ಚಿಕ್ಕಬಳ್ಳಾಪುರ: ಗುಡಿಬಂಡೆ ಪಟ್ಟಣ ಪಂಚಾಯತ್​ನಲ್ಲಿ ಆಪರೇಷನ್ ಕಮಲ ಘಟನೆ ಖಂಡಿಸಿ ಬೃಹತ್ ಪ್ರತಿಭಟನೆಗೆ ತೀರ್ಮಾನ | Congress MLA SN Subbareddy plans protest against BJP Operation Kamala in Gudibande Panchayat


ಚಿಕ್ಕಬಳ್ಳಾಪುರ: ಗುಡಿಬಂಡೆ ಪಟ್ಟಣ ಪಂಚಾಯತ್​ನಲ್ಲಿ ಆಪರೇಷನ್ ಕಮಲ ಘಟನೆ ಖಂಡಿಸಿ ಬೃಹತ್ ಪ್ರತಿಭಟನೆಗೆ ತೀರ್ಮಾನ

ಪಟ್ಟಣ ಪಂಚಾಯತ್​​ನಲ್ಲಿ ಆಪರೇಷನ್ ಕಮಲ ವಿರುದ್ಧ ನಡೆದ ಪ್ರತಿಭಟನೆ

ಚಿಕ್ಕಬಳ್ಳಾಪುರ: ಜಿಲ್ಲೆಯ ಗುಡಿಬಂಡೆ ಪಟ್ಟಣ ಪಂಚಾಯತ್​ನಲ್ಲಿ ಆಪರೇಷನ್​ ಕಮಲ ಘಟನೆಯನ್ನು ಖಂಡಿಸಿ ಬೃಹತ್ ಪ್ರತಿಭಟನೆಗೆ ತೀರ್ಮಾನ ಮಾಡಲಾಗಿದೆ. ಬಾಗೇಪಲ್ಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆಗೆ ಸಿದ್ಧತೆ ನಡೆಸಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿಯಲ್ಲಿ ಈ ಬಗ್ಗೆ ‘ಕೈ’ ಕಾರ್ಯಕರ್ತರು ಸಭೆ ನಡೆಸಿದ್ದಾರೆ.

ಪಟ್ಟಣ ಪಂಚಾಯತ್​ ಚುನಾವಣೆ ವೇಳೆ ಎಸ್.ಎನ್. ಸುಬ್ಬಾರೆಡ್ಡಿಗೆ ಅಗೌರವ ತೋರಲಾಗಿದೆ ಎಂದು ಚಿಕ್ಕಬಳ್ಳಾಪುರ ಸಿಪಿಐ ಪ್ರಶಾಂತ್​ ಅಮಾನತುಗೊಳಿಸಲು ಆಗ್ರಹ ವ್ಯಕ್ತವಾಗಿದೆ. ಸುಬ್ಬಾರೆಡ್ಡಿ ನೇತೃತ್ವದ ಸಭೆಗೆ ಡಿವೈಎಸ್​ಪಿ ವಾಸುದೇವ್​ ಆಗಮಿಸಿದ್ದಾರೆ. ಸಭೆಗೆ ಪೊಲೀಸರು​ ಆಗಮಿಸುತ್ತಿದ್ದಂತೆ ಕಾರ್ಯಕರ್ತರ ಆಕ್ರೋಶ ಹೆಚ್ಚಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರ ವಿರುದ್ದ ಆಕ್ರೋಶ ಹೊರಹಾಕುತ್ತಿದ್ದಾರೆ.

ನಡೆದ ಘಟನೆ ಏನು?
ಗುಡಿಬಂಡೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಹಿನ್ನೆಲೆಯಲ್ಲಿ ವಾಮಮಾರ್ಗದ ಮೂಲಕ ಬಿಜೆಪಿ ಅಧಿಕಾರ ಹಿಡಿಯಲು ಯತ್ನಿಸಿದೆ ಎಂಬ ಆರೋಪ ಕೇಳಿ ಬಂದಿತ್ತು. ಸದಸ್ಯರೆ ಇಲ್ಲದ ಬಿಜೆಪಿ ಪಟ್ಟಣ ಪಂಚಾಯಿತಿಯಲ್ಲಿ ಅಧಿಕಾರ ಹಿಡಿಯಲು ಕಾಂಗ್ರೆಸ್ ಸದಸ್ಯರನ್ನು ಕಿಡ್ನಾಪ್ ಮಾಡಿ ಮತ ಪಡೆಯಲು ಯತ್ನಿಸುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಸದ್ಯ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಪಟ್ಟಣದಲ್ಲಿ ಉದ್ದಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಆರೋಗ್ಯ ಹಾಗೂ ವೈದ್ಯಕೀಯ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಬಾಗೇಪಲ್ಲಿ ಗುಡಿಬಂಡೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಗುಡಿಬಂಡೆ ಪೊಲೀಸ್ ಠಾಣೆ ಎದುರು ಧರಣಿ ನಡೆಸಿದ್ದರು. ಪಟ್ಟಣ ಪಂಚಾಯಿತಿ ಕಾಂಗ್ರೆಸ್ ಸದಸ್ಯರನ್ನು ಕಿಡ್ನಾಪ್ ಮಾಡಿಸಿದ್ದಾರೆ ಎಂದು ಆರೋಪಿಸಿ ಸಾವಿರಾರು ಜನ ಬೆಂಬಲಿಗರ ಜೊತೆ ಶಾಸಕ ಸುಬ್ಬಾರೆಡ್ಡಿ ಪ್ರತಿಭಟನೆ ನಡೆಸುತ್ತಿದ್ದರು. ವಾಮ ಮಾರ್ಗದ ಮೂಲಕ ಬಿಜೆಪಿ ಅಧಿಕಾರ ಹಿಡಿಯಲು ಯತ್ನಿಸುತ್ತಿದೆ. ಗುಡಿಬಂಡೆ ಪಟ್ಟಣ ಪಂಚಾಯಿತಿಯಲ್ಲಿ ಸಚಿವ ಡಾ.ಕೆ.ಸುಧಾಕರ ಸೂಚನೆ ಮೇರೆಗೆ ಆಪರೇಷನ್ ಕಮಲ ನಡೆಯುತ್ತಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಆರೋಪಿಸಿದ್ದರು.

ಇನ್ನು ಆಕ್ರೋಶಗೊಂಡ ಬೆಂಬಲಿಗರು ಮತದಾನ ಕೇಂದ್ರಕ್ಕೆ ನುಗ್ಗಲು ಯತ್ನಿಸಿದ್ದು ಪೊಲೀಸರು ಹಾಗೂ ಶಾಸಕ ಮತ್ತು ಅವರ ಬೆಂಬಲಿಗರ ನಡುವೆ ತೀವ್ರ ವಾಗ್ವಾದ ಸಂಭವಿಸಿತ್ತು. ನೂಕು ನುಗ್ಗಲು ವೇಳೆ ಪೊಲೀಸ್ ಪೇದೆಗೆ ಗಾಯವಾಗಿದೆ. ಅಲ್ಲದೆ ಚಿಕ್ಕಬಳ್ಳಾಪುರ ಇನ್ಸ್ ಪೆಕ್ಟರ್ ಪ್ರಶಾಂತ್, ಶಾಸಕರ ಕಾಲರ್​ಗೆ ಕೈಹಾಕಿದ ಆರೋಪ ಕೇಳಿ ಬಂದಿತ್ತು. ಸಚಿವ ಸುಧಾಕರ್ ಸೂಚನೆ ಮೆರೆಗೆ ಅಧಿಕಾರಿಗಳು ಅಧಿಕಾರ ದುರ್ಬಳಕೆ ಮಾಡುತ್ತಿದ್ದಾರೆ. ಕಿಡ್ನಾಪ್ ಆದ ಕಾಂಗ್ರೆಸ್ ಸದಸ್ಯರನ್ನು ಸ್ಥಳಕ್ಕೆ ಕರಿಸುವಂತೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಬೆಂಬಲಿಗರು ಪಟ್ಟು ಹಿಡಿದಿದ್ದು ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಇದನ್ನೂ ಓದಿ: ಗುಡಿಬಂಡೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ; ಕಾಂಗ್ರೆಸ್ ಸದಸ್ಯರ ಕಿಡ್ನಾಪ್ ಆರೋಪ, ಶಾಸಕ ಎಸ್​ಎನ್​ ಸುಬ್ಬಾರೆಡ್ಡಿ ಧರಣಿ

ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಜೇಬುಗಳ್ಳನ ಕೈ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿಸಿದ ರೈತರು!

TV9 Kannada


Leave a Reply

Your email address will not be published.