ಮೈಸೂರು: ಚಾಮುಂಡಿ ಬೆಟ್ಟದ ಭೂ ವಿವಾದಕ್ಕೆ ಮೆಗಾ ಟ್ವಿಸ್ಟ್ ಸಿಕ್ಕಿದೆ. ಚಾಮುಂಡಿಬೆಟ್ಟದ ಪಾದದ ಸಾವಿರಾರು ಎಕರೆ ಭೂಮಿಯನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುವ ರಾಜ್ಯ ಸರ್ಕಾರದ ಯತ್ನಕ್ಕೆ ಸುಪ್ರೀಂಕೋರ್ಟ್ ಬಿಗ್ ಶಾಕ್ ನೀಡಿದೆ. ಈ ಮೂಲಕ ಕಾನೂನು ಹೋರಾಟದಲ್ಲಿ ಮೈಸೂರು ಮನೆತನಕ್ಕೆ ಜಯ ಸಿಕ್ಕಿದ್ದು, ರಾಜ್ಯ ಸರ್ಕಾರಕ್ಕೆ ಹಿನ್ನೆಡೆಯಾಗಿದೆ.
ರಾಜ್ಯ ಸರ್ಕಾರದ ಮೇಲ್ಮನವಿ ತಿರಸ್ಕೃತಗೊಳಿಸಿದ ಸುಪ್ರೀಂ..
ಮೈಸೂರಿನ ಚಾಮುಂಡಿಬೆಟ್ಟದ ಪಾದದ ಭೂ ವಿವಾದ ಹೊಸ ತಿರುವು ಪಡೆದಿದೆ. ಮೈಸೂರಿನ ಕುರುಬಾರಹಳ್ಳಿ, ಆಲನಹಳ್ಳಿ, ಚೌಡಳ್ಳಿಯ 1,536 ಎಕರೆ ಭೂಮಿ ತಮಗೆ ಸೇರಿದೆ ಎಂದು ರಾಜಮನೆತನದವರು ವಾದಿಸಿದ್ರೆ, ಇದು ಸರ್ಕಾರದ ಆಸ್ತಿ ಎಂದು ರಾಜ್ಯ ಸರ್ಕಾರ ವಾದಿಸಿತ್ತು. ಈ ಸಂಬಂಧ ಹತ್ತಾರು ವರ್ಷಗಳಿಂದ ನಡೆದ ಕೋರ್ಟ್ ವ್ಯಾಜ್ಯದಲ್ಲಿ ರಾಜಮನೆತನದ ಪರವಾಗಿ ನೀಡಿದ ಕೆಳ ನ್ಯಾಯಾಲಯ ತೀರ್ಪನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಕೂಡಲೆ ರಾಜಮನೆತನದವರಿಗೆ ಖಾತೆ ಕಂದಾಯ ಮಾಡಿಕೊಡುವಂತೆ ಹೈಕೋರ್ಟ್ ಆದೇಶ ನೀಡಿತ್ತು. ರಾಜ್ಯ ಸರ್ಕಾರ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿತ್ತು.
ಫಲಿಸಲಿಲ್ಲ ರಾಜ್ಯ ಸರ್ಕಾರದ ಪ್ರತಿವಾದ..
ರಾಜ್ಯ ಸರ್ಕಾರದ ಅರ್ಜಿ ಕುರಿತಂತೆ ಸುಪ್ರೀಂಕೋರ್ಟ್ ನ ದ್ವಿಸದಸ್ಯ ಪೀಠ ವಾದ ಪ್ರತಿವಾದ ಆಲಿಸಿ ರಾಜಮನೆತನದರ ಪರವಾಗಿ ನವೆಂಬರ್ 23 ರಂದು ತೀರ್ಪು ನೀಡಿದೆ. ಈಗ ರಾಜ್ಯ ಸರ್ಕಾರ ರಾಜಮನೆತನದವರಿಗೆ ಅನಿವಾರ್ಯವಾಗಿ ಖಾತೆ ಕಂದಾಯ ಮಾಡಿಕೊಡಬೇಕಿದೆ.
ರಾಜ್ಯ ಮನೆತನದಕ್ಕೆ ಜಯ, ರಾಜ್ಯ ಸರ್ಕಾರಕ್ಕೆ ಅಪಜಯ
ಇದೇ ವೇಳೆ ಖಾತೆ ಕಂದಾಯ ಮಾಡಿಕೊಡದ ಸರ್ಕಾರದ ನಿರ್ಲಕ್ಷ್ಯತೆ ವಿರುದ್ಧ ರಾಜಮನೆತನದರು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ಡಿಸೆಂಬರ್ 7 ರಂದು ನಡೆಯಲಿದೆ. ಒಂದು ವೇಳೆ ಸುಪ್ರೀಂಕೋರ್ಟ್ ತೀರ್ಪು ಪಾಲಿಸದಿದ್ದರೆ ಜಿಲ್ಲಾಧಿಕಾರಿ ಮತ್ತು ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸಂಕಷ್ಟ ಎದುರಾಗುತ್ತದೆ. ಆದರೆ ಈಗ ರಾಜ್ಯ ಸರ್ಕಾರ ಮುಂದಿನ ಯಾವ ಹೆಜ್ಜೆ ಇಡುತ್ತದೆ ಎಂಬುವುದು ಕುತೂಹಲದ ಪ್ರಶ್ನೆಯಾಗಿದೆ.
ವಿಶೇಷ ಬರಹ: ಹೆಬ್ಬಾಕ ತಿಮ್ಮೇಗೌಡ, ನ್ಯೂಸ್ಫಸ್ಟ್, ಮೈಸೂರು.