– ಮಂಗಳೂರಿನಿಂದ 100 ಬೈಕಲ್ಲಿ ಪ್ರವಾಸಕ್ಕೆ ಬಂದಿದ್ದ ಯುವಕರು

ಚಿಕ್ಕಮಗಳೂರು: ವೀಕ್ ಎಂಡ್ ಆಗಿರುವುದರಿಂದ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಆದರೆ ಹೀಗೆ ಬಂದ ಪ್ರವಾಸಿಗರು ರಸ್ತೆ ಮಧ್ಯೆಯೇ ವಾಹನ ನಿಲ್ಲಿಸಿಕೊಂಡು ಡ್ಯಾನ್ ಮಾಡಿ ಇತರೆ ಪ್ರವಾಸಿಗರು ಹಾಗೂ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡಿರುವ ಘಟನೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ನಡೆದಿದೆ.

ಚಾರ್ಮಾಡಿ ಘಾಟಿಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳಕ್ಕೆ ಬರುವ ರಾಜ್ಯದ ಮೂಲೆ-ಮೂಲೆಯ ಪ್ರವಾಸಿಗರೇ ಹೆಚ್ಚು. ಆದರೆ ಹೀಗೆ ಬಂದ ಪ್ರವಾಸಿಗರು ಚಾರ್ಮಾಡಿ ಘಾಟಿಯ ರಸ್ತೆಯಲ್ಲಿ ಅಲ್ಲಲ್ಲೇ ಸೃಷ್ಟಿಯಾಗಿರೋ ಜಲಪಾತಗಳ ಬಳಿ ರಸ್ತೆ ಮಧ್ಯೆಯೇ ವಾಹನಗಳನ್ನು ನಿಲ್ಲಿಸಿಕೊಂಡು ಡ್ಯಾನ್ಸ್ ಮಾಡಿದ್ದಾರೆ. ಇದು ಬೇರೆ ಪ್ರವಾಸಿಗರಿಗೂ ಕಿರಿಕಿರಿ ಉಂಟುಮಾಡಿದೆ.

ಪ್ರವಾಸಿಗರು ಬೇಕಾಬಿಟ್ಟಿ ವಾಹನ ನಿಲ್ಲಿಸಿದ್ದರಿಂದ ಈ ಮಾರ್ಗದಲ್ಲಿ ಸಂಚರಿಸುವ ಇತರೇ ಪ್ರವಾಸಿಗರು, ವಾಹನಗಳಿಗೂ ತೊಂದರೆ ಉಂಟಾಗುತ್ತಿದೆ. ಇದು ಒಂದು-ಎರಡು ದಿನದ ಕತೆಯಲ್ಲ. ಈ ಮಾರ್ಗದಲ್ಲಿ ಮಳೆಗಾಲದಲ್ಲಿ ಪ್ರತಿದಿನ ಇದೇ ತೊಂದರೆ. ಪ್ರವಾಸಿಗರು ಚಾರ್ಮಾಡಿ ಘಾಟಿಯ ರಸ್ತೆ ಮಧ್ಯೆದಲ್ಲಿ ಅಲ್ಲಲ್ಲೇ ಸೃಷ್ಟಿಯಾಗಿರೋ ಜಲಪಾತಗಳ ಬಳಿ ರಸ್ತೆ ಮಧ್ಯದಲ್ಲೇ ನಿಂತು ಬೇಕಾದ ಭಂಗಿಯಲ್ಲಿ ಫೋಟೋ ಸೆಷನ್ ನಡೆಸುತ್ತಾರೆ. ತಿರುವುಗಳಲ್ಲಿ ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ದೊಡ್ಡ ಅನಾಹುತವಾಗುತ್ತದೆ.

ಕೆಲ ಹುಚ್ಚು ಪ್ರವಾಸಿಗರು ಚಾರ್ಮಾಡಿಯಲ್ಲಿ ಜಲಪಾತಗಳು ಬೀಳುವ ಜಾಗಕ್ಕೆ ಹೋಗಿ ಫೋಟೋ ತೆಗೆದುಕೊಳ್ಳಲು ಮುಂದಾಗುತ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಇಲ್ಲಿ ಸ್ವಲ್ಪ ಜಾರಿದರೂ ಕೈಕಾಲು ಮುರಿದುಕೊಳ್ಳುವುದು ಪಕ್ಕಾ. ಜೀವ ಹೋಗುವ ಸಾಧ್ಯತೆಯೂ ಇದೆ. ಈ ಹಿಂದೆ ಇಂತಹ ಹುಚ್ಚು ಸಾಹಸ ಮಾಡಲು ಹೋಗಿ ಜೀವ ಕಳೆದುಕೊಂಡವರೂ ಇದ್ದಾರೆ. ಹೀಗಾಗಿ ಇಲ್ಲಿಗೆ ಬರುವ ಪ್ರವಾಸಿಗರಿಗೆ ಸ್ಥಳಿಯರು ಯಾರು ಬಂಡೆ ಮೇಲೆ ಹತ್ತಬೇಡಿ, ರಸ್ತೆಯಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳಬೇಡಿ ಎಂದು ಮನವಿ ಮಾಡುತ್ತಿದ್ದಾರೆ. ಆದರೂ ಕೆಲ ಪ್ರವಾಸಿಗರು ಮಾತನ್ನು ಕೇಳುತ್ತಿಲ್ಲ.

ಈ ಭಾಗದಲ್ಲಿ ಪೊಲೀಸರನ್ನು ನೇಮಕ ಮಾಡಬೇಕು. ಪೊಲೀಸುರ ಗಸ್ತು ತಿರುಗುತ್ತಿದ್ದರೆ ಇಂತಹ ಅಪಾಯಕ್ಕೆ ಬ್ರೇಕ್ ಹಾಕಬಹುದು ಸ್ಥಳೀಯರು ಆಗ್ರಹಿಸಿದ್ದಾರೆ. ಮುಳ್ಳಯ್ಯನಗರಿಯಲ್ಲೂ ಇಂದು ಸಾವಿರಾರು ಪ್ರವಾಸಿಗರು ಜಮಾಯಿಸಿದ್ದರು. ಮಂಗಳೂರಿನಿಂದ 100 ಬೈಕಿನಲ್ಲಿ 100 ಜನ ಪ್ರವಾಸಿಗರು ಬಂದಿದ್ದರು. ಮುಳ್ಳಯ್ಯಗಿರಿಯೊಂದಕ್ಕೆ ಇಂದು 286 ಬೈಕ್, 706 ಕಾರುಗಳಲ್ಲಿ ಸಾವಿರಾರು ಪ್ರವಾಸಿಗರು ಭೇಟಿ ನೀಡಿ ಪ್ರಕೃತಿ ಮಡಿಲಲ್ಲಿ ನಿಂತು ಇಲ್ಲಿನ ಸೌಂದರ್ಯ ಕಂಡು ಪುಳಕಿತರಾಗಿದ್ದಾರೆ.

The post ಚಾರ್ಮಾಡಿಯಲ್ಲಿ ಎಲ್ಲೆಂದರಲ್ಲಿ ಪ್ರವಾಸಿಗರ ಡ್ಯಾನ್ಸ್- ವಾಹನ ಸವಾರರಿಗೆ ಕಿರಿಕಿರಿ appeared first on Public TV.

Source: publictv.in

Source link