ಚಿಲುಮೆ ಸಂಸ್ಥೆಗೂ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ, ಕಾಂಗ್ರೆಸ್​​​ ಸುಳ್ಳು ಆರೋಪ ಮಾಡುತ್ತಿದೆ: ಅಶ್ವತ್ಥ್​ ನಾರಾಯಣ ಸ್ಪಷ್ಟನೆ – there is nothing Relationship between chilume Organisation and state govt: minister ashwathnarayan


ಕಾಂಗ್ರೆಸ್​ ನಾಯಕರಿಂದ ಸುಳ್ಳು ಆರೋಪ ಮಾಡುತ್ತಿದೆ. ಈ ಸಂಸ್ಥೆಗಳಿಗೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ. ಈ ಅಕ್ರಮದಲ್ಲಿ ನಾನು ಭಾಗಿಯಾಗಿಲ್ಲ ಎಂದು ಸಚಿವ ಡಾ.ಸಿ.ಎನ್. ಅಶ್ವತ್ಥ್​ ನಾರಾಯಣ ಹೇಳಿದ್ದಾರೆ.

ಚಿಲುಮೆ ಸಂಸ್ಥೆಗೂ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ, ಕಾಂಗ್ರೆಸ್​​​ ಸುಳ್ಳು ಆರೋಪ ಮಾಡುತ್ತಿದೆ: ಅಶ್ವತ್ಥ್​ ನಾರಾಯಣ ಸ್ಪಷ್ಟನೆ

ಸಚಿವ ಡಾ.ಸಿ.ಎನ್.ಅಶ್ವತ್ಥ್​ ನಾರಾಯಣ


ಬೆಂಗಳೂರು: ಕಾಂಗ್ರೆಸ್​ ನಾಯಕರಿಂದ ಸುಳ್ಳು ಆರೋಪ ಮಾಡಲಾಗುತ್ತಿದೆ. ಈ ಸಂಸ್ಥೆಗಳಿಗೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ. ಕಾಂಗ್ರೆಸ್ (congress)​ ನಾಯಕರು ಏನೋ ಹೇಳಿಕೆ ಕೊಡಬೇಕಿತ್ತು ಕೊಟ್ಟಿದ್ದಾರೆ. ಯಾರು ಏನು ಮಾಡಿದ್ದಾರೋ ಗೊತ್ತಿಲ್ಲ, ತಪ್ಪು ಮಾಡಿದ್ದರೆ ತಪ್ಪೇ ಎಂದು ನಗರದಲ್ಲಿ ಸಚಿವ ಡಾ.ಸಿ.ಎನ್. ಅಶ್ವತ್ಥ್​ ನಾರಾಯಣ ಹೇಳಿದರು. ವೋಟರ್​ ಐಡಿ (voter id) ಅಕ್ರಮದ ಹಿಂದೆ ಸಚಿವ ಅಶ್ವತ್ಥ್ ಕೈವಾಡ ಆರೋಪಕ್ಕೆ ಅವರು ತಿರುಗೇಟು ನೀಡಿದರು. ಕಾಂಗ್ರೆಸ್​ ನಾಯಕರು ಭ್ರಷ್ಟಾಚಾರದಲ್ಲೇ ತುಂಬಿ ತುಳುಕಿದ್ದಾರೆ. ಈ ರೀತಿ ಆರೋಪ ಮಾಡಲು ಕಾಂಗ್ರೆಸ್​ ನಾಯಕರಿಗೆ ನೈತಿಕತೆ ಇಲ್ಲ. ಹೊಂಬಾಳೆ ಸಂಸ್ಥೆಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ. ಇವರಂತೂ ಒಳ್ಳೆ ಕೆಲಸ ಮಾಡಿಲ್ಲ, ಮಾಡುವುದಕ್ಕೂ ಬಿಡಲ್ಲ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಸಚಿವ ಅಶ್ವತ್ಥ್ ನಾರಾಯಣ ಕಿಡಿಕಾರಿದರು.

ಪ್ರತಿ ಬಾರಿಯೂ ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗುತ್ತಿದೆ: ಸಚಿವ ಡಾ.ಸಿ.ಎನ್. ಅಶ್ವತ್ಥ್​ ನಾರಾಯಣ 

ಈ ಅಕ್ರಮದಲ್ಲಿ ನಾನು ಭಾಗಿಯಾಗಿಲ್ಲ. ರವಿಕುಮಾರ್ ಅನ್ನೋರು ನನಗೆ ಗೊತ್ತು. ಅವರು ನಮ್ಮ ಕ್ಷೇತ್ರದವರು. ಚಿಲುಮೆ ಸಂಸ್ಥೆಯವರು ಏನು ಅಕ್ರಮ ಮಾಡಿದ್ದಾರೆ ಗೊತ್ತಿಲ್ಲ. ಚಿಲುಮೆ ಸಂಸ್ಥೆಗೆ ಅವಕಾಶ ಕೊಟ್ಟಿದ್ದು ಚುನಾವಣಾ ಆಯೋಗ. ಈ ಕುರಿತಾಗಿ ತನಿಖೆ ಮಾಡಿಸಲು ಹೇಳಲು ನಾವು ಯಾರು ಎಂದು ಪ್ರಶ್ನಿಸಿದರು. ಇದು ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ವಿಚಾರ. ಪ್ರತಿ ಬಾರಿಯೂ ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಎಲ್ಲಾ ರೀತಿಯಲ್ಲೂ ಕಾನೂನು ಉಲ್ಲಂಘನೆ ಮಾಡಿದ್ದು ಕಾಂಗ್ರೆಸ್ಸಿಗರು. ಕಾಂಗ್ರೆಸ್ ನಾಯಕರು ಸುಮ್ಮನೇ ಗಾಳಿ ಸುದ್ದಿ ಹಬ್ಬಿಸುತ್ತಿದ್ದಾರೆ. ನನ್ನನ್ನು ಕಂಡರೆ ಡಿ.ಕೆ.ಶಿವಕುಮಾರ್​ಗೆ​ ಬಹಳ ಪ್ರೀತಿ. ಯಾರೇ ತಪ್ಪು ಮಾಡಿದರೂ ಕಾನೂನಿನ ಅಡಿ ಶಿಕ್ಷೆ ಆಗಬೇಕು ಎಂದು ಹೇಳಿದರು.

ಪ್ರಕರಣದ ಹಿಂದೆ ಸಿಎಂ ಬಸವರಾಜ ಬೊಮ್ಮಾಯಿ ಇದ್ದಾರೆ: ಮಾಜಿ ಸಿಎಂ ಸಿದ್ಧರಾಮಯ್ಯ ಆರೋಪ 

ವೋಟರ್​ ಐಡಿ ಅಕ್ರಮದ ಕುರಿತಾಗಿ ಮಾಜಿ ಸಿಎಂ ಸಿದ್ಧರಾಮಯ್ಯ ಮಾತನಾಡಿದ್ದು, ಮತದಾರರ ಮಾಹಿತಿ ಕಳ್ಳತನ ಪ್ರಕರಣದ ಹಿಂದೆ ಸಿಎಂ ಬಸವರಾಜ ಬೊಮ್ಮಾಯಿ ಇದ್ದಾರೆ ಎಂದು ನೇರವಾಗಿ ಗಂಭೀರ ಆರೋಪ ಮಾಡಿದ್ದಾರೆ. 20-08-2022ರಲ್ಲಿ ಚಿಲುಮೆ ಸಂಸ್ಥೆ ಗೆ BBMP ಕಮಿಷನರ್ ಆದೇಶ ನೀಡಿತ್ತು. ಇದೊಂದು ಸಿಎಂ ಮತ್ತು ಬಿಬಿಎಂಪಿ ಎಲೆಕ್ಷನ್ ಕಮಿಷನರ್ ಎಲ್ಲಾ ಸೇರಿ ಮಾಡಿದ ಸಂಚು ಅನಿಸುತ್ತದೆ. ಜಾಹೀರಾತು ನೀಡದೆ ಖಾಸಗಿ ಕಂಪನಿಗೆ ಮತದಾರರ ಪಟ್ಟಿ ಸಂಸ್ಕರಣೆ ಮಾಡಿ ಡಿಲಿಷನ್ ಅಡಿಷನ್ ಮಾಡುತ್ತಾರೆ. ಚುಲುಮೆ ಸಂಸ್ಥೆಯವರಿಗೆ ಅನುಭವವೂ ಇಲ್ಲ. ಬಿಎಲ್ಓ- ಬೂತ್ ಲೆವೆಲ್ ಆಫೀಸರ್ ಅಂತ ಅವರಿಗೆ ಐಡಿ ಕಾರ್ಡ್ ನೀಡಿದ್ದಾರೆ. ಪೀಪಲ್ಸ್ ರೆಪ್ರೆಸೆಂಟೇಷನ್ ಆ್ಯಕ್ಟ್ ಪ್ರಕಾರ ಸರ್ಕಾರಿ ನೌಕರರು ಅಲ್ಲದಿರುವವರು ಯಾರೂ ಬಿಲ್ ಓ ಆಗುವುದಕ್ಕೆ ಸಾಧ್ಯವಿಲ್ಲ. ಈ ಕೃಷ್ಣಪ್ಪ ರವಿಕುಮಾರ್ ಅಕ್ರಮವಾಗಿ ಐಡಿ ಕಾರ್ಡ್ ಕೊಟ್ಟು ನೇಮಕ ಮಾಡಿಕೊಂಡಿದ್ದಾನೆ. ಸೋಗು ಹಾಕಿಕೊಂಡು ಮಾಡಿದ ವಂಚನೆ ಅಕ್ರಮ ದುರ್ಬಳಕೆ ಇದು ಎಂದು ಸಿದ್ದರಾಮಯ್ಯ ವಾಗ್ದಾಳಿ ಮಾಡಿದ್ದಾರೆ.

ಬಸವರಾಜ ಬೊಮ್ಮಾಯಿ ಈ ಅಕ್ರಮದ ಹಿಂದಿದ್ದಾರೆ. ನೇರವಾಗಿ ಬೊಮ್ಮಾಯಿಯವರೇ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಭ್ರಷ್ಟಾಚಾರ ಕೇವಲ ಗುತ್ತಿಗೆದಾರರ ವಿಷಯದಲ್ಲಿ ಮಾತ್ರ ನಡೆಯುತ್ತಿಲ್ಲ. ಚುನಾವಣೆಯನ್ನು ವಾಮ ಮಾರ್ಗದಲ್ಲಿ ಗೆಲ್ಲಬೇಕು ಅಂತ ಬೊಮ್ಮಾಯಿ ಏನೆಲ್ಲ ಆಟ ಆಡೋದಕ್ಕೆ ಶುರು ಮಾಡಿದ್ದಾರೆ ನೋಡಿ. ಓಟರ್ ಐಡಿ ತಿದ್ದುಪಡಿ‌ ಮಾಡಿರುವುದು ಅಕ್ಷಮ್ಯ ಅಪರಾಧ. ಬೊಮ್ಮಾಯಿ ಸಿಎಂ ಆಗಿ ಹೇಗೆ ಮುಂದುವರಿತಾರೆ? ತಕ್ಷಣ ಅವರು ರಾಜೀನಾಮೆ ನೀಡಬೇಕು. ಬೊಮ್ಮಾಯಿಯನ್ನು ಅರೆಸ್ಟ್ ಮಾಡಬೇಕು. ಎಫ್ಐಆರ್ ದಾಖಲಾಗದಿದ್ದರೆ ಮುಂದಿನ ಕ್ರಮ ನಾವು ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಬೊಮ್ಮಾಯಿ ವಿರುದ್ಧ ಸಿದ್ದರಾಮಯ್ಯ ಆರೋಪ ಮಾಡಿದ್ದು ರಾಜೀನಾಮೆಗೆ ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ

TV9 Kannada


Leave a Reply

Your email address will not be published.