ಘಟಾನುಘಟಿಗಳ ನೆಮ್ಮದಿ ಕಿತ್ಕೊಂಡ ಶ್ರೀಕಿ.. 25 ವರ್ಷದ ಯುವಕ ಏನೆಲ್ಲಾ ಮಾಡಿದ?


ರಾಜ್ಯದಲ್ಲಿ ಮಾತ್ರವಲ್ಲ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಬಿಟ್ ಕಾಯಿನ್ ಹಗರಣ ಭರ್ಜರಿ ಸದ್ದು ಮಾಡ್ತಿದೆ. ಯಾವಾಗ ಬಿಟ್​ ಕಾಯಿನ್​ ಬಾಂಬ್ ರಾಜ್ಯದಲ್ಲಿ ಸ್ಫೋಟವಾಯ್ತೋ, ಅಂದು ಇದೊಂದು ಪ್ರಕರಣ ಅಷ್ಟೇ ಅಂತಾ ಎಲ್ಲಾ ಅಂದುಕೊಂಡು ಸುಮ್ಮನಾಗಿದ್ರು. ಆದ್ರೆ, ಇಂದು ಅದೇ ಪ್ರಕರಣ ಎರಡೂ ರಾಷ್ಟ್ರೀಯ ಪಕ್ಷಗಳ ಬುಡಕ್ಕೆ ಮತ್ತೊಂದು ಬಾಂಬ್ ಇಟ್ಟಿದೆ. ಅವರನ್ನ ಬಿಟ್ಟು, ಇವರನ್ನ ಬಿಟ್ಟು, ಅವಱರ್ ಎಂಬ ಆಟ ಶುರುವಾಗಿದೆ. ಇದೆಲ್ಲದರ ಜೊತೆಗೆ ಇವತ್ತು ಮತ್ತೊಂದು ವಿಚಾರ ಸೇರ್ಪಡೆಗೊಂಡಿದೆ.

ಸಾವಿರಕ್ಕೆ ಒಬ್ಬ ಕಲಾವಿದ. ಅಲ್ಲ ಈತ ಕೋಟಿಗೊಬ್ಬ ಅಂದ್ರೂ ತಪ್ಪಾಗೋದಿಲ್ಲ. ಇವನ ಟ್ಯಾಲೆಂಟ್​ ಮುಂದೆ ಎಂಥಾ ಕ್ರೈಮ್ ಥ್ರಿಲ್ಲರ್ ಸಿನಿಮಾ ಮಾಡೋ ನಿರ್ದೇಶಕರನ್ನೂ ನಿವ್ವಾಳಿಸಿ ಬಿಸಾಕಬಹುದು.. ಅಷ್ಟರ ಮಟ್ಟಿಗಿದೆ ಬಿಟ್​​ಕಾಯಿನ್ ಕಿಂಗ್​ಪಿನ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯ ಲೀಲೆ.. ಇವನ ಕಲೆಗೆ ದೊಡ್ಡ ದೊಡ್ಡ ಕ್ರಿಪ್ಟೋ ಕರೆನ್ಸಿ ಕಂಪನಿಗಳು, ರಾಜಕೀಯ ಧುರೀಣರು ಇವತ್ತು ನೆಮ್ಮದಿ ಕಳೆದುಕೊಳ್ಳುವಂತಾಗಿದೆ. ಯಾವಾಗ ಬಾಣ ನಮ್ಮ ಕಡೆ ಹಾರಿ ಬರುತ್ತೋ ಅನ್ನೋ ಆತಂಕದಲ್ಲಿಯೇ ಕಾಲ ದೂಡುತ್ತಿದ್ದಾರೆ. ಅದರಲ್ಲೂ ನ್ಯೂಸ್​ಫಸ್ಟ್​ ಎಕ್ಸ್​ಕ್ಲೂಸಿವ್ ಸಂದರ್ಶನದಲ್ಲಿ ಗೃಹ ಮಂತ್ರಿಗಳು ಬಿಟ್ಟ ಬಾಣವಂತ ಕೈಕೋಟೆಯ ಸುತ್ತ ಗಿರಕಿ ಹೊಡೀತಿದೆ.

ಗೃಹ ಸಚಿವರು  ಯಾವಾಗ ಈ ಹೇಳಿಕೆ ಕೊಟ್ರೋ ಆಗಿಂದಲೇ ನೋಡಿ ಕೆಲವರಿಗೆ ಎದೆ ಢವಢವ ಅಂತಾ ಜೋರಾಗಿ ಹೊಡ್ಕೊಳ್ಳೋಕೆ ಶುರು ಮಾಡಿದ್ದು.. ಬಿಟ್​​ಕಾಯಿನ್​ ಹಗರಣದಲ್ಲಿ  ಬಿಜೆಪಿಯನ್ನಷ್ಟೇ ಅನುಮಾನಿಸುತ್ತಿದ್ದವರಿಗೆ ಕಾಂಗ್ರೆಸ್ ಬಗ್ಗೆಯೂ ಸಾಕಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳೋದಕ್ಕೆ ಶುರು ಆಗಿದ್ದು. ಆ ಎಲ್ಲಾ ಅನುಮಾನಗಳು, ಪ್ರಶ್ನೆಗಳು ಹುಟ್ಟಿಕೊಂಡಿರೋದಕ್ಕೆ ಮೂಲ ಕಾರಣ ಕರ್ತನೇ  Once Again ಶ್ರೀಕೃಷ್ಣ ಅಲಿಯಾಸ್ ಶ್ರೀಕಿ..

ಬಿಟ್ ಕಾಯಿನ್​​​​ ಪ್ರಕರಣದಲ್ಲಿ ಹತ್ತಾರು ಅನುಮಾನ!
ರಾಜ್ಯ ರಾಜಕೀಯದಲ್ಲಿ ಹ್ಯಾಕರ್ ಶ್ರೀಕಿ ಹಾಗು ಬಿಟ್ ಕಾಯಿನ್​ ವಿಚಾರ ಹೆಚ್ಚು ಸದ್ದು ಮಾಡ್ತಿರೋದು ಎಲ್ಲರಿಗೂ ಗೊತ್ತಿರೋ ವಿಚಾರ. ಆದ್ರೆ, ಇದರ ಮೂಲ ಎಲ್ಲಿಯದ್ದು? ಯಾವಾಗಿಂದ ಇದು ಸದ್ದು ಮಾಡೋದಕ್ಕೆ ಶುರು ಆಯ್ತು? ಈತ ಬಂಧನ ಆಗಿದ್ದು ಯಾವಾಗ? ಆದ್ರೆ. ಈಗ ಯಾಕೆ ಈತ ಇಷ್ಟೋಂದು ಸುದ್ದಿಯಲ್ಲಿದ್ದಾನೆ? ಅನ್ನೋದು ಲಕ್ಷಾಂತರ ಜನರ ಪ್ರಶ್ನೆ.  ಅದನ್ನ ಕೆದುಕೋದಕ್ಕೆ ಹೋದ್ರೆ ಆಪತ್ತು ಅಂತಾರೆ. ಹಾಗೇಯೇ ಶ್ರೀಕಿ ಮೂಲ ಹುಡುಕಲು ಹೋದವರಿಗೆ ಈಗ ಕಂಟಕಗಳು ಒಂದೊಂದಾಗಿ ಎದುರಾಗಿದೆ.

ನ್ಯೂಸ್​​ಫಸ್ಟ್ ರಿವೀಲ್ ಮಾಡಿದೆ ಶ್ರೀಕಿ ಹಿಸ್ಟರಿ!
ಬಿಟ್​ ಕಾಯಿನ್​ ಪ್ರಕರಣದ ಆರಂಭವೇ ರೋಚಕ!

ಹೌದು.. ಕಳೆದ ಒಂದು ತಿಂಗಳ ಹಿಂದೆ ನ್ಯೂಸ್​​​​ಫಸ್ಟ್​​​ ಒಂದು ಸುದ್ದಿ ಬಿತ್ತರಿಸಿತ್ತು. ಆ ಮೂಲಕ ಇದ್ದಿದ್ದನ್ನ ಇದ್ದಂಗೆ ರಾಜ್ಯದ ಜನರ ಮುಂದಿಟ್ಟಿತ್ತು. ಬಿಟ್​​ಕಾಯಿನ್ ಹಗರಣದಿಂದ ಇಬ್ಬರು ನಾಯಕರಿಗೆ ಸಂಕಷ್ಟ ಅನ್ನೋದನ್ನ ಸಾರಿ ಹೇಳಿತ್ತು. ನ್ಯೂಸ್​ಫಸ್ಟ್​ ಸುದ್ದಿ ಬ್ರೇಕ್​ ಮಾಡಿದ ಬಳಿಕ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಅದೇ ಆರೋಪ ಮಾಡಿದ್ದರು. ಅಲ್ಲಿಂದಲೇ ನೋಡಿ ಈ ಬಿಟ್ ಕಾಯಿನ್ ಹಗರಣದ ಸುದ್ದಿ ರಾಜ್ಯದ ಮೂಲೆ ಮೂಲೆ ಸಂಚರಿಸಲಾರಂಭಿಸಿದ್ದು..  ಅಂದು ಶುರುವಾದ ರಾಜಕೀಯ ನಾಯಕರ ಮಾತಿನ ಬಾಣಗಳು ಇಂದೂ ಕೂಡ ಶರವೇಗದಲ್ಲಿ ಮುನ್ನುಗ್ಗುತ್ತಿದೆ. ಆದ್ರೆ, ಇದಕ್ಕೆ ಸದ್ಯಕ್ಕಂತೂ ಬ್ರೇಕ್  ಬೀಳೋ ಲಕ್ಷಣಗಳು ಕಾಣ್ತಾಯಿಲ್ಲ. ಇದೆಲ್ಲದರ ಮಧ್ಯೆ ಶ್ರೀಕಿ ಅರೆಸ್ಟ್​ ಆಗಿದ್ದಾದ್ರೂ  ಹೇಗೆ ಅನ್ನೋದು ಹಲವರ ಪ್ರಶ್ನೆ.. ಅದಕ್ಕುತ್ತರ ನಾವ್ ಕೊಡ್ತೀವಿ..

2020 ನವೆಂಬರ್​ 14
ಸಿಸಿಬಿ ಕಚೇರಿಗೆ ಆಗಮಿಸಿ ಸರೆಂಡರ್ಆಗಿದ್ದ ಶ್ರೀಕಿ

2020 ನವೆಂಬರ್​ 14 ರಂದು ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ನೇರವಾಗಿ ತಾನಾಗೆ ಬೆಂಗಳೂರಿನ ಚಾಮರಾಜಪೇಟೆ ಬಳಿಯಿರೋ ಸಿಸಿಬಿ ಕಚೇರಿಗೆ ಬಂದು ಸರೆಂಡರ್ ಆಗ್ತಾನೆ. ಅಂದು ಡ್ರಗ್ ಕೇಸ್​​​ನ ಬೆನ್ನತ್ತಿ ತನಿಖೆ ನಡೆಸುತ್ತಿದ್ದ ಸಿಸಿಬಿ ಇನ್​ಸ್ಪೆಕ್ಟರ್ ಶ್ರೀಧರ್ ಪೂಜಾರಿ ಅವರ ಮುಂದೆ ನಿಂತುಕೊಂಡು ನಾನೇ ಶ್ರೀಕಿ ಎಂದು ಪರಿಚಯಿಸಿಕೊಳ್ಳುತ್ತಾನೆ. ಅದಾದ ಮೇಲೆ ಆತನನ್ನ ವಶಕ್ಕೆ ಪಡೆಯುವ ಇನ್​​ಸ್ಪೆಕ್ಟರ್​ ಶ್ರಿಧರ್​ ಪೂಜಾರಿ ತನಿಖೆಯನ್ನ ಚುರುಕುಗೊಳಿಸುತ್ತಾರೆ.

2020 ನವೆಂಬರ್ 17
ಮೂರು ದಿನಗಳ ಬಳಿಕ ಬಂಧಿಸಿದ ಸಿಸಿಬಿ

ಅದಾದ್ಮೇಲೆ, ನವಂಬರ್ 14 ರಂದು ಬಂದು ಸರೆಂಡರ್ ಆಗಿದ್ದ ಶ್ರೀಕಿಯನ್ನ ಮೂರು ದಿನಗಳ ಬಳಿಕ ಅಂದ್ರೆ 2020 ನವೆಂಬರ್ 17ರಂದು ಬಂಧನ ಮಾಡಲಾಗಿದೆ ಎಂದು ಅಧಿಕೃತವಾಗಿ ತೋರಿಸಲಾಗುತ್ತೆ. ಬಂಧನಕ್ಕೂ ಮೂರು ದಿನಗಳ ಹಿಂದೆ ಶ್ರೀಕಿಯನ್ನ ಸಿಸಿಬಿ ಠಾಣೆಗೆ ಕರೆದುಕೊಂಡು ಬಂದಿದ್ದ ರಾಬಿನ್​​​ ಖಂಡೇಲ್​​ವಾಲ ಜೊತೆಗೆ ಈತನ ಬಂಧನವನ್ನ ಸಹ ತೋರಿಸಲಾಗುತ್ತೆ. ಇನ್ನು ಯಾವಾಗ ಶ್ರೀಕಿಯ ಬಂಧನವಾಗಿದೆ ಎಂದು ತೋರಿಸಲಾಗುತ್ತೋ ಆಗ Crime No 91/2020 ಎಂದು ಉಲ್ಲೇಖಿಸಿ ಪ್ರಕರಣ ದಾಖಲು ಮಾಡಿಕೊಂಡು ತಕ್ಷಣವೇ ಆತನನ್ನ ಕೋರ್ಟ್​​ಗೆ ಹಾಜರು ಪಡಿಸಿ, ಹೆಚ್ಚಿನ ವಿಚಾರಣೆ ನಡೆಸಬೇಕು ಎಂದು ತಿಳಿಸಿ 14 ದಿನ ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ತನಿಖೆಯನ್ನ ಚುರುಕುಗೊಳಿಸಿದ್ರು.

2020 ಡಿಸೆಂಬರ್​ 2
ಡ್ರಗ್ ಪ್ರಕರಣದಲ್ಲಿ 12 ದಿನ ಕಾಲ ಮತ್ತೆ ಕಸ್ಟಡಿಗೆ

ಡ್ರಗ್​ ಕೇಸ್​ನಲ್ಲಿ ಬಂಧಿಸಿ ವಿಚಾರಣೆ ಆರಂಭಿಸಿದ್ದ ಸಿಸಿಬಿ ಪೊಲೀಸರಿಗೆ ಶ್ರೀಕಿ ಒಬ್ಬ ಹ್ಯಾಕರ್ ಅನ್ನೋದು ತನಿಖೆಯಲ್ಲಿ ಗೊತ್ತಾಗಿತ್ತು. ಅದಕ್ಕಾಗಿ ಮತ್ತೆ Crime No 153/2020 ನಲ್ಲಿ ಅಂದರೆ ಡ್ರಗ್ಸ್​ ಪ್ರಕರಣದಲ್ಲಿ ಮತ್ತಷ್ಟು ಹೆಚ್ಚಿನ ವಿಚಾರಣೆ ನಡೆಸಬೇಕಿದೆ ಎಂದು ಹೇಳಿ ಶ್ರೀಕಿಯನ್ನ ಮತ್ತೆ 12 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ಪಡೆದುಕೊಳ್ಳಲಾಗಿತ್ತು.

2020 ಡಿಸೆಂಬರ್ 14
ಮತ್ತೆ 12 ದಿನ ಕಸ್ಟಡಿಗೆ ಪಡೆಯುವ ಸಿಸಿಬಿ

ಹೌದು.. ಮೊದಲಿಗೆ 14 ದಿನ, ಆನಂತರ 12 ದಿನ ಕಸ್ಟಡಿಗೆ ಪಡೆದಿದ್ದ ಸಿಸಿಬಿ, ಬರೋಬ್ಬರಿ 16 ದಿನಗಳ ಕಾಲ ಕಸ್ಟಡಿಯಲ್ಲಿ ತನಿಖೆ ನಡೆಸಿತ್ತು. ಶ್ರೀಕಿಯನ್ನ ಬೇರೆ ಬೇರೆ ಆಯಾಮದಲ್ಲಿ ತನಿಖೆ ನಡೆಸಬೇಕು ಎಂದು ಕೋರ್ಟ್​​​ ಮುಂದೆ ವಾದ ಮಂಡಿಸಿ ಮತ್ತೆ 12 ದಿನ ಕಸ್ಟಡಿಗೆ ಪಡೆದುಕೊಳ್ತು. ಇಲ್ಲಿಯೂ ಕೂಡ ಬಹಳ ಮುಖ್ಯವಾಗಿ ಡ್ರಗ್ಸ್​ ಪ್ರಕರಣದಲ್ಲಿ ಶ್ರೀಕಿಯನ್ನ ಸಿಸಿಬಿ ವಶಕ್ಕೆ ಪಡೆದುಕೊಂಡಿದ್ದು ನಿಜಕ್ಕೂ ಕುತೂಹಲಕಾರಿ ವಿಚಾರ.

2020 ಡಿಸೆಂಬರ್ 28
ಬಿಟ್ ಕಾಯಿನ್ ಹಗರಣದಲ್ಲಿ ಬಂಧನ

ಹೌದು.. 2020 ಡಿಸೆಂಬರ್ 28ರವರೆಗೆ ಶ್ರೀಕಿಯನ್ನ ಯಾವ ಕಾರಣಕ್ಕಾಗಿ ಸಿಸಿಬಿ ಕಸ್ಟಡಿಯಲ್ಲಿ ಇಟ್ಟುಕೊಂಡಿದ್ದಾರೆ ಅನ್ನೋ ಪ್ರಶ್ನೆಗಳು ಮೂಡಿತ್ತೊ, ಡ್ರಗ್ಸ್​​ ಬಿಟ್ಟು ಬೇರೆಯದ್ದು ಏನೋ ಪ್ರಮುಖ ವಿಚಾರದಲ್ಲಿ ಶ್ರೀಕಿ ಭಾಗಿಯಾಗಿರಬಹುದು ಅನ್ನೋ ಅನುಮಾನ ಶುರುವಾಗಿತ್ತು.  ಆದ್ರೆ, ಅದಕ್ಕೆಲ್ಲಾ ತೆರೆ ಬಿದ್ದಿದ್ದು 2020 ಡಿಸೆಂಬರ್ 28 ರಂದು. ಯಾಕಂದ್ರೆ, ಡ್ರಗ್ಸ್​ ಕೇಸ್​ನಲ್ಲಿ ಕಸ್ಟಡಿಯಲ್ಲಿದ್ದ ಶ್ರೀಕಿಯನ್ನ, ಬಿಟ್​ ಕಾಯಿನ್ ಹಗರಣದಲ್ಲಿ ಭಾಗಿಯಾಗಿದ್ದಾನೆ ಅಂತಾ ಬಂಧಿಸಲಾಗಿತ್ತು. ರಾಜ್ಯಾದ್ಯಂತ ಆ ಸುದ್ದಿ ಆವತ್ತು ಭರ್ಜರಿ ಸದ್ದು ಮಾಡಿತ್ತು. ಆ ಬಳಿಕ ಸಿಸಿಬಿ ಪೊಲೀಸರು ಶ್ರೀಕಿಯನ್ನ ಕೋರ್ಟ್​​ಗೆ ಮತ್ತೆ ಹಾಜರು ಪಡಿಸಿ ಬಿಟ್ ಕಾಯಿನ್ ಹಗರಣದ ವಿಚಾರವಾಗಿ 14 ದಿನ ಕಸ್ಟಡಿಗೆ ಪಡೆದುಕೊಂಡಿದ್ದರು. ಆ ಮೂಲಕ ಬಿಟ್ ಕಾಯಿನ್ ವಿಚಾರವಾಗಿ ತನಿಖೆಯನ್ನ ಚುರುಕುಗೊಳಿಸಿದ್ದರು.

2021 ಜನವರಿ 03
31 ಬಿಟ್ ಕಾಯಿನ್ಗಳು ಪತ್ತೆ
ಆಗಿತ್ತು

ಇದಂತೂ ನಿಜಕ್ಕೂ ಇಂಟರೆಸ್ಟಿಂಗ್.. ಶ್ರೀಕಿಯನ್ನ ಮತ್ತೆ ಮತ್ತೆ ಕಸ್ಟಡಿಗೆ ಪಡೆದ ಸಿಸಿಬಿ  ಆತನಿಂದ 2021 ಜನವರಿ 03 ರಂದು 31 ಬಿಟ್​ಕಾಯಿನಗಳನ್ನ ಪತ್ತೆ ಹಚ್ಚಿದ್ದರು. ಆ ಮೂಲಕ ಮೊದಲ ಪಂಚನಾಮೆ ನಡೆಸಿದ್ದರು

2021 ಜನವರಿ 11
ಸಿಸಿಬಿ ವಿರುದ್ಧ ಶ್ರೀಕಿ ತಂದೆ ಗಂಭೀರ ಆರೋಪ

ಶ್ರೀಕಿ ಬಂಧನ ಆಗಿದ್ದು ಅದು ಡ್ರಗ್ ಕೇಸ್​ನಲ್ಲಿ. ಆದ್ರೆ, ಅದು ತಳಕು ಹಾಕಿಕೊಂಡಿದ್ದು ಮಾತ್ರ ಬಿಟ್ ಕಾಯಿನ್ ವಿಚಾರದಲ್ಲಿ. ಹೀಗೆ ಮೇಲಿಂದ ಮೇಲೆ ಕಸ್ಟಡಿಗೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದ ಸಿಸಿಬಿ ಪೊಲೀಸರು ಆತನಿಂದ ಮಹತ್ವದ ಮಾಹಿತಿಗಳನ್ನ ಕಲೆ ಹಾಕುತ್ತಿದ್ದರು. ಆದ್ರೆ, ಈ ನಡುವೆ ಅಂದ್ರೆ 2021 ಜನವರಿ 11ರಂದು ಶ್ರೀಕಿ ತಂದೆ ಸಿಸಿಬಿ ವಿರುದ್ದ ಗಂಭೀರವಾದ ಆರೋಪ ಮಾಡಿದ್ದರು. ಅದು ವಿಚಾರಣೆ ವೇಳೆ ತಮ್ಮ ಮಗನಿಗೆ ಸಿಸಿಬಿ ಪೊಲೀಸರು ಡ್ರಗ್ಸ್​​ ನೀಡಿದ್ದಾರೆ  ಅನ್ನೋದು.. ಶ್ರೀಕಿಯ ರಕ್ತ, ಮೂತ್ರ ತಪಾಸಣೆ ಮಾಡಿ ಅಂತಾ ಮ್ಯಾಜಿಸ್ಟ್ರೇಟ್​ ಸೂಚನೆ  ಕೊಟ್ಟಿದ್ದರು. ಅದಾದ ಮಾರನೇ ದಿನವೇ ಆರೋಪಿ ಶ್ರೀಕಿಯ ಹೊಟ್ಟೆ ಕ್ಲೀನ್​ ಮಾಡಿಸಿದ್ದರಂತೆ ಪೊಲೀಸರು. ಈ ನಡೆಯ ಬಗ್ಗೆ ಶ್ರೀಕಿ ತಂದೆ ಪ್ರಶ್ನೆಯನ್ನ ಮಾಡಿ ಕೋರ್ಟ್ ಮೆಟ್ಟಿಲೆತ್ತಿದ್ದರು.

2021 ಜನವರಿ 12
ಸುದ್ದಿಗೋಷ್ಠಿ ನಡೆಸಿದ್ದ ಸಿಸಿಬಿ

2021 ಜನವರಿ 12 ರಂದು ಸುದ್ದಿಗೋಷ್ಟಿಯನ್ನ ನಡೆಸಿದ್ದ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸುಮಾರು 9 ಕೋಟಿ ರೂಪಾಯಿ ಮೌಲ್ಯದ ಸುಮಾರು 31 ಬಿಟ್ ಕಾಯಿನ್ ಪತ್ತೆ ಆಗಿತ್ತು ಎಂದು ತಿಳಿಸಿದ್ರು. ಆದ್ರೆ ಈಗಿರೋ ವಿಚಾರ ಏನಂದ್ರೆ ಆ 31 ಬಿಟ್ ಕಾಯಿನ್ ಏನಾಯ್ತು ಅನ್ನೋದು.

2021 ಜನವರಿ 18
ರಾಬಿನ್ ಖಂಡೇಲ್​​ವಾಲಾ ಹೇಳಿಕೆ ದಾಖಲು

2021 ಜನವರಿ 18 ರಂದು ಸಿಸಿಬಿ ಎರಡನೇ ಬಾರಿಗೆ ಪಂಚನಾಮೆ ನಡೆಸಿದ್ದರು. ಆ ಸಂದರ್ಭದಲ್ಲಿ 0.8 ಬಿಟ್ ಕಾಯಿನ್ ಬಗ್ಗೆ ಉಲ್ಲೇಖಿಸಿದ್ದ ಸಿಸಿಬಿ ರಾಬಿನ್ ಖಂಡೇವಾಲಾ ಹೇಳಿಕೆಯನ್ನ ದಾಖಲು ಮಾಡಿಕೊಂಡಿದ್ದರು. ಇದಾದ ಬಳಿಕ ಮೂರನೇ ಪಂಚನಾಮೆಯನ್ನ 2021 ಜನವರಿ 22 ರಂದು ಮಾಡಿದ್ದರು. ಆಗ ಶ್ರೀಕಿ ನೀಡಿದ್ದ ಲಿಂಕ್​ನಲ್ಲಿ 186 ಬಿಟ್ ಕಾಯಿನ್​​​​​​​​​​​​​​​​​​​​​​ ಸಿಕ್ಕಿದೆ ಎಂದು ಉಲ್ಲೇಖವಾಗಿತ್ತು. ಅದು ತನ್ನದೇ ವ್ಯಾಲೆಟ್ ಎಂದು ಶ್ರೀಕಿ ಹೇಳಿಕೊಂಡಿದ್ದ. ಆದ್ರೆ, ಅದನ್ನ ಟ್ರಾನ್ಸ್​​​​ಫರ್ ಮಾಡಿಕೊಳ್ಳೋದ್ರಲ್ಲಿ ಪೊಲೀಸರು ಫೇಲ್ ಆಗಿದ್ರು.

2021 ಫೆಬ್ರವರಿ 15
ಸಿಸಿಬಿ ಮಾಹಿತಿ ಕೇಳಿ ಪತ್ರ ಬರೆದ ಇ.ಡಿ

ಯಾವಾಗ ಅಂದು ಶ್ರೀಕಿ ಕೇಸ್​ ಬಹಳ ಹೈಪ್ ಪಡೆದುಕೊಂಡಿತ್ತೋ ಆಗಲೇ ನೋಡಿ ಬಹಳಷ್ಟು ಅನುಮಾನಗಳು ವ್ಯಕ್ತವಾಗಿದ್ದು. ಬಿಟ್ ಕಾಯಿನ್​ ಹ್ಯಾಕ್ ಮಾಡಿ ತನ್ನ ವ್ಯಾಲೆಟ್​​ಗೆ ಪಡೆದು ಅದನ್ನ ಹವಾಲ ಹಣದ ಮೂಲಕ ಲಿಕ್ವಿಡಿಟಿ ಮಾಡಿಕೊಂಡಿದ್ದ ಎಂಬ ಶಂಕೆ ವ್ಯಕ್ತವಾಗಿತ್ತು. ಹವಾಲ ಹಣದ ವಿಚಾರ ಪ್ರಸ್ತಾಪ ಆಗುತ್ತಿದ್ದಂತೆ ಇ.ಡಿ ಎಂಟ್ರಿ ಕೊಟ್ಟು ಪ್ರಕರಣದ ಸಂಪೂರ್ಣ ಮಾಹಿತಿಯನ್ನ ಕೇಳಿ ಸಿಸಿಬಿಗೆ ಪತ್ರವನ್ನ ಅಧಿಕಾರಿಗಳು ಬರೆದಿದ್ದರು. ಇದಾದ ಬಳಿಕ ತನಿಖಾ ವರದಿಯನ್ನ ಇಡಿಗೆ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್​ ಸಲ್ಲಿಸಿದ್ದರು.

ಇದು ಸತತವಾಗಿ ಮೂರು ತಿಂಗಳುಗಳ ಕಾಲ ನಡೆದ ವಿವರವಾದ ಮಾಹಿತಿ. ಇಷ್ಟೆಲ್ಲಾ ಆದ ಬಳಿಕ ಶ್ರೀಕಿಯನ್ನ ಪೊಲೀಸ್ ಕಸ್ಟಡಿಯಿಂದ ಬಿಡುಗಡೆ ಮಾಡಲಾಗುತ್ತೆ. ಆತ ನ್ಯಾಯಾಂಗ ಬಂಧನಕ್ಕೆ ಹೋಗಿ ನಂತರ ಜಾಮೀನನ ಮೇಲೆ ರಿಲೀಸ್ ಆಗಿದ್ದ.. ಇವೆಲ್ಲಾ ಆದ್ಮೇಲೆ ಶ್ರೀಕಿ ಪ್ರಕರಣದ ವಿಚಾರ ತಣ್ಣಗಾಗಿತ್ತು, ಆದ್ರೆ ರಾಜ್ಯದಲ್ಲಿ ನಡೆದ ಸಿಂದಗಿ ಹಾಗು ಹಾನಗಲ್​ ಉಪಚುನಾವಣೆಯ ಸಂದರ್ಭದಲ್ಲಿ ಮತ್ತೆ ಸ್ಫೋಟವಾಯ್ತು ನೋಡಿ ಬಿಟ್​ ಕಾಯಿನ್ ಬಾಂಬ್​. ಈ ಮೂಲಕ ಹಳ್ಳಿಯಿಂದ ದಿಲ್ಲಿವರೆಗೂ ರಾಜ್ಯದ ಬಿಟ್​ಕಾಯಿನ್ ಹಗರಣ ಸಂಚಲನ ಸೃಷ್ಟಿಸಿದೆ. ಶ್ರೀಕಿಯ ಅವತಾರಗಳನ್ನ ಕೇಳಿದವ್ರು, ನೋಡಿದವ್ರು ದಂಗಾಗಿ ಹೋಗಿದ್ದಾರೆ.

The post ಘಟಾನುಘಟಿಗಳ ನೆಮ್ಮದಿ ಕಿತ್ಕೊಂಡ ಶ್ರೀಕಿ.. 25 ವರ್ಷದ ಯುವಕ ಏನೆಲ್ಲಾ ಮಾಡಿದ? appeared first on News First Kannada.

News First Live Kannada


Leave a Reply

Your email address will not be published. Required fields are marked *