ಬೆಂಗಳೂರು: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ದುರಂತ ಪ್ರಕರಣ ಸಂಬಂಧಿಸಿ ಮೃತರ ಕುಟುಂಬಸ್ಥರಿಗೆ ಪರಿಹಾರ ನೀಡಲು ಆದೇಶ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ವರದಿ ನೀಡಿದೆ.

ನಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠದಲ್ಲಿ ನಡೆದ ವಿಚಾರಣೆಯಲ್ಲಿ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ 24 ಕುಟುಂಬಗಳಿಗೆ ಪರಿಹಾರವಾಗಿ 13 ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ನೀಡಬೇಕೆಂದು ಹೈಕೋರ್ಟ್​ ಆದೇಶ ನೀಡಿತ್ತು. ಈ 13 ಮಂದಿ ಕುಟುಂಬಕ್ಕೆ ಹಿಂದೆ ತಲಾ 2 ಲಕ್ಷ ಮಧ್ಯಂತರ ಪರಿಹಾರ ನೀಡಲಾಗಿದೆ. ಇದೀಗ ಹೈಕೋರ್ಟ್ ಸೂಚನೆಯಂತೆ 3 ಲಕ್ಷ ಸೇರಿಸಿ ಒಟ್ಟು 5 ಲಕ್ಷ ರೂಪಾಯಿ ಪರಿಹಾರ ನೀಡಲು ಸರ್ಕಾರ ಆದೇಶ ಹೊರಡಿಸಿದೆ.

ಇದನ್ನೂ ಓದಿ : ಚಾಮರಾಜನಗರ ಆಕ್ಸಿಜನ್​​ ದುರಂತ; ಮೃತರ ಕುಟುಂಬಗಳಿಗೆ ತಲಾ ₹2 ಲಕ್ಷ ಪರಿಹಾರ

ಇನ್ನುಳಿದ 11 ಮಂದಿ ಮೃತರು ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ್ದಾರೆಯೇ ಎಂಬುವದರ ಕುರಿತು ನಿಖರವಾದ ಪುರಾವೆಗಳಿಲ್ಲ. ಮತ್ತು ಅವರ ಸಾವಿಗೆ ನಿಖರವಾದ ಕಾರಣ ತಿಳಿದಿಲ್ಲ. ಈ ಕುರಿತು ನ್ಯಾ. ಬಿ.ಎ ಪಾಟೀಲ್ ಅವರ ಸಮಿತಿ ಪ್ರಕರಣದ ತನಿಖೆ ನಡೆಸುತ್ತಿದ್ದು, ಸಮಿತಿ ವರದಿ ಬಳಿಕ 11 ಮಂದಿ ಮೃತರ ಕುಟುಂಬಗಳಿಗೆ ಪರಿಹಾರ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಸರ್ಕಾರದ ಪರ ವಕೀಲರು ಮಾಹಿತಿ ನೀಡಿದ್ದಾರೆ. ವಕೀಲರ ಹೇಳಿಕೆ ದಾಖಲಿಸಿಕೊಂಡ ಪೀಠ ವಿಚಾರಣೆಯನ್ನು ಮುಂದೂಡಿದೆ.

ಪ್ರಕರಣದ ಹಿನ್ನೆಲೆ:
ಚಾಮರಾಜನಗರ ದುರಂತದಲ್ಲಿ ಮೃತರ ಕುಟುಂಬಗಳಿಗೆ ಪರಿಹಾರ ಕೋರಿ ಸಲ್ಲಿಸಿದ್ದ ಅರ್ಜಿ ಪರಿಗಣಿಸಿ, ಸರ್ಕಾರ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ಪರಿಹಾರ ನೀಡಿತ್ತು. ಆದರೆ ಡೆತ್ ಆಡಿಟ್ ರಿಪೋರ್ಟ್ ಆಧರಿಸಿ ಮೃತರ ಕುಟುಂಬಗಳಿಗೆ 2 ಲಕ್ಷ ಪರಿಹಾರ ನೀಡಿದ್ದು ಕಡಿಮೆಯಾಯಿತು ಎಂದು ಹೈಕೋರ್ಟ್ ಆಕ್ಷೇಪಿಸಿತ್ತು.

ನಂತರ ರಾಜ್ಯ ಸರ್ಕಾರ ಪರಿಹಾರವನ್ನ ಹೆಚ್ಚಿಸಿತ್ತು. ಆದರೆ ಪರಿಹಾರ ಮೊತ್ತದಲ್ಲಿ ಏರುಪೇರು ಉಂಟಾಗಿತ್ತು. ಚಿಕಿತ್ಸೆ ವೇಳೆ ಆಕ್ಸಿಜನ್ ಸಿಗದೆ ಸಾವನ್ನಪ್ಪಿದ ಮೂವರ ಕುಟುಂಬಕ್ಕೆ 5 ಲಕ್ಷ, ಆಕ್ಸಿಜನ್ ಸಿಕ್ಕ ಬಳಿಕ ಸಾವನ್ನಪ್ಪಿದವರ ಕುಟುಂಬಕ್ಕೆ 4 ಲಕ್ಷ ನಿಗದಿ ಮಾಡಿತ್ತು.

The post ಚಾಮರಾಜನಗರ ಆಕ್ಸಿಜನ್ ದುರಂತ; ಹೈಕೋರ್ಟ್​​ಗೆ ಪರಿಹಾರ ಕಾರ್ಯದ ಬಗ್ಗೆ ವರದಿ ಸಲ್ಲಿಕೆ appeared first on News First Kannada.

Source: newsfirstlive.com

Source link