ಚಳಿಗಾಲದಲ್ಲಿ ಪ್ರವಾಸ ಹೋಗಬಹುದಾದ ಈ ಸ್ಥಳಗಳು ನಿಸ್ಸಂದೇಹವಾಗಿ ಭೂಮಿ ಮೇಲಿನ ಸ್ವರ್ಗಗಳು! | The winter destinations of India are no less than paradise, have a look at mesmerising places


ಚಳಿಗಾಲದಲ್ಲಿ ಪ್ರವಾಸ ಹೋಗುವವರ ಸಂಖ್ಯೆಯೇನೂ ಕಡಿಮೆ ಇಲ್ಲ ಮಾರಾಯ್ರೇ. ಬೇಸಿಗೆಯಂತೆಯೇ ಚಳಿಗಾಲದಲ್ಲೂ ಪ್ರವಾಸ ಹೋಗಲು ನಮ್ಮ ದೇಶದಲ್ಲಿ ಸಾಕಷ್ಟು ಸ್ಥಳಗಳಿವೆ. ಇಲ್ಲಿರುವ ವಿಡಿಯೋ ನೋಡಿ. ಎಲ್ಲವೂ ಒಂದಕ್ಕಿಂತ ಒಂದು ಸುಂದರ ತಾಣಗಳು, ಎಲ್ಲ ಹಿಮಾವೃತ ಪ್ರದೇಶಗಳೇ. ಉತ್ತರ ಭಾರತದ ಹಲವಾರು ಪ್ರದೇಶಗಳಲ್ಲಿ ನವೆಂಬರ್ ಮತ್ತು ಫೆಬ್ರುವರಿ ನಡುವೆ ಹಿಮ ಸುರಿಯುತ್ತಲೇ ಇರುತ್ತದೆ. ಹಿಮಚ್ಛಾದಿತ ಪ್ರದೇಶಗಳು ಬಹಳ ರೋಮ್ಯಾಂಟಿಕ್ ತಾಣಗಳು ಅನ್ನೋದರಲ್ಲಿ ಎರಡು ಮಾತಿಲ್ಲ. ಓಕೆ, ಉತ್ತರಾ ಖಂಡ ರಾಜ್ಯದಲ್ಲಿರುವ ಪಿತ್ರೋಗಢ್​ನಲ್ಲಿ ಪರ್ವತ ಶ್ರೇಣಿಯ ನಡುವೆ ಅವಿತುಕೊಂಡಿರುವ ಮುನ್ಸಿಯಾರಿ ಪ್ರದೇಶದಲ್ಲಿ ಹೆಚ್ಚು ಕಡಿಮೆ ವರ್ಷವಿಡೀ ಹಿಮ ಬೀಳುತ್ತಿರುತ್ತದೆ. ಹಿಮಾಲಯ ಪರ್ವತ ಶ್ರೇಣಿಯ ಸುತ್ತವರಿಯಲ್ಪಟ್ಟಿರುವ ಮುನ್ಸಿಯಾರಿಯನ್ನು ನಿಸರ್ಗದ ಮೈದಾನ ಎಂದು ಕರೆಯುತ್ತಾರೆ. ಇಲ್ಲಿ ನಿಂತುಕೊಂಡು ಹಿಮಾಲಯದ ಶಿಖರಗಳಲ್ಲಿ ಪ್ರತಿದಿನ ಬೆಳಗ್ಗೆ ಮತ್ತು ಸಾಯಂಕಾಲ ಅಮೋಘವಾಗಿ ಗೋಚರಿಸುವ ಸೂರ್ಯೋದಯ ಮತ್ತು ಸೂರ್ಯಾಸ್ತಗಳನ್ನು ನೀವು ನೋಡಬಹುದು.

ಈ ಪ್ರದೇಶವ ಟ್ರೆಕ್ಕಿಂಗ್ ನಲ್ಲಿ ಅಭಿರುಚಿ ಉಳ್ಳವರಿಗೂ ಸೂಕ್ತವಾದ ಸ್ಥಳವಾಗಿದೆ. ರಾಲಂ ಮತ್ತು ಮಿಲಾಮ್ ಹಿಮಪರ್ವತಗಳ ಜೊತೆಗೆ ನಂದಾದೇವಿ ಶಿಖರ ಅವರ ಸಾಮರ್ಥ್ಯಕ್ಕೆ ಸವಾಲೆಸುತ್ತವೆ.

ಲಡಾಕ್ ಮತ್ತು ಸಿಯಾಚಿನ್ ಪ್ರದೇಶಗಳಲ್ಲೂ ಹಿಮ ಸುರಿಯಲಾರಂಭಿಸಿದೆ. ಅಲ್ಲಿಂದ ನೀವು ಸಿಕ್ಕಿಂನ ಲಾಚೆನ್ ಮತ್ತು ತಾಂಗು ಕಣಿವೆಗಳ ಕಡೆ ಹೋದರೆ ಭೂಲೋಕದ ಸ್ವರ್ಗ ಪ್ರವೇಶಿಸಿದ ಹಾಗೆ. ಸಮುದ್ರ ಮಟ್ಟಕ್ಕಿಂತ ಬಹಳ ಎತ್ತರದಲ್ಲಿರುವ ಅರುಣಾಚಲ ಪ್ರದೇಶದ ತವಾಂಗ್ ಮತ್ತು ಪಶ್ಚಿಮ ಕೆಮೆಂಗ್ ಜಿಲ್ಲೆಗಳ ನಡುವಿನ ಸೆಲಾ ಪಾಸ್ ನೋಡುವುದು ಬದುಕಿನ ಒಂದು ಅನಿರ್ವಚನೀಯ ಅನುಭವ.

ಹಾಗೆ ನೋಡಿದರೆ ಸೋನ್ ಮಾರ್ಗ್ ಬೇಸಿಗೆಯಲ್ಲಿ ಹೋಗಬಹುದಾದ ಅತ್ಯುತ್ತಮ ಡೆಸ್ಟಿನೇಷನ್ ಅಂತ ಕರೆಯುತ್ತಾರೆ. ಆದರೆ, ಚಳಿಗಾಲದಲ್ಲೂ ಇದು ನಯನ ಮನೋಹರವಾಗಿರುತ್ತದೆ.

TV9 Kannada


Leave a Reply

Your email address will not be published. Required fields are marked *