ಚಂದ್ರಬಾಬು ನಾಯ್ಡು ಕಣ್ಣೀರಿಗೆ ಹತಾಶೆಯೇ ಕಾರಣ: ವ್ಯಂಗ್ಯವಾಡಿದ ಆಂಧ್ರ ಸಿಎಂ ಜಗನ್​ಮೋಹನ್ ರೆಡ್ಡಿ | Andhra Pradesh Chief Minister Jagan Mohan Reddy Reacts to TDP Leader N Chandrababu Naidu Allegations


ಚಂದ್ರಬಾಬು ನಾಯ್ಡು ಕಣ್ಣೀರಿಗೆ ಹತಾಶೆಯೇ ಕಾರಣ: ವ್ಯಂಗ್ಯವಾಡಿದ ಆಂಧ್ರ ಸಿಎಂ ಜಗನ್​ಮೋಹನ್ ರೆಡ್ಡಿ

ಆಂಧ್ರ ಮುಖ್ಯಮಂತ್ರಿ ಜಗನ್​ಮೋಹನ್ ರೆಡ್ಡಿ ಮತ್ತು ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು

ಹೈದರಾಬಾದ್: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ನಿನ್ನೆ (ನ.19) ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದರು. ಇದಕ್ಕೆ ಈಗ ಆಂಧ್ರಪ್ರದೇಶದ ಹಾಲಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ಚಂದ್ರಬಾಬು ನಾಯ್ಡು ಎಷ್ಟು ಹತಾಶರಾಗಿದ್ದಾರೆ ಎಂಬುದು ಇಡೀ ರಾಜ್ಯಕ್ಕೆ ತಿಳಿದಿದೆ ಎಂದು ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ. ಚಂದ್ರಬಾಬು ನಾಯ್ಡು ಅವರನ್ನು ಜನರು ತಿರಸ್ಕರಿಸಿದ್ದು, ತವರು ಕ್ಷೇತ್ರ ಕುಪ್ಪಂ ನಗರಸಭೆಯಲ್ಲಿ ಟಿಡಿಪಿ ಸೋತಿದೆ ಎಂದು ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ.

ಆಂಧ್ರದ ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ತನ್ನ ಪಕ್ಷದ ನಾಯಕರನ್ನು ವೈಯಕ್ತಿಕವಾಗಿ ಗುರಿಯಾಗಿಸಿಕೊಂಡಿದೆ ಎಂಬ ಚಂದ್ರಬಾಬು ನಾಯ್ಡು ಅವರ ಆರೋಪಕ್ಕೆ ಸಿಎಂ ಜಗನ್ ಮೋಹನ್ ರೆಡ್ಡಿ ತಿರುಗೇಟು ನೀಡಿದ್ದಾರೆ. ‘ನಾಯ್ಡು ಎಷ್ಟು ಹತಾಶರಾಗಿದ್ದಾರೆ ಎಂಬುದು ಇಡೀ ರಾಜ್ಯಕ್ಕೆ ತಿಳಿದಿದೆ. ಚಂದ್ರಬಾಬು ನಾಯ್ಡು ಅವರನ್ನು ಜನರು ತಿರಸ್ಕರಿಸಿದ್ದಾರೆ. ತಮ್ಮ ತವರು ಕ್ಷೇತ್ರವಾದ ಕುಪ್ಪಂನಲ್ಲಿ ನಗರಸಭೆಯೂ ಅವರ ಅಧೀನದಲ್ಲಿಲ್ಲ. ವಿಧಾನ ಪರಿಷತ್ತಿನಲ್ಲೂ ಟಿಡಿಪಿ ಅಧಿಕಾರ ಕಳೆದುಕೊಂಡಿದೆ. ಹೀಗಾಗಿ ಅವರು ಏನು ಮಾಡುತ್ತಿದ್ದಾರೆ, ಮಾತನಾಡುತ್ತಿದ್ದಾರೆ ಅಥವಾ ಹೇಗೆ ವರ್ತಿಸುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದು ವಿಶ್ಲೇಷಿಸಿದರು.

ಸಂಬಂಧವಿಲ್ಲದ ಅನಗತ್ಯ ವಿಷಯಗಳ ಬಗ್ಗೆ ಮಾತನಾಡುವ ಮೂಲಕ ಚಂದ್ರಬಾಬು ನಾಯ್ಡು ಅವರೇ ಸದನದಲ್ಲಿ ಶಾಸಕರನ್ನು ಪ್ರಚೋದಿಸಿದ್ದಾರೆ. ಈಗ ಜನರು ಪ್ರತಿಕ್ರಿಯಿಸಿದಾಗ ಈ ರೀತಿ ವರ್ತಿಸುತ್ತಿದ್ದಾರೆ. ಚಂದ್ರಬಾಬು ನಾಯ್ಡು ಮತ್ತು ಟಿಡಿಪಿ ನಾಯಕರೇ ಇಂಥ ಗೊಂದಲಗಳಿಗೆ ಕಾರಣ ಎಂದು ಜಗನ್ ರೆಡ್ಡಿ ಪ್ರತಿಕ್ರಿಯಿಸಿದರು.

ವಿಧಾನಸಭೆ ಅಧಿವೇಷನದಲ್ಲಿ ತಮ್ಮ ಪತ್ನಿಯನ್ನು ಗುರಿಯಾಗಿಸಿ, ಕೀಳಾಗಿ ಮಾತನಾಡಲಾಗಿದೆ ಎಂದು ಶುಕ್ರವಾರ ಚಂದ್ರಬಾಬು ನಾಯ್ಡು ಹೇಳಿದ್ದರು. ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಸರ್ಕಾರವು ಶಾಸಕಾಂಗ ಸಭೆಯಲ್ಲಿ ತಮ್ಮನ್ನು ಸೇರಿದಂತೆ ತಮ್ಮ ಪಕ್ಷದ ನಾಯಕರ ಕುಟುಂಬ ಸದಸ್ಯರನ್ನು ವೈಯಕ್ತಿಕವಾಗಿ ಗುರಿಯಾಗಿಸಿಕೊಂಡಿದೆ ಎಂದು ಹೇಳಿದ ಬಳಿಕ ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದರು. ಇದು ಆಂಧ್ರಪ್ರದೇಶದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಆಂಧ್ರಪ್ರದೇಶ ವಿಧಾನಸಭೆಯನ್ನು ಕೌರವರ ಸಭೆಗೆ ಹೋಲಿಸಿದ್ದರು. ಆಂಧ್ರಪ್ರದೇಶದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ತನಕ ವಿಧಾನಸಭೆ ಪ್ರವೇಶ ಮಾಡಲ್ಲ ಎಂದು ಚಂದ್ರಬಾಬು ನಾಯ್ಡು ಶಪಥ ಮಾಡಿದ್ದರು.

ಇದನ್ನೂ ಓದಿ: Chandrababu Naidu: ನಾನು ಮತ್ತೆ ಮುಖ್ಯಮಂತ್ರಿಯಾಗಿಯೇ ಬರುತ್ತೇನೆ: ಸವಾಲು ಹಾಕಿ ವಿಧಾನಸಭೆಯಿಂದ ಹೊರನಡೆದ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು
ಇದನ್ನೂ ಓದಿ: ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ವಿರುದ್ಧ ಟೀಕೆ: ಟಿಡಿಪಿ ಕಚೇರಿಗೆ ನುಗ್ಗಿ ವೈಎಸ್‌ಆರ್‌ಸಿಪಿ ಕಾರ್ಯಕರ್ತರ ದಾಂಧಲೆ

TV9 Kannada


Leave a Reply

Your email address will not be published. Required fields are marked *