ಚಿಕ್ಕಮಗಳೂರಿನ ಕೊರೆಯುವ ಚಳಿಯಲ್ಲಿ ಶಿಫಾನ್ ಸೀರೆ ಧರಿಸಿ ಹಾಡಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು ಅದ್ಭುತ ಅನುಭವ: ನಿಮಿಕಾ | Nimika Ratnakar says shooting for a song in bone chilling cold in Chikmagalur was an amazing experience


‘ರಾಮಧಾನ್ಯ’ ಮತ್ತು ‘ರವಿ ಚಂದ್ರ’ ಚಿತ್ರಗಳಲ್ಲಿ ನಟಿಸಿ ಸ್ಯಾಂಡಲ್​ವುಡ್​ ತಮ್ಮನ್ನು ಎಸ್ಟ್ಯಾಬ್ಲಿಷ್ ಮಾಡಿಕೊಳ್ಳುವ ಪ್ರಯತ್ನದಲ್ಲಿರುವ ಉದಯೋನ್ಮುಖ ನಟಿ ನಿಮಿಕಾ ರತ್ನಾಕರ್ ಗುರುವಾರ ಬೆಂಗಳೂರಲ್ಲಿ ನಡೆದ ‘ಸುಮನ್’ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಪಟಪಟನೆ ಮಾತಾಡಿ ಗಮನಸೆಳೆದರು. ಈ ಚಿತ್ರದಲ್ಲಿ ಅವರು ಧರ್ಮ ಕೀರ್ತಿರಾಜ್ ಅವರೊಂದಿಗೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಚಿತ್ರರಂಗದ ಜೊತೆ ಸಂಬಂಧ ಇಟ್ಟುಕೊಂಡವರಿಗೆಲ್ಲ ಕೋವಿಡ್-19 ಮಹಾಮಾರಿಯ ಬಗ್ಗೆ ತುಂಬಾನೆ ಬೇಸರವಿದೆ. ಕಳೆದೆರಡು ವರ್ಷಗಳಿಂದ ಕಾಡುತ್ತಿರುವ ಈ ಪಿಡುಗು ಮತ್ತೊಮ್ಮೆ ಸಿನಿಮಾ ಚಟುವಟಿಕೆಗಳ ಮೇಲೆ ತನ್ನ ಕರಾಳ ಪ್ರಭಾವ ಬೀರುವ ಲಕ್ಷಣಗಳು ಸ್ಪಷ್ಟವಾಗುತ್ತಿವೆ. ರಾಜ್ಯದಲ್ಲಿ ಕೋವಿಡ್ ಸೋಂಕಿನ ಕೇಸ್​ಗಳು ಭೀತಿ ಹುಟ್ಟಿಸುವ ರೀತಿಯಲ್ಲಿ ಹೆಚ್ಚುತ್ತಿವೆ.

ತನ್ನ ಮಾತಿನಲ್ಲಿ ನಿಮಿಕಾ ಮೊದಲು ಹೇಳಿದ್ದು ಅದನ್ನೇ.

ಎರಡು ವರ್ಷಗಳ ಬಳಿಕ ತಾನು ನಟಿಸಿರುವ ಚಿತ್ರವೊಂದು ಬಿಡುಗಡೆಯಾಗುವ ಹಂತದಲ್ಲಿದೆಯಾದರೂ ರಾಜ್ಯದಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಸುಮನ್ ಬಿಡುಗಡೆಯಾಗುವುದು ವಿಳಂಬಗೊಳ್ಳುತ್ತದೆಯೋ ಎಂಬ ಆತಂಕ ಕಾಡುತ್ತಿದೆ ಎಂದು ನಿಮಿಕಾ ಹೇಳಿದರು. ಕಾರ್ಯಕ್ರಮದಲ್ಲಿ ವೇದಿಕೆಯ ಮೇಲಿದ್ದ ನಿರ್ಮಾಪಕ, ನಿರ್ದೇಶಕ, ಕೊರಿಯೋಗ್ರಾಫರ್, ಸಂಗೀತ ನಿರ್ದೇಶಕ, ಗೀತ ರಚನೆಕಾರ, ಫೋಟೊಗ್ರಾಫರ್ ಮತ್ತು ಅಂತಿಮವಾಗಿ ಮಾಧ್ಯಮದವರಿಗೂ ನಿಮಿಕಾ ಥ್ಯಾಂಕ್ಸ್ ಹೇಳಿದರು.

ಅವರು ಅಚ್ಚ ಕನ್ನಡ ಮಾತಾಡಿದ್ದು ನಿಜವಾದರೂ ಉಚ್ಛಾರಣೆಯಲ್ಲಿ ಕೊಂಚ ಎಡವುತ್ತಿದ್ದರು. ಕೆಲ ಪದಗಳು ಬೇರೆ ಭಾಷೆಯ ನಟಿಯರು ಹೇಳಿದ ಹಾಗಿತ್ತು.

ಚಿಕ್ಕಮಗಳೂರಿನ ಕೊರೆಯುವ ಚಳಿಯಲ್ಲಿ ಸುಮನ್ ಚಿತ್ರದ ಒಂದು ಹಾಡನ್ನು ಚಿತ್ರೀಕರಿಸುವಾಗ ಆದ ಅನುಭವವನ್ನು ಅವರು ಸ್ವಾರಸ್ಯಕರವಾಗಿ ವಿವರಿಸಿದರು.
ಸಿನಿಮಾ ಹೀರೊ ಧರ್ಮ ಕೋಟು ಧರಿಸಿದ್ದರಂತೆ ಮತ್ತು ನಿರ್ದೇಶಕ ರವಿ ಸಾಗರ್ ತಲೆಗೆ ಬೆಚ್ಚನೆ ಟೋಪಿ ಹಾಕಿಕೊಂಡು ಮೈತುಂಬಾ ಕಂಬಳಿ ಹೊದ್ದು ಕೂತಿದ್ದರಂತೆ.

ಆದರೆ, ನಿಮಿಕಾಗೆ ಮಾತ್ರ ಒಂದು ತೆಳುವಾದ ಮತ್ತು ಮೈಗೆ ಅಂಟಿಕೊಳ್ಳುವಂಥ ಸೀರೆ ಮತ್ತು ಬೆನ್ನಿನ ಭಾಗ ಓಪನ್ ಆಗಿದ್ದ ರವಿಕೆ ನೀಡಿದ್ದರಂತೆ. ಚಳಿಗೆ ಮೈಯೆಲ್ಲ ನಡುಗುತ್ತಿದ್ದರೂ ನಿಮಿಕಾ ಹಾಡಿನ ಚಿತ್ರೀಕರಣ ಪೂರ್ತಿಗೊಳಿದರಂತೆ.

ಅಷ್ಟಾಗಿಯೂ ಆ ಅನುಭವ ಅದ್ಭುತವಾಗಿತ್ತು ಎಂದು ಅವರು ಹೇಳಿದರು.

TV9 Kannada


Leave a Reply

Your email address will not be published. Required fields are marked *