ಕ್ಷಣ ಕ್ಷಣಕ್ಕೂ ನೀರು ಏರುತ್ತಿದ್ದು, ಘಟಪ್ರಭಾ ನದಿ ಅಕ್ಕಪಕ್ಕದ ಕಬ್ಬು, ಹೆಸರು ಬೆಳೆ ಜಲಾವೃತವಾಗಿದ್ದು, ಅನ್ನದಾತರಿಗೆ ಸಂಕಷ್ಟ ಎದುರಾಗಿದೆ. ನೀರಿನ ಪ್ರಮಾಣ ಇನ್ನಷ್ಟು ಹೆಚ್ಚಾದರೆ ಮಿರ್ಜಿ ಗ್ರಾಮಕ್ಕೆ ಪ್ರವಾಹ ಭೀತಿ ಎದುರಾಗಲಿದೆ.

ಮಿರ್ಜಿ ಗ್ರಾಮದ ಬಳಿಯ ಸೇತುವೆ ಸಂಪೂರ್ಣ ಜಲಾವೃತ
ಬಾಗಲಕೋಟೆ: ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಘಟಪ್ರಭಾ ನದಿ (Ghataprabha River) ಬೊರ್ಗರೆದು ಹರಿಯುತ್ತಿದೆ. ಜಿಲ್ಲೆಯ ಮುಧೋಳ ತಾಲ್ಲೂಕಿನ ಮಿರ್ಜಿ ಗ್ರಾಮದ ಘಟಪ್ರಭಾ ಸೇತುವೆ ಜಲಾವೃತವಾಗಿದೆ. ಒಂದು ವರ್ಷದ ಹಿಂದೆ ನೂತನ ಸೇತುವೆ ಕಟ್ಟಿಸಿದ್ದು ಸದ್ಯ ಜಲಾವೃತವಾಗಿದೆ. ಸೇತುವೆ ಮೇಲೆ ಐದು ಅಡಿಗೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಚನಾಳ, ಒಂಟಗೋಡಿ, ಮಿರ್ಜಿ ಗ್ರಾಮದಿಂದ ರಬಕವಿಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ಸಂಪರ್ಕ ಬಂದ್ ಆಗಿದೆ. ಮಿರ್ಜಿ ಒಂಟಗೋಡಿ, ಚನಾಳ ಗ್ರಾಮಸ್ಥರು ಮಹಾಲಿಂಗಪುರ ಪಟ್ಟಣಕ್ಕೆ ಹೋಗಬೇಕಾದರೆ 40 ಕಿಮೀ ಸುತ್ತುವರೆದು ಪ್ರಯಾಣ ಮಾಡುವ ಪರಿಸ್ಥಿತಿ ಎದುರಾಗಿದೆ.