ಚಾಮರಾಜನಗರ: ಆಕ್ಸಿಜನ್ ಕೊರತೆಯಿಂದ ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ 24 ಮಂದಿ ಸಾವನ್ನಪ್ಪಿದ ಕೊರೊನಾ ರೋಗಿಗಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸೂಚನೆ ಮೇರೆಗೆ ಜಿಲ್ಲಾಸ್ಪತ್ರೆ, ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಐದು ಸರ್ಕಾರಿ ಕಚೇರಿಯಗಳಲ್ಲಿ ದಾಖಲೆಗಳನ್ನು ಸೀಜ್ ಮಾಡಲಾಗಿದೆ.

ಚಾಮರಾಜನಗರ ಜಿಲ್ಲಾಸ್ಪತ್ರೆ, ಜಿಲ್ಲಾಧಿಕಾರಿ ಕಚೇರಿ, ಡಿಎಚ್ಓ ಕಚೇರಿ, ಸರ್ಕಾರಿ ವೈದ್ಯಕೀಯ ಕಾಲೇಜು, ಡೀನ್ ಕಚೇರಿ ಸೇರಿದಂತೆ ಐದು ಸ್ಥಳಗಳಲ್ಲಿ ಡಿವೈಎಸ್​​​ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ನೇತೃತ್ವದಲ್ಲಿ ದಾಳಿ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಸಂದರ್ಭದಲ್ಲಿ ವಿಡಿಯೋ ಚಿತ್ರೀಕರಣವನ್ನು ಮಾಡಲಾಗಿದೆ.

ಇಂದು ಬೆಳಗ್ಗೆ ದುರಂತಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹೈ ಕೋರ್ಟ್​​, ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಲು ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಅಲ್ಲದೇ ನ್ಯಾಯಾಮೂರ್ತಿ ಓಕಾ ಅವರು, ದಾಖಲೆಗಳನ್ನು ಸೀಜ್ ಮಾಡುವಂತೆ ಆದೇಶ ನೀಡಿದ್ದರು.

ಸದ್ಯ ವಶಕ್ಕೆ ಪಡೆಯಲಾಗಿರುವ ದಾಖಲೆಯನ್ನು ನ್ಯಾ.ಎ.ಎನ್.ವೇಣುಗೋಪಾಲಗೌಡ ನೇತೃತ್ವದ ಕಾನೂನು ಸೇವೆಗಳ ಪ್ರಾಧಿಕಾರದ ಸಮಿತಿಯಿಂದ ಪರಿಶೀಲನೆ ನಡೆಯಲಿದ್ದು, ಸರ್ಕಾರ ಸಮಿತಿಗೆ ಅಗತ್ಯ ಸಹಕಾರ ನೀಡಬೇಕು. ಸತ್ಯಶೋಧನೆ ನಡೆಸಿ ಸಮಿತಿ ಹೈಕೋರ್ಟ್​​ಗೆ ವರದಿ ಸಲ್ಲಿಸಬೇಕು. ಇಂತಹ ಘಟನೆಗಳು ರಾಜ್ಯದಲ್ಲಿ ಮರುಕಳಿಸಬಾರದು ಎಂದು ಸೂಚನೆ ನೀಡಿದೆ. ಅಲ್ಲದೇ ಮೇ.10 ರಂದು ವರದಿ ಸಲ್ಲಿಸಲು ಸಮಿತಿಗೆ ಸೂಚನೆ ಸಿಜೆ ಎ.ಎಸ್.ಒಕಾ, ನ್ಯಾ.ಅರವಿಂದ ಕುಮಾರ್ ಅವರ ಪೀಠ ಆದೇಶ ನೀಡಿದೆ.

The post ಚಾಮರಾಜನಗರ​ ದುರಂತ; ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾಸ್ಪತ್ರೆ ಸೇರಿ 5 ಸ್ಥಳಗಳಲ್ಲಿ ದಾಖಲೆ ಸೀಜ್ appeared first on News First Kannada.

Source: newsfirstlive.com

Source link