೆಗೆ ಹೆಚ್​.ಡಿ. ರೇವಣ್ಣ ಪತ್ನಿ ಭವಾನಿ ರೇವಣ್ಣಗೆ ಟಿಕೆಟ್ ನೀಡಲು ಹಾಸನದಲ್ಲಿ ಇಂದು ನಡೆದ ಜೆಡಿಎಸ್ ಸಭೆಯಲ್ಲಿ ಮನವಿ ಕೇಳಿ ಬಂದಿದೆ. ಹೆಚ್​.ಡಿ. ದೇವೇಗೌಡರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಶಾಸಕರು ಭವಾನಿ ರೇವಣ್ಣಗೆ ಟಿಕೆಟ್ ನೀಡುವಂತೆ ಒತ್ತಾಯ ಮಾಡಿದ್ದಾರೆ. ಹಾಸನ ಸಂಸದ ಪ್ರಜ್ವಲ್​ ರೇವಣ್ಣ ನಿವಾಸದಲ್ಲಿ ಸಭೆ ನಡೆದಿದ್ದು, ಸಭೆಯಲ್ಲಿ ಬೇಲೂರು ಶಾಸಕ ಕೆ.ಎಸ್.ಲಿಂಗೇಶ್ ಪ್ರಸ್ತಾಪವನ್ನು ಮುಂದಿಟ್ಟಿದ್ದರೆ, ಲಿಂಗೇಶ್ ಪ್ರಸ್ತಾಪವನ್ನು ಬೆಂಬಲಿಸಿ ಶ್ರವಣಬೆಳಗೊಳ ಶಾಸಕ ಬಾಲಕೃಷ್ಣ ಮನವಿಗೆ ಸೈ ಎಂದಿದ್ದಾರೆ.

ನಮ್ಮ ಕ್ಷೇತ್ರದಲ್ಲಿ 500 ಗ್ರಾಪಂ ಸದಸ್ಯರು ಇದ್ದಾರೆ.ಇದರಲ್ಲಿ ನಮ್ಮ ಪಕ್ಷದಿಂದ 390 ಸದಸ್ಯರು ಗೆದ್ದಿದ್ದಾರೆ. ಇನ್ನೂ 40-50 ಮತಗಳನ್ನ ಹೆಚ್ಚುವರಿಯಾಗಿ ಹಾಕಿಸುತ್ತೇವೆ. ನಮ್ಮ ಪಕ್ಷ ಗ್ರಾಮೀಣ ಮಟ್ಟದಲ್ಲಿ ಪ್ರಬಲವಾಗಿದೆ. ಹಾಗಾಗಿ ನಮಗೆ ಗೆಲುವು ಸಿಕ್ಕೇ ಸಿಗುತ್ತೆ. ಶಾಸಕ ಲಿಂಗೇಶ್ ಅಭಿಪ್ರಾಯವನ್ನು ನಾನೂ ಬೆಂಬಲಿಸುತ್ತೇನೆ. ಅಂತಿಮವಾಗಿ ನಮ್ಮ ನಾಯಕರಾದ ದೇವೇಗೌಡರು ಏನು ತೀರ್ಮಾನ ಮಾಡ್ತಾರೋ ಅದಕ್ಕೆ ನಾವು ಬದ್ದ ಎಂದು ಶಾಸಕ ಬಾಲಕೃಷ್ಣ ಹೇಳಿದ್ದಾರೆ.

ದೇವೇಗೌಡ-ಕುಮಾರಸ್ವಾಮಿ ಹೇಳಿದಾಕ್ಷಣ ಓಡಿ ಬಂದು ಒತ್ತೋರು ಇಲ್ಲಿ ಯಾರೂ ಇಲ್ಲ: ಶಾಸಕ ಶಿವಲಿಂಗೇ ಗೌಡ ಗುಡುಗು

ಹಾಸನದಲ್ಲಿ ಜೆಡಿಎಸ್ ಶಾಸಕರು, ಸಂಸದರ ಸಭೆಯಲ್ಲಿ ಶಾಸಕ ಕೆ.ಎಂ. ಶಿವಲಿಂಗೇ ಗೌಡ ಅಸಮಾಧಾನ ಹೊರಹಾಕಿದ್ದಾರೆ. ಈ ಸಭೇ ಬಗ್ಗೆ ನನಗೆ ಗೊತ್ತೇ ಇಲ್ಲಾ ಎಂದು ಬೇಸರ ವ್ಯಕ್ತಪಡಿಸಿದ ಶಿವಲಿಂಗೇ ಗೌಡ, ನಾನು ದೇವೇಗೌಡರ ಸಮ್ಮುಖದಲ್ಲಿ ಶಾಸಕರು ಸಂಸದರ ಸಭೆ ಎಂದುಕೊಂಡಿದ್ದೆ. ಹೀಗೆ ಸಭೆ ಅಂದಿದ್ರೆ ನಾನು ಬರ್ತಾನೆ ಇರ್ಲಿಲ್ಲ. ನೀವು ಏನಾದ್ರು ಅಂದುಕೊಳ್ಳಿ ನಾನು ನೇರವಾಗೇ ಹೇಳ್ತೀನಿ. ದೇವೇಗೌಡರ ಹಾಗೂ ಕುಮಾರಸ್ವಾಮಿ ಹೆಸರು ಹೇಳಿದಂತೆ ಓಡಿ ಬಂದು ಒತ್ತೋರು ಯಾರೂ ಇಲ್ಲ. ದೇವೇಗೌಡರು ಮತ್ತು ಕುಮಾರಸ್ವಾಮಿ ಹೆಸರು ಹೇಳಿದ ಕೂಡಲೆ ಓಟ್ ಬರಲ್ಲ ಎಂದು ಶಿವಲಿಂಗೇ ಗೌಡ ಗುಡುಗಿದ್ದಾರೆ.

ನನ್ನ ಹೆತ್ತ ತಾಯಿ ಮೇಲೆ ಇರೋ ಒಬ್ಬ ಮಗನ ಮೇಲೆ ಆಣೆ ಮಾಡಿ ಹೇಳ್ತೀನಿ ನಾನು ಮೋಸಗಾರನಲ್ಲ. ಏಯ್ ಕುಮಾರಸ್ವಾಮಿ (ಹೆಚ್.​ಕೆ.ಕುಮಾರಸ್ವಾಮಿ) ಸುಮ್ಮನಿರ್ರಿ ನಂಗೆ ಯಾಕೆ ಸಭೆಗೆ ಹೇಳಿಲ್ಲ. ಬಾಲು ಮುಚ್ಚೋ‌ ನೀನು ಸಾರಿಸೊಕೆ ಬರ್ಬೇಡಾ. ಇವೆಲ್ಲಾ ನನ್ನ ಹತ್ರಾ ನಡೆಯೋದಿಲ್ಲ. ನಮ್ಮ‌ ಕ್ಷೇತ್ರದಲ್ಲಿ 410 ಸದಸ್ಯರನ್ನು ಓಪನ್ ಆಗೇ ಓಟ್ ಹಾಕಿಸ್ಬೇಕಾ ಹೇಳಿ ಹಾಕಿಸ್ತೇನೆ. ಸಭೆಯ ಬಗ್ಗೆ ಸರಿಯಾಗಿ ಮಾಹಿತಿ ನೀಡಿಲ್ಲ ಎಂದು ಶಿವಲಿಂಗೇಗೌಡ ಗರಂ ಆಗಿದ್ದಾರೆ.

ನೀವು ಯಾರಿಗೆ ಹೇಳ್ತೀರೋ ಅವರಿಗೆ ಓಟ್ ಹಾಕೊಕೆ ನಾವ್ ರೆಡಿ. ಕಳೆದ ಬಾರಿ ಪಟೇಲ್ ಶಿವರಾಂ ಸೋಲಿಗೆ ನಾನೇ ಕಾರಣ ಎಂದು ನನ್ನ ಮೇಲೆ‌ ಕಳಂಕ ಇದೆ. ನನ್ನ ಹೆತ್ತ ತಾಯಿ, ಇರೋ ಒಬ್ಬ ಮಗನ ಮೇಲಾಣೆ ನಾನು ಮೋಸಗಾರ ಅಲ್ಲಾ ಎಂದು ಶಿವಲಿಂಗೇಗೌಡ ಇದೇ ವೇಳೆ ಆಣೆ ಮಾಡಿದರು.

ಕುಮಾರಸ್ವಾಮಿ ಬಿಡದಿ ಸಭೆ ವೇಳೆಯೂ ಹೀಗೆ ಮಾಡಿದ್ರಿ. ಸರಿಯಾಗಿ ಮಾಹಿತಿ ನೀಡಲ್ಲ, ‌ಇಲ್ಲಿ ನೋಡಿದ್ರೆ ಎಲ್ಲಾ ಮುಖಂಡರು ಬಂದವ್ರೆ. ನಮ್ಮ ಕಾರ್ಯಕರ್ತರು, ನಾಯಕರು ಮುಖ ಊದಿಸಿಕೊಂಡಿದಾರೆ. ನೀವು ಮಾಡಿದ ತಪ್ಪಿಗೆ ನೀವೇ ಅವರಿಗೆ ಬುದ್ಧಿ ಹೇಳಿ ಎಂದು ಶಿವಲಿಂಗೇಗೌಡ ಸಭೆಯಲ್ಲಿ ಆಗ್ರಹಿಸಿದರು.

ದೇವೇಗೌಡರು ಭವಾನಿ ಅವರಿಗಾದ್ರು ಕೊಡಲಿ, ಯಾರಿಗಾದರೂ ಟಿಕೆಟ್ ಕೊಡಲಿ. ಅವರು ಇವರು ಎಂದು ನಾನು ಯಾರ ಹೆಸರನ್ನು ಹೇಳಲ್ಲ. ಅವರು ಯಾರಿಗೆ ಹೇಳ್ತಾರೋ ಅವರಿಗೆ ಓಟ್ ಹಾಕ್ತೀವಿ ಎಂದು ಸಭೆಯ ಕೊನೆಗೆ ಶಿವಲಿಂಗೇಗೌಡ ಹೇಳಿದರು.

ದೇವೇಗೌಡ, ಕುಮಾರಸ್ವಾಮಿ ಹೆಸರು ಹೇಳಿದರೆ ಮತ ಬರಲ್ಲ | JDS | Tv9 kannada

ಇದನ್ನೂ ಓದಿ:
ನಮ್ಮ ಕುಟುಂಬದ ಯಾರೂ ಎಂಎಲ್​ಸಿ ಆಗಿಲ್ಲ; ಎಲ್ಲರ ಸಲಹೆ ಪಡೆದು ಅಭ್ಯರ್ಥಿ ಹೆಸರು ಅಂತಿಮ ಮಾಡೋಣ- ದೇವೇಗೌಡ

(Bhavani Revanna to enter karnataka legislative council hassan jds mlas plead ticket for her )

TV9 Kannada


Leave a Reply

Your email address will not be published. Required fields are marked *