ಚಿಕ್ಕಮಗಳೂರು: ಅಕ್ರಮವಾಗಿ ಕಡವೆ ಬೇಟೆಯಾಡಿದ ಆರೋಪದ ಮೇಲೆ ಐವರನ್ನ ಬಂಧಿಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಮುತ್ತೋಡೆ ಅರಣ್ಯ ವಲಯದ ಮೇಲಿನ ಹುಲುವತ್ತಿ ಗ್ರಾಮದಲ್ಲಿ ನಡೆದಿದೆ.

ಮೇಲಿನ ಹುಲುವತ್ತಿ ಗ್ರಾಮದ ಮಂಜುನಾಥ ಗೌಡರ ಕಾಫಿತೋಟದಲ್ಲಿ ಬೇಟೆಗಾರರು ಅಕ್ರಮವಾಗಿ ಕಡವೆಯನ್ನ ಶಿಕಾರಿ ಮಾಡಿದ್ದರು. ಬಂಧಿತರಿಂದ ಕಡವೆ ಮಾಂಸ, ಕಾಲು, ಮೂಳೆ, ಮಾಂಸ ಬೇಯಿಸಲು ಬಳಸಿದ್ದ ಪಾತ್ರೆ ಹಾಗೂ ಬೇಟೆಗೆ ಬಳಸಿದ ಆಯುಧಗಳನ್ನ ವಶಕ್ಕೆ ಪಡೆದಿದ್ದಾರೆ. ಬಂಧಿತರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಮುತ್ತೋಡಿ ಪ್ರಾದೇಶಿಕ ಅರಣ್ಯ ವಲಯ ಮಲ್ಲಂದೂರು ಅರಣ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ತೋಟದ ರೈಟರ್ ಗಣೇಶ್, ಹುಲ್ಲುವತಿ ಗ್ರಾಮದ ಉಮೇಶ್, ಬಸಯ್ಯ, ಕೃಷ್ಣಪ್ಪ ಹಾಗೂ ಕಲ್ಲೇಶ್ ಬಂಧಿತ ಆರೋಪಿಗಳು. ಕಾರ್ಯಚರಣೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮುದ್ದಣ, ವಲಯ ಅರಣ್ಯಾಧಿಕಾರಿ ಕಿರಣ್ ಕರ್ತಂಗಿ, ವನ್ಯಜೀವಿ ಪರಿಪಾಲಕ ವೀರೇಶ್, ಉಪ ವಲಯ ಅರಣ್ಯಾಧಿಕಾರಿಗಳಾದ ವಿಶ್ವನಾಥ್, ಯಾಸೀನ್, ನಾಗರಾಜ್ ಅರಣ್ಯ ರಕ್ಷಕರಾದ ಪ್ರವೀಣ್, ಮಲ್ಲಿಕಾರ್ಜುನ್ ಹಾಗೂ ವಾಹನ ಚಾಲಕರಾದ ಅಣ್ಣಪ, ಅನ್ಸಾರ್, ಮಂಜುನಾಥ್ ಇದ್ದರು.

ಭದ್ರಾ ವನ್ಯಜೀವಿ ವಿಭಾಗದ ಪಶುವೈದ್ಯಾಧಿಕಾರಿ ಯಶಸ್ ಪಡೆಯರ್ ಕಳೆಬರಹವನ್ನ ಪರೀಕ್ಷಿಸಿದರು. ಬಂಧಿತರನ್ನ ಕೋರ್ಟ್‍ಗೆ ಹಾಜರುಪಡಿಸಿದ್ದು, ಕೋವಿಡ್ ಕಾರಣದಿಂದ ಬೇಲ್ ಸಿಕ್ಕಿದೆ.

The post ಚಿಕ್ಕಮಗಳೂರಲ್ಲಿ ಕಡವೆ ಬೇಟೆಯಾಡಿದ ಐವರು ಅರೆಸ್ಟ್​​​​ appeared first on News First Kannada.

Source: newsfirstlive.com

Source link