ಚಿಕ್ಕಮಗಳೂರು: ಸಿದ್ದರಾಮಯ್ಯ ಬೆಂಗಾವಾಲು ವಾಹನ ಅಪಘಾತ | Congress Leader Siddaramaiah Pilot Vehicle Accident in Chikmagalur


ಚಿಕ್ಕಮಗಳೂರು: ಸಿದ್ದರಾಮಯ್ಯ ಬೆಂಗಾವಾಲು ವಾಹನ ಅಪಘಾತ

ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನೆರವಾದರು.

ಚಿಕ್ಕಮಗಳೂರು: ನಗರದಲ್ಲಿ ಶುಕ್ರವಾರ  ಕಾಂಗ್ರೆಸ್ ಪಕ್ಷವು ಆಯೋಜಿಸಿದ್ದ ಗ್ರಾಮ ಸ್ವರಾಜ್ ಸಮಾವೇಶದ ನಂತರ ಶಿವಮೊಗ್ಗದತ್ತ ಹೊರಟಿದ್ದಾಗ ಸಿದ್ದರಾಮಯ್ಯ ಬೆಂಗಾವಲು ವಾಹನ ಅಪಘಾತಕ್ಕೀಡಾಗಿದೆ. ಚಿಕ್ಕಮಗಳೂರು ಸಮೀಪದ ಮಲ್ಲೇನಹಳ್ಳಿ ಬಳಿ ಘಟನೆ ನಡೆದಿದೆ. ನಗರದಲ್ಲಿ ಕಾರ್ಯಕ್ರಮ ಮುಗಿಸಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ಇತರ ನಾಯಕರು ಶಿವಮೊಗ್ಗಕ್ಕೆ ತೆರಳುತ್ತಿದ್ದಾಗ ಬೆಂಗಾವಲು ವಾಹನ ಅಪಘಾತಕ್ಕೀಡಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನೆರವಾದರು. ತಾಂತ್ರಿಕ ವೈಫಲ್ಯದಿಂದ ಸ್ಟೀರಿಂಗ್ ಜಾಮ್ ಆಗಿ ವಾಹನ ಚಾಲಕನ ನಿಯಂತ್ರಣ ಕಳೆದುಕೊಂಡು, ರಸ್ತೆಬದಿಯಲ್ಲಿದ್ದ ತೋಟಕ್ಕೆ ನುಗ್ಗಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ಜೆಡಿಎಸ್ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ
ಚಿಕ್ಕಮಗಳೂರಿನಲ್ಲಿ ನಡೆದ ಗ್ರಾಮ ಸ್ವರಾಜ್ಯ ಸಮಾವೇಶದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಜೆಡಿಎಸ್​ ಎಂಬುದನ್ನು ತೆಗೆದು ಜೆಡಿಎಫ್ ಎಂದು ಮಾಡಬೇಕು. ಜೆಡಿ ಫ್ಯಾಮಿಲಿ ಎಂದು ನಾಮಕರಣ ಮಾಡಿದ್ದರೆ ಸೂಕ್ತವಾಗುತ್ತಿತ್ತು ಎಂದು ಟೀಕಿಸಿದರು. ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಎಚ್.ಎಚ್.ದೇವರಾಜ್, ನಾಯಕರಾದ ಬಿ.ಎಚ್.ಹರೀಶ್, ಗೋಪಿಕೃಷ್ಣ ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಸಮಾವೇಶದ ನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೊಂದಿಗೆ ಮಾಧ್ಯಮಗೋಷ್ಠಿ ನಡೆಸಿದ ಸಿದ್ದರಾಮಯ್ಯ, ಬಿಜೆಪಿಯವರು ಜನ ಸ್ವರಾಜ್ಯ ಯಾತ್ರೆ ಆರಂಭಿಸಿದ್ದಾರೆ.‌ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದರೂ ಅವರು ಸ್ಥಳೀಯ ಸಂಸ್ಥೆಗಳ ಬಲವರ್ಧನೆ ಮಾಡಲಿಲ್ಲ. ಅಧಿಕಾರ ವಿಕೇಂದ್ರೀಕರಣದಲ್ಲಿ ಬಿಜೆಪಿಯವರಿಗೆ ನಂಬಿಕೆ ಇಲ್ಲ. ಆ ವ್ಯವಸ್ಥೆಯಲ್ಲಿ ಪ್ರಾಮಾಣಿಕವಾಗಿ ಕೆಲಸವನ್ನೂ ಮಾಡಲಿಲ್ಲ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ನಂಬಿಕೆ ಇದ್ದಿದ್ದರೆ ಜಿಲ್ಲಾ ಹಾಗೂ ತಾಲೂಕು ಪಂಚಾಯತಿ ಚುನಾವಣೆ ಮುಂದೂಡುತ್ತಿರಲಿಲ್ಲ. ಚುನಾವಣೆ ಮುಂದೂಡಲು ಒಂದು ಕಾನೂನು ಬೇರೆ ತಂದಿದ್ದಾರೆ. ಚುನಾವಣೆ ನಡೆಸುವ ವಿಚಾರದಲ್ಲಿ ಬಿಜೆಪಿಯವರಿಗೆ ಬದ್ಧತೆ ಇಲ್ಲ ಎಂದು ಟೀಕಿಸಿದರು.

ಮೋದಿಯವರು ಪ್ರಧಾನಿಯಾಗಿ ಎಂಟು ವರ್ಷಗಳಾದರೂ ಸ್ಥಳೀಯ ಸಂಸ್ಥೆಗಳಿಗೆ ಹಣಕಾಸು ಶಕ್ತಿ ತುಂಬಲಿಲ್ಲ. ಯಾವುದೇ ಕಾರ್ಯಕ್ರಮ ರೂಪಿಸಲಿಲ್ಲ. ಸಾಮಾಜಿಕ ನ್ಯಾಯ ಮತ್ತು ಅಧಿಕಾರ ವಿಕೇಂದ್ರೀಕರಣಕ್ಕೆ ವಿರುದ್ಧವಾಗಿರುವ ಬಿಜೆಪಿಯವರಿಗೆ ಜನ ಸ್ವರಾಜ್ಯ ಯಾತ್ರೆ ನಡೆಸಲು ನೈತಿಕ ಹಕ್ಕಿಲ್ಲ. ಪಂಚಾಯತ್ ರಾಜ್ ವ್ಯವಸ್ಥೆ, ಸಾಮಾಜಿಕ ನ್ಯಾಯದ ಬಗ್ಗೆ ಒಂದು ದಿನವೂ ಬಿಜೆಪಿ ನಾಯಕರು ಮಾತಾಡಿಲ್ಲ. ಅವರಿಗೆ ಆ ಕುರಿತು ಬದ್ಧತೆಯೇ ಇಲ್ಲ. ಇಂಥವರು ಗೆದ್ದು ಬಂದರೆ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ಏನೂ ಕೆಲಸ ಮಾಡುವುದಿಲ್ಲ ಎಂದು ಟೀಕಿಸಿದರು.

ಚಿಕ್ಕಮಗಳೂರು ಕ್ಷೇತ್ರದಿಂದ ಕಳೆದ ಬಾರಿ ವಿಧಾನ ಪರಿಷತ್​ಗೆ ಆಯ್ಕೆಯಾಗಿ ಹೋದ ಪ್ರಾಣೇಶ್ ಒಂದು ದಿನವೂ ಪಂಚಾಯತ್ ರಾಜ್ ವ್ಯವಸ್ಥೆ ಕುರಿತು ಮಾತಾಡಿಲ್ಲ. ಯಾವುದೇ ಪಂಚಾಯತಿಗೆ ಹೋಗಿಲ್ಲ. ಸ್ಥಳೀಯ ಸಂಸ್ಥೆಗಳಿಗೆ ಶಕ್ತಿ ಕೊಟ್ಟಿದ್ದರೆ ಅದು ಕಾಂಗ್ರೆಸ್. ರಾಜೀವ್ ಗಾಂಧಿಯವರು ಪಂಚಾಯತ್ ರಾಜ್ ಕಾಯಿದೆಗೆ ತಿದ್ದುಪಡಿ ತಂದರು. ನರಸಿಂಹರಾವ್ ಅವರು ಅದನ್ನು ಜಾರಿಗೊಳಿಸಿದರು. ರಾಜ್ಯ ಬಿಜೆಪಿ ಸರ್ಕಾರ ಮೂರೂವರೆ ವರ್ಷದಲ್ಲಿ ಬಡವರಿಗೆ ಒಂದೇ ಒಂದು ಮನೆ ಕೊಟ್ಟಿಲ್ಲ. ಕೊಟ್ಟಿದ್ದರೆ ಸಿ.ಟಿ. ರವಿ ಹೇಳಲಿ. ನಮ್ಮ ಅವಧಿಯಲ್ಲಿ‌ ಮಂಜೂರಾದ ಮನೆಗಳಿಗೆ ಎರಡನೇ ಕಂತಿನ ಅನುದಾನ ಬಿಡುಗಡೆ ಮಾಡಲಿಲ್ಲ ಎಂದರು.

ಮಳೆಯಿಂದಾಗಿ ಬೆಂಗಳೂರಿನ ರಸ್ತೆಗಳು ಹಾಳಾಗಿವೆ. ಈವರೆಗೆ ಒಂದು ಗುಂಡಿ ಮುಚ್ವಿಲ್ಲ, ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡವರಿಗೆ ಪರಿಹಾರ ಕೊಟ್ಟಿಲ್ಲ. ಈವರೆಗೆ ಬೆಳೆ ಹಾನಿ ಕುರಿತು ಸಮೀಕ್ಷೆ ಮಾಡಿಲ್ಲ. ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗುತ್ತಿಗೆದಾರರ ಸಂಘ ಪ್ರಧಾನಿಯವರಿಗೆ ಪತ್ರ ಬರೆದು ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದೆ. ಈ ಬಗ್ಗೆ ತನಿಖೆ ನಡೆಸಲು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಒಂದು ಆಯೋಗ ರಚಿಸಬೇಕು. ನಮ್ಮ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಆಗಿದ್ದರೆ ಆ ಬಗ್ಗೆ ಕೂಡ ತನಿಖೆ ನಡೆಸಲಿ. ಕುರಿ ಕಾಯೋ ತೋಳ ಸಂಬಳ ಬೇಡ ಎಂದಂತೆ ಅಧಿಕಾರಿಗಳ ಮೂಲಕ ತನಿಖೆಗೆ ಆದೇಶಿಸಲಾಗಿದೆ ಎಂದು ಟೀಕಿಸಿದರು.

TV9 Kannada


Leave a Reply

Your email address will not be published. Required fields are marked *