ಚಿತ್ರದುರ್ಗ: ಓಬವ್ವ ಆತ್ಮ ರಕ್ಷಣಾ ಕಲೆಗೆ ಚಾಲನೆ; ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ವಯಂ ರಕ್ಷಣಾ ತರಬೇತಿಯಲ್ಲಿ ಭಾಗಿ | Onake obavva athma rakshane kale yojana inaugurated in chitradurga


ಚಿತ್ರದುರ್ಗ: ಓಬವ್ವ ಆತ್ಮ ರಕ್ಷಣಾ ಕಲೆಗೆ ಚಾಲನೆ; ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ವಯಂ ರಕ್ಷಣಾ ತರಬೇತಿಯಲ್ಲಿ ಭಾಗಿ

ಸ್ವಯಂ ರಕ್ಷಣಾ ತರಬೇತಿ

ಚಿತ್ರದುರ್ಗ: ವೀರ ವನಿತೆ ಒನಕೆ ಓಬವ್ವಳ ಶೌರ್ಯ ಪರಾಕ್ರಮ ನಾಡಿಗೇ ಗೊತ್ತಿರುವ ವಿಷಯ. ಕೋಟೆನಾಡಿನ ರಕ್ಷಕಿ ಓಬವ್ವ ಮಹಿಳಾಮಣಿಯರಿಗೆ ಮಾದರಿಯೂ ಹೌದು. ಅದೇ ಓಬವ್ವಳ ಹೆಸರಿನಲ್ಲಿ ಆತ್ಮ ರಕ್ಷಣಾ ಕಲೆ ತರಬೇತಿ(Onake obavva athma rakshane) ಶುರುವಾಗಿದೆ. ಒನಕೆ ಓಬವ್ವ(Obavva) ವೃತ್ತದಿಂದಲೇ ಓಬವ್ವ ಆತ್ಮ ರಕ್ಷಣಾ ಕಲೆ ಸ್ವಯಂ ರಕ್ಷಣಾ ತರಬೇತಿಗೆ ಚಾಲನೆ ನೀಡಲಾಗಿದೆ. ಕೋಟೆನಾಡು ಚಿತ್ರದುರ್ಗ ನಗರದ ವೀರ ವನಿತೆ ಒನಕೆ ಓಬವ್ವ ವೃತ್ತದಲ್ಲಿ ಕರ್ನಾಟಕ ಸರ್ಕಾರ ವಸತಿ ಶಾಲೆಯ ವಿದ್ಯಾರ್ಥಿನಿಯರಿಗೆ (Students) ಆತ್ಮ ರಕ್ಷಣಾ ಕಲೆ, ಸ್ವಯಂ ರಕ್ಷಣಾ ತರಬೇತಿ ಆರಂಭಿಸಿದೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ತರಬೇತಿ ಆಯೋಜಿಸಲಾಗಿದೆ. ಚಿತ್ರದುರ್ಗ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಈ ತರಬೇತಿಗೆ ಚಾಲನೆ ನೀಡಿದರು.

ಇನ್ನು ಸಮಾಜ ಕಲ್ಯಾಣ ಇಲಾಖೆ ಹಾಗೂ ಬಿಸಿಎಂ ವಸತಿ ಶಾಲೆಯ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮ ರಕ್ಷಣೆಯ ತರಬೇತಿ ಪಡೆದರು. ವೀರನಾರಿ ಒನಕೆ ಓಬವ್ವ ವೃತ್ತದಲ್ಲಿನ ಓಬವ್ವ ಪ್ರತಿಮೆ ಮುಂಭಾಗದಲ್ಲೇ ತರಬೇತಿ ಆರಂಭಿಸಿದ್ದು ಮತ್ತಷ್ಟು ವಿಶೇಷ. ಈ ವೇಳೆ ಪ್ರತಿಕ್ರಿಯಿಸಿದ ವಿದ್ಯಾರ್ಥಿನಿ ಮೊನಿಷಾ, ಆತ್ಮ ರಕ್ಷಣೆ ಕಲೆಯ ಅಗತ್ಯವಿದೆ. ಕೋಟೆನಾಡಿನ ವೀರನಾರಿಯ ಹೆಸರಿನಲ್ಲಿ ನಾಡಿನೆಲ್ಲೆಡೆ ಈ ತರಬೇತಿ ನಿಡುತ್ತಿರುವುದು ದುರ್ಗದ ಜನಕ್ಕೆ ಹೆಮ್ಮೆಯ ಸಂಗತಿ ಎಂದು ಹೇಳಿದ್ದಾರೆ.

ಒಟ್ಟಾರೆಯಾಗಿ ಕೋಟೆನಾಡಿನ ರಕ್ಷಕಿ ವೀರನಾರಿ ಒನಕೆ ಓಬವ್ವಳ ಹೆಸರಿನಲ್ಲಿ ವಿದ್ಯಾರ್ಥಿನಿಯರಿಗೆ ಆತ್ಮ ರಕ್ಷಣೆ ಕಲೆಯ ತರಬೇತಿ ನಾಡಿನಲ್ಲೆಡೆ ಆರಂಭವಾಗಿದೆ. ಅದರಲ್ಲೂ ಓಬವ್ವಳ ನಾಡಿನಲ್ಲಿ ಓಬವ್ವಳ ಪ್ರತಿಮೆ ಎದುರೇ ತರಬೇತಿ ಆರಂಭವಾಗಿದೆ. ವಿದ್ಯಾರ್ಥಿನಿಯರು ಈ ವಿಶೇಷ ತರಬೇತಿ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕಿದೆ ಎಂಬುವುದು ನಮ್ಮೇಲ್ಲರ ಆಶಯ.

ವರದಿ: ಬಸವರಾಜ ಮುದನೂರ್

TV9 Kannada


Leave a Reply

Your email address will not be published.