ಚೀನಾದ ಸಾರ್ವಭೌಮತೆಯಲ್ಲಿ ತೈವಾನನ್ನು ಅನ್ನು ಸೇರ್ಪಡೆ ಮಾಡಿಕೊಳ್ಳುವ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಲಿದೆ: ಕ್ಸಿ ಜಿನ್​ಪಿಂಗ್ | Chinese premier Xi vows reunification with Taiwan without using force

ಚೀನಾದ ಸಾರ್ವಭೌಮತೆಯಲ್ಲಿ ತೈವಾನನ್ನು ಅನ್ನು ಸೇರ್ಪಡೆ ಮಾಡಿಕೊಳ್ಳುವ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಲಿದೆ: ಕ್ಸಿ ಜಿನ್​ಪಿಂಗ್

ಚೀನಾದ ಅಧ್ಯಕ್ಷ ಕ್ಸಿ ಜಿನ್​ಪಿಂಗ್

ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಶನಿವಾರದಂದು ತೈವಾನ್ ನೊಂದಿಗೆ ಶಾಂತಿಯುತವಾದ ಪುನರ್ ಏಕೀಕರಣದ ಭರವಸೆ ನೀಡಿದರಾದರೂ ಚೀನಾ ವಶಪಡಿಸಿಕೊಂಡಿರುವ ದ್ವೀಪವೊಂದಕ್ಕೆ ಸಂಬಂಧಿಸಿದಂತೆ ಎರಡು ರಾಷ್ಟ್ರಗಳ ನಡುವೆ ಒಂದು ವಾರದಿಂದ ಜಾರಿಯಲ್ಲಿರುವ ಉದ್ವಿಗ್ನ ಸ್ಥಿತಿ ಮತ್ತು ಅಂತರರಾಷ್ಟ್ರೀಯ ಸಮುದಾಯದ ಕಳವಳದ ಹಿನ್ನೆಲೆಯಲ್ಲಿ ಅವರು ತೈವಾನ್ ವಿರುದ್ಧ ಬಲ ಪ್ರದರ್ಶಿಸುವ ವಿಷಯ ಕುರಿತು ಉಲ್ಲೇಖ ಮಾಡಲಿಲ್ಲ. ಚೀನಾದ ಸಾರ್ವಭೌಮತೆಯನ್ನು ಒಪ್ಪಿಕೊಂಡು ಅಂಗೀಕರಿಸಲು ಬೀಜಿಂಗ್ ನಿಂದ ಸತತ ಮತ್ತು ನಿರಂತರ ಒತ್ತಡದಲ್ಲಿರುವ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿಯಲ್ಲಿಟ್ಟಿರುವ ತೈವಾನ್, ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಕಟಿಬದ್ಧವಾಗಿದ್ದು, ತೈಪಿ ಜನರೇ ದೇಶದ ಭವಿಷ್ಯವನ್ನು ನಿರ್ಧರಿಸುತ್ತಾರೆ ಎಂದು ಹೇಳುತ್ತಿದೆ.

ಬೀಜಿಂಗ್ ನ ಗ್ರೇಟ್ ಹಾಲ್ ಆಫ್ ದಿ ಪೀಪಲ್​ನಲ್ಲಿ ಶನಿವಾರದಂದು ಮಾತಾಡಿದ ಜಿನ್ ಪಿಂಗ್, ಪ್ರತ್ಯೇಕವಾದವನ್ನು ಬಲವಾಗಿ ವಿರೋಧಿಸುವ ಒಂದು ಅದ್ಭುತವಾದ ಪರಂಪರೆಯನ್ನು ಚೀನಾದ ಜನ ಪಾಲಿಸಿಕೊಂಡು ಬಂದಿದ್ದಾರೆ. 1911 ರ ಶಿನ್ಹಾಯಿ ಕ್ರಾಂತಿಯ 110 ನೇ ವಾರ್ಷಿಕೋತ್ಸವವನ್ನು ಚೀನಾ ಆಚರಿಸುತ್ತಿದೆ.

‘ತಾಯ್ನಾಡಿನ ಒಗ್ಗೂಡುವಿಕೆಯನ್ನು ಸಾಧಿಸಲು ತೈವಾನ್ ನ ಸ್ವಾತಂತ್ರ್ಯ ಮತ್ತು ಪ್ರತ್ಯೇಕತೆ ನಮಗೆ ಒಂದು ದೊಡ್ಡ ಅಡಚಣೆಯಾಗಿದೆ ಮತ್ತು ರಾಷ್ಟ್ರೀಯ ಸಂಭ್ರಮಕ್ಕೆ ಹುದುಗಿರುವ ಅಪಾಯವಾಗಿದೆ,’ ಎಂದು ವಾರ್ಷಿಕೋತ್ಸವದ ಆಚರಣೆ ಸಮಾರಂಭದಲ್ಲಿ ಮಾತಾಡುತ್ತಾ ಜಿನ್ ಪಿಂಗ್ ಹೇಳಿದರು.

‘ನಮ್ಮ ದೇಶದ ಸಮಗ್ರ ಏಕೀಕರಣವನ್ನು ನಾವು ಸಾಧ್ಯ ಮಾಡುತ್ತೇವೆ,’ ಎಂದು ಅವರು ಹೇಳಿದ್ದಾರೆ.

‘ಶಾಂತ ಮತ್ತು ಸೌಹಾರ್ದಯುತ ಏಕೀಕರಣ ತೈವಾನ್ ಜನರ ಎಲ್ಲ ಆಶೋತ್ತರಗಳನ್ನು ಸಾಕಾರಗೊಳಿಸಲಿದೆ. ಚೀನಾ ತನ್ನ ಸಾರ್ವಭೌಮತೆ ಮತ್ತು ಐಕ್ಯತೆಯನ್ನು ಸಂರಕ್ಷಿಸಿಕೊಳ್ಳಲಿದೆ. ಚೀನಾ ದೇಶದ ದೃಢಸಂಕಲ್ಪ, ಇಚ್ಛಾಶಕ್ತಿ ಮತ್ತು ಸಾಮರ್ಥ್ಯ ಮತ್ತು ತನ್ನ ರಾಷ್ಟ್ರೀಯ ಸಾರ್ವಭೌಮತೆ ಹಾಗೂ ಪ್ರಾದೇಶಿಕ ಐಕ್ಯತೆಯನ್ನು ಯಾರೂ ಹಗುರವಾಗಿ ಪರಿಗಣಿಸುವಂತಿಲ್ಲ,’ ಎಂದು ಜಿನ್ ಪಿಂಗ್ ಹೇಳಿದರು.

ಜುಲೈನಲ್ಲಿ ತೈವಾನ್ ಬಗ್ಗೆ ಮಾತಾಡಿದ್ದಕ್ಕಿಂತ ಮೃದು ಭಾಷೆಯಲ್ಲಿ ಜಿನ್ ಪಿಂಗ್ ಮಾತಾಡಿದರು. ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ತೈವಾನ್ ಮಾಡುವ ಎಲ್ಲ ಪ್ರಯತ್ನಗಳನ್ನು ನಾಶ ಮಾಡುವುದಾಗಿ ಹೇಳಿದ್ದ ಅವರು, 2019 ರಲ್ಲಿ ತೈವಾನ್ ಅನ್ನು ಬೀಜಿಂಗ್ ಅಧೀನಕ್ಕೆ ತರಲು ಬಲಪ್ರಯೋಗಿಸುವುದಾಗಿ ಶಪಥಗೈದಿದ್ದರು.

ಜಿನ್ ಪಿಂಗ್ ಅವರ ಹೇಳಿಕೆಗಳಿಗೆ ಶನಿವಾರ ಪ್ರತಿಕ್ರಿಯೆ ನೀಡಿರುವ ತೈವಾನ್ ಅಧ್ಯಕ್ಷರ ಕಚೇರಿಯು, ದೇಶದ ಭವಿಷ್ಯವನ್ನು ದ್ವೀಪನಿವಾಸಿಗಳು ನಿರ್ಧರಿಸುತ್ತಾರೆ, ಚೀನಾದ ಒಂದು ದೇಶ, ಎರಡು ಸಿಸ್ಟಮ್​ಗಳ ತತ್ವವನ್ನು ಇಲ್ಲಿಯ ಜನ ಸ್ಪಷ್ಟವಾಗಿ ಅಲ್ಲಗಳೆದಿದ್ದಾರೆ, ಎಂದು ಹೇಳಿದೆ.

ತೈವಾನ್ ಮೇನ್ ಲ್ಯಾಂಡ್ ಅಫೇರ್ಸ್ ಕೌನ್ಸಿಲ್ ಒಂದು ಪ್ರತ್ಯೇಕವಾದ ಹೇಳಿಕೆಯನ್ನು ಜಾರಿಗೊಳಿಸಿ, ಪ್ರಚೋನದಕಾರಿ ಹಸ್ತಕ್ಷೇಪದ ನಡೆಗಳು, ಕಿರುಕುಳ ನೀಡುವ ಮತ್ತು ವಿಧ್ವಂಸಕ ಮನೋಭಾವ ತೊಡೆದು ಹಾಕುವಂತೆ ಚೀನಾಗೆ ಹೇಳಿದೆ.

ಅಕ್ಟೋಬರ್ 1 ರಿಂದ ಸತತವಾಗಿ 4 ದಿನಗಳವರೆಗೆ ಚೀನಾ ತನ್ನ ಸುಮಾರು 150 ವಾಯುಪಡೆ ವಿಮಾನಗಳಿಂದ ತೈವಾನ್ ವಾಯು ಸುರಕ್ಷಾ ವಲಯವನ್ನು ಉಲ್ಲಂಘಿಸಿ, ಟೈವಾನ್ ಮತ್ತು ಅಂತರರಾಷ್ಟ್ರೀಯ ಸಮುದಾಯದಲ್ಲಿ ಕಳವಳವನ್ನುಂಟು ಮಾಡಿತ್ತು. ಈ ಉಲ್ಲಂಘನೆಯ ಪ್ರಕ್ರಿಯೆಯನ್ನು ಚೀನಾ ನಿಲ್ಲಿಸಿದೆಯಾದರೂ ಶನಿವಾರದ ಭಾಷಣದಲ್ಲಿ ಜಿನ್ ಪಿಂಗ್ ಅದರ ಬಗ್ಗೆ ಪ್ರಸ್ತಾಪವನ್ನು ಮಾಡಲಿಲ್ಲ.

ತೈವಾನ್ ತಾನೊಂದು ಸ್ವತಂತ್ರ ರಾಷ್ಟ್ರವಾಗಿದ್ದು ತನ್ನ ಅಧಿಕೃತ ಹೆಸರು ರಿಪಬ್ಲಿಕ್ ಆಫ್ ಚೀನಾ ಆಗಿದೆ ಅಂತ ಹೇಳಿದೆ.

ಜಿನ್ ಪಿನ್ ಭಾಷಣಕ್ಕಿಂತ ಕೊಂಚ ಮೊದಲು ಮಾತಾಡಿದ್ದ ತೈವಾನ್ ಪ್ರಧಾನ ಮಂತ್ರಿ ಸು ಸೆಂಗ್ ಅವರು, ಚೀನಾ ಬಲ ಪ್ರದರ್ಶಿಸುವ ಮೂಲಕ ಪ್ರಾದೇಶಿಕ ಆತಂಕಗಳನ್ನು ಸೃಷ್ಟಿಸುತ್ತಿದೆ ಎಂದು ಹೇಳಿದ್ದರು. ‘ನಾವು ಪ್ರಜಾಪ್ರಭುತ್ವ ವ್ಯವಸ್ಥೆ, ಸ್ವಾತಂತ್ರ್ಯ, ಮಾನವ ಹಕ್ಕುಗಳು, ಪರಸ್ಪರ ವಿಚಾರ-ವಿನಿಮಯಗಳಲ್ಲಿ ನಂಬಿಕೆ ಉಳ್ಳವರು. ತೈವಾನನ್ನು ಅತಿಕ್ರಮಿಸದಂತೆ ನಾವು ಚೀನಾಗೆ ಎಚ್ಚರಿಕೆ ನೀಡಿದ್ದೇವೆ,’ ಎಂದು ಸು ಸೆಂಗ್ ಹೇಳಿದ್ದರು.

ತೈವಾನ್, ಚೀನಾನಲ್ಲಿ ಸಾಮ್ರಾಜ್ಯಶಾಹಿ ಆಡಳಿತ ವಿರುದ್ಧ ಕ್ರಾಂತಿ ಆರಂಭಗೊಂಡ ಅಕ್ಟೋಬರ್ 10 ಅನ್ನು ರಾಷ್ಟ್ರೀಯ ದಿನವನ್ನಾಗಿ ಆಚರಿಸುತ್ತದೆ. ಈ ಪ್ರಯುಕ್ತ ದೇಶದ ಆಧ್ಯಕ್ಷ ಸಾಯಿ ಇಂಗ್-ವೆನ್ ಅವರು ರವಿವಾರದಂದು ದೇಶವನ್ನು ಉದ್ದೇಶಿಸಿ ಮಾತಾಡಲಿದ್ದಾರೆ.

ಇದನ್ನೂ ಓದಿ:  ಅರುಣಾಚಲ ಪ್ರದೇಶದ ಗಡಿಯಲ್ಲಿ ಭಾರತ-ಚೀನಾ ಪಡೆ ಮುಖಾಮುಖಿ; ಚೀನಾ ಯೋಧರ ಬಂಧನ ನಡೆದಿಲ್ಲ ಎಂದ ಕೇಂದ್ರ ಸರ್ಕಾರ

TV9 Kannada

Leave a comment

Your email address will not be published. Required fields are marked *