ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮದಲ್ಲಿ ಬರೋಬ್ಬರಿ ಕಳೆದ 20 ದಿನದಲ್ಲಿ ಗ್ರಾಮದ 54 ಜನ ಮೃತಪಟ್ಟಿದ್ದಾರೆ.

ಮೊದಲನೇ ಅಲೆಯಲ್ಲಿ ಕೊರೊನಾದಿಂದ ಗ್ರಾಮಗಳು ಬಹುತೇಕ ಸೇಫ್ ಆಗಿದ್ವು. ಆದ್ರೆ, ಎರಡನೇ ಅಲೆ ಮಾತ್ರ ಸುಂಟರಗಾಳಿಯ ರೀತಿಯಲ್ಲಿ ಹಳ್ಳಿಹಳ್ಳಿಗೂ ಲಗ್ಗೆಯಿಡ್ತಿದ್ದು, ಜನರ ಉಸಿರು ಬಿಗಿಯುತ್ತಿದೆ. ಇದೀಗ ರಾಜ್ಯದ ಅದೊಂದು ಊರಿಗೆ ಎಂಟ್ರಿ ಕೊಟ್ಟಿರೋ ಕಣ್ಣಿಗೆ ಕಾಣದ ವೈರಸ್​ ಮರಣಮೃದಂಗ ಬಾರಿಸ್ತಿದೆ.

20 ದಿನದಲ್ಲೇ 54 ಮಂದಿಯನ್ನ ಬಲಿ ಪಡೆದ ಕೊರೊನಾ

ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮಕ್ಕೆ ಲಗ್ಗೆಯಿಟ್ಟಿರೋ ರಕ್ಕಸ​ ವೈರಸ್​ ಕೇವಲ 20 ದಿನದಲ್ಲಿ ಬರೋಬ್ಬರಿ 54 ಜನರ ಉಸಿರನ್ನ ನಿಲ್ಲಿಸಿಬಿಟ್ಟಿದೆ. ಗ್ರಾಮದ ಜನರಲ್ಲಿ ಆತಂಕ ಹೆಚ್ಚಾಗಿದೆ. ಮೃತಪಟ್ಟ 54 ಮಂದಿ ಗ್ರಾಮಸ್ಥರಲ್ಲಿ 16 ಜನ 60 ವರ್ಷದೊಳಗಿನವರೇ ಇದ್ದಾರೆ. ಇನ್ನು ಗ್ರಾಮದಲ್ಲಿ ಶೀತ, ಕೆಮ್ಮು, ಜ್ವರದಿಂದ ಬಳಲುತ್ತಿರುವ 300ಕ್ಕೂ ಹೆಚ್ಚಿನ ಜನರಿದ್ದಾರೆ. 15 ಸಾವಿರಕ್ಕೂ ಅಧಿಕ ಜನರನ್ನು ಹೊಂದಿರುವ ಹಳ್ಳಿಯಲ್ಲಿ ಆತಂಕ ಮನೆಮಾಡಿದೆ.

ಆದ್ರೆ, 54 ಜನರು ಕೊರೊನಾದಿಂದಲೇ ಮೃತಪಟ್ಟಿದ್ದಾರೆ ಅನ್ನೋದಕ್ಕೆ ಗ್ರಾಮಸ್ಥರ ಬಳಿ ಯಾವುದೇ ಸಾಕ್ಷಿಯಿಲ್ಲವಂತೆ. ಹೀಗಾಗಿ 54 ಜನರ ಸಾವಿಗೆ ಕಾರಣವೂ ಸರಿಯಾಗಿ ಗೊತ್ತಿಲ್ಲ. ಗ್ರಾಮದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಸಾವಾಗೋದಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೌಲಭ್ಯ ಇಲ್ಲದೇ ಇರೋದು ಒಂದು ಕಾರಣ ಅಂತಿದ್ದಾರೆ ಗ್ರಾಮಸ್ಥರು. ಆಶಾ ಕಾರ್ಯಕರ್ತರನ್ನ ಕೇಳಿದ್ರೆ, ಟೆಸ್ಟ್​ ಮಾಡಿಸಿಕೊಳ್ಳೋಕೆ ಜನರು ಬರೋದಿಲ್ಲ ಅಂತಿದ್ದಾರಂತೆ. ಅಷ್ಟೇ ಅಲ್ಲದೇ ಮೊದಲ ಡೋಸ್​ ಹಾಕಿಸಿಕೊಳ್ಳೋಕೆ ಹಿಂದೇಟು ಹಾಕ್ತಿದ್ದಾರೆ ಅಂತಿದ್ದಾರೆ.

ಮಿಶ್ರಿಕೋಟಿಯಲ್ಲಿ ಜಾಗೃತಿ ಮೂಡಿಸದೇ ಇರೋದ್ರಿಂದ ಜನರು ಟೆಸ್ಟ್​ ಮಾಡಿಸಿಕೊಳ್ತಿಲ್ಲ, ಲಸಿಕೆನೂ ಹಾಕಿಸಿಕೊಳ್ತಿಲ್ಲ ಅಂತಾರೆ ಗ್ರಾಮಸ್ಥರು. ಈ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನ ಕೇಳಿದ್ರೆ ನಾವು ಜಾಗೃತಿ ಮೂಡಿಸಿದ್ದೇವೆ ಆದ್ರೂ ಅವ್ರು ಬರ್ತಿಲ್ಲ ಅಂತಿದ್ದಾರೆ. ಮತ್ತೊಂದೆಡೆ ತಾಲೂಕು ಪಂಚಾಯಿತಿ ಸಿಇಒ, ವಾಲೆಂಟಿಯರ್ಸ್​ನ ನೇಮಕ ಮಾಡಿ ಜಾಗೃತಿ ಮೂಡಿಸ್ತೀವಿ ಅಂತಿದ್ದಾರೆ.

ಒಟ್ನಲ್ಲಿ ಮೊದಲು ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಟ್ರೀಟ್ಮೆಂಟ್​ ಸಿಗಬೇಕಿದೆ. 50 ಬೆಡ್​ನ ಆಸ್ಪತ್ರೆ ಇದ್ದಾಗಿದ್ದು, ಇಲ್ಲಿ ಸೌಲಭ್ಯದ ಕೊರೆತೆ ಎದ್ದು ಕಾಣ್ತಿದೆ. ಆದಷ್ಟು ಬೇಗ ಅಧಿಕಾರಿಗಳು ಅದರತ್ತ ಗಮನಕೊಡ್ಬೇಕು. ಜನ ಕೂಡ ಟೆಸ್ಟ್​ ಮಾಡಿಸೋಕೆ, ಲಸಿಕೆ ಹಾಕಿಸಿಕೊಳ್ಳೊಕೆ ಮುಂದೆ ಬಂದ್ರೆ, ಗ್ರಾಮದಲ್ಲಿ ಹೆಮ್ಮಾರಿ ಅಟ್ಟಹಾಸವನ್ನ ಕಟ್ಟಿಹಾಕಬಹುದು.

ವಿಶೇಷ ವರದಿ: ಪ್ರಕಾಶ್​ ನೂಲ್ವಿ, ನ್ಯೂಸ್​ಫಸ್ಟ್​, ಹುಬ್ಬಳ್ಳಿ

The post ಗ್ರಾಮಗಳಿಗೆ ಅಪ್ಪಳಿಸಿದ ಭಯಂಕರ ಕೊರೊನಾ ಸುನಾಮಿ; ಮಿಶ್ರಿಕೋಟಿಯಲ್ಲಿ 54 ಮಂದಿ ಸಾವು appeared first on News First Kannada.

Source: newsfirstlive.com

Source link