ಚಿನ್ನಸ್ವಾಮಿ ಕ್ರೀಡಾಂಗಣ
ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪೊಪ್ಪಿಕೊಂಡಿದ್ದ ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ (Life Sentence) ವಿಧಿಸಲಾಗಿದೆ. ಬೆಂಗಳೂರಿನ ವಿಶೇಷ ಕೋರ್ಟ್ ನ್ಯಾಯಮೂರ್ತಿ ಕಸನಪ್ಪ ನಾಯ್ಕ್ ಇಂದು ತೀರ್ಪು ಪ್ರಕಟಿಸಿದ್ದಾರೆ. ತಪ್ಪೊಪ್ಪಿಕೊಂಡಿದ್ದ ಗಯೂರ್ ಅಹ್ಮದ್ ಜಮಾಲಿ, ಅಫ್ತಾಬ್ ಆಲಂಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ರಾಷ್ಟ್ರದ ವಿರುದ್ಧ ಸಮರ ಸಾರಿದ ಆರೋಪದಲ್ಲಿ ಈ ಹಿಂದೆ ಕೋರ್ಟ್ 8 ವರ್ಷ ಜೈಲು, 4 ಲಕ್ಷ ರೂ. ದಂಡ ವಿಧಿಸಿತ್ತು. ಹೈಕೋರ್ಟ್ ಶಿಕ್ಷೆ ಮರುಪರಿಶೀಲನೆಗೆ ಸೂಚಿಸಿತ್ತು. ಹೀಗಾಗಿ, ವಿಶೇಷ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ವಿಶೇಷ ಅಭಿಯೋಜಕರಾಗಿ ರವೀಂದ್ರ ವಾದ ಮಂಡಿಸಿದ್ದರು.
2010ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಾವಳಿಗೂ ಮೊದಲು ನಡೆದ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಫಾಶಿ ಮೊಹಮ್ಮದ್ ಎಂಬ ಆರೋಪಿಗೆ 7 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಬಿಹಾರ ಮೂಲದ ಫಾಶಿಗೆ ಇಂಜಿನಿಯರಿಂಗ್ ಓದುತ್ತಿದ್ದಾಗ ಯಾಸೀನ್ ಭಟ್ಕಳ್ ಪರಿಚಯವಾಗಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಬಾಂಬ್ ಸ್ಫೋಟದಲ್ಲಿ ಯಾಸೀನ್ ಭಟ್ಕಳ್ಗೆ ಫಾಶಿ ಮೊಹಮ್ಮದ್ ಸಹಕರಿಸಿದ್ದ.
ಇತರೆ ಆರೋಪಿಗಳಾದ ಅಹಮದ್ ಜಮಾಲ್, ಅಫ್ತಾಬ್ ಆಲಂ ಅಲಿಯಾಸ್ ಫಾರೂಕ್ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯದ ಎದುರು ತಪ್ಪೊಪ್ಪಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ವಿಶೇಷ ನ್ಯಾಯಾಲಯ 8 ವರ್ಷ ಜೈಲು ಶಿಕ್ಷೆ ಮತ್ತು 4 ಲಕ್ಷ ರೂ. ದಂಡ ವಿಧಿಸಿತ್ತು. ಆ ಶಿಕ್ಷೆಯನ್ನು ಮರು ಪರಿಶೀಲನೆ ಮಾಡಿದ ವಿಶೇಷ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
ನಾವು ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಸದಸ್ಯರು. ದೆಹಲಿಯ ಜಾಮೀಯಾನಗರದ ಮನೆಯೊಂದರಲ್ಲಿ ಒಳ ಸಂಚು ರೂಪಿಸಿದ್ದೆವು. ನಮಗೆ ‘ಲಷ್ಕರ್ ಇ-ತೋಯ್ಬಾ’ ಸಂಘಟನೆಯ ಆರ್ಥಿಕ ಸಹಾಯ ದೊರಕಿತ್ತು. ಬಾಂಬ್ ಸ್ಫೋಟಿಸುವ ಸ್ಥಳವನ್ನು ಪ್ರಮುಖ ಆರೋಪಿ ಮಹಮದ್ ಯಾಸಿನ್ ಅಲಿಯಾಸ್ ಶಾರೂಕ್ ನಿರ್ದಶನದಂತೆ ಗುರುತಿಸಲಾಗಿತ್ತು. ಬಳಿಕ ಕೃತ್ಯಕ್ಕೆ ನೆರವಾಗಲು ಬೆಂಗಳೂರಿನ ಸದಾಶಿವನಗರ ಮತ್ತು ತುಮಕೂರಿನಲ್ಲಿ ಸಂಚು ರೂಪಿಸಲಾಗಿತ್ತು. ಆರೋಪಿ ಜೊತೆ ನಾವಿಬ್ಬರು ಸೇರಿ ಸ್ಫೋಟಕಗಳನ್ನು ತಯಾರಿಸಿದ್ದೆವು. ಎಲೆಕ್ಟ್ರಿಕಲ್ ಡಿಟೋನೇಟರ್ಸ್, ಬ್ಯಾಟರಿಗಳನ್ನು ಸೇರಿಸಿ ಸ್ಫೋಟಕ ಸಿದ್ಧಪಡಿಸಿದ್ದೆವು. ಅದಕ್ಕಾಗಿ ಕೆಎಸ್ಸಿಎ ಸುತ್ತಮುತ್ತ ಸುತ್ತಾಡಿ ಜಾಗ ಸೆಟ್ ಮಾಡಿದ್ದೆವು. ಸ್ಫೋಟಕಗಳನ್ನು ತುಮಕೂರಿನಿಂದ ಬೆಂಗಳೂರಿಗೆ ತಂದೆವು. ಯಾಸಿನ್ ಮತ್ತು ನಾಲ್ವರು ಸೇರಿಕೊಂಡು ಅಲ್ಲಿಂದ ಐದು ಸ್ಫೋಟಕಗಳನ್ನು ಶಿಫ್ಟ್ ಮಾಡಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಅಳವಡಿಸಿದ್ದೆವು. ಟೈಮರ್ಗಳ ಮೂಲಕ ಸ್ಫೋಟದ ಸಮಯ ನಿಗದಿ ಮಾಡಿದೆವು. ಅನಿಲ್ ಕುಂಬ್ಳೆ ಸರ್ಕಲ್ ಗೇಟ್ ನಂಬರ್ 12, ಕ್ವೀನ್ಸ್ ರೋಡ್ ಗೇಟ್ ನಂ. 8 ಪುಟ್ಪಾತ್ ಗೇಟ್ ನಂ 1, ಬಿಎಂಟಿಸಿ ಬಸ್ ಸ್ಟಾಪ್ ಗೇಟ್ ನಂ. 1ರ ಬಳಿ ಸ್ಫೋಟಕ ಇಟ್ಟಿದ್ದೆವು. ಅದರಲ್ಲಿ ಗೇಟ್ ನಂ. 12ರಲ್ಲಿದ್ದ ಬಾಂಬ್ ಸ್ಫೋಟಗೊಂಡು 15 ಮಂದಿ ಗಾಯಗೊಂಡಿದ್ದರು. ಉಳಿದವುಗಳನ್ನು ಪೊಲೀಸರು ಪತ್ತೆ ಮಾಡಿ ನಿಷ್ಕ್ರಿಯಗೊಳಿಸಿದರು ಎಂದು ಈ ಇಬ್ಬರು ಆರೋಪಿಗಳು ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದರು.
ಇದನ್ನೂ ಓದಿ: Tamil Nadu: ಸೇಲಂನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ; ದುರಂತದಲ್ಲಿ ವೃದ್ಧೆ ಸಾವು, 10 ಮಂದಿಗೆ ಗಾಯ
ಜಾರ್ಖಂಡ್ನಲ್ಲಿ ರೈಲ್ವೆ ಹಳಿಗಳ ಮೇಲೆ ಬಾಂಬ್ ಸ್ಫೋಟ; ಹಳಿ ತಪ್ಪಿದ ಡೀಸೆಲ್ ಇಂಜಿನ್