ಕೊರೊನಾ ಆರ್ಭಟದ ನಡುವೆಯೇ ಮತ್ತೊಂದು ಆತಂಕ ಶುರುವಾಗ್ತಾ ಇದೆ. ಇದೆಂಥಾ ಕಾಲ ಅಂದ್ರೆ ಜಗತ್ತಿನ ಯಾವ ಮೂಲೆಯಿಂದ ಅದ್ಯಾವ ಆತಂಕಕಾರಿ ಸುದ್ದಿ ಹೊರಬೀಳುತ್ತೊ ಊಹಿಸೋಕೂ ಆಗ್ತಿಲ್ಲ. ಮಲೇಷ್ಯಾದಲ್ಲಿ ಶ್ವಾನದಿಂದ ಕೊರೊನಾ ಬರ್ತಿದೆ. ಚೀನಾದಲ್ಲಿ ವಿಶ್ವದಲ್ಲೇ ಮೊದಲ ಬಾರಿಗೆ ಮನುಷ್ಯನಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದೆ. ಇಷ್ಟು ದಿನ ಮನುಷ್ಯರಲ್ಲಿ ಕಾಣಿಸಿಕೊಳ್ಳದ ಇಂತಹ ಹಕ್ಕಿಜ್ವರ ಈಗ ಮನುಷ್ಯನಿಗೂ ಹರಡಿರುವುದು ಅಚ್ಚರಿಯನ್ನ ತಂದಿದೆ.

ಚೀನಾದಲ್ಲಿನ 41 ವರ್ಷದ ವ್ಯಕ್ತಿಯಲ್ಲಿ ಎಚ್10ಎನ್3 ಪತ್ತೆ
ಕಾಡುಹಕ್ಕಿಗಳು,ಸಾಕು ಕೋಳಿಗಳಿಂದ ಬಂದಿರುವ ಸಾಧ್ಯತೆ

ಚೀನಾದ 41 ವರ್ಷದ ವ್ಯಕ್ತಿಯಲ್ಲಿ ಕಾಣಿಸಿಕೊಂಡಿರುವ ಈ ಹಕ್ಕಿ ಜ್ವರವನ್ನು ಎಚ್10ಎನ್ 3 ಅಂತ ಗುರುತಿಸಲಾಗ್ತಾ ಇದೆ. ಕಾಡು ಹಕ್ಕಿಗಳು ಮತ್ತು ಸಾಕು ಕೋಳಿಗಳಿಂದ ಬರಬಹುದಾದ ಈ ಜ್ವರ ಈಗ ಮನುಷ್ಯನಿಗೆ ತಗುಲಿರುವುದು ಅಚ್ಚರಿಯಾದರೂ ಸತ್ಯ. ಇದನ್ನು ಚೀನಾದ ಹೆಲ್ತ್ ಕಮಿಷನ್ ನವರೇ ದೃಢಪಡಿಸಿದ್ದಾರೆ. ಚೀನಾ ಪೂರ್ವ ಭಾಗದ ಜಿಯಾನ್ ಗ್ಸು ಪ್ರಾಂತ್ಯದ ಝೆನ್ ಝಿಯಾಂಗ್ ಪಟ್ಟಣದ ವ್ಯಕ್ತಿಯಲ್ಲಿ ಈ ವೈರಸ್ ಕಾಣಿಸಿಕೊಂಡಿದೆ. ಸಾಮಾನ್ಯವಾಗಿ ಹಕ್ಕಿಜ್ವರ ಕೋಳಿ ಫಾರಂ ಗಳಲ್ಲಿ ಕಾಣಸಿಕೊಂಡಿದ್ದು, ಸಾವಿರಾರು ಕೋಳಿಗಳು ಸತ್ತು ಹೋಗಿವೆ. ಆದ್ರೆ ಇಂತಾದ್ದೇ ಜ್ವರ ಮನುಷ್ಯನಿಗೆ ಬಂದಿದೆ ಅಂದ್ರೆ ಇದು ವಿಚಿತ್ರ ಅನಿಸುತ್ತಿದೆ.

ಕೋಳಿಗಳಿಂದ ಈ ಜ್ವರ ಚೀನಾದ ವ್ಯಕ್ತಿಗೆ ಬಂದಿದೆ ಅಂತ ಅಲ್ಲಿನ ತಜ್ಞರು ತಿಳಿಸಿದ್ದಾರೆ. ರಷ್ಯಾದಲ್ಲೂ ಇಂತಾದ್ದೇ ವೈರಸ್ ಒಂದು ಮನುಷ್ಯನಲ್ಲಿ ಹಿಂದೆ ಒಮ್ಮೆ ಪತ್ತೆಯಾಗಿತ್ತು. ಮನುಷ್ಯನಿಗೆ ತಗುಲಿರುವ ಈ ಹಕ್ಕಿಜ್ವರದ ಬಗ್ಗೆ ಈಗ ವಿಶೇಷವಾದ ಅಧ್ಯಯನ ಚೀನಾದಲ್ಲಿ ನಡೆಯುತ್ತಿದೆ. ಪ್ರಾಥಮಿಕ ವರದಿಗಳ ಪ್ರಕಾರ ಇದೊಂದು ವಿರಳವಾದ ವೈರಾಣು ಅಂತ ಹೇಳಲಾಗ್ತಿದೆ. ಆದ್ರೆ ಹೆಚ್ಚಿನ ಸಂಶೋಧನಾ ವರದಿ ಇನ್ನಷ್ಟೇ ಬರಬೇಕಾಗಿದೆ.

ಮನುಷ್ಯನಿಗೆ ತಗುಲಿರುವ ಹಕ್ಕಿಜ್ವರವೂ ಸಾಂಕ್ರಾಮಿಕವಾಗುತ್ತಾ?
ಕೊರೊನಾದಂತೆ ಮತ್ತಷ್ಟು ಗಂಡಾಂತರ ತಂದು ಬಿಡುತ್ತಾ ವೈರಸ್?

ಚೀನಾದ ವುಹಾನ್ನಿಂದ ಹರಡಿದ ಕೊರೊನಾ ಜಗತ್ತಿನಲ್ಲಿ 34 ಲಕ್ಷ ಜನರನ್ನು ಬಲಿ ತೆಗೆದುಕೊಂಡಿದೆ. ಇದು ವಿಶ್ವವ್ಯಾಪಿಯಾಗಿ ಕೋಟ್ಯಾಂತರ ಜನರಿಗೆ ಹರಡ್ತಾನೇ ಇದೆ. ಇಡೀ ವಿಶ್ವವೇ ಕೊರೊನಾದಿಂದ ನಲುಗಿ ಹೋಗಿದೆ. ಇಂತಹ ಸಂದರ್ಭದಲ್ಲಿ ಈಗ ಬಂದಿರೋ ಈ ಹಕ್ಕಿಜ್ವರವೂ ಸಾಂಕ್ರಾಮಿಕವಾಗಿ ಬಿಡುತ್ತಾ ಅನ್ನೋ ಆತಂಕ ಶುರುವಾಗಿದೆ. ಕೊರೊನಾದಂತೆಯೇ ಇದು ಮನುಷ್ಯನಿಂದ ಮನುಷ್ಯನಿಗೆ ಹರಡಿ ಮತ್ತಷ್ಟು ರೂಪಾಂತರವಾಗಿ ಗಂಡಾಂತರ ತಂದು ಬಿಡುತ್ತಾ ಅನ್ನೋ ಭೀತಿ ಶುರುವಾಗಿದೆ.

ಈಗ ಹಕ್ಕಿಜ್ವರ ತಗುಲಿರುವ ವ್ಯಕ್ತಿಯ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗಿದ್ದು ಎಲ್ಲಾ ರೀತಿಯ ಪರೀಕ್ಷೆ ನಡೆಸಲಾಗ್ತಾ ಇದೆ. ಇದು ಮಾರಣಾಂತಿಕವಾಗುತ್ತಾ ಅಥವಾ ಸುಲಭವಾಗಿ ಗುಣವಾಗುತ್ತಾ ಅನ್ನೋದನ್ನು ಇನ್ನೂ ಅಧ್ಯಯನ ಮಾಡ್ತಾ ಇದ್ದಾರೆ.

ಮಲೇಷ್ಯಾದಲ್ಲಿ ಸಾಕು ನಾಯಿಯಿಂದ ವ್ಯಕ್ತಿಗೆ ಕೊರೊನಾ
ನಾಯಿಯಿಂದ ಕೊರೊನಾ ಬಂದಿದ್ದು ದೃಢಪಡಿಸಿರುವ ತಜ್ಞರು

ಚೀನಾದಲ್ಲಿ ವಿಶ್ವದಲ್ಲೇ ಮೊದಲ ಬಾರಿಗೆ ಮನುಷ್ಯನಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ರೆ, ಮಲೇಷ್ಯಾದಲ್ಲಿ ಸಾಕು ನಾಯಿಯಿಂದ ಕೊರೊನಾ ಮನುಷ್ಯನಿಗೆ ಬಂದಿದೆ. ಇಷ್ಟು ದಿನ ಜಗತ್ತಿನಲ್ಲೆಲ್ಲ ಮನುಷ್ಯನಿಂದ ಮನುಷ್ಯನಿಗೆ ಹರಡಿ ಹರಡಿ ಈಗ ಕೋಟ್ಯಾಂತರ ಜನರಿಗೆ ತಗುಲಿದೆ ಕೊರೊನಾ. ಈಗ ನಾಯಿಯಿಂದಲೂ ಹರಡಲು ಶುರುವಾದರೆ ಹೇಗಿರಬಹುದು ಯೋಚಿಸಿ. ನಾಯಿಗಳಿಗೆ ಕೊರೊನಾ ಬರದಂತೆ ತಡೆಯೋದಾದ್ರೂ ಹೇಗೆ, ಅವುಗಳಿಂದ ಬೇರೆಯವರಿಗೆ ಹರಡದಂತೆ ನೋಡಿಕೊಳ್ಳೋದಾದ್ರೂ ಹೇಗೆ? ಬಹುಶಃ ಇದೇ ಮುಂದಾಲೋಚನೆಯಿಂದಲೇ ರಷ್ಯಾದಲ್ಲಿ ನಾಯಿಗಳಿಗೂ ವ್ಯಾಕ್ಸಿನ್ ಹಾಕಿಸ್ತಾ ಇರಬಹುದು.

ಮಲೇಷ್ಯಾದಲ್ಲಿ ಸಾಕು ನಾಯಿಯಿಂದ ಮನುಷ್ಯನಿಗೆ ಕೊರೊನಾ ಬಂದಿರೋದು ದೃಢಪಟ್ಟಿದೆ. ಇದರ ಸ್ಯಾಂಪಲ್ ಅನ್ನು ಅಮೆರಿಕಾಕ್ಕೆ ಕಳುಹಿಸಲಾಗಿತ್ತು. ಅಲ್ಲಿನ ತಜ್ಞರು ಕೂಡ ಇದನ್ನು ದೃಢಪಡಿಸಿದ್ದಾರೆ. ಇದು ಅಚ್ಚರಿಯ ಪ್ರಕರಣವಾದರೂ ಆತಂಕವನ್ನಂತೂ ತಂದಿದೆ. ಮಲೇಷ್ಯಾದಲ್ಲಿ ಈ ಪ್ರಕರಣ ಸಿಕ್ಕಾಪಟ್ಟೆ ಭೀತಿ ಹುಟ್ಟಿಸಿದೆ. ಆದ್ರೆ ಸದ್ಯಕ್ಕೆ ಮಲೇಷ್ಯಾದಲ್ಲಿ ಇಂತಹ ಒಂದೇ ಪ್ರಕರಣ ದಾಖಲಾಗಿದೆ.

ನಾಯಿಯಿಂದ ಮನುಷ್ಯನಿಗೆ ಹೇಗೆ ಹರಡುತ್ತೆ ಕೊರೊನಾ?
ನಾಯಿ ಸಾಕಿದವರು ಯಾವ ರೀತಿ ಎಚ್ಚರಿಕೆ ವಹಿಸಬೇಕು?

ನಾಯಿಗಳಿಗೆ ಕೊರೊನಾ ಹೇಗೆ ಬರುತ್ತೆ ಅನ್ನೋದೇ ಆತಂಕಕಾರಿ ವಿಚಾರ. ಇನ್ನು ನಾಯಿಯಿಂದ ಮನುಷ್ಯನಿಗೆ ಕೊರೊನಾ ಹರಡಿರೋದು ಇನ್ನೂ ಅಚ್ಚರಿಯ ಸಂಗತಿ. ಆದ್ರೆ ಮಲೇಷ್ಯಾದಲ್ಲಿ ಇಂತಹ ಕೇಸ್ ಪತ್ತೆಯಾಗಿರುವ ಕಾರಣ ಈಗ ತಜ್ಞರು ಈ ಬಗ್ಗೆ ಹೆಚ್ಚಿನ ಅಧ್ಯಯನಕ್ಕೆ ಮುಂದಾಗಿದ್ದಾರೆ. ಮನುಷ್ಯರಿಂದ ಸಾಕು ಪ್ರಾಣಿಗಳಿಗೂ ಕೊರೊನಾ ಹರಡಬಹುದು ಅಂತ ಈ ಹಿಂದೆಯೇ ಹೇಳಲಾಗಿತ್ತು. ಅದರಲ್ಲೂ ಹೆಚ್ಚಾಗಿ ಕುಟುಂಬದ ಸದಸ್ಯರ ಜೊತೆಗಿರುವ ನಾಯಿಗಳಿಗೆ ಸುಲಭವಾಗಿ ಹರಡಬಹುದು ಅಂತೆಲ್ಲ ಚರ್ಚೆಯೂ ನಡೆದಿತ್ತು. ಆದರೆ ವಿಶ್ವದೆಲ್ಲೆಲ್ಲೂ ಇಂತಹ ಪ್ರಕರಣಗಳು ವರದಿಯಾಗಿರಲಿಲ್ಲ. ಮನೆಯಲ್ಲಿ ಯಾರಿಗೇ ಕೊರೊನಾ ಬಂದ್ರೂ ನಾಯಿ ಸೇಫ್ ಅನ್ನೋ ಭಾವನೆ ಇತ್ತು. ಆದ್ರೆ ಈ ಮಲೇಷ್ಯಾ ಪ್ರಕರಣದಿಂದ ಕಳವಳ ಮೂಡಿದೆ.

ನಾಯಿಯಿಂದ ಯಾವ ರೀತಿ ಕೊರೊನಾ ಹರಡಿದೆ ಅನ್ನೋದ್ರ ಬಗ್ಗೆ ಇನ್ನಷ್ಟೇ ವಿವರಗಳು ಬರಬೇಕಾಗಿದೆ. ಇನ್ನಷ್ಟು ಅಧ್ಯಯನಗಳು ನಡೆಯಬೇಕಾಗಿದೆ. ನಾಯಿಯ ಜೊಲ್ಲಿನಿಂದ ಬರ್ತಾ ಇದ್ಯೋ, ಅದರಿಂದ ಗಾಳಿಯಲ್ಲಿ ಹಾರಿಕೊಂಡು ಬರಬಹುದಾದ ಹನಿಗಳಿಂದ ಬರ್ತಾ ಇದ್ಯೋ ಅನ್ನೋದ್ರ ಬಗ್ಗೆ ಮಾಹಿತಿ ಬರಬೇಕಾಗಿದೆ. ಸದ್ಯಕ್ಕೆ ಇಂತಹ ಪ್ರಕರಣ ಮಲೇಷ್ಯಾದಲ್ಲಿ ಪತ್ತೆಯಾಗಿದೆಯೇ ವಿನಃ ಬೇರೆಲ್ಲೂ ಪತ್ತೆಯಾಗಿಲ್ಲ.

ಕೊರೊನಾ ಬಂದು ಒಂದೂವರೆ ವರ್ಷ ಕಳೆದರೂ ಇದರ ಮೂಲವೇ ಪತ್ತೆಯಾಗಿಲ್ಲ. ಮೊದಲು ಚೀನಾದ ವುಹಾನ್ ಮಾರುಕಟ್ಟೆಯಿಂದ ಹರಡಲು ಶುರುವಾಯ್ತು, ಚಿಪ್ಪು ಹಂದಿಯಿಂದ ಬಂತು ಅಂತ ಹೇಳಲಾಗಿತ್ತು. ಬಳಿಕ ಬಾವಲಿಯಿಂದ ಕೊರೊನಾ ವೈರಸ್ ಬಂದಿದೆ ಅಂತ ವಾದಿಸಲಾಗಿತ್ತು. ಇಷ್ಟೆಲ್ಲಾ ಆದ ಬಳಿಕ ಈ ಕೊರೊನಾ ವೈರಸ್ಸೇ ಕೃತಕ ಸೃಷ್ಟಿ ಅಂತ ಈಗ ಅನೇಕರು ಚೀನಾದ ಮೇಲೆ ಅನುಮಾನ ವ್ಯಕ್ತಪಡಿಸ್ತಾ ಇದಾರೆ. ವುಹಾನ್ ಇನ್ ಸ್ಟಿಟ್ಯೂಟ್ ಆಫ್ ವೈರಾಲಜಿ ಲ್ಯಾಬ್ ನಲ್ಲಿಯೇ ಕೊರೊನಾವೈರಸ್​ ಕೃತಕವಾಗಿ ಸೃಷ್ಟಿಯಾಗಿದೆ ಅಂತೆಲ್ಲ ಹೇಳಲಾಗ್ತಾ ಇದೆ. ಇಷ್ಟೆಲ್ಲಾ ಆದ ಮೇಲೆ ಈಗ ನಾಯಿಯಿಂದ ಕೊರೊನಾ ಬರ್ತಿದೆ ಅಂದರೆ ನಿಜಕ್ಕೂ ಅಚ್ಚರಿ ತರುವ ವಿಚಾರವೇ ಹೌದು. ಮುಂದೆ ಈ ಕೊರೊನಾ ಅದೆಲ್ಲೆಲ್ಲಿಂದ ಪ್ರತ್ಯಕ್ಷವಾಗುತ್ತೋ ಗೊತ್ತಿಲ್ಲ. ಆದ್ರೆ ಮನುಷ್ಯರಿಗಂತೂ ಅಪಾಯಕಾರಿಯಾಗಿ ಕಾಡ್ತಾ ಇದೆ ಈ ಡೆಡ್ಲಿ ಕೊರೊನಾ.

The post ಚೀನಾದಲ್ಲಿ ಮನುಷ್ಯರಿಗೆ ಹಕ್ಕಿಜ್ವರ, ಮಲೇಷ್ಯಾದಲ್ಲಿ ಶ್ವಾನಜ್ವರ.. ಮತ್ತಷ್ಟು ಗಂಡಾಂತರ..? appeared first on News First Kannada.

Source: newsfirstlive.com

Source link