ವಿಶ್ವವೇ ನಲುಗುವಂತೆ ಮಾಡಿರುವ ಈ ಕೊರೊನಾ ಸಾಂಕ್ರಾಮಿಕ ರೋಗದ ಹಿಂದೆ ಚೀನಾ ಸಂಚು ರೂಪಿಸಿತ್ತಾ ಅನ್ನೋ ಅನುಮಾನ ಮತ್ತೆ ವ್ಯಕ್ತವಾಗಿದೆ. ವಿದೇಶಿ ಮ್ಯಾಗ್ಸಿನ್ ಒಂದು ಈ ಸ್ಫೋಟಕ ಸತ್ಯವನ್ನು ಬಿಚ್ಚಿಟ್ಟಿದೆ.

ಚೀನಾದ ವಿರುದ್ಧ ಅದೆಷ್ಟು ಕೋಟಿ ಮಂದಿ ಹಿಡಿಶಾಪ ಹಾಕುತ್ತಿದ್ದಾರೊ ಗೊತ್ತಿಲ್ಲ. ಇಡೀ ವಿಶ್ವದ ಎಲ್ಲೆಡೆ ಕಳೆದ ಒಂದು ವರ್ಷದಿಂದ ಆಕ್ರೋಶ ವ್ಯಕ್ತವಾಗುತ್ತಿರುವುದು ಚೀನಾದ ವಿರುದ್ಧ. ಕಾರಣ ಕೊರೊನಾ ವೈರಸ್. ಚೀನಾದ ವುಹಾನ್​​​ನಿಂದ ವಿಶ್ವದೆಲ್ಲೆಡೆ ಪಸರಿಸಿ ಕೋಟಿ ಕೋಟಿ ಜನರಿಗೆ ತಗುಲಿದ ಈ ಮಾರಣಾಂತಿಕ ವೈರಸ್, ಲಕ್ಷ ಲಕ್ಷ ಮಂದಿಯನ್ನು ಬಲಿ ತೆಗೆದುಕೊಂಡು ಬಿಟ್ಟಿದೆ. ಈಗಲೂ ಈ ವೈರಸ್​ನ ಅಟ್ಟಹಾಸ ನಿಂತಿಲ್ಲ. ನಿತ್ಯ ಸಾವಿರಾರು ಮಂದಿ ಸಾವನ್ನಪ್ಪುತ್ತಲೇ ಇದ್ದಾರೆ. ವಿಶ್ವದೆಲ್ಲೆಡೆ ಸಾವಿನ ಮೆರವಣಿಗೆ ಮುಂದುವರೆದಿದೆ. ಮೊದಲು ವೈರಸ್ ವಿಶ್ವದೆಲ್ಲೆಡೆ ಹರಡಿದಾಗ ಇದು ಚೀನಾ ಕೃತಕವಾಗಿ ಸೃಷ್ಟಿಸಿದ ವೈರಸ್ ಅನ್ನೋ ಮಾತು ಕೇಳಿಬಂದಿತ್ತು. ಚೀನಾ ಜೈವಿಕ ಅಸ್ತ್ರ ಪ್ರಯೋಗಿಸುತ್ತಿದೆ ಎಂಬ ಅನುಮಾನಗಳೂ ವ್ಯಕ್ತವಾಗಿದ್ದವು. ಆದ್ರೆ, ಅದೆಲ್ಲವನ್ನೂ ಡ್ರ್ಯಾಗನ್ ದೇಶ ಸಾರಾಸಗಟಾಗಿ ತಳ್ಳಿ ಹಾಕಿಬಿಟ್ಟಿತ್ತು. ಸ್ವತಃ ಚೀನಾ ಕೂಡ ಈ ಮಾರಣಾಂತಿಕ ರೋಗದಿಂದ ತತ್ತರಿಸಿರುವಾಗ ಇದೆಲ್ಲ ಸುಳ್ಳು ಅಂತಾನೇ ಹೇಳಲಾಗ್ತಾ ಇತ್ತು. ಬಳಿಕ ಈ ವಿಚಾರ ತಣ್ಣಗಾಗಿತ್ತು.

ಚೀನಾದ ವುಹಾನ್ ಮಾರ್ಕೆಟ್​​ನಲ್ಲಿ ಮಾರಾಟವಾಗುತ್ತಿದ್ದ ಚಿಪ್ಪು ಹಂದಿಯಿಂದ ಈ ವೈರಸ್ ಬಂದಿದೆ ಅಂತ ವಿಶ್ಲೇಷಿಸಲಾಯ್ತು. ಬಳಿಕ ಇನ್ಯಾವುದೋ ಪ್ರಾಣಿಜನ್ಯ ವೈರಸ್ ಇರಬಹುದು ಅಂತ ಹೇಳಲಾಯ್ತು. ಆದ್ರೆ ಈವರೆಗೂ ಕೊರೊನಾ ವೈರಸ್ ಎಲ್ಲಿಂದ ಬಂತು ಅನ್ನೋದು ಖಚಿತವಾಗಿಯೇ ಇಲ್ಲ. ಅದೇ ವುಹಾನ್ ಮಾರ್ಕೇಟ್ ಅಂತಾನೇ ಇವತ್ತಿಗೂ ನಂಬಿಕೊಳ್ಳಲಾಗಿದೆ. ಆದ್ರೆ, ಈಗ ಮತ್ತೊಂದು ಆಘಾತಕಾರಿ ವಿಚಾರ ಬಯಲಾಗಿದೆ. ಆಸ್ಟ್ರೇಲಿಯಾ ವೀಕೆಂಡ್ ಎಂಬ ಆಸ್ಟ್ರೇಲಿಯನ್ ಮ್ಯಾಗ್ಸಿನ್ ಮತ್ತು ಕೆಲವು ವೆಬ್​ಸೈಟ್​​ಗಳು ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿವೆ.

ವಿಶ್ವವನ್ನೇ ಬೆದರಿಸಿ ದೊಡ್ಡಣ್ಣನ್ನಾಗಿ ಮೆರೆಯಲು ಹೊರಟಿತ್ತಾ ಚೀನಾ?
ಜಗತ್ತನ್ನೇ ವಿನಾಶದ ಅಂಚಿಗೆ ತಳ್ಳುವ ಕುತಂತ್ರ ಮಾಡಿಬಿಡ್ತಾ?

ಈಗಲೇ ವಿಶ್ವದ ಪ್ರಬಲ ರಾಷ್ಟ್ರಗಳಲ್ಲಿರುವ ಶಸ್ತ್ರಾಸ್ತ್ರಗಳೇ ವಿಶ್ವವನ್ನು ಅದೆಷ್ಟೋ ಬಾರಿ ನಾಶ ಮಾಡಲು ಸಾಕಾಗುವಷ್ಟಿದೆ. ಅದೆಷ್ಟು ಅಣ್ವಸ್ತ್ರಗಳು, ಅದೆಷ್ಟು ಬಾಂಬ್ ಗಳು, ಅದೆಷ್ಟು ಕ್ಷಿಪಣಿಗಳು ಅಬ್ಬಾ..! ಊಹಿಸಿಕೊಂಡರೆ ನಿಜವಾಗಿಯೂ ಈ ಮಾನವ ಕುಲ ಎಲ್ಲಿ ಬಡಿದಾಡಿಕೊಂಡು ನಾಶವಾಗಿ ಹೋಗುತ್ತೋ ಅನ್ನೋ ಭೀತಿ ಕಾಡ್ತಾನೇ ಇರುತ್ತೆ. ಈ ನಡುವೆ, ಚೀನಾ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಕ್ರೂರಿಯಂತೆ ಯೋಚಿಸಿ ಬಿಟ್ಟಿತ್ತಾ ಅನ್ನೋ ಪ್ರಶ್ನೆ ಉದ್ಭವವಾಗಿ ಬಿಟ್ಟಿದೆ. ವಿಶ್ವವನ್ನೇ ಬೆದರಿಸಿ ತಾನೇ ದೊಡ್ಡಣ್ಣನಂತೆ ಮೆರೆಯಲು ತಂತ್ರ ರೂಪಿಸಿತ್ತಾ ಚೀನಾ? ಜಗತ್ತನ್ನೇ ವಿನಾಶದ ಅಂಚಿಗೆ ತಳ್ಳುವ ಕುತಂತ್ರ ಮಾಡಿ ಬಿಟ್ಟಿತ್ತಾ? ಇದೆಲ್ಲ ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿರುವುದು ಈಗ ಬಂದಿರೋವ ಆ ಭಯಾನಕ ರಿಪೋರ್ಟ್.

ಕೊರೊನಾ ವೈರಸ್ಸನ್ನು ಉದ್ದೇಶಪೂರ್ವಕವಾಗಿಯೇ ಸೃಷ್ಟಿಸಿತ್ತಾ?
ಅಂಥದ್ದೊಂದು ಭಯಾನಕ ಯುದ್ಧಕ್ಕೆ ಚೀನಾ ಸಜ್ಜಾಗಿ ಬಿಟ್ಟಿತ್ತಾ?
ವೈರಸ್ ಬಳಸಿ ಸಮರ ಸಾರಲು ಚೀನಾ ಹೊರಟು ನಿಂತು ಬಿಡ್ತಾ?

ಗಡಿಯಲ್ಲಿ ಸಣ್ಣ ಉದ್ವಿಗ್ನತೆ ಸೃಷ್ಟಿಯಾದರೆ ಆತಂಕಪಡುವ ಕಾಲ ಇದು. ಎಲ್ಲಿ ಜೀವ ಹಾನಿಯಾಗುತ್ತೋ, ಎಲ್ಲಿ ದೇಶಕ್ಕೆ ನಷ್ಟವಾಗುತ್ತೋ, ಎಲ್ಲಿ ಮತ್ತೊಮ್ಮೆ ಸಂಕಷ್ಟ ಕಾಲ ಶುರುವಾಗಿ ಬಿಡುತ್ತೋ ಅಂತ ಚಿಂತೆ ಮಾಡುವ ಸಮಯ. ಕಾರಣ ಬಹುತೇಕ ದೇಶಗಳಲ್ಲಿರುವ ಅಣ್ವಸ್ತ್ರ.  ಹಿಂದೆ ಜಪಾನಿನ ಹಿರೋಷಿಮಾ, ನಾಗಾಸಾಕಿಯಲ್ಲಿ ಏನಾಗಿ ಹೋಯ್ತು ಅಂತ ಎಲ್ಲರಿಗೂ ಗೊತ್ತು. ಅದೊಂದು ಸಣ್ಣ ಉದಾಹರಣೆಯಷ್ಟೇ. ಈಗಂತೂ ಅದರ ಸಾವಿರ ಪಟ್ಟು ವಿನಾಶಕಾರಿ ಅಣ್ವಸ್ತ್ರಗಳು ಜಗತ್ತಿನಲ್ಲೆಲ್ಲ ಅಡಗಿ ಕುಳಿತು ಬಿಟ್ಟಿವೆ. ಅಣ್ವಸ್ತ್ರ ಇಟ್ಟುಕೊಳ್ಳುವುದೆಂದರೆ ಪ್ರತಿಷ್ಠೆಯ ವಿಚಾರವೂ ಆಗಿದೆ. ಅದೇ ಮುಂದುವರೆದ ದೇಶ ಎಂಬ ದ್ಯೋತಕವೂ ಆಗಿದ್ದು ದುರಂತ. ಇಷ್ಟೊಂದು ಭಯಾನಕ ಅಸ್ತ್ರಗಳೇ ವಿಶ್ವದಲ್ಲೆಲ್ಲ ತುಂಬಿರುವಾಗ ಒಂದೊಮ್ಮೆ ಮಹಾಯುದ್ಧ ಸಂಭವಿಸಿಬಿಟ್ಟರೆ ಸರ್ವನಾಶ ಖಂಡಿತ ಎಂಬೆಲ್ಲ ವಿಶ್ಲೇಷಣೆಗಳು ಹತ್ತಾರು ವರ್ಷಗಳಿಂದ ಬರುತ್ತಲೇ ಇವೆ. ಆದ್ರೆ ಚೀನಾ ಇದಕ್ಕಿಂತ ಭಯಂಕರವಾಗಿರುವ ಜೈವಿಕ ಯುದ್ಧಕ್ಕೇ ಅಣಿಯಾಗಿಬಿಟ್ಟಿತ್ತಾ. ಅಂಥದ್ದೊಂದು ಭಯಾನಕ ಯುದ್ಧಕ್ಕೆ ಚೀನಾ ಸಜ್ಜಾಗಿಬಿಟ್ಟಿತ್ತಾ. ಯಾವ ದೇಶದ ವಿರುದ್ಧ ಚೀನಾ ಇಂತಹ ಕುತಂತ್ರ ಮಾಡಿತ್ತು. ಕೊರೊನಾ ವೈರಸ್ಸನ್ನು ಉದ್ದೇಶಪೂರ್ವಕವಾಗಿಯೇ ಸೃಷ್ಟಿಸಿ ಬಿಡ್ತಾ. ಈ ವೈರಸ್ ಬಳಸಿಯೇ ಸಮರ ಸಾರಲು ಹೊರಟು ನಿಂತುಬಿಟ್ಟಿತ್ತಾ ಎಂಬೆಲ್ಲ ಅನುಮಾನಗಳು ದಟ್ಟವಾಗತೊಡಗಿವೆ. ಆಸ್ಟ್ರೇಲಿಯನ್ ಮಾಗ್ಸಿನ್ ವರದಿ ಅಷ್ಟು ಆತಂಕ ಹುಟ್ಟಿಸಿದೆ.

2015ರಲ್ಲೇ ಜೈವಿಕ ಅಸ್ತ್ರದ ವರದಿ ತಯಾರು ಮಾಡಿತ್ತಾ ಚೀನಾ?
ಹಾಗೇನಾದ್ರೂ ಆಗಿದ್ರೆ ಅದೆಂತಹ ದುರಂತ ನಡೆದು ಹೋಗ್ತಿತ್ತು?

ಯುದ್ಧ ಅಂದರೆ ಸುಮ್ಮನೇನಾ. ಈ ಆಧುನಿಕ ಯುಗದಲ್ಲಿ ಯುದ್ಧ ಅದೆಷ್ಟು ಆಪತ್ತು ತರುತ್ತೆ ಅಂತ ಊಹಿಸಿಕೊಳ್ಳೋಕೇ ಸಾಧ್ಯಾನಾ. ಎರಡು ದೇಶಗಳ ನಡುವೆ ಸಣ್ಣದೊಂದು ಸಮರ ನಡೆದಾಗಲೇ ಅದೆಷ್ಟು ಸಾವು, ನೋವು, ನಷ್ಟ. ಇನ್ನು ಜೈವಿಕ ಅಸ್ತ್ರವನ್ನು ಮನಬಂದಂತೆ ಬಳಸಿ ಎಲ್ಲಾ ಕಡೆ ಲಕ್ಷ ಲಕ್ಷ ಜನ ಅಲ್ಲಲ್ಲೇ ಸತ್ತು ಮಣ್ಣಾಗುವ ದೃಶ್ಯಗಳನ್ನು ಕಲ್ಪನೆ ಮಾಡಿಕೊಳ್ಳಲಾದರೂ ಸಾಧ್ಯವಾಗುತ್ತಾ. ಆದ್ರೆ ಚೀನಾ 2015ರಲ್ಲೇ ಜೈವಿಕ ಅಸ್ತ್ರದ ವರದಿಯೊಂದನ್ನು ಸಿದ್ಧಪಡಿಸಿತ್ತು ಅಂತ ಆಸ್ಟ್ರೇಲಿಯಾ ಮಾಗ್ಸಿನ್​​ ರಿಪೋರ್ಟ್ನಲ್ಲಿ ಹೇಳಲಾಗಿದೆ. ಬಲಾಢ್ಯ ಚೀನಾ ಸೇನೆಯಲ್ಲಿ ಸೇವೆ ಸಲ್ಲಿಸ್ತಾ ಇರುವ ವಿಜ್ಞಾನಿಗಳು, ಚೀನಾದ ಆರೋಗ್ಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಇಂಥದ್ದೊಂದು ಜೈವಿಕ ಅಸ್ತ್ರದ ರಿಪೋರ್ಟ್ ತಯಾರು ಮಾಡಿಬಿಟ್ಟಿದ್ದರು ಅಂತಾನೇ ಉಲ್ಲೇಖಿಸಲಾಗಿದೆ. ಈ ವರದಿಯಲ್ಲಿ ಸಾರ್ಸ್ ಕೊರೊನಾ ವೈರಸ್ ಅನ್ನು ಹೇಗೆ ಜೈವಿಕ ಯುದ್ಧದಲ್ಲಿ ಬಳಸಿಕೊಳ್ಳಬಹುದು ಎಂಬುದನ್ನೂ ಕೂಡ ಚರ್ಚೆ ಮಾಡಲಾಗಿದೆಯಂತೆ. ಅಷ್ಟೇ ಅಲ್ಲ, ಈ ಕೊರೊನಾ ವೈರಸ್ ಅನ್ನು ಹೊಸ ಯುಗದ ಪ್ರಬಲ ಜೈವಿಕ ಅಸ್ತ್ರ ಅಂತಾನೇ ಬಣ್ಣನೆ ಕೂಡ ಮಾಡಲಾಗಿತ್ತಂತೆ. ಮಾಧ್ಯಮಗಳ ವರದಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಸ್ಟ್ರೇಲಿಯಾ ವ್ಯೂಹಾತ್ಮಕ ನೀತಿ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ಪೀಟರ್ ಜೆನ್ನಿಂಗ್ಸ್ , ಕೊರೊನಾ ವೈರಸ್ಸಿನ ತಳಿಗಳ ಹಿಂದೆ ಚೀನಾ ಕೈವಾಡವಿದೆ ಅನ್ನೋದಕ್ಕೆ ಪ್ರಬಲ ಸಾಕ್ಷ್ಯ ಸಿಕ್ಕಂತಾಗಿದೆ ಅಂತ ಖಡಕ್ ಆಗಿ ಹೇಳಿದ್ದಾರೆ. ಚೀನಾ ಇಂಥದ್ದೊಂದು ಕುತಂತ್ರ ಮಾಡಿದ್ದೇ ಆದರೆ ನಿಜಕ್ಕೂ ಮನುಕುಲ ಇದನ್ನು ಕ್ಷಮಿಸಲ್ಲ.

ಮತ್ತಷ್ಟು ಬೆೆಚ್ಚಿ ಬೀಳಿಸುವಂತಿದೆ ಅಮೆರಿಕಾ ಅಧಿಕಾರಿಗಳ ಮಾಹಿತಿ
ಮಾರಣಾಂತಿಕ ವೈರಸ್ ಸಾಕಿ ಬೆಳೆಸಿದ್ದೇ ಚೀನಾ ಅನ್ನೋ ಸಂಶಯ
ವುಹಾನ್ ಮಾರುಕಟ್ಟೆಯ ಕೂಗಳತೆಯ ದೂರದಲ್ಲೇ ಸೃಷ್ಟಿಸಿತ್ತಂತೆ!

ಆಸ್ಟ್ರೇಲಿಯನ್ ವೀಕೆಂಡ್​ ಮಾಗ್ಸಿನ್​ನ ವರದಿ ಒಂದು ಕಡೆಯಾದ್ರೆ ಇನ್ನೊಂದು ಕಡೆ ಅಮೆರಿಕಾದಿಂದಲೂ ಇಂಥಾದ್ದೇ ಮಾಹಿತಿ ಬರ್ತಾ ಇವೆ. ಇದು ಮತ್ತಷ್ಟು ಬೆಚ್ಚಿ ಬೀಳಿಸುವಂತೆಯೇ ಇದೆ. 2015ರಲ್ಲೇ ಚೀನಾ ಇಂತಹದೊಂದು ಕೆಲಸಕ್ಕೆ ಕೈ ಹಾಕಿತ್ತು ಅಂತಿದ್ದಾರಂತೆ ಅಮೆರಿಕಾದ ಅಧಿಕಾರಿಗಳು. ಚೀನಾದ ಮಿಲಿಟರಿ ತಜ್ಞರು, ವಿಜ್ಞಾನಿಗಳು ಪರಸ್ಪರ ಕೈ ಜೋಡಿಸಿ ಇಂತಹದೊಂದು ಕೆಲಸ ಮಾಡಿದ್ದಾರೆ ಅನ್ನುವುದನ್ನು ಖಚಿತವಾಗಿ ಹೇಳಬಹುದು ಅಂದುಬಿಟ್ಟಿದ್ದಾರೆ ಅಮೆರಿಕಾದ ಅಧಿಕಾರಿಗಳು. ಇದಕ್ಕೆ ಸಂಬಂಧಪಟ್ಟ ಗೌಪ್ಯ ದಾಖಲೆಗಳನ್ನು ಸಂಗ್ರಹಿಸಲಾಗಿದೆ ಅಂತಾನೂ ಅವರು ಹೇಳ್ತಾ ಇದಾರೆ. ಇದು ಎಷ್ಟರ ಮಟ್ಟಿಗೆ ಸತ್ಯ ಗೊತ್ತಿಲ್ಲ. ಈ ಅಧಿಕಾರಿಗಳ ಪ್ರಕಾರ  ಕೊರೊನಾವೈರಸ್ ಹುಟ್ಟಿಕೊಳ್ತು ಅಂತ ಹೇಳಲಾಗ್ತಾ ಇರುವ ಚೀನಾದ ವುಹಾನ್ ಮಾರ್ಕೆಟ್​ನ ಕೂಗಳತೆ ದೂರದಲ್ಲೇ ವೈರಸ್ಸನ್ನು ಸೃಷ್ಟಿಸಲಾಗಿದೆಯಂತೆ. ವುಹಾನ್ ಇನ್ಸ್​​ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಈ ವೈರಸ್ ಸಿದ್ಧವಾಗಿದ್ದು, ಬಳಿಕ ಅದು ಸೋರಿಕೆಯಾದ ಪರಿಣಾಮ ಹತ್ತಿರದ ವುಹಾನ್ ಮಾರ್ಕೆಟ್ ನಿಂದ ಹರಡಲು ಶುರುವಾಯ್ತು ಅನ್ನೋದು ಅಮೆರಿಕಾದ ಅಧಿಕಾರಿಗಳ ಅಭಿಪ್ರಾಯ. ಇದೇನಾದರೂ ನಿಜವಾಗಿ ಬಿಟ್ಟರೆ ಚೀನಾ ಇದೇನಾ ನಿನ್ನ ಬುದ್ಧಿ ಅಂತ ಕೇಳೋದ್ರಲ್ಲಿ ತಪ್ಪೇ ಅಲ್ಲಾ.

ಸೋರಿಕೆಯಾದ ವೈರಸ್ ನಿಂದಲೇ ಇಷ್ಟೊಂದು ಅನಾಹುತ
ಇನ್ನೇನಾದ್ರೂ ಜೈವಿಕ ಅಸ್ತ್ರವೇ ಪ್ರಯೋಗವಾಗಿದ್ರೆ ಗತಿಯೇನು?

ಒಂದು ವೈರಸ್ ಸೋರಿಕೆಯಾಗಿದ್ದರಿಂದಲೇ ಇವತ್ತು ಇಡೀ ವಿಶ್ವ ಕೊರೊನಾ ಸಾಂಕ್ರಾಮಿಕದಿಂದ ತತ್ತರಿಸುತ್ತಿದೆ. ಲಕ್ಷ ಲಕ್ಷ ಮಂದಿ ಬಲಿಯಾಗಿದ್ದಾರೆ. ಎಷ್ಟೇ ಕಂಟ್ರೋಲ್ ಮಾಡಿದ್ದರೂ, ಎಷ್ಟೇ ಲಾಕ್ ಡೌನ್ ಮಾಡಿದ್ದರೂ, ಎಷ್ಟೇ ಟ್ರೀಟ್​​ಮೆಂಟ್ ಕೊಡ್ತಾ ಇದ್ರೂ ಕೋಟಿ ಕೋಟಿ ಜನ ಇದರಿಂದ ಬಾಧಿತರಾಗಿದ್ದಾರೆ. ಭಾರತದಲ್ಲಂತೂ ಹೆಲ್ತ್ ಎಮರ್ಜೆನ್ಸಿ, ವಿಶ್ವದ ಮುಂದುವರೆದ ರಾಷ್ಟ್ರಗಳೇ ಈ ವೈರಸ್​ನಿಂದ ತತ್ತರಿಸಿ ಹೋಗಿವೆ. ಅಮೆರಿಕಾ, ಇಂಗ್ಲೆಂಡ್, ಫ್ರಾನ್ಸ್ ಹೀಗೆ ಹತ್ತಾರು ದೇಶಗಳು ಈ ವೈರಸ್ ಕಂಟ್ರೋಲ್ ಮಾಡಬೇಕಾದರೆ ಇಡೀ ವರ್ಷ ಹರಸಾಹಸ ಮಾಡಿವೆ. ಇನ್ನೂ ಈ ಕೊರೊನಾ ಸಾಂಕ್ರಾಮಿಕ ರೋಗಕ್ಕೆ ಒಂದು ನಿಖರವಾದ ಔಷಧ ಕಂಡು ಹಿಡಿಯಲಾಗ್ತಾ ಇಲ್ಲ. ಕೆಲವು ದೇಶಗಳಲ್ಲಿ ವ್ಯಾಕ್ಸಿನ್ ಕಂಡುಹಿಡಿದಿದ್ದು ಎಲ್ಲರಿಗೂ ನೂರಾರು ಕೋಟಿ ಜನರಿಗೆ ಅದು ಸಿಗುವಂತೆ ಮಾಡುವುದೇ ಸವಾಲಾಗಿ ಬಿಟ್ಟಿದೆ.

ಇನ್ನು ಕೊರೊನಾದಿಂದ ಬಲಿಯಾಗುವವರ ಸಂಖ್ಯೆ ನಿತ್ಯ ಸಾವಿರ ಸಾವಿರ. ಎಲ್ಲಿ ನೋಡಿದರೂ ಸಾವಿನ ಮೆರವಣಿಗೆ. ಸ್ಮಶಾನಗಳಲ್ಲಿ ಆರದ ಬೆಂಕಿ. ಲ್ಯಾಬ್​​​ನಿಂದ ಸೋರಿಕೆಯಾದ ವೈರಸ್ ಹರಡಿದ್ದರ ಪರಿಣಾಮದಿಂದಲೇ ಇಂಥಾ ದುಸ್ಥಿತಿ. ಇನ್ನೇನಾದ್ರೂ ಜೈವಿಕ ಅಸ್ತ್ರವೇ ಪ್ರಯೋಗವಾಗಿ ಬಿಟ್ಟಿದ್ರೆ ಗತಿಯೇನಾಗ್ತಿತ್ತು ಊಹಿಸಿಕೊಳ್ಳಿ. ವಿಶ್ವವನ್ನೇ ಅಳಿವಿನ ಅಂಚಿಗೆ ತಲುಪಿಸಿ ಬಿಡ್ತಿತ್ತಾ. ಮನುಕುಲದ ಅಂತ್ಯವೇ ಸಮೀಪಿಸಿಬಿಡುವಂತೆ ಆಗಿಬಿಡ್ತಿತ್ತಾ. ಇದನ್ನೆಲ್ಲ ಊಹಿಸಿಕೊಂಡರೆ ಭಯಾನಕ.

ಚೀನಾ ಯಾಕೆ ಹೀಗೆ ಮಾಡ್ತು?ಯಾಕಿಂತಾ ದುರ್ಬುದ್ಧಿ ಬಂತು?
ಆಕ್ರಮಣಕಾರಿ ಮನೋಭಾವ ಅತಿರೇಖಕ್ಕೆ ತಲುಪಿ ಬಿಟ್ಟಿದ್ಯಾ?

ಚೀನಾಗೆ ಮೊದಲಿನಿಂದಲೂ ಆಕ್ರಮಣ ಮನೋಭಾವ. ಇದಕ್ಕೆ ಕಡಿವಾಣ ಹಾಕೋರೇ ಇಲ್ಲವೇನೋ ಅನ್ನುವಷ್ಟು ದಾರ್ಷ್ಟ್ಯ. ಎಲ್ಲಿ ಕಬಳಿಸಲು ಸಾಧ್ಯವಾಗುತ್ತೋ ಅಂತ ಯಾವಾಗಲೂ ಹೊಂಚು ಹಾಕುತ್ತಿರುವಂತೆ ಕಾಣುವ ನಡವಳಿಕೆ. ನೆರೆಯ ರಾಷ್ಟ್ರಗಳೊಂದಿಗೂ ಬಾಂಧವ್ಯ ಅಷ್ಟಕಷ್ಟೇ. ಪದೇ ಪದೇ ಗಡಿ ಬಳಿ ತಗಾದೆ. ಟಿಬೆಟ್ ಮೇಲೆ ಆಕ್ರಮಣ. ಸುತ್ತ ಮುತ್ತ ಇರುವ ಸಾಗರದ ಮೇಲೆ ನಿಯಂತ್ರಣ ಸಾಧಿಸಲು ಎಲ್ಲಿಲ್ಲದ ಪ್ರಯತ್ನ. ಹೀಗೆ ಚೀನಾ ಸುಮ್ಮನೇ ಕುಳಿತುಕೊಳ್ಳುವುದೇ ಇಲ್ಲ. ಅದರ ಆಕ್ರಮಣಕಾರಿ ನಿಲುವು ನಿತ್ಯ ನಿರಂತರ. ಈಗ ವಿಶ್ವದ ದೊಡ್ಡಣ್ಣ ಅನಿಸಿಕೊಂಡಿರೋದು ಅಮೆರಿಕಾ. ಅಮೆರಿಕಾ ,ರಷ್ಯಾವನ್ನೆಲ್ಲ ಮೀರಿಸಿ ತಾನೇ ದೊಡ್ಡಣ್ಣ ಅಂತ ಅನಿಸಿಕೊಳ್ಳುವ ಹೆಬ್ಬಯಕೆ ಚೀನಾಕ್ಕೆ. ಇಂತಹ ಚೀನಾದ ಮಹಾತ್ವಾಕಾಂಕ್ಷೆಯಿಂದಲೇ ಇಂತಹ ಅನಾಹುತಗಳು ಸಂಭವಿಸ್ತಾ ಇರೋದು. ಅತಿರೇಖಕ್ಕೆ ತಲುಪಿರುವ ಚೀನಾಕ್ಕೆ ಬುದ್ಧಿ ಹೇಳುವವರ್ಯಾರು. ಒಂದು ಕುತಂತ್ರಿಯಿಂದ ಇಡೀ ವಿಶ್ವವೇ ನಲುಗಿ ಹೋಗುವಂತಹ ಪರಿಸ್ಥಿತಿ ಬಂದಿದೆಯಲ್ಲ. ಇನ್ನೆಷ್ಟು ದುರ್ದಿನಗಳನ್ನು ನೋಡಬೇಕೋ ದೇವರೇ ಬಲ್ಲ.

ಈಗ ರಿಪೋರ್ಟ್ ಬಂದಿರುವಂತೆ ಚೀನಾ ಇಂತಾ ಜೈವಿಕ ಅಸ್ತ್ರದ ಕುತಂತ್ರ ಮಾಡಿದ್ದೇ ಆಗಿದ್ರೆ ಅದಕ್ಕೆ ತಕ್ಕ ಪಾಠ ಕಲಿಸಲೇಬೇಕು. ಜಗತ್ತಿನ ಸಮಾನ ಮನಸ್ಕ ರಾಷ್ಟ್ರಗಳೆಲ್ಲ ಸೇರಿ ಒಂದು ನಿರ್ಧಾರಕ್ಕೆ ಬರಲೇಬೇಕು. ವಿಶ್ವಸಂಸ್ಥೆ ಈ ಬಗ್ಗೆ ತುರ್ತು ಗಮನ ಹರಿಸಲೇಬೇಕು.

The post ಚೀನಾದ ಕುತಂತ್ರದ ಫಲವೇ ಕೊರೊನಾ, 2015ರಲ್ಲೇ ಜೈವಿಕ ಅಸ್ತ್ರದ ವರದಿ ತಯಾರಾಗಿತ್ತು- ಆಸ್ಟ್ರೇಲಿಯನ್ ಮ್ಯಾಗ್ಸಿನ್ ವರದಿ appeared first on News First Kannada.

Source: newsfirstlive.com

Source link