ಗೌರಿ ಲಂಕೇಶ್ ಹತ್ಯೆ ಪ್ರಕರಣ: ಹುಬ್ಬಳ್ಳಿ ನ್ಯಾಯಾಲಯಕ್ಕೆ ಆರೋಪಿಗಳು ಹಾಜರು | Gauri Lankesh Murder Case Police Bring Culprits to Hubli Court


ಗೌರಿ ಲಂಕೇಶ್ ಹತ್ಯೆ ಪ್ರಕರಣ: ಹುಬ್ಬಳ್ಳಿ ನ್ಯಾಯಾಲಯಕ್ಕೆ ಆರೋಪಿಗಳು ಹಾಜರು

ಪತ್ರಕರ್ತೆ ಗೌರಿ ಲಂಕೇಶ್

ಹುಬ್ಬಳ್ಳಿ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳನ್ನು ಬುಧವಾರ ಹುಬ್ಬಳ್ಳಿಯ 1ನೇ ಜೆಎಂಎಫ್​ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಬೈಕ್ ಕಳ್ಳತನಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಸವಾಲು-ಪಾಟಿಸವಾಲಿಗೆ ಒಳಪಡಿಸಲಾಯಿತು. ಮುಂಬೈ ಜೈಲಿನಲ್ಲಿದ್ದ ಆರೋಪಿಗಳನ್ನು ಬಾಡಿ ವಾರಂಟ್ ಮೇಲೆ ಹುಬ್ಬಳ್ಳಿಗೆ ಗ್ರಾಮೀಣ ಠಾಣೆ ಪೊಲೀಸರು ಕರೆತಂದಿದ್ದರು. ವಿಚಾರಣೆ ಮುಗಿದ ನಂತರ ಬೈಕ್ ಮಹಜರು ನಡೆಸಲು ಆರೋಪಿಗಳನ್ನು ಠಾಣೆಗೆ ಕರೆದೊಯ್ಯಲಾಯಿತು. ವಿಚಾರಣೆಯ ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಮುಂಬೈಗೆ ಕಳುಹಿಸಿಕೊಡಲಾಗುವುದು ಎಂದು ಪೊಲೀಸರು ಹೇಳಿದರು. ಗೌರಿ ಹತ್ಯೆಗೆ ಬಳಕೆಯಾಗಿದ್ದ ಬೈಕ್ 2018ರಲ್ಲಿ ಹುಬ್ಬಳ್ಳಿ ಗ್ರಾಮಾಂತರ ಠಾಣೆಯ ವ್ಯಾಪ್ತಿಯಲ್ಲಿ ಕಳ್ಳತನವಾಗಿತ್ತು. ಹುಬ್ಬಳ್ಳಿ ತಾಲೂಕಿನ ಮಾವನೂರಲ್ಲಿ ಬೈಕ್ ಕಳ್ಳತನ ಮಾಡಿ ಅದನ್ನು ಗೌರಿ ಲಂಕೇಶ ಹತ್ಯೆಗೆ ಬಳಸಲಾಗಿತ್ತು. ಈ ಬೈಕ್ ಕಳ್ಳತನ ಪ್ರಕರಣದ ಹಿನ್ನೆಲೆಯಲ್ಲಿ ಆರೋಪಿಗಳನ್ನು ನ್ಯಾಯಾಲಯದ ಎದುರು ಹಾಜರುಪಡಿಸಲಾಗಿದೆ.

17 ಆರೋಪಿಗಳ ವಿರುದ್ಧ ಆರೋಪ ನಿಗದಿ
ಬೆಂಗಳೂರು:
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ 17 ಆರೋಪಿಗಳ ವಿರುದ್ಧ ಸಿಸಿಹೆಚ್ ವಿಶೇಷ ನ್ಯಾಯಾಲಯದಿಂದ ಆರೋಪ ನಿಗದಿ ಮಾಡಲಾಗಿದೆ. ಬೆಂಗಳೂರಿನ ಸಂಘಟಿತ ಅಪರಾಧಗಳ ವಿಶೇಷ ನ್ಯಾಯಾಲಯ ಶನಿವಾರ 17 ಆರೋಪಿಗಳ ವಿರುದ್ಧ ಆರೋಪ ರೂಪಿಸಿದೆ. ಡಿಸೆಂಬರ್ 8 ರಿಂದ ಗೌರಿ ಲಂಕೇಶ್ ಹತ್ಯೆ ಕೇಸ್ ವಿಚಾರಣೆ ಆರಂಭಿಸಲಿದೆ.

ಇನ್ನು ಈ ಸಂದರ್ಭದಲ್ಲಿ ವಿಚಾರಣೆಯನ್ನು ಯಾವುದೇ ಅಡೆತಡೆಗಳು ಇಲ್ಲದೆ ಮಾಡುವ ನಿಟ್ಟಿನಲ್ಲಿ ನಿರ್ದಿಷ್ಟ ಆದೇಶ ಇಲ್ಲದೆ ಯಾವುದೇ ಆರೋಪಿಗಳನ್ನು ಬೇರೆ ಜೈಲಿಗೆ ವರ್ಗಾವಣೆ ಮಾಡಬಾರದು ಎಂದು ನ್ಯಾಯಾಲಯ ಸೂಚಿಸಿದೆ. ಇನ್ನು ಆರೋಪಿಗಳಿಗೆ ಕೊಲೆ, ಕ್ರಿಮಿನಲ್‌ ಪಿತೂರಿ, ಸಂಘಟಿತ ಅಪರಾಧಕ್ಕೆ ಸಂಬಂಧಿಸಿದಂತೆ ಐಪಿಸಿಯ ವಿವಿಧ ಸೆಕ್ಷನ್‌ಗಳು, 2000ರ ಕರ್ನಾಟಕ ಸಂಘಟಿತ ಅಪರಾಧ ಕಾಯಿದೆ ಹಾಗೂ 1959ರ ಶಸ್ತ್ರಾಸ್ತ್ರ ಕಾಯಿದೆ, ಅಡಿಯಲ್ಲಿ ಆರೋಪಗಳನ್ನು ರೂಪಿಸಲಾಗಿದೆ.

ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ 17 ಜನರನ್ನು ಬಂಧಿಸಲಾಗಿದೆ. ನ್ಯಾಯಾಲಯ ಆಕ್ಟೋಬರ್ 29 ರಂದು ಬಂಧಿತ ಆರೋಪಿಗಳ ವಿಚಾರಣೆ ನಡೆಸಿದೆ. ಆರೋಪಿಗಳಾದ ಅಮೋಲ್ ಕಾಳೆ, ಪರಶುರಾಮ್ ವಾಗ್ಮೋರೆ, ಅಮಿತ್ ಬಡ್ಡಿ, ಗಣೇಶ್ ಮಿಸ್ಕಿನ್, ಅಮಿತ್ ದೇಗ್ವೆಕರ್ ಸೇರಿ 17 ಜನರ ವಿರುದ್ಧ ಎಸ್ಐಟಿ ಚಾರ್ಜ್​ಶೀಟ್ ಸಲ್ಲಿಸಿತ್ತು. ಐಪಿಸಿ ಸೆಕ್ಷನ್ 302, 120ಬಿ, ಆರ್ಮ್ಸ್ ಌಕ್ಟ್, ಕೋಕಾ 2000 ಕಾಯ್ದೆ, ಹಲವು ಸೆಕ್ಷನ್​ಗಳಡಿ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿತ್ತು.

ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆಗೆ ಪಿಸ್ತೂಲ್ ಟ್ರೈನಿಂಗ್ ನೀಡಿದ್ದ ಪ್ರದೇಶವನ್ನೇ ಅಡ್ಡಾ ಮಾಡಿಕೊಂಡ‌ ಗ್ಯಾಂಗ್ ಬಂಧಿಸಿದ ಬೆಳಗಾವಿ ಪೊಲೀಸರು
ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆ ಪ್ರಕರಣ: ಆರೋಪಿ ನವೀನ್​ಗೆ ಕಿಡ್ನಿ ಸಮಸ್ಯೆ; ಆಸ್ಪತ್ರೆಗೆ ದಾಖಲು

TV9 Kannada


Leave a Reply

Your email address will not be published. Required fields are marked *