ಗ್ರೀನ್ ಹೈಡ್ರೋಜನ್ ವಾಹನ ಬಳಸಲು ಕೇಂದ್ರ ಸಚಿವ ನಿತಿನ್ ಗಡ್ಕರಿ ಸಲಹೆ; ಏನಿದು ಗ್ರೀನ್ ಹೈಡ್ರೋಜನ್? | Union Minister Nitin Gadkari Advised People To Used Green Hydrogen Vehicle Without Any Fear


ಗ್ರೀನ್ ಹೈಡ್ರೋಜನ್ ವಾಹನ ಬಳಸಲು ಕೇಂದ್ರ ಸಚಿವ ನಿತಿನ್ ಗಡ್ಕರಿ ಸಲಹೆ; ಏನಿದು ಗ್ರೀನ್ ಹೈಡ್ರೋಜನ್?

ಕೇಂದ್ರ ಸಚಿವ ನಿತಿನ್ ಗಡ್ಕರಿ (ಸಂಗ್ರಹ ಚಿತ್ರ)

ಕೇಂದ್ರ ಸಚಿವ ನಿತಿನ್ ಗಡ್ಕರಿ ದೇಶದ ಸಾರಿಗೆ, ಸಂಚಾರ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಯತ್ನಿಸುತ್ತಿದ್ದಾರೆ. 2030ನೇ ಇಸವಿಯೊಳಗೆ ದೇಶದಲ್ಲಿ ಶೇ 30ರಷ್ಟು ವಾಹನಗಳು ಎಲೆಕ್ಟ್ರಿಕ್ ವಾಹನಗಳಾಗಿರಬೇಕು ಎಂಬ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಈಗ ಕೊಳಚೆ ನೀರು, ಘನತ್ಯಾಜ್ಯದಿಂದ ಉತ್ಪಾದಿಸುವ ಗ್ರೀನ್ ಹೈಡ್ರೋಜನ್​ನಿಂದ ಕಾರುಗಳು ಚಲಿಸುವಂತೆ ಮಾಡಲು ನಿತಿನ್ ಗಡ್ಕರಿ ಯೋಜನೆ ಮಾಡಿದ್ದಾರೆ. ಈಗಾಗಲೇ ನಿತಿನ್ ಗಡ್ಕರಿ ಅವರೇ ಗ್ರೀನ್ ಹೈಡ್ರೋಜನ್ ಕಾರ್ ಅನ್ನು ಖರೀದಿಸಿದ್ದಾರೆ.

“ತ್ಯಾಜ್ಯದಿಂದ ಮೌಲ್ಯವನ್ನು ಸೃಷ್ಟಿಸಲು” ಯೋಜನೆ ಮಾಡಲಾಗಿದೆ. ದೇಶದ ವಿವಿಧ ನಗರಗಳಲ್ಲಿ ಬಸ್ಸುಗಳು, ಟ್ರಕ್ ಮತ್ತು ಕಾರುಗಳನ್ನು ಓಡಿಸಲು ಗ್ರೀನ್ ಹೈಡ್ರೋಜನ್ ಅನ್ನು ಬಳಸಲು ಯೋಜಿಸುತ್ತಿದ್ದಾರೆ ಎಂದು ನಿತಿನ್ ಗಡ್ಕರಿ ಅವರೇ ಹೇಳಿದ್ದಾರೆ. ಹಣಕಾಸು ಸೇರ್ಪಡೆ ಕುರಿತ ಆರನೇ ರಾಷ್ಟ್ರೀಯ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ನಿತಿನ್‌ ಗಡ್ಕರಿ, “ನಗರಗಳಲ್ಲಿ ಒಳಚರಂಡಿ ನೀರು ಮತ್ತು ಘನತ್ಯಾಜ್ಯವನ್ನು ಬಳಸಿ ಉತ್ಪಾದಿಸುವ ಹಸಿರು ಹೈಡ್ರೋಜನ್‌ನಲ್ಲಿ ಬಸ್‌ಗಳು, ಟ್ರಕ್‌ಗಳು ಮತ್ತು ಕಾರುಗಳನ್ನು ಓಡಿಸುವ ಯೋಜನೆಯನ್ನು ನಾವು ಹೊಂದಿದ್ದೇವೆ,” ಎಂದು ಹೇಳಿದ್ದಾರೆ.

ತ್ಯಾಜ್ಯ ನೀರಿನಿಂದ ಹೊರತೆಗೆಯಲಾದ ಹೈಡ್ರೋಜನ್‌ನಲ್ಲಿ ವಾಹನಗಳು ಚಲಿಸಬಹುದು ಎಂದು “ಜನರಲ್ಲಿ ನಂಬಿಕೆ ಮೂಡಿಸುವ” ಪ್ರಯತ್ನದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಇದ್ದಾರೆ. “ನಾನು ಫರಿದಾಬಾದ್‌ನ ತೈಲ ಸಂಶೋಧನಾ ಸಂಸ್ಥೆಯಲ್ಲಿ ಉತ್ಪಾದಿಸುವ ಹಸಿರು ಹೈಡ್ರೋಜನ್‌ನಿಂದ ಚಲಿಸುವ ಪೈಲಟ್ ಪ್ರಾಜೆಕ್ಟ್ ಕಾರನ್ನು ಖರೀದಿಸಿದ್ದೇನೆ. ಜನರಲ್ಲಿ ನಂಬಿಕೆ ಮೂಡಿಸಲು ನಗರದಲ್ಲಿ ಗ್ರೀನ್ ಹೈಡ್ರೋಜನ್​ನಿಂದ ಚಲಿಸುವ ಕಾರಿನಲ್ಲಿ ಪ್ರಯಾಣ ಮಾಡುತ್ತೇನೆ,” ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

TV9 Kannada


Leave a Reply

Your email address will not be published. Required fields are marked *