ಗೌರವ ಹೆಚ್ಚಿಸಿಕೊಂಡ ಇಳಕಲ್ ಸೀರೆ, ಗುಳೇದಗುಡ್ಡ ಖಣ; ಗಣರಾಜ್ಯೋತ್ಸವ ಸ್ತಬ್ಧಚಿತ್ರಕ್ಕೆ ಆಯ್ಕೆ | Bagalkot ilkal saree and guledgudda khana selected for republic day tableaux in delhi


ಗೌರವ ಹೆಚ್ಚಿಸಿಕೊಂಡ ಇಳಕಲ್ ಸೀರೆ, ಗುಳೇದಗುಡ್ಡ ಖಣ; ಗಣರಾಜ್ಯೋತ್ಸವ ಸ್ತಬ್ಧಚಿತ್ರಕ್ಕೆ ಆಯ್ಕೆ

ಗೌರವ ಹೆಚ್ಚಿಸಿಕೊಂಡ ಇಳಕಲ್ ಸೀರೆ, ಗುಳೇದಗುಡ್ಡ ಖಣ; ಗಣರಾಜ್ಯೋತ್ಸವ ಸ್ತಬ್ಧಚಿತ್ರಕ್ಕೆ ಆಯ್ಕೆ

ಬಾಗಲಕೋಟೆ: ಇಳಕಲ್ ಸೀರೆ ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ. “ಇಳಕಲ್ ಸೀರೆ ಉಟ್ಟುಕೊಂಡು ಮೊಳಕಾಲ್ಗಂಟ ಎತ್ಕೊಂಡು ಏರಿ ಮೇಲೆ ಏರಿ‌ಬಂದಳು ನಾರಿ ” ಎಂಬ ಹಾಡು ಇಳಕಲ್ ಸೀರೆಯ ಅಂದಕ್ಕೆ ಅದರ ಸಾಂಪ್ರದಾಯಿಕತೆಗೆ ಸಾಕ್ಷಿಯಾಗಿದೆ. ಹೌದು ಶತ ಶತಮಾನಗಳಿಂದಲೂ ಇಳಕಲ್ ಸೀರೆಗೆ ಎಲ್ಲಿಲ್ಲದ ಬೇಡಿಕೆ. ರಾಜ್ಯ ದೇಶ ವಿದೇಶದಲ್ಲೂ ಇಳಕಲ್ ಸೀರೆಗೆ ಬೇಡಿಕೆ ಇದೆ. ಅದರ ಜೊತೆಗೆ ಗುಳೇದಗುಡ್ಡ ಖಣ (ಕುಪ್ಪಸ)ವೂ ಅಷ್ಟೇ ಪ್ರಸಿದ್ಧ. ಯುವತಿಯರು, ಮಹಿಳೆಯರು ಎಷ್ಟೇ ಆಧುನಿಕತೆಗೆ ಮಾರುಹೋದರೂ ಇಳಕಲ್ ಸೀರೆ ಗುಳೇದಗುಡ್ಡ ಖಣ ಅಂದರೆ ತಿರುಗಿ ನೋಡ್ತಾರೆ. ಒಮ್ಮೆಯಾದರೂ ಅವುಗಳನ್ನು ಧರಿಸಬೇಕು ಅದರಲ್ಲೊಮ್ಮೆ ಮಿಂಚಬೇಕು ಎಂದು ಬಯಸುತ್ತಾರೆ. ಇಂತಹ ಆಕರ್ಷಣೀಯ ಇಳಕಲ್ ಸೀರೆ ಹಾಗೂ ಗುಳೇದಗುಡ್ಡ ಖಣಕ್ಕೆ ಈಗ ಗಣರಾಜ್ಯೋತ್ಸವ ಗೌರವ ಸಿಕ್ಕಿದೆ.

ಜನವರಿ 26 ರಂದು ದೆಹಲಿಯಲ್ಲಿ ನಡೆಯುವ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಬಾಗಲಕೋಟೆ ಜಿಲ್ಲೆಯ ಇಳಕಲ್ ಸೀರೆ ಹಾಗೂ ಗುಳೇದಗುಡ್ಡ ಖಣ(ರವಿಕೆ) ಎರಡು ಆಯ್ಕೆಯಾಗಿದ್ದು, ಸ್ತಬ್ಧಚಿತ್ರಗಳ ಕರಕುಶಲ ವಸ್ತು ಪ್ರದರ್ಶನದಲ್ಲಿ ಎಲ್ಲರ ಗಮನ ಸೆಳೆಯಲಿವೆ .ಇದರಿಂದ ಬಾಗಲಕೋಟೆ ಜಿಲ್ಲೆಯ ನೇಕಾರರು ಸಂಭ್ರಮಿಸುತ್ತಿದ್ದು, “ನಾವು ಹೆಣೆಯುವ ಇಳಕಲ್ ಸೀರೆ, ಗುಳೇದಗುಡ್ಡ ಖಣ ಗಣರಾಜ್ಯೋತ್ಸವ ದಿನ ಸ್ತಬ್ದ ಚಿತ್ರ ಪ್ರದರ್ಶನದಲ್ಲಿ ಸ್ಥಾನ ಪಡೆದುಕೊಳ್ಳುತ್ತಿರುವ ಸುದ್ದಿ ಕೇಳಿ ಬಹಳ ಖುಷಿಯಾಗಿದೆ. ನಾವು ನಮ್ಮ ಪೂರ್ವಜರ ಕಾಲದಿಂದ ಇಳಕಲ್ ಸೀರೆ ಗುಳೇದಗುಡ್ಡ ಖಣ ನೇಯುತ್ತಾ ಬಂದಿದ್ದೀವಿ ಇಳಕಲ್ ಸೀರೆ ಗುಳೇದಗುಡ್ಡ ಖಣ ಇಂದಿಗೂ ತಮ್ಮ ಬೇಡಿಕೆ ಉಳಿಸಿಕೊಂಡಿವೆ. ಇವು ನಮ್ಮ ಸಾಂಪ್ರದಾಯಿಕತೆಯ ಪ್ರತೀಕವಾಗಿವೆ. ಗಣರಾಜ್ಯೋತ್ಸವ ಸ್ತಬ್ಧಚಿತ್ರ ಪ್ರದರ್ಶನದಲ್ಲಿ ಇವುಗಳನ್ನು ಆಯ್ಕೆ ಮಾಡಿದ್ದಕ್ಕೆ ಕೇಂದ್ರ, ರಾಜ್ಯ ಸರಕಾರಕ್ಕೆ ಧನ್ಯವಾದಗಳು ಇದು ನಮಗೆ ಹೆಮ್ಮೆ ತಂದಿದೆ ಎಂದು ನೇಕಾರ ಸಮುದಾಯದ ಮುಖಂಡ ಶಿವಲಿಂಗ ಟರ್ಕಿ ಸಂತೋಷ ವ್ಯಕ್ತಪಡಿಸಿದ್ದಾರೆ.

bagalkot ilkal saree

ಇಳಕಲ್ ಸೀರೆ

ಇತ್ತೀಚೆಗೆ ಆನ್ ಲೈನ್ನಲ್ಲೂ ಮಾರಾಟ ನಡೆಯುತ್ತಿದೆ ಇಳಕಲ್ ಸೀರೆ, ಗುಳೇದಗುಡ್ಡ ಖಣ
ಸದ್ಯ ಗಣರಾಜ್ಯೋತ್ಸವದ ದಿನ 16 ಕರಕುಶಲ ವಸ್ತುಗಳ ಸ್ತಬ್ಧಚಿತ್ರ ಪ್ರದರ್ಶನದಲ್ಲಿ ಇಳಕಲ್ ಸೀರೆ ಗುಳೇದಗುಡ್ಡ ಖಣ ಸ್ಥಾನ ಪಡೆದಿದ್ದು ಎಲ್ಲ ನೇಕಾರರಿಗೆ ಅಷ್ಟೇ ಅಲ್ಲದೆ ಬಾಗಲಕೋಟೆ ಜಿಲ್ಲೆಯ ಜನತೆಗೆ ಖುಷಿ ಜೊತೆಗೆ ಹೆಮ್ಮೆ ಮೂಡಿಸಿದೆ. ಇತ್ತೀಚೆಗೆ ಈ ಎರಡು ವಸ್ತುಗಳು ಆನ್ ಲೈನ್ ಶಾಪಿಂಗ್ ಗೂ ಎಂಟ್ರಿ ಕೊಟ್ಟಿವೆ. ಇಳಕಲ್ ಸೀರೆ, ಗುಳೇದಗುಡ್ಡ ಖಣ ಎರಡನ್ನೂ ಆನ್ ಲೈನ್ ನಲ್ಲಿ ಮಾರಾಟ ಖರೀದಿ ನಡೆಯುತ್ತಿದೆ‌. ಇನ್ನು ಎರಡು ವರ್ಷದಿಂದ ಎಲ್ಲ ವ್ಯಾಪಾರ ವಹಿವಾಟಿನ ಮೇಲೆ ದುಷ್ಪರಿಣಾಮ ಬೀರಿದಂತೆ ಕೋವಿಡ್ ನೇಕಾರರ ಮೇಲೂ ಪರಿಣಾಮ ಬೀರಿದ್ದು ಎರಡು ವರ್ಷ ನಷ್ಟ ಅನುಭವಿಸಿದ್ದಾರೆ. ಸರಿಯಾದ ಕಚ್ಚಾವಸ್ತು ಸಿಗದೆ, ಬಟ್ಟೆ ನೇಯಲು ಆಗದೆ, ಮಾರಾಟವಿಲ್ಲದೆ ಕಂಗಾಲಾಗಿದ್ದಾರೆ. ಈ ವೇಳೆ ಗುಳೇದಗುಡ್ಡ ಖಣದ ಬಟ್ಟೆಯಿಂದ ಮಾಸ್ಕ್ ಮಾಡಿ ನೇಕಾರರು ಮಾರಾಟ ಮಾಡಿದ್ದರು. ದೀಪಾವಳಿಯಲ್ಲಿ ಆಕಾಶಬುಟ್ಟಿ ಮಾಡಿ ಕೂಡ ಆನ್ ಲೈನ್ ಮೂಲಕ ವ್ಯಾಪಾರ ನಡೆಸಿದ್ದರು. ಜೊತೆಗೆ ಮಾರುಕಟ್ಟೆಗೂ ಕಳಿಸಿದ್ದರು. ಸದ್ಯ ಗಣರಾಜ್ಯೋತ್ಸವ ದಿನ ಪ್ರದರ್ಶನ ನೇಕಾರರಿಗೆ ಮತ್ತಷ್ಟು ಇಳಕಲ್ ಸೀರೆ, ಗುಳೇದಗುಡ್ಡ ಖಣ ನೇಯಲು ಉತ್ತೇಜನ ನೀಡಿದೆ‌.

ಒಟ್ಟಾರೆ ಶತ ಶತಮಾನಗಳಿಂದ ತನ್ನದೇ ಬೇಡಿಕೆ, ಗೌರವ ಕಾಪಾಡಿಕೊಂಡು ಬಂದ ಇಳಕಲ್ ಸೀರೆ, ಗುಳೇದಗುಡ್ಡ ಖಣಕ್ಕೆ ಗಣರಾಜ್ಯೋತ್ಸವ ಗೌರವದಿಂದ ಈಗ ಮತ್ತೊಂದು ಕಿರೀಟ ಸಿಕ್ಕಂತಾಗಿದೆ. ಇಳಕಲ್ ಸೀರೆ,ಗು ಳೇದಗುಡ್ಡ ಖಣ ಇನ್ನು ಪ್ರಸಿದ್ದವಾಗಲಿ. ಹೆಚ್ಚು ಹೆಚ್ಚು ವ್ಯಾಪಾರ ವೃದ್ದಿಯಾಗಲಿ ನೇಕಾರರ ಬದುಕು ಹಸನಾಗಲಿ ಎಂಬುದು ಎಲ್ಲರ ಆಶಯವಾಗಿದೆ.

ವರದಿ: ರವಿ ಮೂಕಿ, ಟಿವಿ9 ಬಾಗಲಕೋಟೆ

bagalkot ilkal saree

ಇಳಕಲ್ ಸೀರೆ

TV9 Kannada


Leave a Reply

Your email address will not be published. Required fields are marked *