ಚಿಕ್ಕಬಳ್ಳಾಪುರ: ನಗರಕ್ಕೆ ಹೊಂದಿಕೊಂಡಿರುವ ಕಂದವಾರ ಕೆರೆ ಬಳಿ ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ 8.10 ಕೋಟಿ ರೂ. ವೆಚ್ಚದಲ್ಲಿ ಕೆಆರ್‍ಎಸ್ ನ ಬೃಂದಾವನ ಮಾದರಿಯಲ್ಲಿಯೇ ಪರಿಸರ ಸ್ನೇಹಿ ಎಕೋ ಥೀಮ್ ಪಾರ್ಕ್ ನ್ನು ಸದ್ಯದಲ್ಲೇ ನಿರ್ಮಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಬಳಿಯ ಗೋಪಾಲಕೃಷ್ಣ ಅಮಾನಿಕೆರೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು. ಎಚ್‍ಎನ್ ವ್ಯಾಲಿ ನೀರಿನಿಂದ ಗೋಪಾಲಕೃಷ್ಣ ಅಮಾನಿಕರೆ ಭಾಗಶಹಃ ತುಂಬಿದ್ದು, ಜಿಲ್ಲಾಡಳಿತ ಭವನಕ್ಕೆ ಬಹಳ ಹತ್ತಿರವಿರುವುದರಿಂದ ಈ ಕೆರೆ ಅತಿ ಸುಂದರವಾಗಿ ಕಾಣುತ್ತದೆ. ಹೀಗಾಗಿ ಇದನ್ನು ಪ್ರವಾಸೋದ್ಯಮ ಕೇಂದ್ರವಾಗಿ ಪರಿವರ್ತಿಸಿದರೆ ಹೆಚ್ಚಿನ ಅನುಕೂಲವಾಗಲಿದೆ. ಅಲ್ಲದೆ ನಗರದ ಸೌಂದರ್ಯ ಹೆಚ್ಚಲು ಕಾರಣವಾಗಲಿದೆ ಈ ನಿಟ್ಟಿನಲ್ಲಿ ಕೆರೆಯ ಅಂದ ಹೆಚ್ಚಿಸಲು ಏನೇನು ಮಾಡಬಹುದು ಎಂಬುದರ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರ ಅಶಯದಂತೆ ಜಿಲ್ಲೇಯಲ್ಲಿ ಪ್ರಾವಾಸೊದ್ಯಮ ಕ್ಷೇತ್ರವನ್ನು ಅಭಿವೃದ್ಧಿಗೋಳಿಸಲು ಸರ್ಕಾರ ಒಲವು ತೊರಿದ್ದು, ಕಂದವಾರ ಕೆರೆ ಬಳಿ ಪರಿಸರ ಸ್ನೇಹಿ ಎಕೋ ಥೀಮ್ ಪಾರ್ಕ್ ನ್ನು ನಿರ್ಮಿಸಲು ಅನುಮತಿ ನೀಡಿದೆ. ಈ ಸಂಬಂಧ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಈಗಾಗಲೇ ಆರ್ಥಿಕ ಬಿಡ್ ನ್ನ ಸಹ ತೆರೆಯಲಾಗಿದೆ. ಪರಿಸರ ಸ್ನೇಹಿ ಈ ಉದ್ಯಾನವನ ಪ್ರವಾಸಿಗರ ಮನಸೆಳೆಯುವ ಹಲವು ವೈಶಿಷ್ಟ್ಯಗಳನ್ನೊಳಗೊಂಡ ವಿಶಿಷ್ಟ ಮಾದರಿಯ ಕಂದವಾರ ಎಕೋ ಥೀಮ್ ಪಾರ್ಕ್ ನಿರ್ಮಾಣವಾಗಲಿದೆ.

ಉದ್ಯಾನದಲ್ಲಿ ಏನೇನಿರಲಿದೆ?
ಈ ಉದ್ಯಾನವನದಲ್ಲಿ ಸಂಗೀತ ಕಾರಂಜಿ, ಸರಳ ಜಿಮ್, ಮಕ್ಕಳ ಆಟದ ಮೈದಾನ, ಹಿರಿಯ ನಾಗರಿಕರ ವಿಶ್ರಾಂತಿ ಧಾಮ, ಬೋಟಿಂಗ್, ಕಲಾಗ್ರಾಮದ ಮಳಿಗೆಗಳು, ಪಾದಚಾರಿ ಸೇತುವೆ, ಪಾರ್ಕಿಂಗ್ ವ್ಯವಸ್ಥೆ, ವನೌಷಧಿ ಸಸ್ಯಗಳ ಹರ್ಬಲ್ ಪ್ಲಾಂಟೇಶನ್ ಇತ್ಯಾದಿ ವಿಶೇಷ ಆಕರ್ಷಣೆಯೊಂದಿಗೆ ಪ್ರವಾಸಿಗರಿಗೆ ಮುದ ನೀಡಲಿದೆ. ಅತಿ ಶೀಘ್ರದಲ್ಲೇ ಈ ಉದ್ಯಾನವನದ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ ಎಂದರು.

ಎಚ್‍ಎನ್ ವ್ಯಾಲಿ ಮೂಲಕ ಜಿಲ್ಲೆಯ ಕೆರೆಗಳ ಅಂತರ್ಜಲ ಹೆಚ್ಚಿಸಲು ಕೆರೆಗಳನ್ನು ಸಂಸ್ಕರಿತ ನೀರಿನಿಂದ ತುಂಬಿಸುವ ಯೋಜನೆಯಡಿ 44 ಕೆರೆಗಳನ್ನು ಆಯ್ಕೆ ಮಾಡಿದ್ದು, ಈ ಪೈಕಿ ಸಣ್ಣ ನೀರಾವರಿಯ ಇಲಾಖೆ ವ್ಯಾಪ್ತಿಯಡಿ 32 ಕೆರೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅದರಲ್ಲಿ ಈ ವರೆಗೆ 17 ಕೆರೆಗಳಿಗೆ ಶೇ.30ರಷ್ಟು ನೀರು ಹರಿಸಿದ್ದು, 6 ಕೆರೆಗಳಿಗೆ ಶೇ.50ರಷ್ಟು ಹಾಗೂ 7 ಕೆರೆಗಳಿಗೆ ಶೇ.51 ರಿಂದ 99 ರಷ್ಟು ನೀರನ್ನು ತುಂಬಿಸಲಾಗಿದೆ. 2 ಕೆರೆಗಳನ್ನು ತುಂಬಿಸಬೇಕಾಗಿದೆ. ಅಲ್ಲದೆ ಈ ಯೊಜನೆಯಡಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 12 ಕೆರೆಗಳನ್ನು ಆಯ್ಕೆ ಮಾಡಿ ಅವುಗಳಲ್ಲಿ 6 ಕೆರಗಳಿಗೆ ಶೆ.30ರಷ್ಟು, ಶೇ.99ರಷ್ಟು 5 ಕೆರೆಗಳನ್ನು ತುಂಬಿಸಲಾಗಿದೆ. ಒಂದು ಕೆರೆಯನ್ನು ತುಂಬಿಸಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಡಾ.ಭಾಸ್ಕರ್ ಹಾಗೂ ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ನರೇಂದ್ರಬಾಬು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಹಾಜರಿದ್ದರು.

The post ಚಿಕ್ಕಬಳ್ಳಾಪುರದಲ್ಲಿ ಕೆಆರ್‌ಎಸ್‌ ಬೃಂದಾವನ ಮಾದರಿಯ ಎಕೋ ಥೀಮ್ ಪಾರ್ಕ್ appeared first on Public TV.

Source: publictv.in

Source link