ಪಾಟ್ನಾ: ಪ್ರೀತಿಸಿದ ಜೋಡಿಯೊಂದು ಚಲಿಸುತ್ತಿದ್ದ ರೈಲಿನಲ್ಲಿಯೇ ಮದುವೆಯಾಗಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ಬಿಹಾರದ ಸುಲ್ತಾನ್‍ಗಂಜ್ ಪ್ರದೇಶದ ಭಿರ್ ಕುರ್ದ್ ಗ್ರಾಮದ ನಿವಾಸಿ ಆಶು ಕುಮಾರ್ ಹಾಗೂ ಅನು ಕುಮಾರಿ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇವರಿಬ್ಬರು ಪ್ರೀತಿಸುತ್ತಿರುವ ವಿಚಾರ ಅನು ಕುಮಾರಿ ಮನೆಯವರಿಗೆ ತಿಳಿದು ಬಂದಿದೆ. ನಂತರ ಇವರಿಬ್ಬರ ಪ್ರೀತಿಯನ್ನು ನಿರಾಕರಿಸಿ ಪಕ್ಕದ ಕಿರಣಪುರ್ ಎಂಬ ಹಳ್ಳಿಯಲ್ಲಿರುವ ವ್ಯಕ್ತಿಯೊಬ್ಬರ ಜೊತೆಗೆ ಆತುರವಾಗಿ 2 ತಿಂಗಳ ಹಿಂದೆ ಅನು ಕುಮಾರಿಗೆ ಮದುವೆ ಮಾಡಿಸಿದ್ದಾರೆ.

ಇದೀಗ ತನ್ನ ಇಚ್ಛೆಯ ವಿರುದ್ಧ ಮನೆಯವರು ಮಾಡಿಸಿದ್ದ ಮದುವೆಯನ್ನು ನಿರಾಕರಿಸಿ ಅನು ಕುಮಾರಿ ಮನೆ ಬಿಟ್ಟು ಪ್ರಿಯಕರ ಅಶು ಕುಮಾರ್ ಜೊತೆಗೆ ಓಡಿ ಬಂದು ರೈಲಿನ ಬೋಗಿಯಲ್ಲಿ ವಿವಾಹವಾಗಿದ್ದಾರೆ.

ಈ ಕುರಿತಂತೆ ಪ್ರತಿಕ್ರಿಯಿಸಿರುವ ಅಶು ಕುಮಾರ್, ನಾವಿಬ್ಬರು ಊರಿನಲ್ಲಿಯೇ ಇದ್ದರೆ, ನಮ್ಮನ್ನು ಅವರು ಬದುಕಲು ಬಿಡುವುದಿಲ್ಲ. ಹೀಗಾಗಿ ಊಟು ಬಿಟ್ಟು ನಾವು ರೈಲಿನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದೇವೆ. ಆದರೆ ಮಾರ್ಗಮಧ್ಯೆ ಅನು ಕುಮಾರಿ ಭಯಗೊಂಡು ರೈಲಿನಲ್ಲಿಯೇ ತಾಳಿ ಕಟ್ಟಿ ವಿವಾಹವಾಗುವಂತೆ ಒತ್ತಾಯ ಮಾಡಿದ್ದಾಳೆ. ಹೀಗಾಗಿ ನಾನು ರೈಲಿನಲ್ಲಿಯೇ ತಾಳಿ ಕಟ್ಟಿ ಸಿಂಧೂರ ಇಟ್ಟಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಲಾಕ್‍ಡೌನ್ ವೇಳೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಶೇಷ ಜೋಡಿ

ಸದ್ಯ ಈ ಪ್ರೇಮಿಗಳ ವಿವಾಹದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಶುಭಹಾರೈಸುತ್ತಿದ್ದಾರೆ.

The post ಚಲಿಸುತ್ತಿರುವ ರೈಲಿನಲ್ಲಿ ಮದುವೆಯಾದ ಪ್ರಣಯ ಪಕ್ಷಿಗಳು appeared first on Public TV.

Source: publictv.in

Source link