ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಯಲ್ಲಂಪಲ್ಲಿ ಬಳಿ ಕೆಎಸ್ಆರ್ಟಿಸಿ ಬಸ್ ಒಂದು ಕೆರೆಗೆ ಉರುಳಿದ ದುರ್ಘಟನೆ ನಡೆದಿದೆ. ಅದೃಷ್ಟವಶಾತ್ ಬಸ್‌ನಲ್ಲಿದ್ದ 15 ಪ್ರಯಾಣಿಕರು ಗಂಭೀರ ಸಂಕಷ್ಟಕ್ಕೆ ಈಡಾಗದೆ ಪಾರಾಗಿದ್ದಾರೆ. ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಬಾಗೇಪಲ್ಲಿ ಡೀಪೋಗೆ ಸೇರಿರುವ ಈ ಬಸ್, ಬಾಗೇಪಲ್ಲಿಯಿಂದ ಚಿಂತಾಮಣಿ ನಗರಕ್ಕೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ. ಬಸ್ನ ಎಕ್ಸಲ್ ಕಟ್ ಆಗಿ ಕೆರೆಗೆ ಉರುಳಿ ಬಿದ್ದಿರುವ ಬಗ್ಗೆ ಹೇಳಲಾಗಿದೆ. ಬಸ್ನಲ್ಲಿ ಇದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಬಾಗೇಪಲ್ಲಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಸ್ ಕೆರೆಯಲ್ಲಿ ಕಡಿಮೆ ನೀರು ಇರುವ ಕಡೆ ಉರುಳಿ ಬಿದ್ದಿರುವ ಕಾರಣ ಯಾವುದೇ ಗಂಭೀರ ಅಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಆನೇಕಲ್: ಅಡುಗೆ ಸಿಲಿಂಡರ್ ಸ್ಫೋಟ, 7 ಜನರಿಗೆ ಗಾಯ
ಅಡುಗೆ ಸಿಲಿಂಡರ್ ಸ್ಫೋಟವಾಗಿ, 7 ಜನರಿಗೆ ಗಾಯವಾದ ದುರ್ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿಯ ಮನೆಯಲ್ಲಿ ನಡೆದಿದೆ. ಸಿಲಿಂಡರ್ ಸ್ಫೋಟಗೊಂಡು ಮನೆ ಹೊತ್ತಿ ಉರಿದಿದೆ. ಮನೆಯಲ್ಲಿ ಬಾಡಿಗೆಗಿದ್ದ ಕಾರ್ಮಿಕರಾದ ಪ್ರಕಾಶ್, ಜಗದೀಶ್, ಕಾಡು, ಜೈಮುಲ್, ಮಂಜುಗೆ ಗಾಯವಾಗಿದೆ. ಗಾಯಾಳುಗಳಿಗೆ ಜಿಗಣಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉತ್ತರ ಭಾರತ ಮೂಲದ ಏಳು ಜನ ಮಂಜುನಾಥ್ ರೆಡ್ಡಿ ಎಂಬುವವರ ಮನೆಯಲ್ಲಿ ಬಾಡಿಗೆಗೆ ಇದ್ದರು ಎಂದು ತಿಳಿದುಬಂದಿದೆ. ಮನೆಯಲ್ಲಿ 15 ಕೆಜಿ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಥಳಕ್ಕೆ ಜಿಗಣಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಕಾರವಾರ: ಅರಬ್ಬಿ ಸಮುದ್ರದಲ್ಲಿ ಬೋಟ್‌ಗೆ ಬೆಂಕಿ
ಕಾರವಾರ ಬಳಿ ಅರಬ್ಬಿ ಸಮುದ್ರದಲ್ಲಿ ಬೋಟ್‌ಗೆ ಬೆಂಕಿ ಬಿದ್ದ ಘಟನೆ ಸಂಭವಿಸಿದೆ. ಬೆಂಕಿ ಬಿದ್ದ ಬೋಟ್‌ನಲ್ಲಿದ್ದ 7 ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. ಭಾರತೀಯ ಕರಾವಳಿ ಪಡೆಯಿಂದ ರಕ್ಷಣೆ ಕಾರ್ಯ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ವರದ ವಿನಾಯಕ ಹೆಸರಿನ ಮೀನುಗಾರಿಕೆ ಬೋಟ್ನಲ್ಲಿ ಅವಘಡ ಸಂಭವಿಸಿದೆ.
ಇದನ್ನೂ ಓದಿ: ಶಿವಮೊಗ್ಗ: ಬೈಕ್- ಕೆಎಸ್ಆರ್ಟಿಸಿ ನಡುವೆ ಅಪಘಾತ; ಇಬ್ಬರು ಸವಾರರು ಸ್ಥಳದಲ್ಲೇ ದುರ್ಮರಣ
ಇದನ್ನೂ ಓದಿ: Puneeth Rajkumar: ಮುಂದುವರಿದ ಅಪ್ಪು ಅಭಿಮಾನಿಗಳ ಸಾವಿನ ಸರಣಿ; ಮತ್ತೆ ಇಬ್ಬರು ನಿಧನ