ಚಂಡಮಾರುತ- ಗುಡ್ಡಗಾಡು ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳಲು ನಗರಸಭೆ ನೋಟಿಸ್

ಮಡಿಕೇರಿ: ಅರಬ್ಬಿ ಸಮುದ್ರದಲ್ಲಿ ಚಂಡಮಾರುತದ ಹಿನ್ನೆಲೆ ಕೊಡಗು ಜಿಲ್ಲೆಯಲ್ಲಿ ಇದೇ ಮೇ 14 ಮತ್ತು 15ರಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಜಿಲ್ಲಾಡಳಿತಕ್ಕೆ ಮುನ್ಸೂಚನೆ ನೀಡಿದೆ. ಹೀಗಾಗಿ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುತ್ತಿರುವ ಜನ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮಡಿಕೇರಿ ನಗರಸಭೆ ಮನವಿ ಮಾಡಿದೆ.

ಮಡಿಕೇರಿ ನಗರದ ಇಂದಿರಾನಗರ, ಚಾಮುಂಡೇಶ್ವರಿ ನಗರ ಹಾಗೂ ಮಂಗಳಾದೇವಿ ನಗರ ಬಡಾವಣೆಗಳ ನಿವಾಸಿಗಳಿಗೆ ನಗರಸಭೆ ನೋಟಿಸ್ ಜಾರಿ ಮಾಡಿದ್ದಾರೆ. ಇದರಿಂದಾಗಿ ಸ್ಥಳೀಯರಲ್ಲಿ ಆತಂಕ ಎದುರಾಗಿದೆ. ಈಗಾಗಲೇ 2018ರಲ್ಲಿ ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ನಲುಗಿ ಹೋಗಿರುವ ಜನ ಸಣ್ಣ ಮಳೆ ಬಂದರು ಆತಂಕಗೊಳ್ಳುವಂತಾಗಿದೆ. ಇದನ್ನೂ ಓದಿ: ಅರಬ್ಬಿ ಸಮುದ್ರದಲ್ಲಿ ಚಂಡಮಾರುತ- ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ ಭಾರೀ ಮಳೆ

ಇದೀಗ ಕೊರೊನಾ ಹಾಗೂ ಲಾಕ್‍ಡೌನ್ ನಡುವೆ ಮನೆ ಖಾಲಿ ಮಾಡಿ ಸುರಕ್ಷಿತ ಸ್ಥಳಕ್ಕೆ ತೆರಳಿ ಎಂದರೆ ಎಲ್ಲಿಗೆ ತೆರಳುವುದೆಂದು ತೋಚದೆ ಕಂಗಾಲಾಗಿದ್ದಾರೆ. ಕಳೆದ ಬಾರಿಯ ಜಲಪ್ರಳಯಕ್ಕೆ ಕೊಡಗು ಜಿಲ್ಲೆ ಅಕ್ಷರಶಃ ನಲುಗಿ ಹೋಗಿತ್ತು. ಮಡಿಕೇರಿ ನಗರದ ಈ ಮೂರು ವಾರ್ಡ್‍ಗಳು ಹೆಚ್ಚು ಅನಾಹುತಕ್ಕೆ ತುತ್ತಾಗಿದ್ದವು. ಹೀಗಾಗಿ ಮಳೆಯಗುತ್ತದೆ ಎಂಬ ಸೂಚನೆ ಬಂದರೂ ಜನ ಭಯಪಡುವಂತಗಿದೆ.

ಈ ಮೂರು ನಗರಗಳಲ್ಲಿ ಬೆಟ್ಟ, ಗುಡ್ಡದ ನಡುವೆಯೇ ನೂರಾರು ಮನೆಗಳಿವೆ. ಅಷ್ಟೇ ಅಲ್ಲದೆ ಕೊಡಗು ಜಿಲ್ಲೆಯ ವಿರಾಜಪೇಟೆ ನಗರದ ಅಯ್ಯಪ್ಪಬೇಟ್ಟ, ನೆಹರು ನಗರ, ಅರಸುನಗರ ಹಾಗೂ ಮಲೇತಿರಿಕೆ ಬೆಟ್ಟದ ನಿವಾಸಿಗಳಿಗೆ ಪಟ್ಟಣ ಪಂಚಾಯಿತಿಯಿಂದಲೂ ನೋಟಿಸ್ ನೀಡಲಾಗಿದೆ. ಕಳೆದ ಮೂರು ವರ್ಷದ ಮಳೆಗಾಲದಲ್ಲಿ ಅರ್ಧ ಬಿದ್ದು ಅಪಾಯದಂಚಿನಲ್ಲಿರುವ ಮನೆಗಳಲ್ಲೇ ಜನರು ಬದುಕು ಕಟ್ಟಿಕೊಂಡಿದ್ದಾರೆ. ಇದೀಗ ನಗರಸಭೆಯ ನೋಟಿಸ್ ಅವರಿಗೆ ಮತ್ತೊಂದು ಶಾಕ್ ನೀಡಿದ್ದು, ಮುಂದೇನು ಮಾಡಬೇಕೆಂದು ಎಲ್ಲಿಗೆ ಹೋಗಬೇಕು ಎಂದು ಚಿಂತೆಗೆ ಸಿಲುಕಿದ್ದಾರೆ.

The post ಚಂಡಮಾರುತ- ಗುಡ್ಡಗಾಡು ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳಲು ನಗರಸಭೆ ನೋಟಿಸ್ appeared first on Public TV.

Source: publictv.in

Source link